ಪಶ್ಚಿಮಘಟ್ಟದೊಳಗೊಂದು ಕಾಂಕ್ರೀಟ್ ರಸ್ತೆ ಇದು ಎತ್ತಿನಹೊಳೆ ಮಹಾತ್ಮೆ
Team Udayavani, May 31, 2017, 2:23 PM IST
ಎತ್ತಿನ ಹೊಳೆ ನೈಜ ದರ್ಶನ – 2
ಮಂಗಳೂರು: ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಹತ್ತಾರು ವರ್ಷಗಳಿಂದ ಆಗ್ರಹ ಕೇಳಿ ಬರುತ್ತಿದ್ದರೂ ಇನ್ನೂ ಅದು ಪೂರ್ಣವಾಗಿ ಈಡೇರಿಲ್ಲ. ಆದರೆ, ಪಶ್ಚಿಮಘಟ್ಟದ ಕಾಡಿನ ಮಧ್ಯೆ ಕೇವಲ ಎತ್ತಿನಹೊಳೆ ನೀರಾವರಿ ಯೋಜನೆಯ ನೆಪವೊಡ್ಡಿ ಬೃಹತ್ ಕಾಂಕ್ರೀಟ್ ರಸ್ತೆಯೊಂದು ಸುದ್ದಿಯಿಲ್ಲದೆ ನಿರ್ಮಾಣಗೊಳ್ಳುತ್ತಿದೆ! ಎತ್ತಿನಹೊಳೆ ಯೋಜನೆಯಡಿ ಜನರ ದುಡ್ಡು ಯಾವ ರೀತಿ ಪೋಲಾಗುತ್ತಿದೆ ಎಂಬುದಕ್ಕೆ ಅಲ್ಲಿ ನಿರ್ಮಾಣವಾಗುತ್ತಿರುವ ಈ ಕಾಂಕ್ರೀಟ್ ರಸ್ತೆ ಉತ್ತಮ ನಿದರ್ಶನ. ಶಿರಾಡಿಘಾಟಿ ವ್ಯಾಪ್ತಿಯಲ್ಲಿ ಮಾರನಹಳ್ಳಿಯಿಂದ ಎತ್ತಿನಹೊಳೆ ನೀರಾವರಿ ಯೋಜನೆಯಡಿ ಡ್ಯಾಮ್‌ಗಳು ನಿರ್ಮಾಣಗೊಳ್ಳುತ್ತಿರುವ ಎತ್ತಿನಹೊಳೆ, ಕೇರಿಹೊಳೆ ಹಾಗೂ ಹೊಂಗದಹೊಳೆಗೆ ಸಂಪರ್ಕ ಕಲ್ಪಿಸಲು ಸುಮಾರು 16 ಕಿ. ಮೀ. ದೂರದ ಮಣ್ಣಿನ ರಸ್ತೆಯೊಂದು ಇತ್ತು. ಸಕಲೇಶಪುರ ತಾಲೂಕಿನ ಕಡಗರಹಳ್ಳಿ, ಆಲುವಳ್ಳಿ, ಹಿರಿದನಹಳ್ಳಿ ಮತ್ತಿತರ ಊರಿನ ನಿವಾಸಿಗಳು ಈ ರಸ್ತೆ ಉಪಯೋಗಿಸುತ್ತಿದ್ದರು.
