ಯುದ್ಧಕ್ಕೆ ತರ್ಕ ಇರೋಲ್ಲ, ಅದಕ್ಕೆ ಕೊಲ್ಲುವುದೇ ಮುಖ್ಯ
Team Udayavani, Sep 27, 2017, 10:49 AM IST
ಮೈಸೂರಿನಲ್ಲಿ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಉದಯವಾಣಿ ನಡೆಸಿದ “ನೇರಾನೇರ’ ಸಂದರ್ಶನ ಇಲ್ಲಿದೆ…
ಚಂಪಾ ಅಧ್ಯಕ್ಷ ಸ್ಥಾನ ಅಲಂಕರಿಸಲು 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಬರಬೇಕಾಯಿತಲ್ಲ. ಇದು ತಡವಾಗಿಯೇ? ಬೇಗವಾಗಿಯೇ?
ಇದು ತಡಾನೂ ಅಲ್ಲ, ಬೇಗನೂ ಅಲ್ಲ. ಇಡೀ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಪರಂಪರೆ ನೋಡಿದರೆ, ಯಾರು ನಿರಂತರವಾಗಿ, ಸಮಗ್ರವಾಗಿ, ಸಮರ್ಥವಾಗಿ ಸಾಹಿತ್ಯ ನಿರ್ಮಾಣ ಮಾಡಿರುತ್ತಾರೋ, ಅಂಥವರಿಗೆ ಈ ಅವಕಾಶ ಬಂದೇ ಬರುತ್ತದೆ. ಇದು ಮೆಟ್ರೋ ರೈಲು ಇದ್ಹಂಗ. ಪ್ರತಿ 5 ನಿಮಿಷಕ್ಕೊಂದು ಗಾಡಿ ಬಂದೇ ಬರುತ್ತದೆ. ಕೆಲವರಿಗೆ ಅವಸರ, ಅಂಥವರು ಯಾವ ಮೊದಲಿನ ಸ್ಟೇಶನ್ನಿನಲ್ಲಿ ಹತ್ತಿರುತ್ತಾರೋ ಗೊತ್ತೇ ಆಗೋಲ್ಲ. ಕೆಲವರ ಕಣ್ಣೆದುರೇ ರೈಲು ತಪ್ಪಿಹೋಗುತ್ತದೆ. ಇನ್ನೊಂದು ರೈಲಿಗೆ ಕಾಯಬೇಕಷ್ಟೇ. ನಾಲ್ಕಾರು ವರುಷದಿಂದ ನನ್ನ ಹೆಸರಂತೂ ಓಡಾಡುತ್ತಿತ್ತು,
1979ರಲ್ಲಿ ಧರ್ಮಸ್ಥಳ ಸಮ್ಮೇಳನದ ಬಂಡಾಯದ ಕೂಗನ್ನು ಈ ನಾಡು ಮರೆತಿಲ್ಲ. ಆಗ ಬಂಡಾಯಗಾರರಾಗಿ, ಕಸಾಪಗೆ ಧಿಕ್ಕಾರ ಕೂಗಿದ್ದಿರಿ. ನಂತರ ಕಸಾಪದೊಂದಿಗೆ ಬೆರೆತು, ಈಗ ಸಮ್ಮೇಳನಾಧ್ಯಕ್ಷರಾಗುವ ನಿಮ್ಮ ಈ ಕಾಲಾಂತರದ ಹೆಜ್ಜೆಗಳಲ್ಲಿ ಬಂಡಾಯತ್ವ ರಾಜಿ ಆಯಿತೆಲ್ಲಿ?
