ಆರ್ಥಿಕ ಪ್ರಗತಿಯ ಪೂರಕಗಳು


Team Udayavani, Feb 7, 2017, 2:35 PM IST

Economy-8-2.jpg

ದೇಶದ ಅರ್ಥವ್ಯವಸ್ಥೆ ಒಂದು ಸಂಕೀರ್ಣ ಸಂಗತಿ. ಒಂದು ನಿಯಂತ್ರಕ ಸಂಸ್ಥೆಯ ನಿಯಂತ್ರಣ ಮತ್ತು ಮಾರ್ಗದರ್ಶನದಲ್ಲಿ ಹಲವು ಪೂರಕ ಅಂಶಗಳ ಆಧಾರದಲ್ಲಿ ಅದು ಕಾರ್ಯನಿರ್ವಹಿಸುತ್ತದೆ. ಅರ್ಥವ್ಯವಸ್ಥೆಯನ್ನು ಸಮತೋಲನದಿಂದ ನಿಭಾಯಿಸುವುದು ಹಗ್ಗದ ಮೇಲಿನ ನಡಿಗೆಯೇ ಸರಿ.

ಒಂದು ದೇಶದ ಆರ್ಥಿಕ ಪ್ರಗತಿಗೆ ಇತರ ಅಂಶಗಳ ಜತೆಗೆ ಅಲ್ಲಿನ ಅರ್ಥವ್ಯವಸ್ಥೆ ಮುಖ್ಯ ಪಾತ್ರ ವಹಿಸುತ್ತದೆ. ‘ಅರ್ಥವ್ಯವಸ್ಥೆ’ ಒಂದು ವ್ಯಾಪಕ ಶಬ್ದ. ಇದರಲ್ಲಿ ಹಣಕಾಸು, ಬ್ಯಾಂಕಿಂಗ್‌ ಸವಲತ್ತು ಆರ್ಥಿಕ ಧೋರಣೆ, ಕರವ್ಯವಸ್ಥೆ, ನಿಯಂತ್ರಣ ವ್ಯವಸ್ಥೆ ಒಳಪಡುತ್ತವೆ. 

ಹಣಕಾಸು
ಹಣಕಾಸು ಚಲಾವಣೆಯಲ್ಲಿರುವ ಒಟ್ಟಾರೆ ಹಣ. ಆರ್ಥಿಕ ವ್ಯವಸ್ಥೆಗೆ ಇದು ಇಂಧನ. ಆರ್ಥಿಕ ಚಟುವಟಿಕೆಗಳು ತಮ್ಮ ಪೂರ್ಣ ದಕ್ಷತೆಯಿಂದ ಕಾರ್ಯವೆಸಗಬೇಕಾದರೆ ಪರ್ಯಾಪ್ತ ಹಣಕಾಸಿನ ಲಭ್ಯತೆ ಮುಖ್ಯ. ಪರ್ಯಾಪ್ತ ಎಂದರೆ ‘ಎಷ್ಟು ಬೇಕೋ ಅಷ್ಟು ಮಾತ್ರ’. ಹಣಕಾಸಿಗೆ ಎರಡು ರೂಪಗಳು. ಒಂದನೆಯದು ಚಲಾವಣೆಯಲ್ಲಿರುವ ಹಣ. ಇದರ ಬಹುಭಾಗ ಜನರ ಬಳಿ ಇರುತ್ತದೆ. ದೈನಂದಿನ ವಹಿವಾಟುಗಳಿಗೆ ಇದು ಸಾಧನ. ಇದರ ಪೂರೈಕೆಯಲ್ಲಿ ಅಡಚಣೆಯಾದರೆ ಪರದಾಡಬೇಕಾಗುತ್ತದೆ. ಇತ್ತೀಚೆಗೆ ನೋಟುಗಳ ಅಪನಗದೀಕರಣದ ಸಂದರ್ಭದಲ್ಲಿ ಉಂಟಾದ ನಗದಿನ ಕೊರತೆ ಇದಕ್ಕೆ ನಿದರ್ಶನ. 