ಪಶ್ಚಿಮಘಟ್ಟದ ದಟ್ಟ ಕಾನನದೊಳಗೆ ಹಾದು ಹೋಗಿರುವ ಈ ಮಣ್ಣು ರಸ್ತೆ ಇದೀಗ ಬೃಹತ್ ಕಾಂಕ್ರೀಟ್ ರಸ್ತೆಯಾಗುತ್ತಿದೆ. ಕಿರಿದಾದ ಈ ರಸ್ತೆ ಎತ್ತಿನಹೊಳೆ, ಹೊಂಗದಹೊಳೆ, ಕೇರಿಹೊಳೆ ಸೇರಿದಂತೆ ಪಶ್ಚಿಮಘಟ್ಟದ ಹಳ್ಳ-ಕೊಳ್ಳದ ಮಧ್ಯೆ ಹಾದು ಹೋಗಿರುವುದರಿಂದ ಮಳೆಗಾಲದಲ್ಲಿ ಅದು ಸಂಪರ್ಕ ಕಡಿದುಕೊಳ್ಳುತ್ತದೆ. ಹೀಗಾಗಿ, ಜನರು ಕೂಡ ಮಳೆಗಾಲಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಮೊದಲೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಆದರೆ, ಎತ್ತಿನಹೊಳೆ ಯೋಜನೆ ಬಂದ ಅನಂತರ ಈ ಕಾಡುದಾರಿಯ ಸ್ವರೂಪ ಸಂಪೂರ್ಣ ಬದಲಾಗಿದೆ. ಆದರೆ, ಅಲ್ಲಿ ಎತ್ತಿನಹೊಳೆ ಯೋಜನೆ ಹೊರತಾಗಿ, ಕೇವಲ ಒಂದು ರಸ್ತೆಧಿಗಾಗಿ ನಿರೀಕ್ಷೆಗೂ ಮೀರಿ ವನ್ಯ ಸಂಪತ್ತು ನಾಶವಾಗುತ್ತಿದೆ ಎಂಬುದು ಉಲ್ಲೇಖನೀಯ ಅಂಶ. ಕೇವಲ ಒಂದು ಡ್ಯಾಂ ಅನ್ನು ಸಂಪರ್ಕಿಸುವುದಕ್ಕೆ ಕಾಡಿನ ಮಧ್ಯೆ 16 ಕಿ.ಮೀ. ದೂರಕ್ಕೆ ಸುಮಾರು 16 ಅಡಿ ಅಗಲದಷ್ಟು ರಸ್ತೆ ನಿರ್ಮಿಸುತ್ತಿರುವುದರ ಔಚಿತ್ಯ ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಮಂಗಳೂರಿನ ಕಂಪೆನಿಯೊಂದು ಈ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದು, ಮಾರನಹಳ್ಳಿಯಿಂದ ಸುಮಾರು 5 ಕಿ.ಮೀ. ವರೆಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಭರದಿಂದ ನಡೆಯುತ್ತಿದೆ. ಹೊರಜಿಲ್ಲೆ/ರಾಜ್ಯದ ಕಾರ್ಮಿಕರು ಇದಕ್ಕಾಗಿ ದುಡಿಯುತ್ತಿದ್ದು, ಮಳೆ ಬರುವ ಮುನ್ನ ರಸ್ತೆ ಕೆಲಸ ಮುಗಿಸುವ ಸಿದ್ದತೆಯಲ್ಲಿದ್ದಾರೆ. ಈ ಕಾಂಕ್ರೀಟ್ ರಸ್ತೆ 15 ಇಂಚು ದಪ್ಪ ಕೂಡ ಇದೆ.
ಹಿಂದಿನ ಮಣ್ಣು ರಸ್ತೆ ವಿಸ್ತರಣೆಗೆ ಲೆಕ್ಕವಿಲ್ಲದಷ್ಟು ಮರ ಕಡಿದುರುಳಿಸಲಾಗಿದೆ. ಇನ್ನು ಕೆಲವು ಕಡೆ ಬೆಟ್ಟ-ಗುಡ್ಡವನ್ನೇ ನೆಲಸಮಗೊಳಿಸಿ ರಸ್ತೆ ಸಮತಟ್ಟು ಮಾಡಲಾಗಿದೆ. ಅದಧಿಕ್ಕಿಂತಲೂ ಮುಖ್ಯವಾಗಿ ಈ ರಸ್ತೆಗೆ ಮಾರನಹಳ್ಳಿ ರೈಲ್ವೇ ಮೇಲ್ಸೇತುವೆ ಹಾಗೂ ಕೇರಿಹೊಳೆ ಬಳಿ ದೊಡ್ಡದಾದ ಎರಡು ಸೇತುವೆ ಕೂಡ ನಿರ್ಮಾಣ ಹಂತದಲ್ಲಿದೆ. ಇನ್ನು ರಸ್ತೆ ಸಾಕಷ್ಟು ದಪ್ಪ ಇರುವ ಕಾರಣ ಇಕ್ಕೆಲಗಳಲ್ಲಿ ರಸ್ತೆಯುದ್ದಕ್ಕೂ ಮಣ್ಣುಹಾಕಿ ಸಮತಟ್ಟುಗೊಳಿಸಬೇಕಿದೆ. ಅದಕ್ಕಾಗಿ ಮತ್ತೆ ಪಶ್ಚಿಮ ಘಟ್ಟದ ಬೆಟ್ಟ-ಗುಡ್ಡವನ್ನೇ ಅಗೆಯಬೇಕಿದೆ. ವಿಶೇಷವೆಂದರೆ ಎತ್ತಿನಹೊಳೆ ಡ್ಯಾಂಗಿಂತ ಈ ಕಾಂಕ್ರೀಟ್ ರಸ್ತೆ ಹಾಗೂ ಅದನ್ನು ಸಂಪರ್ಕಿಸುವ ಸೇತುವೆ ನಿರ್ಮಾಣ ಕಾರ್ಯ ಬಹಳ ಜೋರಾಗಿ ನಡೆಯುತ್ತಿದೆ ಎಂಬುದು ವಿಶೇಷ.
