ಬಹುಮುಖ ಪ್ರತಿಭೆಯ ಗಿರಡ್ಡಿ ಗೋವಿಂದರಾಜ
Team Udayavani, Mar 26, 2017, 3:50 AM IST
ಇಂದು “ಗಿರಡ್ಡಿ ಗೋವಿಂದರಾಜ ಅವರ ಸಾಹಿತ್ಯ ಸಮೀಕ್ಷೆ ಮತ್ತು ಅಭಿನಂದನ’ ಧಾರವಾಡದಲ್ಲಿ ಆಯೋಜನೆಗೊಂಡಿದೆ.
ಗಿರಡ್ಡಿ ಗೋವಿಂದರಾಜ ನಮ್ಮ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು. ಅವರು ಕಥೆಗಾರ, ಪ್ರಬಂಧ ಕಾರ, ವ್ಯಕ್ತಿಚಿತ್ರಕಾರ ಹಾಗೂ ಕವಿಯಾಗಿ ಕೂಡ ಹೆಸರು ಮಾಡಿದವರು. ವಿಮಶಾì ಕ್ಷೇತ್ರದಲ್ಲಿ ಅವರ ಆರೋಗ್ಯಕರ ನಿಲುವುಗಳ ಬಗೆಗೆ ಸಾರ್ವತ್ರಿಕ ಮನ್ನಣೆ ಇದೆ. ವಿಮರ್ಶೆಯಲ್ಲಿ ಅವರು ತಮ್ಮದೇ ಆದ ವಿಶಿಷ್ಟ ಹಾದಿಯನ್ನು ಹಿಡಿದವರು. ಕೀರ್ತಿ ನಾಥ ಕುರ್ತಕೋಟಿ ಅವರು ಗಿರಡ್ಡಿ ಅವರನ್ನು ನಮ್ಮ ಕಾಲದ ಪ್ರಮುಖ ವಿಮರ್ಶಕ ಎಂದು ಗುರುತಿಸುತ್ತ, ಅವರ ಪಾರದರ್ಶಕ ವ್ಯಕ್ತಿತ್ವದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರ ಕಥೆ, ಪ್ರಬಂಧ, ವ್ಯಕ್ತಿಚಿತ್ರಗಳಲ್ಲಿ ಅವರ ಪಾರದರ್ಶಕ ವ್ಯಕ್ತಿತ್ವ ಇನ್ನೂ ಢಾಳಾಗಿದೆ.
ಸಾಮಾನ್ಯವಾಗಿ ಲೇಖಕರ ಸೃಜನಶೀಲ ಚಡಪಡಿಕೆಗಳು ಕವಿತೆಯ ಮೂಲಕ ಆರಂಭಗೊಳ್ಳುವುದು ಸಹಜ. 1956ರಲ್ಲಿ ಅವರಿನ್ನೂ ಹೈಸ್ಕೂಲಿನ ವಿದ್ಯಾರ್ಥಿಯಿದ್ದಾಗಲೇ ಒಂದು ದೀರ್ಘ ಕವಿತೆ ಶಾರದಾ ಲಹರಿ ಬರೆದು ಪ್ರಕಟಿಸಿದ್ದರು. ಕಾಲೇಜಿನ ಪರಿಸರದಲ್ಲಿ ಅವರ ಕಾವ್ಯ ರಚನೆ ಮುಂದುವರೆಯಿತು. ಸ್ನಾತಕೋತ್ತರ ವಿದ್ಯಾರ್ಥಿಯಿದ್ದಾಗ ರಸವಂತಿ ಕವನಸಂಕಲನ ಪ್ರಕಟವಾಯಿತು. ಗೋಕಾಕರು ಅವರ ಬರವಣಿಗೆಯಲ್ಲಿ ನಿರರ್ಗಳತೆ ಯನ್ನು ಕಂಡರೆ, ಕಣವಿಯವರು ಈ ಕವಿಯ ಪ್ರಸಾದಗುಣವನ್ನು ಮೆಚ್ಚಿಕೊಂಡರು. ಮರ್ಲಿನ್ ಮನ್ರೊà ಸಂಕಲನದಲ್ಲಿ ಶೀರ್ಷಿಕೆಯ ಕವಿತೆ ಮನ್ರೊàಳ ಬದುಕಿನ ಸಂಕೀರ್ಣ ಅಭಿವ್ಯಕ್ತಿಯಿಂದಾಗಿ ಅದಕ್ಕೆ ಬಹುಮುಖತೆ ಪ್ರಾಪ್ತವಾಗಿದೆ. ಅವರು ನವೋದಯ ಮತ್ತು ನವ್ಯ ಮಾರ್ಗಗಳಲ್ಲಿ ತುಯ್ಯುತ್ತ ಕೊನೆಗೆ ಕಾವ್ಯಕ್ಕೇ ವಿದಾಯ ಹೇಳಿದರು.