ಎರಡನೇ ಸ್ತರದ ಹಣಕಾಸು ಬ್ಯಾಂಕುಗಳಲ್ಲಿರುವ ಠೇವಣಿಗಳು. ಬ್ಯಾಂಕು ಗ್ರಾಹಕರ ಚಾಲ್ತಿ ಮತ್ತು ಉಳಿತಾಯ ಖಾತೆಗಳಲ್ಲಿ ಇರುವ ಬ್ಯಾಲೆನ್ಸ್‌ ಯಾವಾಗ ಬೇಕಾದರೂ ಹಿಂಪಡೆಯುವ ಸಾಧ್ಯತೆಗಳಿರುವುದರಿಂದ ಅದು ನಗದಿಗೆ ಸಮಾನ. ಆದ್ದರಿಂದಲೇ ಈ ಬ್ಯಾಲನ್ಸ್‌ ಕೂಡ ಹಣದ ಪೂರೈಕೆಯ ಅಂಶ. ಹಣಕಾಸಿನ ಪೂರೈಕೆ ದೇಶದ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಬೇಕಾಗುವ ದೈನಂದಿನ ಕಾರ್ಯನಿರ್ವಣಾ ಬಂಡವಾಳವನ್ನು ಒದಗಿಸಲು ಪರ್ಯಾಪ್ತವಾಗಿರಬೇಕು. ಇದರ ಪೂರೈಕೆಯಲ್ಲಿ ಕೊರತೆಯಾದರೆ ಉತ್ಪಾದನೆ, ವ್ಯಾಪಾರ ಬಾಧಿಸಲ್ಪಡುತ್ತದೆ. 
ಅದೇ, ಹಣದ ಪೂರೈಕೆ ಅಗತ್ಯಕ್ಕಿಂತ ಹೆಚ್ಚಾದರೆ, ಅದರಿಂದ ಹಣದುಬ್ಬರವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೀಮಿತ ಉತ್ಪನ್ನಗಳನ್ನೇ ಅತೀ ಪೂರೈಕೆಯ ಹಣಕಾಸು ಹಿಂಬಾಲಿಸುವುದರಿಂದ ಎಲ್ಲ ವಸ್ತುಗಳು, ಮುಖ್ಯವಾಗಿ ಆಹಾರ ವಸ್ತುಗಳು ದುಬಾರಿಯಾಗುತ್ತವೆ. ಇದು ಆರ್ಥಿಕ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ.

ನಿಯಂತ್ರಣ ಆರ್‌ಬಿಐ ಕೈಯಲ್ಲಿ
ಹಣ ಪೂರೈಕೆಯ ನಿಯಂತ್ರಣ ಆರ್‌ಬಿಐ ಕೈಯಲ್ಲಿದೆ. ಆದ್ದರಿಂದ ಹಣಕಾಸು ಲಭ್ಯತೆಯ ಮೇಲೆ ಕಣ್ಗಾವಲಿಡುವುದು, ಕಾಲಕಾಲಕ್ಕೆ ಸೂಕ್ತ ನೀತಿಗಳನ್ನು ಕೈಗೆತ್ತಿಕೊಳ್ಳುವುದು ಆರ್‌ಬಿಐ ಜವಾಬ್ದಾರಿ. ಇದಕ್ಕೆ ಅನುಕೂಲವಾಗುವಂತೆ ಹಲವು ಮಾರ್ಗೋಪಾಯಗಳನ್ನು ಅದು ಅನುಸರಿಸುತ್ತದೆ. ಇದಕ್ಕೆ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹಲವು.

