ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ
Team Udayavani, Feb 28, 2021, 11:56 AM IST
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವವು ನಗರದ ತೇರಿನ ಬೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಶ್ರದ್ಧಾಭಕ್ತಿಗಳಿಂದ ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು. ಬ್ರಹ್ಮರಥೋತ್ಸವದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಅಲಂಕಾರ ಕಲ್ಯಾಣೋತ್ಸವ, ಪೂಜಾ ಕಾರ್ಯಕ್ರಮಗಳು ಜರುಗಿದವು. ರಥೋತ್ಸವದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್ ಭಾಗವಹಿಸಿದ್ದರು.
ಇಲ್ಲಿನ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಅನ್ನಸಂತರ್ಪಣಾ ಸಮಿತಿಯಿಂದ ಪ್ರಸಾದ ವಿತರಣೆ, ಶ್ರೀ ಕಂಠೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ, ಲೋಕ ಸೇವಾನಿರತ ಡಿ.ಕೊಂಗಾಡಿಯಪ್ಪನವರ ಸ್ಮರಣಾರ್ಥ ಅರವಂಟಿಗೆ, ಬಿಸಿಲಹಳ್ಳಿ ಚಿಕ್ಕಚೌಡಪ್ಪನವರ ಭಜನಾ ಮಂಡಳಿ ಸೇರಿದಂತೆ ವಿವಿಧ ಮಂಡಳಿಗಳಿಂದ ಅರವಂಟಿಕೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಫೆ.28ರಂದು ಹಗಲು ಪರಿಷೆಯಿರುತ್ತದೆ. ಏ.12ರ.ವರೆಗೆ ಪ್ರಾಕಾರೋತ್ಸವವಿರುತ್ತದೆ.
ಲಾಕ್‌ಡೌನ್ ನಂತರದ ದೊಡ್ಡ ಜಾತ್ರೆ: ಈ ಬಾರಿ ಕೋವಿಡ್ ಹಿನ್ನೆಲೆ ರಥೋತ್ಸವ ಬಗ್ಗೆ ಸಾರ್ವಜನಿಕರಿಗೆ ಅನುಮಾನವಿತ್ತು. ನವೆಂಬರ್‌ನಲ್ಲಿ ಚಂದ್ರ ಮೌಳೇಶ್ವರ ರಥೋತ್ಸವ ಕೋವಿಡ್ ಹಿನ್ನೆಲೆ ಚಿಕ್ಕ ರಥದಲ್ಲಿ ನಡೆದಿತ್ತು. ಆದರೆ, ಈಗ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ತಾಲೂಕು ಆಡಳಿತ ಜಾತ್ರೆ ನಡೆಸಲು ಅನುಮತಿ ನೀಡಿದ್ದು, ಕೋವಿಡ್ ಲಾಕ್‌ಡೌನ್ ನಂತರ ನಡೆದ ದೊಡ್ಡ ಜಾತ್ರೆ ಇದಾಗಿದೆ ಎನ್ನಲಾಗಿದೆ. ಡಿಸೆಂಬರ್ ನಂತರ ನಾವು ಭಾಗವಹಿಸುತ್ತಿರುವ ದೊಡ್ಡ ಜಾತ್ರೆ ಇದಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ಜಾತ್ರೆಗಳಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿತ್ತು. ಈ ಜಾತ್ರೆಯಲ್ಲಿ ನಮ್ಮ ವ್ಯಾಪಾರ ಎಂದಿನಂತೆ ನಡೆಯುವ ವಿಶ್ವಾಸವಿದೆ ಎಂದು ಆಡುಗೋಡಿಯ ವ್ಯಾಪಾರಿ ಶ್ರೀನಿವಾಸ್ ಸೇರಿದಂತೆ ಬಹಳಷ್ಟು ವ್ಯಾಪಾರಿಗಳು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.