ಕವಿತೆ ಬರೆಯುವುದು ಹೇಗೆ?
Team Udayavani, Jan 1, 2017, 3:45 AM IST
ಸರ್, ಕವಿತೆ ಬರೆಯುವುದು ಹೇಗೆ?’ ಎಂಬುದಾಗಿ ಹಲವು ಯುವಜನರು ನನ್ನನ್ನು ಕೇಳುತ್ತಾರೆ. ನಾನು ಏನೆಂದು ಹೇಳಲಿ? ಪ್ರಾಮಾಣಿಕವಾಗಿ ನಾನು ಹೇಳಬಯಸುವುದು, “ಹೇಗೆಂದು ಗೊತ್ತಿರುತ್ತಿದ್ದರೆ ನಾನೇ ಬರೆಯುತ್ತಿರಲಿಲ್ಲವೆ?’ ಎಂದು. ಆದರೆ ಹಾಗೆ ಹೇಳುವುದು ಒರಟಾಗುತ್ತದೆ. ಅದಕ್ಕೆ ಬದಲಾಗಿ, “ಬರೆಯಿರಿ, ಬರೆದುದು ಕವಿತೆಯಾಗುವ ಸಾಧ್ಯತೆಗೆ ಕಾಯಿರಿ !’ ಎಂದು ಹೇಳುತ್ತೇನೆ. “ಬರೆದುದು ಕವಿತೆಯೋ ಅಲ್ಲವೋ ಎನ್ನುವುದು ನಮಗೆ ಗೊತ್ತಾಗುವುದು ಹೇಗೆ?’ ಎನ್ನುತ್ತಾರೆ; “ಅದನ್ನು ಓದುಗರು ಹೇಳುತ್ತಾರೆ, ನಾವು ಆ ಬಗ್ಗೆ ಮೌನವಾಗಿ ಇದ್ದರೆ ಸಾಕು’ ಎನ್ನುತ್ತೇನೆ. ಇದಕ್ಕಿಂತ ತೃಪ್ತಿಕರವಾದ ಉತ್ತರ ನನಗೆ ಗೊತ್ತಿಲ್ಲ.
ನಿಜ, ನನ್ನ ವಯಸ್ಸಿನ ಗೌರವಕ್ಕೋಸ್ಕರ ಬಹುಶಃ ನನ್ನನ್ನು ಹೀಗೆ ಕೇಳುತ್ತಾರೆ. ಆದರೆ ಇನ್ನೊಂದು ದೃಷ್ಟಿಯಿಂದ ಹೇಳುವುದಾದರೆ, ಕವಿತೆ ಬರೆಯುವ ಕುರಿತಾಗಿ ಆರಂಭಿಕರಿಗೆ ಕುತೂಹಲ ಇರುತ್ತದೆ. ಇದೊಂದು ಮುಗ್ಧತೆ, ಕವಿತೆ ಬರೆಯಲು ಅಗತ್ಯವಾದ್ದು. ವಾಸ್ತವದಲ್ಲಿ, ಇಷ್ಟು ವರ್ಷಗಳ ಕಾಲ ನಾನು “ಕವಿತೆ’ ಎನ್ನುವಂಥ ರಚನೆಗಳನ್ನು ಬರೆಯುತ್ತ ಬಂದಿದ್ದರೂ ನಿಜಕ್ಕೂ ಕವಿತೆ ಎಂದರೇನು, ಅದು ಹೇಗೆ ಬರುತ್ತದೆ, ಓದುಗರು ಯಾಕೆ ಅದನ್ನು ಸ್ವೀಕರಿಸುತ್ತಾರೆ ಅಥವಾ ತಿರಸ್ಕರಿಸುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಗೊತ್ತಿರುತ್ತಿದ್ದರೆ ಬಹುಶಃ ನಾನು ಬರೆಯುವುದಕ್ಕೆ ಹೊರಡುತ್ತಿರಲಿಲ್ಲ. ಯಾಕೆಂದರೆ, ಆಮೇಲೆ ಕವಿತೆ ಮರುಕಳಿಸುತ್ತದೆ ವಿನಾ ಸೃಷ್ಟಿಯಾಗುವುದಿಲ್ಲ.