ಬಂಡಾಯ ಮತ್ತು ರಾಜಿ ಎಂದೂ ಕೂಡಿ ಹೋಗುವುದೇ ಇಲ್ಲ. ಕಸಾಪ ಒಂದು ಪ್ರಜಾಸತ್ತಾತ್ಮಕವಾದ ಸಾಂಸ್ಕೃತಿಕ ಸಂಸ್ಥೆ. ನಮ್ಮಲ್ಲಿ ಬಹಳ ಜನರಿಗೆ ಆ ಅವಧಿಯಲ್ಲಿ ಅವಾಗ ಅನ್ನಿಸಿದ್ದು, ಆ ಸಮ್ಮೇಳನ ನಡೆಯಬೇಕಾದ ರೀತಿಯಲ್ಲಿ ನಡೆದಿಲ್ಲ ಅಂತ. ಸರ್ವಜನಾಂಗದ ಪ್ರಾತಿನಿಧ್ಯವನ್ನು ಹೊಂದಿದಂಥ ಸಂಸ್ಥೆ ಸಮಕಾಲೀನ ಧ್ವನಿಗೆ ಸ್ಪಂದಿಸದೇ ಹೋಗಿತ್ತು. 70ರ ದಶಕದಲ್ಲಿ ದಲಿತ ಸಾಹಿತ್ಯ ಪ್ರವೇಶ ಪಡೆದಿತ್ತು. ಚನ್ನಣ್ಣ ವಾಲೀಕಾರ್ ಅವರು ಅಂದಿನ ಕಸಾಪ ಅಧ್ಯಕ್ಷ ಹಂಪನಾ ಅವರಿಗೆ ವಿನಂತಿ ಮಾಡಿದ್ದರು; “ದಲಿತ ಸಾಹಿತ್ಯದ ಬೆಳವಣಿಗೆ ಇದ್ದಾಗ, ಆ ಕುರಿತು ಒಂದು ಗೋಷ್ಠಿ ಮಾಡಿ’ ಎಂದಾಗ, ಹಂಪನಾ ಉಡಾಫೆಯಿಂದ “ಇಲ್ಲಾ… ದಲಿತ- ಬಲಿತ- ಕಲಿತ ಅಂತೆಲ್ಲ ವರ್ಗ ಮಾಡೋಕ್ಕಾಗಲ್ಲ’ ಅಂದುಬಿಟ್ಟರು. ನಮಗೆ ಬಹಳ ಸಿಟ್ಟುಬಂತು. ಇಂಥ ಪರಿಷತ್ತು ಕಟ್ಕೊಂಡು ನಾವೇನು ಮಾಡ್ಬೇಕಾಗಿದೆ ಎಂದುಕೊಂಡು, ಬಂಡಾಯ ಸಾಹಿತ್ಯಕ್ಕೆ ಪ್ರಬಲ ರೂಪು ಕೊಟ್ಟೆವು. ಅತ್ತ ಧರ್ಮಸ್ಥಳದಲ್ಲಿ ಅಡಿಗರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದರೆ, ಬೆಂಗಳೂರಿನ ದೇವಾಂಗ ಸಂಘದ ಛತ್ರದೊಳಗೆ ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿದೆವು. ಇದು ಶುದ್ಧ ತಾತ್ವಿಕ ಸಂಘರ್ಷ. ಪುರೋಹಿತಶಾಹಿ ಶಕ್ತಿಗಳ ವಿರುದ್ಧ ಮಾಡಿದಂಥ ಸಂಘರ್ಷದ ಪ್ರಾರಂಭ ಅದು. ಅಲ್ಲಿಂದಲೇ ನಾವು ಬೆಳೆದೆವು. ಮುಂದಿನ 10 ವರ್ಷಗಳಲ್ಲಿ ದೃಶ್ಯವೇ ಬದಲಾಯಿತು. ಮತ್ತೆ ಬೇರೆ ಬೇರೆ ಕಸಾಪ ಅಧ್ಯಕ್ಷರು ಬಂದವರು, ಸಮಕಾಲೀನ ವಿದ್ಯಮಾನಗಳಿಗೆ ಕಿಮ್ಮತ್ತು ಕೊಟ್ಟರು. ಅಂದಿನ ಕಸಾಪ ಅಧ್ಯಕ್ಷರಾದ ಗೊ.ರು.ಚ. ಅವರೇ ಖುದ್ದಾಗಿ ಬಂಡಾಯ ಸಾಹಿತ್ಯದ ದಶಮಾನೋತ್ಸವ ಆಚರಿಸಿದರು. ಹಾಗಾಗಿ, ಬಂಡಾಯ ಸಾಹಿತ್ಯ, ಕಸಾಪದ ಸ್ವೀಕಾರವೇ ಹೊರತು, ನಮ್ಮ ರಾಜಿ ಅಲ್ಲವೇ ಅಲ್ಲ. ಮತ್ತೆ ನಾವೆಲ್ಲ ತವರು ಮನೆಯಲ್ಲಿ ಒಂದಾದೆವು.