ಅಪೂರ್ವ ಗದ್ಯ ಶೈಲಿ
ಬದುಕಿನ ಅನುಭವಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತ ಅದರ ಸಂಕೀರ್ಣತೆಯನ್ನು ಕಲಾತ್ಮಕವಾಗಿ ಸೆರೆಹಿಡಿಯುವ ಪ್ರತಿಭೆ ವ್ಯಕ್ತವಾಗುವುದು ಅವರ ಕಥೆಗಾರಿಕೆಯಲ್ಲಿ. ನೇರ ನಿರೂಪಣೆಯ, ಸರಳ ಗದ್ಯದಲ್ಲಿರುವ ಅವರ ಕಥೆಗಳು ಮನುಷ್ಯ ಸ್ವಭಾವದ ಆಳವಾದ ವಿಶ್ಲೇಷಣೆಯನ್ನು ಮಾಡುತ್ತವೆ. ಆ ಮುಖಾ ಈ ಮುಖಾ (1970) ಮಣ್ಣು ನೀಳYತೆ (1976) ಸೇರಿಸಿ ಅವರು ಬರೆದದ್ದು ಹನ್ನೆರಡು ಕತೆಗಳು ಮಾತ್ರ. ಆದರೆ ಯಾವತ್ತೂ ನೆನಪಿನಲ್ಲಿ ಉಳಿವಂಥ ಕೆಲವು ಗಟ್ಟಿ ಕಥೆಗಳನ್ನು ಕೊಟ್ಟಿದ್ದಾರೆ. ಅವರ ಹಂಗು ಕಥೆ ಪರೀಕ್ಷೆಯಲ್ಲಿ ಅಂಕಗಳನ್ನು ಹೆಚ್ಚಿಗೆ ಹಾಕಿಸುವ ಪ್ರಯತ್ನಗಳನ್ನು ಸಾಕಷ್ಟು ಪ್ರಜ್ಞಾಪೂರ್ವಕವಾಗಿ ಗೆಲ್ಲಬೇಕೆನ್ನುವ ಪ್ರಾಧ್ಯಾಪಕನ ತುಮುಲವನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಈ ಕತೆ ಚಲನಚಿತ್ರವಾಗಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಕಥಾಸಂಗಮದಲ್ಲಿ ಪ್ರದರ್ಶಿತವಾಗಿ ಸಾಕಷ್ಟು ಜನಪ್ರಿಯವಾಯಿತು. ಇದು ದಿಲ್ಲಿ ದೂರದರ್ಶನದ ಏಕ್ ಕಹಾನಿ ಧಾರಾವಾಹಿಯಲ್ಲಿ ಉಪಕಾರ್ ಎಂಬ ಹೆಸರಿನಲ್ಲಿ ಕೂಡ ಪ್ರಸಾರವಾಗಿ ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಊರವರಿಗೆ ಅಪರಿಚಿತವಾದ ಅನ್ಯ ಕುಟುಂಬವೊಂದು ಕ್ರಮೇಣ ಆತ್ಮೀಯವಾಗುವ ಪರಿ ನಮ್ಮೂರಿನಲ್ಲೊಬ್ಬ ತವಾಠಿ ಕಥೆಯಲ್ಲಿದೆ. ಈ ಕಥೆಯಲ್ಲಿ ನವ್ಯದ ಮಾದರಿಯಿಂದ ಸಾಕಷ್ಟು ದೂರ ಸರಿದು ಓದುಗನೊಂದಿಗೆ ಸಂವಾದಕ್ಕಿಳಿದು ನಿರೂಪಿಸುವಲ್ಲಿ ಲೇಖಕರು ಹೊಸ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಮಣ್ಣು ಗಿರಡ್ಡಿಯವರ ಆತ್ಮಚರಿತ್ರಾತ್ಮಕ ಅಂಶಗಳನ್ನು ಒಳಗೊಂಡು ಬೆಳೆದಿರುವ ನೀಳYತೆ. ಈಚೆಗೆ ಮನೋಹರ ಗ್ರಂಥಮಾಲಾ ಗಿರಡ್ಡಿಯವರ ಸಮಗ್ರ ಕಥೆಗಳನ್ನು ಒಂದೆಡೆಗೆ ತಂದಿದೆ.