ಅದೂ ಅಲ್ಲದೆ ನಾವಿರುವ ಈ ಕಾಲಘಟ್ಟದಲ್ಲಿ ಕವಿತೆಗೆ ನಿಖರವಾದ ವಿವರಣೆಯೊಂದು ಇರುವುದಿಲ್ಲ. ಹಿಂದಿನ ಕಾಲದಲ್ಲಿ ಕವಿತೆಯ ವಸ್ತುಗಳು ಹೀಗಿರಬೇಕು, ಕವಿತೆ ಛಂದೋಬದ್ಧವಾಗಿರಬೇಕು, ಅದರಲ್ಲಿ ಉಪಮೆ, ರೂಪಕ ಮುಂತಾದ ಅಲಂಕಾರಗಳಿರಬೇಕು, ಪ್ರಾಸಗಳಿರಬೇಕು, ಮಧುರ ಭಾವನೆಗಳು ಮತ್ತು ಲಯಗಳಿರಬೇಕು ಎಂದು ಮುಂತಾದ ಒಂದು ರೀತಿಯ ಸೂತ್ರಗಳಿದ್ದವು; ಆಧುನಿಕ ಕಾಲ ಇವುಗಳನ್ನೆಲ್ಲ ಉಲ್ಲಂ ಸಿದೆ. ಇಂದು ನೀವು ಪ್ರಾಸಗಳನ್ನು ಬಳಸಿ ಬರೆದರೆ ಅದು ಹಿಂದಿನ ಕಾಲದ ನೆನಪನ್ನು ತರುವಂತೆ ಇರುತ್ತದೆ; ಇಂದಿನ ಕಾಲಕ್ಕೆ ಅವು ಹೊಂದುವುದಿಲ್ಲ. ಅದೇ ರೀತಿ ರೂಪಕಗಳ ಮೇಲೆ ರೂಪಕಗಳನ್ನು ತಂದರೆ ಅದೂ ಬಹಳ ಕೃತಕವಾಗಿ ಅನಿಸುತ್ತದೆ. ಇಂಥ ಗಡಿಗಳಿಲ್ಲದ ಬಯಲಲ್ಲಿ ಯಾವುದೇ ಆಟವನ್ನು ಆಡುವುದು ಕಷ್ಟ. ಇಂದಿನ ನಮ್ಮ ಸ್ವಾತಂತ್ರ್ಯವೇ ನಮ್ಮ ಬಂಧನವೂ ಹೌದು. “ಫ್ರೀವರ್ಸ್’ ಅಥವಾ ಮುಕ್ತಛಂದ ಎನ್ನುವುದು ಅದನ್ನು ಬಹಳ ಕಲಾತ್ಮಕವಾಗಿ ಬಳಸಿದ ಟಿ.ಎಸ್. ಎಲಿಯಟ್ಟನ್ನೂ ಕಾಡಿದ ಪ್ರಶ್ನೆ. ಅಲ್ಲದೆ ಛಂದೋಬದ್ಧವಾಗಿ ಬರೆದ ಶೇಕ್ಸ್‌ಪಿಯರ್ ಕೂಡ ಛಂದೋಬದ್ಧತೆಯನ್ನು ಆಗಾಗ ಮೀರುವುದರಲ್ಲೇ ಖುಷಿಯನ್ನು ಕಂಡುಕೊಂಡವ. ಇದನ್ನೇ ತಿರುಗಿಸಿ ಹೇಳುವುದಾದರೆ, ಮುಕ್ತಛಂದದ ಒಳಗೆಯೇ ಛಂದೋಗಂಧವನ್ನು ಸೂಚಿಸುವುದು ಸಾಧ್ಯ. ಆಧುನಿಕ ಕವಿ ಹಾಕಿಕೊಂಡ ಗೆರೆಗಳು ಅಸ್ಪಷ್ಟವಾಗಿದ್ದು, ಓದುಗರ ಮನಸ್ಸಿಗೆ ಮಾತ್ರ ಅನಿಸುವಂತಿರುತ್ತವೆ. ಅವು ಅಸ್ಪಷ್ಟವಾಗಿದ್ದಷ್ಟೂ ಹೆಚ್ಚು ಹಿತಕರವಾಗಿಯೂ ಇರುತ್ತವೆ.