ಇವುಗಳಲ್ಲಿ ಒಂದು ನಗದು- ಮೀಸಲು ಅನುಪಾತ – ಸಿಆರ್‌ಆರ್‌. ಬ್ಯಾಂಕುಗಳು ಜನರ ನಗದು ಮತ್ತು ಸಾಲ ಪೂರೈಕೆಯ ಸಂಸ್ಥೆಗಳು. ಅವುಗಳ ಮೇಲೆ ಆರ್‌ಬಿಐ ನಿಯಂತ್ರಣ ಹೊಂದಿರುತ್ತದೆ. ಬ್ಯಾಂಕುಗಳು ಸಾಲ ರೂಪದಲ್ಲಿ ‘ನಗದು’ ಉಂಟು ಮಾಡುವ ಕ್ಷಮತೆ ಹೊಂದಿವೆ. ಆದ್ದರಿಂದ, ನಗದು ಮೀಸಲು ಅನುಪಾತದಲ್ಲಿ ಹೆಚ್ಚು ಕಡಿಮೆ ಮಾಡುವ ಮೂಲಕ ಆರ್‌ಬಿಐ ಹಣದ ಪೂರೈಕೆಯನ್ನು ಹೆಚ್ಚು ಕಡಿಮೆ ಮಾಡಬಲ್ಲುದು. ಸಿಆರ್‌ಆರ್‌ ಕಡಿಮೆ ಮಾಡಿದಾಗ ಬ್ಯಾಂಕುಗಳು ಆರ್‌ಬಿಐಯಲ್ಲಿ ಇಡಬೇಕಾದ ನಗದು ಪ್ರಮಾಣ ಕಡಿಮೆಯಾಗುವ ಕಾರಣ, ಬ್ಯಾಂಕುಗಳ ದ್ರವತ್ವ ಹೆಚ್ಚುತ್ತದೆ. ಬ್ಯಾಂಕುಗಳು ಹೆಚ್ಚು ಕಾಲ ಸೌಲಭ್ಯಗಳನ್ನು ನೀಡುತ್ತವೆ ಮತ್ತು ಹಣಕಾಸಿನ ಪೂರೈಕೆ ಹೆಚ್ಚುತ್ತದೆ. ಒಂದು ವೇಳೆ ಈಗಾಗಲೇ ಮಾರುಕಟ್ಟೆಯಲ್ಲಿ ಯಥೇಷ್ಟ ಹಣಕಾಸು ಮತ್ತು ದ್ರವತ್ವ ಇದ್ದರೆ ಸಿಆರ್‌ಆರ್‌ ಅನುಪಾತವನ್ನು ಹೆಚ್ಚಿಸುವ ಮೂಲಕ ಪೂರೈಕೆಯನ್ನು ಕಡಿಮೆ ಮಾಡಬಹುದು.