ಎಡ- ಬಲದಿಂದ ಕವಲೊಡೆದ ಹಾದಿಯಂತೆ ಕಾಣುವ ಈ ನಿರ್ಣಾಯಕ ಕಾಲಘಟ್ಟದಲ್ಲಿ ಸಮ್ಮೇಳನದ ಚುಕ್ಕಾಣಿ ನಿಮಗೆ. ನೀವು ಯೋಜಿಸಿಕೊಂಡಂತೆ ಸಮ್ಮೇಳನ ಹೊಣೆ ಏನಾಗಿರುತ್ತದೆ?
ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಒಂದೇ ಆಯಾಮ ಇರೋದಿಲ್ಲ. ಕೆಲವರು ಸಮ್ಮೇಳನಕ್ಕೆ ಸಂತೆ, ಜಾತ್ರೆಯೆಂದು ಆಪಾದಿಸುತ್ತಾರೆ. ನಮ್ಮಂಥ ಹಳ್ಳಿಗಾಡಿನಿಂದ ಬಂದ ಜನರಿಗೆ ಸಂತೆ- ಜಾತ್ರೆಯೂ ಮುಖ್ಯ. ಸಾಂಸ್ಕೃತಿಕ ಸಂಗಮ ಯಾವುದೇ ನಾಡಿಗೂ ಒಳ್ಳೆಯದೇ. ಶುದ್ಧವಾಗಿ ಸಾಹಿತ್ಯ ಕುರಿತು ಚರ್ಚಿಸುವಂಥ ವೇದಿಕೆ ಕಸಾಪ ಎಂದೂ ಆಗಿಲ್ಲ, ಆಗಲೂಬಾರದು. ನಾಡಿನ ಅನೇಕ ಸಮಸ್ಯೆಗಳ ಬಗ್ಗೆ ಕಸಾಪ ನಿಲುವನ್ನು ತಾಳುತ್ತದೆ, ಹೋರಾಟ ಮಾಡುತ್ತದೆ. ಅಕ್ಷರ ಸೃಷ್ಟಿಗೂ, ಸಮ್ಮೇಳನಕ್ಕೂ ನೇರವಾದ ಸಂಬಂಧ ಇರಬಾರದು. ಅದು ಬದುಕಿನ ಸಮ್ಮೇಳನ ಆಗಬೇಕು. ಸಮಕಾಲೀನ ವಾಸ್ತವಗಳಿಗೆ ಮುಖವನ್ನು ತಿರುಗಿಸಿ, ಯಾವುದೇ ಸಾಹಿತ್ಯ, ಯಾವುದೇ ಸಮ್ಮೇಳನ ಕೆಲಸ ಮಾಡಲು ಸಾಧ್ಯವಿಲ್ಲ. ಸಾಹಿತಿಗೆ ಮೂಲದ್ರವ್ಯ ಬರೋದೇ ಬದುಕಿನಿಂದ. ಭೂತಕಾಲದ ನೆನಪಾಗಲೀ, ಭವಿಷ್ಯದ ಕನಸುಗಳಾಗಲೀ ಲೇಖನಿಗೆ ಸಾಮಗ್ರಿ ಕೊಡಬಹುದಷ್ಟೇ. ಕಣ್ಣೆದುರು ಕಾಣುವಂಥ ಸತ್ಯಗಳಿವೆಯಲ್ಲ, ಅಲ್ಲಿಂದಲೇ ಆತ ಜೀವದ್ರವ್ಯವನ್ನು ಹೀರಬೇಕು. ಇದೇ ಸಂದರ್ಭದಲ್ಲಿ ಅನೇಕ ವಿದ್ಯಮಾನಗಳು ಕಣ್ಣೆದುರೇ ನರ್ತಿಸುತ್ತಿವೆಯಲ್ಲ, ಅವುಗಳನ್ನು ತುಸು ದೂರದಿಂದ ನೋಡಿ, ಗ್ರಹಿಸಿ, ಅವುಗಳಿಗೆ ಉತ್ತರಿಸುವಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಮೈಸೂರು ಸಮ್ಮೇಳನದ ವಿಚಾರಗೋಷ್ಠಿಗಳು ಧ್ವನಿಯೆತ್ತಲಿವೆ.