ನಮ್ಮ ಕಾಲದಲ್ಲಿ ಯು. ಆರ್. ಅನಂತಮೂರ್ತಿಯವರಷ್ಟು ಕಾವ್ಯಪ್ರೇಮಿಗಳು ಅಪರೂಪವೆಂದೇ ಹೇಳಬೇಕು. ಸ್ವತಃ ಕಾದಂಬರಿಕಾರರಾಗಿದ್ದರೂ ಕವಿತೆಯ ಕುರಿತಾಗಿ ಅವರಿಗೆ ವಿಶೇಷ ಕಕ್ಕುಲತೆಯಿತ್ತು. ಬಹುಶಃ ಅವರಂಥ ನಿರೂಪಕರಿಲ್ಲದೆ ಇರುತ್ತಿದ್ದರೆ, ಗೋಪಾಲಕೃಷ್ಣ ಅಡಿಗರು ಅಷ್ಟೊಂದು ಪ್ರಸಿದ್ಧರಾಗುತ್ತಿರಲಿಲ್ಲ ಎಂದು ಕಾಣುತ್ತದೆ. ಅನಂತಮೂರ್ತಿ ತಾವೇ ಬರೆದ ಹಲವು ಕವಿತೆಗಳು ನನಗೆ ತುಂಬಾ ಇಷ್ಟ. ಒಮ್ಮೆ ನಾನು ಅವರಿಗೆ ಪತ್ರವೊಂದನ್ನು ಬರೆದು, “ನಿಮಗೆ ಕವಿತೆಯ ರಹಸ್ಯ ಗೊತ್ತಿರುವಂತೆ ನನಗೆ ತೋರುತ್ತದೆ, ದಯವಿಟ್ಟು ನಮಗೂ ಸ್ವಲ್ಪ ಹೇಳಬಾರದೇ?’ ಎಂದಿದ್ದೆ. “ಯಾಕೆ ನನ್ನನ್ನು ಗೇಲಿ ಮಾಡುತ್ತೀಯಯ್ನಾ!’ ಎಂದು ಅವರು ಉತ್ತರಿಸಿದ್ದರು. ನಾನೇನೂ ಅವರನ್ನು ಗೇಲಿಮಾಡಿರಲಿಲ್ಲ, ಅವರ ಕವಿತೆಗಳ ಕುರಿತು ಮೆಚ್ಚುಗೆ ಸೂಚಿಸುವ ಕ್ರಮವಾಗಿತ್ತು ಅದು. ಕವಿತೆ ಬರೆಯಲು ಒಂದು ರಹಸ್ಯ “ರೆಸಿಪಿ’ ಇದೆ ಎಂದು ನಾನು ನಂಬುವುದಿಲ್ಲ. ಆದರೆ ಇಲ್ಲಿ ಅಡಗಿರುವ ಕವಿತೆಯ ಕುರಿತಾದ ಒಂದು ವಿಶೇಷವನ್ನು ಹೇಳಬೇಕಾಗಿದೆ. ಅನಂತಮೂರ್ತಿ ಕಾದಂಬರಿಕಾರರಾಗಿ ಪ್ರಸಿದ್ಧಿ ಪಡೆದ ಕಾರಣ, ಅವರ ಕವಿತೆಗಳು ಹಿಂದಕ್ಕೆ ಸರಿದಿವೆ. ಅಲ್ಲದೆ ಅವರ ಕಾವ್ಯಶೈಲಿಯೂ ವಿಶಿಷ್ಟವಾಗಿರುವ ಕಾರಣ, ಅವರು ಕವಿಯೇ ಅಲ್ಲ ಎಂಬ ಅಭಿಪ್ರಾಯವೊಂದು ಪ್ರಚಲಿತವಿದೆ. ಆದರೆ ಇದು ಸರಿಯಲ್ಲ; ಅವರ ಕವಿತೆಗಳನ್ನು ಮೆಚ್ಚುವ ಸಾಕಷ್ಟು ಮಂದಿ ಇದ್ದಾರೆ, ಅಂಥವರಲ್ಲಿ ನಾನೂ ಒಬ್ಬ. ಪ್ರಸ್ತುತ ಸಂಗತಿಯೆಂದರೆ, ಎಲ್ಲ ಕವಿತೆಗಳೂ ಎಲ್ಲರಿಗೆ ಮೆಚ್ಚುಗೆಯಾಗಬೇಕೆಂದಿಲ್ಲ. ಎಲ್ಲರೂ ಮೆಚ್ಚುವ ಕವಿತೆಗಳು ಇರಬಹುದು; ಆದರೆ, ಎಲ್ಲರ ಪ್ರಶಂಸೆಗೆ ಒಳಗಾಗಿಲ್ಲ ಎಂಬ ಕಾರಣಕ್ಕೆ ಕವಿತೆಯೊಂದು ಕವಿತೆಯೇ ಅಲ್ಲ ಎಂದು ಹೇಳಲಾಗದು. ಯುಗಧರ್ಮಕ್ಕೆ ಅನುಸಾರ ಕವಿತೆಯ ಕುರಿತಾದ ಧೋರಣೆ ಕೂಡ ಬದಲಾಗುವುದನ್ನು ಕಾಣುತ್ತೇವೆ.