ಇನ್ನೊಂದು ನಿರ್ಬಂಧಿತ ದ್ರವತ್ವ ಅನುಪಾತ -ಎಸ್‌ಎಲ್‌ಆರ್‌. ಇದು ಕೂಡ ಸಿಆರ್‌ಆರ್‌ನಂತೆಯೇ ಕಾರ್ಯವೆಸಗುತ್ತದೆ. ಆರ್‌ಬಿಐ ಅಸ್ತ್ರಗಳಲ್ಲಿ ಮೂರನೆಯದು ರಿಪೋ ಮತ್ತು ರಿವರ್ಸ್‌ ರಿಪೊ ವ್ಯವಸ್ಥೆಯ ಮೂಲಕ ಪ್ರಕಟವಾಗುತ್ತದೆ. ಎಲ್ಲ ಉದ್ಯಮಗಳು, ಆರ್ಥಿಕ ಚಟುವಟಿಕೆಗಳು ಬ್ಯಾಂಕಿಂಗ್‌ನೊಂದಿಗೆ ಬೆಸೆದುಕೊಂಡಿರುವುದರಿಂದ ಆರ್ಥಿಕ ವ್ಯವಸ್ಥೆಯ ದ್ರವತ್ವ ಬ್ಯಾಂಕುಗಳಲ್ಲಿ ವ್ಯಕ್ತವಾಗುತ್ತದೆ. ಆರ್‌ಬಿಐ, ಬ್ಯಾಂಕುಗಳ ಒಟ್ಟಾರೆ ದ್ರವತ್ವದ ಸ್ಥಿತಿಗತಿಗಳನ್ನು ಗಮನಿಸಿ ರಿಪೋ ಮೂಲಕ ಹೆಚ್ಚಿನ ದ್ರವತ್ವವನ್ನು ಹೀರುತ್ತದೆ; ರಿವರ್ಸ್‌ ರಿಪೋ ಬಳಸಿ ಹೆಚ್ಚಿನ ದ್ರವತ್ವವನ್ನು ನೀಡುತ್ತದೆ. ಇದರ ಅನುಷ್ಠಾನ ಸುಲಭ. ಉದಾಹರಣೆಗೆ, ದ್ರವ್ಯತೆ ಹೆಚ್ಚಿದ್ದರೆ ಆರ್‌ಬಿಐ ತನ್ನ ಬಳಿ ಇರುವ ಸರಕಾರೀ ಸಾಲಪತ್ರಗಳನ್ನು ಬ್ಯಾಂಕುಗಳಿಗೆ ಮಾರುತ್ತದೆ. ಬ್ಯಾಂಕುಗಳಲ್ಲಿರುವ ಹಣ ಆರ್‌ಬಿಐ ಖಜಾನೆ ಸೇರುವುದರಿಂದ ಅಗತ್ಯವಿದ್ದಷ್ಟು ದ್ರವತ್ವ ಮಾತ್ರ ಉಳಿಯುತ್ತದೆ. ಒಂದು ವೇಳೆ ದ್ರವತ್ವದ ಕೊರತೆ ಇದ್ದರೆ, ಆರ್‌ಬಿಐ ಬ್ಯಾಂಕುಗಳಿಂದ ಸರಕಾರೀ ಸಾಲಪತ್ರ ಖರೀದಿಸಿ ಹಣವನ್ನು ಬ್ಯಾಂಕುಗಳಿಗೆ ವರ್ಗಾಯಿಸುತ್ತದೆ. ಹೀಗೆ ಒಟ್ಟಾರೆ ದ್ರವತ್ವವನ್ನು ಸಮತೋಲನ ಮಾಡಲಾಗುತ್ತದೆ. ಇವುಗಳಲ್ಲದೆ, ಇನ್ನಿತರ ಕಠಿನವಾದ ಉಪಕರಣಗಳೂ ಆರ್‌ಬಿಐ ಬತ್ತಳಿಕೆಯಲ್ಲಿವೆ.

ಬ್ಯಾಂಕಿಂಗ್‌ ಸವಲತ್ತು
ದೇಶದ ಬ್ಯಾಂಕಿಂಗ್‌ ಸವಲತ್ತು ಕೂಡ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಸಾಧನ. ಬ್ಯಾಂಕುಗಳೆಂದರೆ ಹಣಕಾಸು ಆರ್ಥಿಕತೆಯೊಂದಿಗೆ ಸಂವಾದಿಸುವ ಗವಾಕ್ಷಿ. ಆರ್ಥಿಕತೆಯ ಪ್ರತಿಯೊಂದು ವ್ಯವಹಾರಕ್ಕೂ ಬ್ಯಾಂಕು ಮಧ್ಯವರ್ತಿ. ಸುಮಾರು ಒಂದು ಲಕ್ಷಕ್ಕೂ ಮೀರಿದ ಬ್ಯಾಂಕ್‌ ಶಾಖೆಗಳು ಕಾರ್ಯವೆಸಗುತ್ತಿದ್ದು, ಪ್ರತಿ ಶಾಖೆ ಸರಾಸರಿ 10-12 ಸಾವಿರ ಜನರಿಗೆ ಸೇವೆ ಒದಗಿಸುತ್ತದೆ. ಶಾಖೆಗಳ ಸರಿಸಮಾನ ಭೌಗೋಳಿಕ ಹಂಚಿಕೆ ಇಲ್ಲ. ಈ ಅಸಮತೋಲನವನ್ನು ಹೋಗಲಾಡಿಸಲು ಗ್ರಾಮಾಂತರದಲ್ಲೂ ಬ್ಯಾಂಕಿಂಗ್‌ ಪ್ರತಿನಿಧಿಯ ಮೂಲಕ ಸೇವೆಯನ್ನು ತಲುಪಿಸುವ ಪ್ರಯತ್ನ ನಡೆದಿದೆ. ಪೇಮೆಂಟ್‌ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಕಾರ್ಯಪ್ರವೃತ್ತವಾಗಿವೆ. ಜತೆಗೆ ಇ-ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ನಡೆದಿದೆ. ಇವೆಲ್ಲವೂ ಬ್ಯಾಂಕಿಂಗ್‌ ವ್ಯವಸ್ಥೆಯ ವ್ಯಾಪ್ತಿ ಮತ್ತು ಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನಗಳು.