ಎಡವೋ, ಬಲವೋ… ಸಾಹಿತ್ಯ ಸಿದ್ಧಾಂತಮುಖೀಯಾದಲ್ಲಿ ಸತ್ಯಗಳು ಮರೆಯಾಗುವ ಅಪಾಯವಿದೆ ಎಂಬ ಮಾತಿದೆಯಲ್ಲಾ?
ಎಡ ಮತ್ತು ಬಲ ಬ್ರಿಟನ್ ಪಾರ್ಲಿಮೆಂಟಿನ ಸೃಷ್ಟಿ. ಅದೇ ದೃಷ್ಟಿಯಿಂದಲೇ ನಾವು ಎಡ- ಬಲಗಳನ್ನು ನೋಡುತ್ತಿದ್ದೇವೆ. ಅದು ಕ್ರಮೇಣ ಸಾಹಿತ್ಯಕ್ಕೆ ಬೆರೆತು, ಪ್ರತಿಗಾಮಿತನ- ಪ್ರಗತಿಗಾಮಿತನ ರಚನೆಯಾದವು. ಅವೆಲ್ಲವೂ ಜೀವನಕ್ಕೆ ಸಂಬಂಧಪಟ್ಟಿದ್ದೇ. ಆ ಸಾಹಿತಿಗಳೇನು ಮೇಲಿನಿಂದ ಉದುರಿಬಂದವರಲ್ಲ. ಕೆಲವರು ಸನಾತನವಾದಿ ಸಿದ್ಧಾಂತ ಬೇಕು ಅಂತ, ಇನ್ನೂ ಕೆಲವರು ಇಂಥ ಜಡ ಪರಿಸ್ಥಿತಿ ಬೇಡವೆಂದು ಹೋರಾಟಕ್ಕೆ ಇಳಿಯುತ್ತಾರೆ. ಇದು ಎಲ್ಲ ಸಂಸ್ಕೃತಿಗಳಲ್ಲೂ, ಕಾಲಕಾಲಕ್ಕೆ ಸಂಘರ್ಷ ಆಗುತ್ತಲೇ ಇರುತ್ತದೆ. ಸುಳ್ಳು ಸುದ್ದಿಗಳು ಇಂದು ಬಹಳ ವೇಗದಲ್ಲಿ ಹಬ್ಬುತ್ತಿವೆ. ಸುಳ್ಳು ಹೇಳುವವರಿಗೆ ಸುಳ್ಳು ಹೇಳುವುದೇ ಒಂದು ಸಿದ್ಧಾಂತ. ಸುಳ್ಳು- ಸತ್ಯದ ನಡುವಿನ ಗೆರೆ ಬಹಳ ತೆಳು. ಆಯಾ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ರೀತಿ, ಅಲ್ಲಿ ಕೆಲಸ ಮಾಡುವಂಥ ವಿವೇಕ- ವಿವೇಚನೆ… ಇವೆಲ್ಲ ನೋಡಿಕೊಂಡು ಸತ್ಯ- ಸುಳ್ಳುಗಳನ್ನು ವ್ಯಾಖ್ಯಾನಿಸಬಹುದು. ಆದರೆ, ಇಂದು ಸತ್ಯ ಎನ್ನುವುದು ಯಾವುದೂ ಇಲ್ಲ. ಕೇವಲ ಸಾಪೇಕ್ಷ. ಐನ್‌ಸ್ಟಿನ್ ಹೇಳಿದನಲ್ಲ, ಅದೇ ಸಾಪೇಕ್ಷಾ ಸಿದ್ಧಾಂತ ಇಲ್ಲೂ ಹೊಂದಿಕೆಯಾಗುತ್ತದೆ. ಇದು ಸಾಪೇಕ್ಷ ವಿಚಾರಗಳ ಸಂಘರ್ಷ.