ಲಲಿತ ಪ್ರಬಂಧ ಹೈಸ್ಕೂಲು ದಿನಗಳಿಂದಲೂ ಇಷ್ಟಪಟ್ಟಿರುವ ಅವರ ಸಾಹಿತ್ಯ ಪ್ರಕಾರವಾಗಿದ್ದರೂ ಒಂದು ಪ್ರಬಂಧ ಸಂಕಲನವಾಗಿ ಹೊರಬಂದದ್ದು ಈಚೆಗೆ, 2007ರಲ್ಲಿ. ಅವರ ವಿಮರ್ಶೆಯನ್ನು ಮಾತ್ರ ಓದುತ್ತ ಬಂದವರಿಗೆ ಗಿರಡ್ಡಿಯವರಿಗೆ “ನಗಲಿಕ್ಕೇ ಬರಲಿಕ್ಕಿಲ್ಲ’ ಎಂಬ ಅನುಮಾನ ಮೂಡಿದರೆ ಅಚ್ಚರಿಯೇನಿಲ್ಲ. ಆದರೆ ಅವರ ಹಿಡಿಯದ ಹಾದಿ ಸಂಕಲನದ ಪ್ರಬಂಧಗಳನ್ನು ಓದಿದಾಗ ಅವರ ಅನುಮಾನ ಗಳು ನಿವಾರಣೆಯಾಗುವಲ್ಲಿ ಸಂದೇಹವಿಲ್ಲ. ಪ್ರಬಂಧ ಮಾಧ್ಯಮದ ಮೂಲಕ ಬಿಚ್ಚು ಮನಸ್ಸಿನಿಂದ ಆತ್ಮೀಯವಾಗಿ, ಲಘುವಾಗಿ ಮಾತಾಡಲು ಅವರಿಗೆ ಸಾಧ್ಯವಾಗಿದೆ. ಬಹುಶಃ ಗಿರಡ್ಡಿಯವರು ಈ ಪ್ರಬಂಧಗಳನ್ನು ಬರೆಯದೇ ಹೋಗಿದ್ದರೆ ಅವರ ವ್ಯಕ್ತಿತ್ವದ ಈ ಮುಖ ನಮಗೆ ತಿಳಿಯದೇ ಹೋಗಬಹುದಿತ್ತು. ಪುಸ್ತಕಗಳು, ಕಿಸೆಗಳ್ಳತನ, ಮುನ್ನುಡಿ ಎಂಬ ವ್ರತ, ಪ್ರಶಸ್ತಿ ಎಂಬ ಆಕಸ್ಮಿಕ, ಹಿಡಿಯದ ಹಾದಿ, ಜಿಂಕೆಯೆಂಬ ಮಾಯಾಮೃಗ- ಈ ಪ್ರಬಂಧಗಳಲ್ಲಿ ಗಿರಡ್ಡಿಯವರ ವ್ಯಕ್ತಿತ್ವದ ಛಾಪು ನಿಚ್ಚಳವಾಗಿದೆ.