ಕವಿಗಳ ಕುರಿತಾಗಿಯೂ ನಮಗೆ ಹಲವಾರು ಪೂರ್ವಾಪೇಕ್ಷೆಗಳಿರುತ್ತವೆ: ಕವಿಗಳು ಹಾಗಿರುತ್ತಾರೆ, ಹೀಗಿರುತ್ತಾರೆ ಎಂದು ಮುಂತಾಗಿ. ಕವಿಗಳು ದೇಶವಿದೇಶ ಸುತ್ತಿದವರಾಗಿರಬೇಕು, ಬಹಳ ಜೀವನಾನುಭವ ಪಡೆದಿರಬೇಕು ಎನ್ನುವುದು ನಮ್ಮ ಅಪೇಕ್ಷೆಗಳಲ್ಲಿ ಕೆಲವು. ಆದರೆ ವಾಸ್ತವದಲ್ಲಿ, ಹೇಗೆ ಮನುಷ್ಯರು ಭಿನ್ನ ಭಿನ್ನರಾಗಿ ಇರುತ್ತಾರೋ ಕವಿಗಳೂ ಅದೇ ರೀತಿ ಇರುತ್ತಾರೆ, ಯಾಕೆಂದರೆ ಅವರೂ ಕೂಡ ಮನುಷ್ಯರೇ. ಅದಲ್ಲದೆ ಬೇರೆಯವರನ್ನು ಅನುಸರಿಸುವ ಕವಿಗಳು ಸ್ವಂತ ಕವಿತೆಗಳನ್ನು ಬರೆಯಲಾರರು- ನಾನಿಲ್ಲಿ ಪ್ರಭಾವದ ಬಗ್ಗೆ ಹೇಳುವುದಿಲ್ಲ, ಅನುಸರಣೆಯ ಬಗ್ಗೆ ಹೇಳುತ್ತಿದ್ದೇನೆ. ಆದರೂ ಅನುಸರಣೆಯಿಂದ ಹೊರಡುವವರು ಕ್ರಮೇಣ ಸ್ವಂತಿಕೆಯತ್ತ ತಿರುಗುವುದನ್ನೂ ಕಾಣಬಹುದಾಗಿದೆ. ಕೆಲವರಿಗೆ ಮಾತ್ರ ಅದು ಸಾಧ್ಯವಾಗದೆ ಇರಬಹುದು.
ಹತ್ತೂಂಬತ್ತನೆಯ ಶತಮಾನದ ಅಮೇರಿಕನ್ ಕವಿ ಎಮಿಲಿ ಡಿಕಿನ್ಸನ್ ನಾನು ಇಷ್ಟಪಡುವ ಕವಿಗಳಲ್ಲಿ ಒಬ್ಬಳು. ಅವಳದೊಂದು ಪುಟ್ಟ ಕವಿತೆಯಿದೆ, ಪ್ರಯರಿಯನ್ನು ಮಾಡುವುದು ಎನ್ನುವುದು ಅದರ ಹೆಸರು. ಈ ಕವಿತೆಯನ್ನೂ ಅದರ ಸರಿಸುಮಾರಾದ ಕನ್ನಡ ಅನುವಾದವನ್ನೂ ಕೆಳಗೆ ಕೊಡಲಾಗಿದೆ:
To make a prairie it takes a clover and one bee,
One clover, and a bee.
