ದೇಸೀ ಕಲಾಬದುಕಿನ ಅವಿಶ್ರಾಂತ ಆಸಕ್ತ ವಿಜಯನಾಥರಂಥ ಮತ್ತೂಬ್ಬರಿಲ್ಲ
Team Udayavani, Mar 20, 2017, 10:20 PM IST
ತಂಜಾವೂರು ಸಾಂಪ್ರದಾಯಿಕ ಶೈಲಿಯಿಂದ ತೊಡಗಿ ಹೆಬ್ಟಾರರ ನವ್ಯ ಕಲಾಕೃತಿಗಳವರೆಗೆ ಎಲ್ಲವನ್ನೂ ಚೌಕಟ್ಟಿನೊಳಗೆ ಹೊಂದಿಸಿ, ಸಂಗ್ರಹಿಸುತ್ತಿದ್ದ ವಿಜಯನಾಥ ಶೆಣೈ ತನ್ನ ವ್ಯಕ್ತಿತ್ವವನ್ನು ನಿರ್ದಿಷ್ಟವಾದ ಯಾವ ಚೌಕಟ್ಟಿನೊಳಗೂ ಬಂಧಿಸಿಡಲು ಬಯಸಲಿಲ್ಲ. ಅವರನ್ನು ಬಲಪಂಥದ ಚೌಕಟ್ಟಿನೊಳಗೆ ಇಟ್ಟರೆ ಅಲ್ಲಿಯೂ ಹೊಂದುತ್ತಿರಲಿಲ್ಲ; ಎಡಪಂಥದ ಚೌಕಟ್ಟಿನೊಳಗೆ ಇಟ್ಟರೆ ಅದರಿಂದಲೂ ಹೊರಗಿರುತ್ತಿದ್ದರು. ಆಸ್ತಿಕರೋ ಎಂದು ಕೇಳಿದರೆ ಅಲ್ಲ; ನಾಸ್ತಿಕರೆಂದು ಒಪ್ಪುವ ಹಾಗಿಲ್ಲ. ವಿವಿಧ ಕ್ಷೇತ್ರಗಳ ಸುಪ್ರಸಿದ್ಧರೊಂದಿಗೆ ನಿಕಟವಾಗಿ ಒಡನಾಡಲು ಇಷ್ಟಪಡುತ್ತಿದ್ದರು; ಸ್ವತಃ ತಾವು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಯಾವ ಹೆಸರಿನ ಹಂಗಿಗೂ ಒಳಗಾಗದೆ ಸವೆದ ಚಪ್ಪಲಿ ಮೆಟ್ಟಿಕೊಂಡು ನಡೆದಾಡಿದರು. ಪಾಳೇಗಾರಿಕೆಯ ಪ್ರತೀಕಗಳಂತಿದ್ದ ಬೃಹತ್ ಕಟ್ಟಡಗಳನ್ನು ಸಂರಕ್ಷಿಸಿದರು; ಅದರ ನಿರ್ಮಾಣಕ್ಕೆ ರಾತ್ರಿಹಗಲು ಶ್ರಮಿಸಿದ ಹೆಸರೇ ಇಲ್ಲದ ಕರಕುಶಲಿಯ ಪ್ರತಿಭೆಯನ್ನು ಎಳೆಎಳೆಯಾಗಿ ವಿವರಿಸಿದರು.