ರಸ್ತೆಗಾಗಿ ಎತ್ತಿನಹಳ್ಳವೇ ತಿರುವು…!
ಎತ್ತಿನಹೊಳೆ ಅಥವಾ ಎತ್ತಿನಹಳ್ಳ ನೈಸರ್ಗಿಕವಾಗಿ ಹರಿದು ಬಂದು ಮುಂದೆ ಅಡ್ಡಹೊಳೆ ಮೂಲಕ ಕೆಂಪುಹೊಳೆಗೆ ಸಂಪರ್ಕಿಸುತ್ತಿತ್ತು. ಆದರೆ, ಈಗ ಕೇವಲ ಒಂದು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಎತ್ತಿನಹಳ್ಳದ ದಿಕ್ಕು ಬದಲಿಸಿ ಸೇತುವೆ ನಿರ್ಮಿಸಲಾಗುತ್ತಿದೆ. ಎರಡು ಕಡೆ ಈ ರೀತಿ ರಸ್ತೆಗಾಗಿ ನದಿಯ ನೈಸರ್ಗಿಕ ಹರಿಯುವಿಕೆಗೆ ಅಡ್ಡಿಪಡಿಸಲಾಗಿದೆ. ಕೆಲವು ಕಡೆ ನೀರಿನ ಹರಿವಿನ ಹಾದಿ ತಿರುಗಿಸಲಾಗಿದೆ. ಕಾರಣವೆಂದರೆ ಇಲ್ಲಿನ ರಸ್ತೆಗಾಗಿ. ಒಟ್ಟಿನಲ್ಲಿ ಈ ಕಾಂಕ್ರೀಟ್ ರಸ್ತೆ ನೋಡುವಾಗ ಇಂತಹ ರಸ್ತೆಯೊಂದು ಪಶ್ಚಿಮಘಟ್ಟದ ದಟ್ಟ ಅರಣ್ಯದೊಳಗೆ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.
ರಾಷ್ಟ್ರೀಯ ಹೆದ್ದಾರಿಯಲ್ಲೊಂದು ಅಡ್ಡದಾರಿ…!
ಎತ್ತಿನಹೊಳೆ ಯೋಜನೆ ನೆಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಾಂಕ್ರೀಟ್ ರಸ್ತೆ ಭವಿಷ್ಯದಲ್ಲಿ ಪಶ್ಚಿಮಘಟ್ಟದಲ್ಲಿ ಶಿರಾಡಿಘಾಟಿಗೆ ಪರ್ಯಾಯವಾಗಿ ಮತ್ತೂಂದು ಹೆದ್ದಾರಿಯಾಗಿ ಬದಲಾದರೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ, ಕಡಗರಹಳ್ಳಿಯ ಸ್ಥಳೀಯರೊಬ್ಬರ ಪ್ರಕಾರ, ಈ ಕಾಂಕ್ರೀಟ್ ರಸ್ತೆ ಹಾಸನದಿಂದ ಸಕಲೇಶಪುರಕ್ಕೆ ನೇರ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಹೀಗಾಗಿ, ಬೆಂಗಳೂರು-ಮಂಗಳೂರು ಹೆದ್ದಾರಿಗೆ ಈ ರಸ್ತೆಯನ್ನು ಅಡ್ಡದಾರಿಯಾಗಿ ಬಳಸುವ ಯೋಜನೆ ಕೂಡ ಇದೆ ಎನ್ನಲಾಗುತ್ತಿದೆ.
– ದಿನೇಶ್ ಇರಾ
ಇದನ್ನೂ ಓದಿ:
►Part 1►ವೋಟ್‌ಬ್ಯಾಂಕ್‌ಗೆ ಎತ್ತಿನಹೊಳೆ ಫಲಾನುಭವಿಗಳು – ಸಂತ್ರಸ್ತರು ಬಲಿಪಶು?: http://bit.ly/2rV5cex
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.