ಹತ್ಯೆ, ಸಂಘರ್ಷ… ಯಾವುದಕ್ಕೂ ಪ್ರತಿಕ್ರಿಯೆ ನೀಡೆವು ಎನ್ನುವ ತಟಸ್ಥಭಾವದ ಸಾಹಿತಿಗಳ ಬಗ್ಗೆ…
ಸಾಹಿತಿಗಳಲ್ಲದೆ, ಬೇರೆ ಯಾರು ಇಂಥ ದುರಂತಗಳಿಗೆ ತಲೆಕೆಡಿಸಿಕೊಳ್ಳಬೇಕು? ಸುರಕ್ಷಿತ ವಲಯದಲ್ಲಿ ಇದ್ದುಕೊಂಡು, ಬಾಂಬ್ ಹಾಕುವುದು ಅವರ ಗುಣ. ಅವರೆಲ್ಲ ಆರಾಮಾಗಿದ್ದಾರೆ. ಬಾಂಬ್ ಹಾಕುತ್ತಾರೆ, ಬಾಂಬ್ ಹಾಕಿದ್ದು ನಾವೇ ಅಂತ ಅವರು ಹೇಳಿಕೊಳ್ಳುವುದಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳೂ ಇರಬಹುದು. ಇಂಥವರು ಎಲ್ಲ ಕಾಲದಲ್ಲೂ ಎದುರಾಗುತ್ತಿರುತ್ತಾರೆ. ಇದು ಮನೋರೋಗ. ಕಂಡಿದ್ದನ್ನು ಕಂಡಹಾಗೆ ಹೇಳುವವನೇ ಸಾಹಿತಿ. ಬಹಳ ನಿಷ್ಪಕ್ಷಪಾತದಿಂದ ಅವನು ಮಾತಾಡುತ್ತಿದ್ದಾನೆ ಎಂದಾದರೆ, ಅವನನ್ನು ನಂಬಲೇಬಾರದು ಅಂತ. ಒಬ್ಬ ಸ್ಪಂದನಶೀಲ ಬರಹಗಾರ ಒಂದು ನೆಲೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಅಲ್ಲೂ ಇರುತ್ತೇನೆ, ಇಲ್ಲೂ ಇರುತ್ತೇನೆ ಎನ್ನುವುದು ಎಡಬಿಡಂಗಿತನ. ಸಾಹಿತಿ ಆದವನು ದೃಷ್ಟಿಕೋನ ಸ್ಪಷ್ಟಪಡಿಸಬೇಕು. ಎಡ- ಬಲ ಜೀವನದ ಪ್ರಕ್ರಿಯೆಗಳು. ಎಲ್ಲವನ್ನೂ ತಟಸ್ಥಭಾವದಿಂದ ನೋಡುತ್ತೇವೆ ಎನ್ನುವುದು ಕೇವಲ ಬೋಗಸ್.
ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ… ಪ್ರತ್ಯಾರೋಪಗಳ ಕೂಗು… ವಿಚಾರವಾದವನ್ನು ಹೊಸಕಿಹಾಕುವ ಈ ನಿರ್ಣಾಯಕ ಘಟ್ಟದಲ್ಲಿ ಮೈಸೂರು ಸಮ್ಮೇಳನ ಹೇಗೆ ಪ್ರತಿಧ್ವನಿ ಹೊಮ್ಮಿಸಲಿದೆ?