ವಿಜಯನಾಥ ಶೆಣೈಯವರ ಪರಿಚಯ ನನಗಾದದ್ದು ಅವರ ಆತ್ಮೀಯ ಗೆಳೆಯ, ಮಣಿಪಾಲದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಎನ್.ಎಸ್. ಪ್ರಭುಗಳ ಮೂಲಕ -1963ರಲ್ಲಿ. ನಾನೊಬ್ಬ ಸಮಾಜಶಾಸ್ತ್ರಜ್ಞನೆಂದು ತಿಳಿದ ಅವರು ಅಂದಿನಿಂದ ನನ್ನಲ್ಲಿ ವಿಶೇಷ ಆಸಕ್ತಿ ತಳೆದಿದ್ದವರಲ್ಲಿ ಒಬ್ಬರಾದರು. ಸ್ನೇಹವು ವಿಚಾರಗಳನ್ನು ಪಾರಸ್ಪರಿಕವಾಗಿ ತಿಳಿದುಕೊಳ್ಳುವ ಆಸಕ್ತಿಗೆ ಹೊರಳಿಕೊಂಡು ಸಾಗುತ್ತ ನಡೆಯಿತು. ಭೇಟಿಗಿಂತ ಹೆಚ್ಚಾಗಿ ದೂರವಾಣಿಯ ಮೂಲಕ ಇದು ನಡೆಯುತ್ತಿತ್ತು. ಭಾರತೀಯ ಕಲಾಪ್ರಪಂಚದ ಪ್ರಕಾರಗಳಾದ ಸಂಗೀತ, ಶಿಲ್ಪಕಲೆ, ವಾಸ್ತು, ಚಿತ್ರಕಲೆ ಹಾಗೂ ಅವುಗಳ ದೇಸೀ ವೈವಿಧ್ಯಗಳಲ್ಲಿ ತೀವ್ರ ಆಸಕ್ತಿಯುಳ್ಳ, ಅವುಗಳ ಅನ್ವೇಷಣೆಯಲ್ಲಿ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ವಿಜಯನಾಥ ಶೆಣೈ ಅವರಲ್ಲಿ ನಾನು 1960-70ರ ದಶಕದಲ್ಲೇ ಗುರುತಿಸಿದ್ದೆ. ಅಂದಿನಿಂದ ಮೊನ್ನೆ, ಅವರ ಕೊನೆಯ ಉಸಿರಿನ ತನಕ ವಿಶ್ರಮಿಸದೆ ಅದರ ಬೆನ್ನುಹಿಡಿದು ನಡೆದುಬಂದ ಬದುಕು ಅವರದ್ದು.
ಈ ಹಿನ್ನೆಲೆಯಲ್ಲಿ ನನ್ನನ್ನು ಕಳೆದ ದಶಕಗಳಿಂದ ಕಾಡುತ್ತಿರುವ ವೇದನೆಯೆಂದರೆ, ಭಾರತದಲ್ಲೇ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಒಬ್ಬನಾಗಿ ಶ್ರಮಿಸುತ್ತಲೇ ಬದುಕಿದ ಇಂತಹ ನಮ್ಮ ಉಡುಪಿಯ ಪುತ್ರನನ್ನು ನಾವು ಯಾವ ರೀತಿಯಲ್ಲಿ ನಡೆಸಿಕೊಂಡಿದ್ದೇವೆ ಅನ್ನುವುದು. ಅಮೆರಿಕದ ಪೆನ್ಸಿಲ್ವೇನಿಯಾ ವಿವಿಯ ವಸ್ತುಸಂಗ್ರಹಾಲಯ ಮುಖ್ಯಸ್ಥೆಯಾಗಿದ್ದ ಸ್ಟೆಲ್ಲಾ ಕ್ರಾಮರಿಶ್ ಅವರಿಗೆ ಹಿಂದೂ ದೇವಾಲಯಗಳ ವಾಸ್ತುವಿನ ಅಧ್ಯಯನಕ್ಕಾಗಿ “ಪದ್ಮಭೂಷಣ’ ಪ್ರಶಸ್ತಿಯನ್ನು ಭಾರತ ಸರಕಾರವು ನೀಡಿದೆ. ಆದರೆ ವಿಜಯನಾಥರ ಕೊಡುಗೆಯೂ ಅದಕ್ಕಿಂತ ಕಡಿಮೆಯದ್ದಲ್ಲ. ನಮ್ಮ ಪೂರ್ವಜರ ಕಲಾತ್ಮಕ ಜಾನಪದ ಬದುಕನ್ನು, ಬದುಕಿನ ವಿಧಾನವನ್ನೇ ದೃಶ್ಯರೂಪದಲ್ಲಿ ಪುನರ್ನಿಮಿಸಿ, ಶಾಶ್ವತ ವೀಕ್ಷಣೆಗೆ ತೆರೆದಿಟ್ಟ ವಿಜಯನಾಥರಿಗೆ ಒಂದು ಪದ್ಮ ಪ್ರಶಸ್ತಿಯನ್ನೂ ನೀಡಲು ಮನಸ್ಸು ಮಾಡದ ನಮ್ಮ ನೇತಾರರ ಬಗ್ಗೆ ನನಗೆ ನೋವಿದೆ. ಅವರೆಲ್ಲ ಎಷ್ಟು ಮಂದಿ ಈ ಕಡೆಗೆ ತಿರುಗಿ ನೋಡಿದ್ದಾರೋ ನನಗೆ ತಿಳಿಯದು. ಪದ್ಮಪ್ರಶಸ್ತಿ ಬಿಡಿ, ಕೊನೆಗೆ ನಮ್ಮ ಮಂಗಳೂರು ವಿಶ್ವವಿದ್ಯಾಲಯಕ್ಕಾದರೂ ಶೆಣೈ ಅವರಿಗೆ ಒಂದು ಗೌರವ ಡಾಕ್ಟರೇಟು ನೀಡುವ ಮನಸ್ಸು ಬರಬೇಕಿತ್ತು.