ಅವರ ಆತ್ಮೀಯ ವ್ಯಕ್ತಿಚಿತ್ರಗಳ ಸಂಕಲನ ಗಿರಡ್ಡಿ ತಮಗೆ ಎಂಥ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುವುದರಲ್ಲಿ ತಮ್ಮ ಆಸಕ್ತಿ ಎಂಬುದರ ಕುರಿತು ಹೇಳಿಕೊಂಡಿದ್ದಾರೆ. “ನಮಗೆ ಗೊತ್ತಿರುವ ವ್ಯಕ್ತಿಗಳ ಗೊತ್ತಿರದ ಮಗ್ಗುಲುಗಳನ್ನು ಚಿತ್ರಿಸುವ ವ್ಯಕ್ತಿಗಳ ಚಿತ್ರಗಳ ಸ್ವರೂಪ ನನಗೆ ಇಷ್ಟವಾದದ್ದು’ ಎನ್ನುತ್ತಾರೆ. ಸಾಹಿತ್ಯಲೋಕದ ಸುತ್ತಮುತ್ತ ಬಿಡಿ ಪ್ರಸಂಗಗಳ ನಿರೂಪಣೆಯ ಕೃತಿ. ಈ ಪ್ರಸಂಗಗಳು ಕೂಡ ಸಾಹಿತಿಗಳ ವ್ಯಕ್ತಿತ್ವದ ಮೇಲೆ ಸಣ್ಣ ಬೆಳಕು ಚೆಲ್ಲುವುದಲ್ಲದೆ ಅವರ ಬರವಣಿಗೆಯನ್ನೂ ಅರ್ಥಮಾಡಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತವೆ. ಈ ಪ್ರಸಂಗಗಳ ನಿರೂಪಣೆ ಸ್ವಾರಸ್ಯಕರವಾಗಿದೆ.
ಕವಿತೆ, ಕತೆ, ಪ್ರಬಂಧ, ವ್ಯಕ್ತಿಚಿತ್ರ, ಪ್ರಸಂಗ- ಹೀಗೆ ವಿವಿಧ ಪ್ರಕಾರಗಳಲ್ಲಿ ಸೃಜನಶೀಲ ಬರಹಗಾರರಾಗಿ ಗಿರಡ್ಡಿಯವರು ತಮ್ಮದೇ ಆದ ವಿಶಿಷ್ಟತೆ ಮೆರೆದವರಾದರೂ ಅವರ ಬಹುಮುಖ್ಯ ಕೊಡುಗೆ ವಿಮರ್ಶೆಯೇ. ಸುಮಾರು 1800 ಪುಟಗಳಿಗೂ ಅಧಿಕ ಇರುವ ಅವರ ಮೂರು ಸಮಗ್ರ ಸಂಪುಟಗಳು ಸಪ್ನ ಬುಕ್‌ಹೌಸ್‌ನಿಂದ ಪ್ರಕಟವಾಗಿವೆ.
ಸಣ್ಣಕತೆಯ ಮಾಧ್ಯಮದಲ್ಲಿ ಗಿರಡ್ಡಿಯವರಿಗೆ ವಿಶೇಷ ಆಸಕ್ತಿ. ಸುಮಾರು 45 ವರ್ಷಗಳಿಂದ ಈ ಪ್ರಕಾರವನ್ನು ಹಾಗೂ ಪರಂಪರೆಯನ್ನು ಕುರಿತು ಚಿಂತಿಸುತ್ತ ಲೇಖನ ಗಳನ್ನು ಬರೆಯುತ್ತ ಬಂದಿದ್ದಾರೆ. ಇಷ್ಟು ದೀರ್ಘ ಅವಧಿಯಲ್ಲಿ ಬರೆದ ಸಣ್ಣಕತೆಗಳನ್ನು ಕುರಿತ ಬರಹಗಳು ಒಂದೆಡೆ ಕಲ್ಪಿತ ವಾಸ್ತವದಲ್ಲಿ ಸಂಗ್ರಹವಾಗಿವೆ. ಅವರ ಸಣ್ಣಕತೆಯ ಸ್ವರೂಪ ಲೇಖನ ಸಣ್ಣಕತೆಯ ಮೀಮಾಂಸೆಯನ್ನು ರೂಪಿಸಿಕೊಡುತ್ತದೆ. ಗಿರಡ್ಡಿಯವರು ಈ ಮೀಮಾಂಸೆಯನ್ನು ಕನ್ನಡದಲ್ಲಿ ರೂಪಿಸಿಕೊಟ್ಟ ಮೊದಲಿಗರು.