ಆರ್ಥಿಕ ಧೋರಣೆಗಳು
ಆರ್ಥಿಕ ಧೋರಣೆಗಳು ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸೂಕ್ತ ವಾತಾವರಣವನ್ನು ಕಲ್ಪಿಸುವ ಸಾಧನಗಳು. 1990ರ ದಶಕದಿಂದ ಪ್ರಾರಂಭವಾದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ಈ ಧೋರಣೆಗಳಲ್ಲಿ ಸೇರುತ್ತವೆ. ಸರಕಾರದ ಆಯಾತ – ನಿರ್ಯಾತ ನೀತಿ, ವಿದೇಶೀ ಹೂಡಿಕೆಯ ಧೋರಣೆ, ಸರಕಾರದ ಆಯವ್ಯಯದ ಮುನ್ಸೂಚನೆ ಇವೆಲ್ಲವೂ ಇದರಲ್ಲಿ ಸೇರಿವೆ. ಕಾಲಕಾಲದ ಆವಶ್ಯಕತೆಗಳಿಗೆ ಅನುಸಾರವಾಗಿ ಈ ಧೋರಣೆಗಳ ಮರುಚಿಂತನೆ ಮತ್ತು ಬದಲಾವಣೆ ಅಗತ್ಯ.

ಕರವ್ಯವಸ್ಥೆ
ಇದು ಸಂವಿಧಾನಬದ್ಧ ವ್ಯವಸ್ಥೆ. ಇದು ಪ್ರತಿಯೊಬ್ಬ ನಾಗರಿಕ ಮತ್ತು ಆರ್ಥಿಕ ಚಟುವಟಿಕೆ ನಡೆಸುವವರು ತಮ್ಮ ಆದಾಯದ ಮೇಲೆ ಕೊಡಬೇಕಾದ ಕರದ ಬಾಧ್ಯತೆಯನ್ನು ನಿರ್ಬಂಧಿಸುತ್ತದೆ. ಕರವ್ಯವಸ್ಥೆಯ ಹಿಂದೆ ಎರಡು ಮುಖ್ಯ ಉದ್ದೇಶಗಳು. ಒಂದನೆಯದು, ಸರಕಾರದ ಆಡಳಿತಾತ್ಮಕ ಖರ್ಚನ್ನು ನಿಭಾಯಿಸುವುದು; ಎರಡನೆಯದು, ಮೂಲ ಸೌಕರ್ಯಗಳ ವೃದ್ಧಿಗಾಗಿ ಬಂಡವಾಳ ಸಂಗ್ರಹಿಸುವುದು. ಇದಲ್ಲದೆ ಕೆಳಸ್ತರದ ಆದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದೂ ಸೇರಿದೆ. ಈ ನಿಟ್ಟಿನಲ್ಲಿ ಒಂದು ಸಮರ್ಥ ಕರವ್ಯವಸ್ಥೆ ಮತ್ತು ಸಂಗ್ರಹ ವಿಧಾನ ಮುಖ್ಯ ಪಾತ್ರ ವಹಿಸುತ್ತದೆ. 