ಕರ್ನಾಟಕ ಮುಕ್ತ ವಿವಿಯಲ್ಲಿ ಉಡುಪಿ ಮೂಲದ ಡಾ| ಸುಧಾ ರಾವ್ ಕುಲಪತಿಗಳಾಗಿದ್ದ ಸಮಯ. ಒಂದು ದಿನ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಅವರು ನನಗೆ ಕರೆ ಮಾಡಿ, “”ತಂತ್ರಿಗಳೇ, ನನ್ನ ಅಧಿಕಾರಾವಧಿಯಲ್ಲಿ ಈ ಬಾರಿಯದು ಕೊನೆಯ ಘಟಿಕೋತ್ಸವ. ಮುಕ್ತ ವಿವಿ ಕೇವಲ ಮೈಸೂರಿಗೆ ಸೀಮಿತವಲ್ಲ; ಅದರ ವ್ಯಾಪ್ತಿ ಸಮಗ್ರ ಕರ್ನಾಟಕ. ಆದರೆ ಇದುವರೆಗೂ ಗೌರವ ಡಾಕ್ಟರೇಟ್‌ಗೆ ಕರಾವಳಿಯ ಒಬ್ಬರನ್ನೂ ಪರಿಗಣಿಸಿಲ್ಲ. ಈ ಬಾರಿ, ಇತರರ ಜತೆಗೆ ಕರಾವಳಿಯವರನ್ನೂ ಪರಿಗಣಿಸಬೇಕೆಂದಿದ್ದೇನೆ. ಹೆಚ್ಚು ಕಾಲ ದಿಲ್ಲಿಯಲ್ಲೇ ಇದ್ದ ನನಗೆ ಕರಾವಳಿಯ ಹೆಚ್ಚಿನ ಪ್ರತಿಭೆಗಳ ಪರಿಚಯವಿಲ್ಲ. ಹಾಗಾಗಿ ಕೇವಲ ಸಾಹಿತ್ಯವಲ್ಲ, ಇತರ ಕ್ಷೇತ್ರಗಳಲ್ಲೂ ಅಂತಹ ಯೋಗ್ಯ ವ್ಯಕ್ತಿಗಳಿದ್ದರೆ ತಿಳಿಸಿ. ನಾಳೆಯೇ ಹೆಸರುಗಳ ಅಂತಿಮ ಅನುಮೋದನೆಗಾಗಿ ರಾಜ್ಯಪಾಲರನ್ನು ಭೇಟಿಯಾಗಲಿದ್ದೇನೆ. ಹಾಗಾಗಿ ಇಂದೇ ಹೆಸರುಗಳು ಬೇಕು” ಎಂದರು. ಕೂಡಲೇ ನನಗೆ ಹೊಳೆದದ್ದು ವಿಜಯನಾಥ ಶೆಣೈಯವರ ಹೆಸರು; ಸಾಹಿತ್ಯದಲ್ಲಿ ವ್ಯಾಸರಾಯ ಬಲ್ಲಾಳರದ್ದು. ಇಬ್ಬರನ್ನೂ ಆಗಲೇ ಸಂಪರ್ಕಿಸಿ, ಅವರ ವಿವರಗಳನ್ನು ಪಡೆದುಕೊಂಡು ಇ-ಮೇಲ್ ಮೂಲಕ ರವಾನಿಸಿದೆ. ವಿಜಯನಾಥರನ್ನು ಸಂಪರ್ಕಿಸಿದಾಗ ಅವರು ಅತ್ಯಂತ ವಿನಯದಿಂದ ಆಡಿದ ಮಾತು, “”ಅಯ್ಯಯ್ಯೋ ನನಗೆ ಯಾಕೆ ಸ್ವಾಮಿ! ನಾನು ಯಾವ ವಿದ್ವಾಂಸ? ನೀವಾದರೆ ಅದಕ್ಕೆ ಅರ್ಹರು!” ನಾನು ವಿನೋದವಾಗಿ, “”ಮೊದಲು ನೀವು ಸ್ವೀಕರಿಸಲು ಒಪ್ಪಿಕೊಳ್ಳಿ. ಬಳಿಕ ನಿಮ್ಮ ಸಂಗ್ರಹಾಲಯದಲ್ಲಿ ಅದಕ್ಕೆ ಸ್ಥಳಾವಕಾಶವಿಲ್ಲದೆ ಹೋದರೆ ನನ್ನ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ” ಎಂದು ಹೇಳಿ ಒಪ್ಪಿಸಿದೆ. ಆ ಸಂದರ್ಭದಲ್ಲಿ ನನಗೆ ನೆನಪಾದದ್ದು 1946ರಲ್ಲಿ ನಡೆದ ಒಂದು ಘಟನೆ. ಬನಾರಸ್ ಹಿಂದೂ ವಿವಿಯಲ್ಲಿ ಡಾ| ಎಸ್. ರಾಧಾಕೃಷ್ಣನ್ ಕುಲಪತಿಗಳಾಗಿದ್ದ ಸಮಯ. ಅವರು ಆ ವರ್ಷದ ಗೌರವ ಡಾಕ್ಟರೇಟನ್ನು ಗಾಂಧೀಜಿಯವರಿಗೆ ನೀಡುವ ಠರಾವನ್ನು ಮಂಡಿಸಿ, ಒಪ್ಪಿಗೆ ಪಡೆದು ಇದಕ್ಕೆ ಸಮ್ಮತಿಸುವಂತೆ ಗಾಂಧೀಜಿಯವರಿಗೆ ಪತ್ರ ಬರೆದರು. ಅದಕ್ಕೆ ಗಾಂಧೀಜಿಯವರ ಮಾರುತ್ತರ ಹೀಗಿತ್ತು, “There are better persons qualified for this honor than me’. ಗಾಂಧೀಜಿ ಗೌರವ ಡಾಕ್ಟರೇಟರನ್ನು ನಮ್ರತೆಯಿಂದ ಹೀಗೆ ನಿರಾಕರಿಸಿದ್ದರು.
ಕೊನೆಗೂ ವಿಜಯನಾಥರು ಆ ಗೌರವಕ್ಕೆ ನಿರಾಕರಿಸದೆ ಸಮ್ಮತಿಸಿದರು. ರಾಜ್ಯಪಾಲರಾಗಿದ್ದ ಚತುರ್ವೇದಿಯವರು ಶೆಣೈ ಅವರ ಬಗ್ಗೆ ಅದಾಗಲೇ ತಮ್ಮ ಮಗಳ ಮೂಲಕ ತಿಳಿದುಕೊಂಡಿದ್ದರಂತೆ, ಅವರ ಹೆಸರನ್ನು ನೋಡುತ್ತಲೇ, “”ಅತ್ಯಂತ ಯೋಗ್ಯ ವ್ಯಕ್ತಿಯ ಹೆಸರನ್ನು ಆರಿಸಿ ತಂದಿದ್ದೀರಿ. ಬಹಳ ಸಂತೋಷವಾಯಿತು” ಎಂದು ಉದ್ಗರಿಸಿ ಸಹಿ ಹಾಕಿದರೆಂದು ಡಾ| ಸುಧಾ ರಾವ್ ಅವರೇ ನನಗೆ ದೂರವಾಣಿಯ ಮೂಲಕ ಹೇಳಿದರು.