And revery.
The revery alone will do,
If bees are few.
-Emile Dickinson, “To make a praerie”
ಪ್ರಯರಿಯನ್ನು ಮಾಡುವುದು ಎನ್ನುವುದೇ ಒಂದು ಅದ್ಭುತ ಕಲ್ಪನೆ ! ಯಾಕೆಂದರೆ ಪ್ರಯರಿಯನ್ನು ಯಾರೂ ಮಾಡುವುದಿಲ್ಲ, ಅದು ನೈಸರ್ಗಿಕವಾಗಿ ಉಂಟಾಗುವಂಥದು. ಪ್ರಯರಿ ಎಂದರೆ ಹರವಾದ ಹುಲ್ಲಿನ ಬಯಲು, ಈ ಹುಲ್ಲು ಕೂಡ ಬಹಳ ಎತ್ತರಕ್ಕೆ ಬೆಳೆಯುವಂಥದು, ಹಾಗೂ ಇಂಥ ಜಾಗದಲ್ಲಿ ಪೊದೆಗಳು ಕೂಡ ಅಲ್ಲಲ್ಲಿ ಕಾಣಿಸಬಹುದು, ಆದರೆ ಮರಗಳು ಅಪರೂಪ. ನಾನು ಊರಲ್ಲಿ ಶಾಲೆ ಕಲಿಯುತ್ತಿದ್ದಾಗ, ಪ್ರಯರಿ, ಸವನ್ನಾ, ಸ್ಟೆಪ್ಪೀಸ್ ಮುಂತಾದ ಹೆಸರುಗಳು ನನಗೆ ತುಂಬಾ ಆಕರ್ಷಣೀಯವಾಗಿದ್ದುವು. ನನ್ನ ಊರಾಚೆಗೆ ಏನೇನಿದೆ ಎಂದು ನೋಡಲು ನಾನು ತಹತಹಿಸುತ್ತಿದ್ದ ಕಾಲ ಅದು. ಮುಂದೆ ನಾನು ಅಮೆರಿಕಕ್ಕೆ ಹೋದಾಗ ಪ್ರಯರಿಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ ಬಂತು. ನಮ್ಮೂರಿನ ಮುಳಿ ಹುಲ್ಲಿನ ಗುಡ್ಡಗಳ ಬೃಹದ್ ರೂಪ ಅದು ಅನ್ನಿಸಿತು. ಆದರೆ ಹೆಚ್ಚು ದಪ್ಪವೂ ಎತ್ತರವೂ ಆದ ಹುಲ್ಲುಗಳು. ಇವು ಬೆಳೆಯುವಂಥ ಹುಲ್ಲುಗಾವಲುಗಳು ಅಮೆರಿಕದ ಸಂಯುಕ್ತ ಸಂಸ್ಥಾನಗಳ ಮಧ್ಯಭಾಗದಲ್ಲಿ ತುಂಬಾ ಇವೆ. ಡಿಕಿನ್ಸನ್ ಕೂಡಾ ಇಂಥದೊಂದು ಮಧ್ಯಭಾಗಕ್ಕೆ ಸೇರಿದ ಕವಿ- ಮಸಾಚುಸೆಟ್ಸ್‌ನ ಆಮ್‌ಹರ್ಸ್ಡ್ ಎಂಬ ಪ್ರದೇಶದಲ್ಲಿ ಹುಟ್ಟಿ ಬೆಳೆದು ಅಲ್ಲೇ ಅಸು ನೀಗಿದವಳು.