ನಿಯಂತ್ರಣ ವ್ಯವಸ್ಥೆ
ಆರ್ಥಿಕ ವ್ಯವಸ್ಥೆಗೆ ವ್ಯಾಪಕ ವ್ಯಾಪ್ತಿಯಿದೆ. ಉದಾರೀಕೃತ ಅರ್ಥವ್ಯವಸ್ಥೆಯಲ್ಲಿ ಮುಕ್ತ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ವಾತಾವರಣವನ್ನು ಆಸೆಬುಡುಕ ಉದ್ದಿಮೆಗಳು ದುರುಪಯೋಗ ಪಡಿಸುವ ಸಾಧ್ಯತೆ ಇದೆ. ಆರ್ಥಿಕತೆಯನ್ನು ಇಂತಹ ವಿಪತ್ತಿನಿಂದ ರಕ್ಷಿಸಲು ಸಶಕ್ತವಾದ ನಿಯಂತ್ರಣ ವ್ಯವಸ್ಥೆ ಅತೀ ಅಗತ್ಯ. 2008ರಲ್ಲಿ ಅಮೆರಿಕದಲ್ಲಿ ಉಂಟಾದ ವಿಪತ್ತು ನಿಯಂತ್ರಣ ವ್ಯವಸ್ಥೆಯ ನ್ಯೂನತೆಯನ್ನು ಬೊಟ್ಟು ಮಾಡುತ್ತದೆ. ಬ್ಯಾಂಕಿಂಗ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ನಿಯಂತ್ರಕ ಮತ್ತು ಮಾರ್ಗದರ್ಶಿ. ಜನರ ವಿಶ್ವಾಸದ ಮೇಲೆ ಕಾರ್ಯವೆಸಗುವ ಈ ಸಂಸ್ಥೆಗಳಿಗೆ ಸೂಕ್ತ ನಿಯಂತ್ರಕ ವ್ಯವಸ್ಥೆ ಅತ್ಯಗತ್ಯ. ಇದೇ ರೀತಿ ಬಂಡವಾಳ ಮಾರುಕಟ್ಟೆ ಮತ್ತು ಅಂಗಸಂಸ್ಥೆಗಳಿಗೆ ಸೆಬಿ ಚೌಕಟ್ಟನ್ನು ಒದಗಿಸುತ್ತದೆ.

ಕರವ್ಯವಸ್ಥೆಗೆ ಸರಕಾರದ ಅಂಗ ಸಂಸ್ಥೆಯೇ ನಿಯಂತ್ರಕ. ಒಂದು ಅಗ್ರಗಣ್ಯ ನಿಯಂತ್ರಕ ಸಂಸ್ಥೆಯ ಕೆಳಗೆ ಆರ್ಥಿಕ ವ್ಯವಸ್ಥೆಯ ವಿವಿಧ ನಿಯಂತ್ರಕರನ್ನು ತಂದು ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಲ್ಲದೆ, ನಮ್ಮ ನಿಯಂತ್ರಕ ಸಂಸ್ಥೆಗಳು ಜಾಗತಿಕ ನಿಯಂತ್ರಕರೊಡನೆ ಕೈ ಜೋಡಿಸಿ ಹಿತದೃಷ್ಟಿಯಿಂದ ಕೆಲಸವೆಸಗುತ್ತಿವೆ.

ಆರ್ಥಿಕತೆ ಒಂದು ಸಂಕೀರ್ಣ ವ್ಯವಸ್ಥೆ. ಜಾಗತೀಕರಣದ ಪರಿಣಾಮವಾಗಿ ಅಂತರ್ದೇಶೀಯ ಆಗುಹೋಗುಗಳೂ ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಲ್ಲುವು. ಆದ್ದರಿಂದ ನಮ್ಮ ಆರ್ಥಿಕ ವ್ಯವಸ್ಥೆ ಮತ್ತು ಉಪರಂಗಗಳನ್ನು ಸದೃಢಗೊಳಿಸಿ ಪ್ರಗತಿಪೂರಕ ವಾತಾವರಣ ನಿರ್ಮಿಸುವುದು ಅಗತ್ಯ. ಈ ದಿಶೆಯಲ್ಲಿ ಉತ್ತಮ ಪ್ರಯತ್ನಗಳೂ ಶಸ್ತ್ರಕ್ರಿಯೆಗಳೂ ನಡೆಯುತ್ತಿರುವುದು ಗಮನಾರ್ಹ.

– ಡಾ| ಕೊಳ್ಚಪ್ಪೆ ಗೋವಿಂದ ಭಟ್‌

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.