ನವ್ಯಕತೆಗಳ ತಳಹದಿ ದುರ್ಬಲವಾಗಿದೆಯೆಂಬ ಕುರ್ತಕೋಟಿಯವರ ನಿಲುವನ್ನು ವಿರೋಧಿಸುತ್ತ ನವ್ಯಕತೆಗಳ ಶಕ್ತಿಯನ್ನು ಸಮರ್ಥಿಸುತ್ತ ಸಣ್ಣ ಕತೆಯ ಹೊಸ ಒಲವುಗಳು (1965) ಕೃತಿಯ ಮೂಲಕ ನವ್ಯ ವಿಮರ್ಶಕರಾಗಿ ಗಿರಡ್ಡಿ ಯವರು ಅಧಿಕೃತ ಪ್ರವೇಶ ಪಡೆದರು. ಅನಂತಮೂರ್ತಿ, ಚಿತ್ತಾಲ, ಶಾಂತಿನಾಥ ದೇಸಾಯಿ, ಲಂಕೇಶ ಮೊದಲಾದವರ ಕಥೆಗಳನ್ನು ಚರ್ಚಿಸಿದ್ದಾರೆ. ಅವರೆಲ್ಲ ನವ್ಯರೇ ಎಂಬುದಕ್ಕೆ ಅವರನ್ನು ಅನಾಮತ್ತಾಗಿ ಶ್ಲಾ ಸುವುದೂ ಇಲ್ಲ.
ನವ್ಯದ ಸಮರ್ಥಕರಾಗಿದ್ದ ಗಿರಡ್ಡಿಯವರ ನಿಲುವಿನಲ್ಲಿ ಮಾಸ್ತಿ ಕಥೆಗಳ ಪರಿಶೀಲನೆಗೆ ಬಂದಾಗ, ನವ್ಯ ಕತೆಗಳಿಗಿಂತ ಭಿನ್ನವಾಗಿರುವ ಮಾಸ್ತಿ ಕತೆಗಳ ವಿಶಿಷ್ಟತೆಯನ್ನು ಗುರುತಿಸುವಲ್ಲಿ ಗಿರಡ್ಡಿಯವರ ನಿಲುವಿನಲ್ಲಿ ಬದಲಾವಣೆ ಕಾಣುತ್ತೇವೆ. ನವ್ಯದ ಸಮರ್ಥಕರಾಗಿ ಪ್ರಾರಂಭದ ಹಂತದಲ್ಲಿ ಅವರು ಕಂಡರೂ ಅದರಾಚೆಗಿನ ಶ್ರೇಷ್ಠತೆಯನ್ನು ಕಾಣಬಲ್ಲವರು.