ವ್ಯಾಸರಾಯ ಬಲ್ಲಾಳರ ಬಗ್ಗೆ, “ಈ ಕರಾವಳಿಯ ಲೇಖಕನಿಗೆ ನಾವೇಕೆ ಗೌರವ ಪದವಿ ನೀಡಬೇಕು? ಬೇಕಾದರೆ ಅವರ ವಿಶ್ವವಿದ್ಯಾಲಯವೇ ನೀಡಲಿ’ ಎಂಬ ಅಪಸ್ವರ, ಆಕ್ಷೇಪ ಆಡಳಿತ ಮಂಡಳಿಯದ್ದು. ಹಾಗಾಗಿ ಅದು ಫಲಿಸಲಿಲ್ಲ. ಮಂಗಳೂರು ವಿವಿಯ ಸಾಹಿತಿಗಳ ಕೂಟಕ್ಕೂ ಅವರು “ಅನ್ಯ’ರಾಗಿಯೇ ಉಳಿದದ್ದು ದುರಂತ.
ತನ್ನ ಉಡುಗೆಯ ಬಗ್ಗೆ ಕಿಂಚಿತ್ತೂ ಗಮನಹರಿಸದ ಶೆಣೈಯವರು, ಘಟಿಕೋತ್ಸವಕ್ಕೆ ನಾಲ್ಕೈದು ದಿನಗಳಿರುವಾಗ ನನ್ನ ಮನೆಗೆ ಬಂದು, ಘಟಿಕೋತ್ಸವದ ಸಂದರ್ಭದಲ್ಲಿ ತಾನು ಯಾವ ಔಪಚಾರಿಕ ಉಡುಗೆಯಲ್ಲಿರಬೇಕೆಂದು ಮುಗ್ಧತೆಯಿಂದ ಪ್ರಶ್ನಿಸಿದ್ದರು. “”ಬೇರೇನೂ ಬೇಕಾಗಿಲ್ಲ, ನಿಮ್ಮ ಈ ಹಳೆಯ ಪ್ಯಾಂಟು ಮತ್ತು ಅರ್ಧ ತೋಳಿನ ಅಂಗಿಯ ಬದಲು, ಹೊಸತನ್ನು ಧರಿಸಿಕೊಂಡರೆ ಸಾಕು. ಅಲ್ಲದೆ ನೀವು ಘಟಿಕೋತ್ಸವದ ಟೋಪಿ ಧರಿಸಿದಾಗ ಉಡುಗೆಯನ್ನು ಯಾರೂ ನೋಡುವುದಿಲ್ಲ” ಎಂದೆ. ಹಾಗೆಯೇ ಅವರು ಒಂದು ಜತೆ ಹೊಸ ಬಟ್ಟೆ ಹೊಲಿಸಿಕೊಂಡದ್ದು ನೆನಪು.