ಬಹಳ ದೊಡ್ಡ ಧ್ವನಿಯೊಳಗೆ ಈ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. “ಸರ್ವೇಜನಾ ಸುಖೀನೋ ಭವಂತು’ ಅಂತ ಪಂಡಿತರು ಹೇಳಿದ್ದಾರೆ, “ಸರ್ವಜನಾಂಗದ ಶಾಂತಿಯ ತೋಟ’ ಎಂದು ಕವಿಗಳು ಹಾಡಿದ್ದಾರೆ. ಇಂಥ ನಾಡಿನೊಳಗೆ ಜಾತಿ, ಕೋಮು… ಇತ್ಯಾದಿ ಜ್ವಾಲೆಗಳು ಎದ್ದಿವೆ. ಪ್ರಜಾಸತ್ತಾತ್ಮಕ ಧಾಟಿಯಲ್ಲಿ ಸಂಘರ್ಷವಾದರೆ, ಅದನ್ನು ಒಪ್ಪೋಣ. ಆದರೆ, ನಿನ್ನ ಮಾತನ್ನು ಒಪ್ಪುವುದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ, ಕೊಲೆಗೈಯ್ಯುವುದು ದುರಂತವೇ ಸರಿ. ಯಾವ ದೇಶದ ಸಾಹಿತ್ಯ ಸಂಘರ್ಷದಲ್ಲೂ ಹೀಗೆ ಆಗಿಲ್ಲ. ಹಸಿವಿಗಾಗಿ, ನೀರಿಗಾಗಿ, ಭೂಮಿಗಾಗಿ ನಡೆದ ಯುದ್ಧಗಳನ್ನು ನೋಡಿದ್ದೇನೆ. ಆದರೆ, ಅಭಿಪ್ರಾಯ ಬೇಧಕ್ಕಾಗಿ ನಡೆಯುವ ಈ ಯುದ್ಧ ಸರಿಯಲ್ಲ. ಯುದ್ಧಕ್ಕೆ ತರ್ಕ ಇರುವುದಿಲ್ಲ, ಯುದ್ಧದಲ್ಲಿ ಕೊಲ್ಲುವುದೇ ಮುಖ್ಯ. ಪಾನ್ಸರೆ, ದಾಬೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್, ಮೊನ್ನೆ ಮೊನ್ನೆ ಪಂಜಾಬಿನ ಪತ್ರಕರ್ತ - ಇವರೆಲ್ಲ ಯುದ್ಧದ ವಾತಾವರಣದಿಂದಲೇ ಬಲಿಯಾಗಿದ್ದಾರೆ.
ಹತ್ಯೆಗಳ ನಂತರದ ಹೋರಾಟದ ಲಾಭವನ್ನು ರಾಜಕೀಯ ಪಕ್ಷಗಳು ಪಡೆದುಕೊಳ್ಳುತ್ತಿವೆಯೇ?
ಅದು ಅವರ ರಾಜಕೀಯ ಧರ್ಮ. ಕೊಂದವರು ಯಾರೆಂದು ಅನೇಕ ಸಲ ಗೊತ್ತಿರುತ್ತದೆ. ನೇರವಾಗಿ ಹೇಳುವುದಕ್ಕೆ ಆಗುವುದಿಲ್ಲ. ಆ ಸತ್ಯವನ್ನು ಇಂದೇ ಹೇಳಬೇಕಾ? ನಾಳೆ ಹೇಳಬೇಕಾ? ಯಾವ ಕಾಲಕ್ಕೆ ಹೇಳಬೇಕು ಎಂಬ ನಿರ್ಧಾರವನ್ನು ಅವರೇ ಮಾಡುತ್ತಾರೆ. ಅದಕ್ಕಾಗಿ ಮುಹೂರ್ತ ಫಿಕ್ಸ್ ಮಾಡಿರುತ್ತಾರೆ. ಯಾವಾಗ ಹೇಳಿದರೆ ಲಾಭ? ಯಾವಾಗ ಹೇಳಿದರೆ ಹಾನಿ ಎಂಬ ಲೆಕ್ಕಾಚಾರದ ಮೇಲೆ ರಾಜಕೀಯ ನಡೆಯುತ್ತದೆ. ಅದು ಸಹಜ. ಅದು ಅವರ ಧರ್ಮ, ಅದೇ ಕರ್ಮ. ಈ ಹಿಂದಿನ ವಿಚಾರವಾದಿಗಳ ಹತ್ಯೆ ವಿಚಾರದಲ್ಲಿ ತನಿಖಾ ತಂಡಗಳು ಒಂದು ನಿರ್ಣಯಕ್ಕೆ ಬಂದಹಾಗೆ ಕಾಣಿಸುತ್ತದೆ ನನಗೆ. ಒಂದೇ ವಿಚಾರಧಾರೆಯವರು ಇವರನ್ನು ಕೊಂದಿರಬಹುದು ಎಂಬುದು ಸ್ಪಷ್ಟವಾಗಿದೆ.
ನಿಮಗೂ ಗನ್‌ಮ್ಯಾನ್ ಇದ್ದಾರೆ. ಸಾಹಿತ್ಯ ರಚನೆಗೆ ಬೇಕಾದ ಏಕಾಂತಕ್ಕೆ ಇದು ಅಡಚಣೆ ಆಗಿದ್ದಿದೆಯೇ?
ಇದು ದುರಂತ. ಏಕಾಂತ ಬೇಕಾದಾಗ ನಾನು ಮನೆಯೊಳಗೆ ಇರಬೇಕಷ್ಟೇ. ಕಲಬುರ್ಗಿಯವರ ಹತ್ಯೆಯಾದ ಬಳಿಕ, ಧಾರವಾಡದಲ್ಲಿ ಅಂತ್ಯಸಂಸ್ಕಾರ ಮುಗಿಸಿಕೊಂಡು, ಬೆಂಗಳೂರಿಗೆ ವಾಪಸಾಗಿದ್ದೆ. ಅಷ್ಟರಲ್ಲಾಗಲೇ ಮನೆ ಮುಂದೆ ಪೊಲೀಸ್ ನಿಂತಿದ್ದರು. “ಯಾಕ್ರಪ್ಪಾ ಇಲ್ಲಿ ನಿಂತೀರಿ?’, ಕೇಳಿದೆ. “ಇಲ್ಲಾ ಸಾರ್, ಸರ್ಕಾರ್‌ದವ್ರು ಹೇಳಾರೆ ನಂಗೆ’ ಅಂತಂದರು. “ಸರಿ ನಿಲ್ಲು’ ಅಂತ ಅಂದೆ ನಾನು. ಗನ್‌ಮ್ಯಾನ್ ಬೇಕು ಅಂತ ನಾನು ಅರ್ಜಿ ಹಾಕಲಿಲ್ಲ.
“ಖಾಲಿ ಗದ್ದಲದ ಈ ನಾಡಿನ ಉದ್ದಗಲಕ್ಕೂ, ಈಗ ಶಾಂತಿ ನೆಲೆಸಿದೆ…’ ಎಂಬ ನಿಮ್ಮ “ಗಾಂಧಿ ಸ್ಮರಣೆ’ ಕವಿತೆಯ ಸಾಲು ಈ ಹೊತ್ತಿಗೆ ಎಷ್ಟು ಪ್ರಸ್ತುತ?
ಅದನ್ನು ನಾನು ತುರ್ತು ಪರಿಸ್ಥಿತಿ ಇರುವಾಗ ಬರೆದೆ. ಆಗ ಸೆನ್ಸಾರ್ ಬಂದುಬಿಟ್ಟಿತ್ತು. ನಾವು ಬರೆಯುವುದನ್ನು, ಮಾತಾಡುವುದನ್ನು ರೆಕಾರ್ಡ್ ಮಾಡಿಕೊಂಡು, ಪ್ರಭುತ್ವ ಪ್ರಶ್ನಿಸುತ್ತಿತ್ತು. ಆಗ ಎಲ್ಲ ಕಡೆ ಸ್ಮಶಾನ ಶಾಂತಿ ನೆಲೆಸಿತ್ತು. ಆ ಹಿನ್ನೆಲೆಯಲ್ಲಿ ಗಾಂಧಿ ಸ್ಮರಣೆ ರಚನೆಯಾಯಿತು. ಇಂದು ಆಂಥ ಭಯಂಕರ ಪರಿಸ್ಥಿತಿ ಇಲ್ಲ. ಆದರೆ, ಈ ಹತ್ಯೆಗಳನ್ನು ನೋಡಿದಾಗ ವೈಚಾರಿಕ ತುರ್ತುಪರಿಸ್ಥಿತಿಯತ್ತ ನಮ್ಮ ಪ್ರಭುತ್ವ ನಡೆದಿರಬಹುದು ಎಂಬ ಶಂಕೆ ನನಗಿದೆ. ಪ್ರಭುತ್ವದ ಈ ನೀತಿಗೆ ಎಲ್ಲೆಡೆ ಪ್ರತಿರೋಧವೂ ಅಷ್ಟೇ ಪ್ರಬಲವಾಗಿದೆ. ಅವರು ಹೇಳಿದ್ದೇ ವೇದವಾಕ್ಯ ಎಂಬ ಸ್ಥಿತಿಯೇನೂ ಇಲ್ಲ. ಹತ್ಯೆ ನಡೆದ ಆ ಮೌನದಲ್ಲಿ “ಗಾಂಧಿ ಸ್ಮರಣೆ’ ಕವನ ಯಾರಿಗೂ ನೆನಪಿಗೆ ಬರಬಹುದು.