ಈ ಚಿಕ್ಕ ಕವನ ಚೇತೋಹಾರಿಯಾಗಿದೆ. ಪ್ರಯರಿಯನ್ನು ಮಾಡುವುದು ಬಹಳ ಸುಲಭ: ಒಂದು ಕ್ಲೋವರ್, ಒಂದು ದುಂಬಿ, ಮತ್ತು ಲಹರಿ ಸಾಕು ಎನ್ನುವುದೇ ಮನೋಹರವಾದ ಸಂಗತಿ; ಇನ್ನು ದುಂಬಿಗಳು ಕಡಿಮೆ ಬಿದ್ದರೆ ಲಹರಿ ಮಾತ್ರವೂ ಸಾಕು ಎನ್ನುವುದಂತೂ ಆಪ್ಯಾಯಮಾನವಾದ ವಿಚಾರ. ಕೇವಲ ಐದು ಸಾಲುಗಳಲ್ಲಿ ಅದೆಂಥ ಗಹನ ಅರ್ಥ ತುಂಬಿದೆ! ಪ್ರಯರಿಗೊಂದು ಸೂಚನೆ ಸಾಕು, ಹಾಗೂ ಮನೋಲಹರಿ ಎನ್ನುತ್ತದೆ ಕವನ. ಕವನಕ್ಕೂ ಬೇಕಾದ್ದು ಇಂಥವೇ ಅಲ್ಲವೆ? ಹೌದು ಎನ್ನುವುದಕ್ಕೆ ಈ ಕವನವೇ ಸಾಕ್ಷಿ! ಎರಡಕ್ಕೂ ಬೇಕಾದ್ದು ಅತ್ಯಲ್ಪ ಪರಿಕರಗಳು; ಹಾಗೂ (ಡಿಕಿನ್ಸನ್ ರೆವರಿ ಎನ್ನುವ) ಮನೋಲಹರಿ.
ಡಿಕಿನ್ಸನ್ ಆಮ್‌ಹರ್ಸ್ಡ್ ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ ; ಅವಳ ವಿಧ್ಯುಕ್ತ ವಿದ್ಯಾಭ್ಯಾಸವೂ ಅತ್ಯಲ್ಪ. ಆದರೆ, ಸ್ವಂತ ಪರಿಶ್ರಮದಿಂದ ಸಾಕಷ್ಟು ಪುಸ್ತಕ ಓದುತ್ತಿದ್ದಳು. ಅವಳ ಮನೆಗೆ ಬಂದು ಹೋಗುವ ಅತಿಥಿಗಳೂ ಯಾರಿರಲಿಲ್ಲ. ಇಂಥ ಸನ್ನಿವೇಶವನ್ನು ಊಹಿಸಿನೋಡಿ. ಇದು ಉತ್ತಮ ಕವಿತೆಗೆ ಸಹಾಯಕವಲ್ಲ ಎಂದು ಯಾರು ಬೇಕಿದ್ದರೂ ಹೇಳಬಹುದು. ಆದರೆ ಡಿಕಿನ್ಸನ್ ಮಾತ್ರ ಇಂಗ್ಲಿಷ್ ಭಾಷೆಯಲ್ಲಿ ಶ್ರೇಷ್ಠ ಎಂದು ಪರಿಗಣಿಸಲ್ಪಡುವ ಹಲವಾರು ಕವಿತೆಗಳನ್ನು ಬಿಟ್ಟು ಹೋಗಿದ್ದಾಳೆ ಎನ್ನುವುದು ವಾಸ್ತವ. ಅಲ್ಲದೆ, ಅವಳ ಜೀವಿತಕಾಲದಲ್ಲಿ ಪ್ರಕಟವಾದ್ದು ಬರೇ ಆರೇಳು ಕವಿತೆಗಳು ಮಾತ್ರ. ಉಳಿದವನ್ನೆಲ್ಲ ಚಿಕ್ಕ ಚಿಕ್ಕ ಕಾಗದದ ಚೂರುಗಳಲ್ಲಿ ಅವಳು ಬರೆದಿಟ್ಟು ಹೋಗಿದ್ದಳು. ಅವು ಜನರ ಕಣ್ಣಿಗೆ ಬಿದ್ದುದೇ ಒಂದು ಆಕಸ್ಮಿಕ. ಕವಿತೆಯ ಅದೃಷ್ಟವೂ ಅದರ ಭಾಗವೇ?
– ಕೆ. ವಿ. ತಿರುಮಲೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.