ಮತ್ತೂಂದು ನೆನಪು 3-4 ವರ್ಷಗಳ ಹಿಂದಿನದ್ದು. ಬೆಂಗಳೂರಿನ ಅಭಿನವ ಪ್ರಕಾಶನದ ರವಿಕುಮಾರ್ ಅವರು ಅನಂತಮೂರ್ತಿಯವರಿಗೆ 80 ವರ್ಷಗಳು ತುಂಬಿದ ಹೊತ್ತಿನಲ್ಲಿ ಹತ್ತು ಪುಸ್ತಕಗಳ “ಅನಂತಮೂರ್ತಿ ಎಂಬತ್ತು’ ಪುಸ್ತಕ ಮಾಲಿಕೆ ಪ್ರಕಟಿಸುವುದರಲ್ಲಿ ತೊಡಗಿಕೊಂಡಿದ್ದರು. ಅನಂತಮೂರ್ತಿಯವರೇ ತನಗೆ ಆತ್ಮೀಯರಾಗಿದ್ದ ವಿಜಯನಾಥರ ಬರಹಗಳನ್ನು ಪ್ರಕಟಿಸುವ ಸಲಹೆ ಮಾಡಿದರು. ರವಿಕುಮಾರರಿಗೆ ತಾನು ನೇರವಾಗಿ ವಿಜಯನಾಥರನ್ನು ಸಂಪರ್ಕಿಸಿ ಕೇಳಿದರೆ, ಅವರು ನಿರಾಕರಿಸಿಬಿಡುವ ಅಳುಕು. ಅನಂತಮೂರ್ತಿಯವರೂ ತಾನಾಗಿ ಕೇಳುವುದು ಸರಿಯಲ್ಲವೆಂದುಕೊಂಡು ನನ್ನನ್ನು ಸಂಪರ್ಕಿಸಿ, ವಿಜಯನಾಥರನ್ನು ಒಪ್ಪಿಸುವಂತೆ ಕೇಳಿದರು.
ಶೆಣೈ ಅವರು ಆರಂಭದಲ್ಲಿ ಮತ್ತೆ ತನ್ನ ಮಾಮೂಲಿ ವರಸೆಯಲ್ಲೇ, “”ನನ್ನದೇನು ಮಹಾಬರಹ?” ಎಂದು ನಿರಾಕರಿಸಿದರೂ, ಕೊನೆಗೆ ತನ್ನ ಹಳೆಯ ಪತ್ರವ್ಯವಹಾರಗಳನ್ನೆಲ್ಲ ಸಾಧ್ಯವಾದಷ್ಟು ಹುಡುಕಿ ತೆಗೆದು, ಪ್ರಕಟಿಸಲು ರವಿಕುಮಾರ್ ಅವರಿಗೆ ಕೊಟ್ಟರು. ಅವುಗಳೆಲ್ಲ ಚೊಕ್ಕವಾಗಿ ಸಂಪಾದನೆಗೊಂಡು, “ಪತ್ರವಾತ್ಸಲ್ಯ’ವಾಗಿ ಪ್ರಕಟನೆಯನ್ನು ಕಂಡಿದೆ. ಸಂಗೀತ, ಶಿಲ್ಪಕಲೆ ಇತ್ಯಾದಿ ಕಲಾಪ್ರಪಂಚದ ಸಮಗ್ರದೃಷ್ಟಿ, ಆಳ, ಅಗಲ, ಎತ್ತರದ ಅರಿವನ್ನು ಅವರ ಈ ಪತ್ರಗಳು ಪುಟ ಪುಟಗಳಲ್ಲಿ, ಪ್ರತೀ ವಾಕ್ಯಗಳಲ್ಲಿ ನಮ್ಮ ಕಣ್ಣಮುಂದಿಡುತ್ತಿವೆ.
ವಿಜಯನಾಥ ಶೆಣೈಯವರ ಸ್ಥಾನವನ್ನು ತುಂಬಬಲ್ಲ ಮತ್ತೂಬ್ಬನನ್ನು ನಾವು ಈಗಂತೂ ಊಹಿಸಲು ಕೂಡ ಸಾಧ್ಯವಿಲ್ಲ; ಆ ಸ್ಥಾನವನ್ನು ನೆನಪಿಸಿಕೊಂಡರೆ, ಮತ್ತೆ ವಿಜಯನಾಥ ಶೆಣೈಯವರೇ ನಮ್ಮ ಮುಂದೆ ಬಂದು ನಿಲ್ಲುತ್ತಾರೆ – ವೀಳ್ಯದೆಲೆಯನ್ನು ಕೈಯಲ್ಲಿ ಸವರುತ್ತಾ, ಅದಕ್ಕೆ ಸುಣ್ಣವನ್ನು ತೋರುಬೆರಳಿನಲ್ಲಿ ಲೇಪಿಸುತ್ತಾ.
ಪಿ. ಶ್ರೀಪತಿ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.