ಕನ್ನಡ ಹೋರಾಟಗಾರರ ಭಾವುಕತನವನ್ನು ರಾಜಕೀಯ ಶಕ್ತಿಗಳು ಹೈಜಾಕ್ ಮಾಡಿಕೊಳ್ಳುತ್ತಿವೆಯೇ?
ನಾಡು- ನುಡಿಗೆ ಏನಾದರೂ ಸಮಸ್ಯೆ ಎದುರಾಯಿತು ಎಂದರೆ, ತಕ್ಷಣವೇ ಈ ಹೋರಾಟಗಾರರು ಬೀದಿಗಿಳಿಯುತ್ತಾರೆ. ರಾಜಕಾರಣಿಗಳು “ನೋಡೋಣ, ಇದರ ಅಲೆ ಯಾವ ದಿಕ್ಕಿಗೆ ತಿರುಗುತ್ತೆ’ ಅಂತ ಕಾಯುತ್ತಾರೆ. ಹೋರಾಟ ಪ್ರಬಲಗೊಂಡರೆ, ರಾಜಕೀಯ ಶಕ್ತಿಗಳ ಪ್ರವೇಶವಾಗುತ್ತದೆ. ಹೋರಾಟಗಾರರ ಈ ಉದ್ದೇಶವನ್ನು ಸಂಶಯದಿಂದ ನೋಡಬಾರದು. ಆದರೆ, ಇಂಥ ಹೋರಾಟಗಳ ಮೇಲೆ ರಾಜಕೀಯ ನೆರಳು ಬಿದ್ದೇ ಬೀಳುತ್ತದೆ. ಈಗ ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ದೊಡ್ಡ ರಾಜಕಾರಣಿಗಳು ಯಾರೂ ಬಲವಾಗಿ ಪ್ರಶ್ನಿಸಿಲ್ಲ. ಸಾಹಿತಿಗಳು ಕೂಡ ವೇಟ್ ಆ್ಯಂಡ್ ವಾಚ್ ಮಾಡ್ತಾರೆ. ಆದರೆ, ಹೋರಾಟಗಾರರು ಅದಕ್ಕಾಗಿ ಕಾಯುವುದಿಲ್ಲ. ಅದೇ ಕ್ಷಾತ್ರಧರ್ಮ.
ರಾಷ್ಟ್ರಕವಿಯ ಆಯ್ಕೆ ಆಗಿಲ್ಲ, ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಆಗುತ್ತಿಲ್ಲ. ವರ್ಷಕ್ಕೊಂದು ನುಡಿಜಾತ್ರೆ ನಡೆಸಿದರೆ, ನಮ್ಮ ಕೆಲಸ ಮುಗೀತು ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಇದೆಯೇ?
ಇದರ ಹಿಂದೆ ಬಹಳ ಸಮಸ್ಯೆಗಳಿವೆ. ಬಗೆ ನಾನು ಸಮ್ಮೇಳನದ ವೇದಿಕೆಯಲ್ಲಿಯೇ ಧ್ವನಿಯೆತ್ತುವೆನು.
ಸಂದರ್ಶನ: ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.