ಅವರ ಕಾವ್ಯ ವಿಮರ್ಶೆಯನ್ನು ಕುರಿತ ಎಲ್ಲ ಲೇಖನಗಳನ್ನು ಒಳಗೊಂಡಿರುವ ಕಾವ್ಯವನ್ನು ಕುರಿತು ಸಂಕಲನದ ಮೊದಲ ನಾಲ್ಕು ಲೇಖನಗಳು ಕಾವ್ಯ ಮತ್ತು ಭಾಷೆ, ಕವಿತೆಯ ದ್ವಂದ್ವ ವಿನ್ಯಾಸ, ಹಾಡಾಗಿ ಕವಿತೆ, ರಸ ಧ್ವನಿ ಸಿದ್ಧಾಂತ: ಒಂದು ಅನ್ವಯಿಕ ವಿಮರ್ಶೆ- ಇವು ಕಾವ್ಯ ಸಿದ್ಧಾಂತವನ್ನು ಕುರಿತಂತೆ ಕಾವ್ಯದ ಸ್ವರೂಪ, ರಚನೆ ಮೊದಲಾದವುಗಳನ್ನು ಚರ್ಚಿಸುತ್ತವೆ. ನಂತರದ ಹದಿನೆಂಟು ಲೇಖನಗಳು ಕವಿ-ಕಾವ್ಯ ಪರಂಪರೆ ಹಾಗೂ ಕೃತಿಗಳನ್ನು ಕುರಿತು ವಿಶ್ಲೇಷಿಸುತ್ತವೆ.
ಗಿರಡ್ಡಿಯವರು ಕೇವಲ ವಿವಿಧ ವಿಮಶಾì ಪ್ರಸ್ಥಾನಗಳನ್ನು ನಮ್ಮ ಲಕ್ಷ್ಯಕ್ಕೆ ತಂದು ಬಿಟ್ಟುಬಿಡುವವರಲ್ಲ. ಅವುಗಳನ್ನು ಪ್ರಾಯೋಗಿಕವಾಗಿ ಪರಿಶೀಲಿಸಬಲ್ಲವರೂ ಆಗಿದ್ದಾರೆ. ಇಂಥಲ್ಲಿ ವಿಶೇಷವಾಗಿ ಗಿರಡ್ಡಿಯವರ ಪ್ರತಿಭೆ, ಸೊÌàಪಜ್ಞತೆಗಳು ತತ್ಪರವಾಗಿರುತ್ತವೆ. ಶೈಲಿಶಾಸ್ತ್ರೀಯ ಪರಿಕಲ್ಪನೆಗಳನ್ನು ಅನ್ವಯಿಸಿ ವಚನಗಳ ರಚನಾ ವಿನ್ಯಾಸವನ್ನು ಅಭ್ಯಸಿಸುವ ಮೂಲಕ ಹಲವಾರು ಹೊಸದಾರಿಗಳು ತೆರೆದುಕೊಳ್ಳುತ್ತವೆ ಮತ್ತು ಒಳನೋಟಗಳು ದಕ್ಕುತ್ತವೆ ಎಂಬುದಕ್ಕೆ ಅವರ ವಚನ ವಿನ್ಯಾಸ (1977) ಒಂದು ಉತ್ತಮ ನಿದರ್ಶನವಾಗಿದೆ. ಪರಂಪರೆಯ ಜೊತೆಗಿನ ಅನುಸಂಧಾನದ ಇನ್ನೊಂದು ಮಹತ್ವದ ಪ್ರಯತ್ನ ಜನ್ನನ ಯಶೋಧರ ಚರಿತೆಯ ವಿಮರ್ಶೆ. ನಾವು ಅವಶ್ಯವಾಗಿ ಗಮನಿಸಲೇಬೇಕಾದ ಮತ್ತೂಂದು ಸುದೀರ್ಘ ಲೇಖನ ಕನ್ನಡ ಕಾವ್ಯ ಪರಂಪರೆ ಮತ್ತು ಬೇಂದ್ರೆಯವರ ಕಾವ್ಯ (2002). ಈ ಲೇಖನ ಕಾವ್ಯ ಪರಂಪರೆಯೊಂದಿಗೆ ಬೇಂದ್ರೆ ಹೊಂದಿದ್ದ ಸಂಬಂಧವನ್ನು ಶೋಧಿಸುತ್ತದೆ. ಪಂಪ, ಹರಿಹರ, ಲಕ್ಷ್ಮೀಶ ಇವರ ಕಾವ್ಯ, ವಚನ ಸಾಹಿತ್ಯ, ಕೀರ್ತನೆ, ತತ್ವಪದ, ಜನಪದ ಸಾಹಿತ್ಯ, ಅನುಭಾವ ಕಾವ್ಯ ಮೊದಲಾದವುಗಳೊಂದಿಗೆ ಮುಖಾಮುಖೀಯಾಗಿರುವುದನ್ನು ಆ ಮೂಲಕ ಅದು ಪ್ರೇರಣೆ, ಪ್ರಭಾವಗಳನ್ನು ಸ್ವೀಕರಿಸಿ ಅರಗಿಸಿಕೊಂಡು ಸ್ವಂತಿಕೆಯಾಗಿ ಒಡಮೂಡಿ ಸಮೃದ್ಧವಾಗಿರುವುದನ್ನು ನಮ್ಮ ಗಮನಕ್ಕೆ ತರುತ್ತಾರೆ. ಅವರ ಕಾವ್ಯ ಪರಿಶೀಲನೆಯಲ್ಲಿ ಸೂಕ್ಷ್ಮವಾದ ಮನಸ್ಸು , ಸಂವೇದನಾಶೀಲತೆ ಅಂತರ್ಗತವಾಗಿವೆ.
ಕನ್ನಡದಲ್ಲಿ ಕಾದಂಬರಿ ಮೀಮಾಂಸೆ ದುರ್ಲಭವಾಗಿದ್ದ ಸಂದರ್ಭದಲ್ಲಿ ಗಿರಡ್ಡಿಯವರು ಅದನ್ನು ರೂಪಿಸಿಕೊಟ್ಟರು. ನವ್ಯ ವಿಮರ್ಶಕರು ಕಾರಂತರ ಕಾದಂಬರಿಗಳಿಗೆ ಎತ್ತಿದ ಆಕ್ಷೇಪಗಳಿಗೆ ಅವರು ಸಮರ್ಥವಾಗಿ ಉತ್ತರಿಸುತ್ತಾರೆ. ಕಾರಂತರ ಕಾದಂಬರಿಗಳನ್ನು ಸಮಗ್ರ ದೃಷ್ಟಿಕೋನದಿಂದ ನೋಡುತ್ತ ಅವರ ಸಾಧನೆಯನ್ನು ಗುರುತಿಸುತ್ತದೆ. ಅವರಿಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಆಸಕ್ತಿ, ಅಭಿರುಚಿ, ಒಲವುಗಳಿವೆ. ನಾಟಕ ಮತ್ತು ರಂಗಭೂಮಿಯಲ್ಲಿ ಅವರಿಗೆ ಅನುಭವ ಮತ್ತು ಪರಿಣತಿಗಳಿರುವುದನ್ನು ಅವರ ಕೃತಿ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಸಾಬೀತುಪಡಿಸುತ್ತದೆ. ಸಂಪಾದನೆಯಲ್ಲಿ ಕೂಡ ಚರಿತ್ರಾರ್ಹ ಕೆಲಸ ಮಾಡಿದ್ದಾರೆ. ಈಚೆಗೆ ದೇವದತ್ತ ಪಟ್ಟ ನಾಯಕ ಅವರ ಮಹಾಭಾರತದ ಸಚಿತ್ರ ಮರುಕಥನ ಜಯ ಎಂಬ ಕೃತಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕೆಲವು ಮಹತ್ವದ ಯೋಜನೆಗಳನ್ನು ರೂಪಿಸಿ ಕಾರ್ಯಗತ ಗೊಳಿಸಿದ್ದು ಕೂಡ ದಾಖಲಾರ್ಹ. ಹಾಗೆಯೇ ಕಳೆದ ಐದು ವರ್ಷಗಳಿಂದ ಧಾರವಾಡದ ಸಾಹಿತ್ಯ ಸಂಭ್ರಮವನ್ನು ವಿನೂತನ ವಾಗಿ ವೈವಿಧ್ಯಮಯವಾಗಿ ರೂಪಿಸಿ ಸಂಘಟಿಸುತ್ತ ಬಂದಿದ್ದಾರೆ.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.