ಪ್ರಶ್ನೋತ್ತರಗಳ ಮೂಲಕ ರಕ್ತದ ಕ್ಯಾನ್ಸರ್ ಅರಿವು
Team Udayavani, Feb 28, 2021, 6:30 PM IST
ರಕ್ತದ ಕ್ಯಾನ್ಸರ್ ಅಥವಾ ಇಂಗ್ಲಿಷ್‌ನಲ್ಲಿ ಬ್ಲಿಡ್ ಕ್ಯಾನ್ಸರ್ ಎಂದು ಕರೆಯಲ್ಪಡುವ ಅನಾರೋಗ್ಯದ ವೈದ್ಯಕೀಯ ಹೆಸರು ಲ್ಯುಕೇಮಿಯಾ. ಪ್ರಶ್ನೋತ್ತರಗಳ ಮೂಲಕ ಈ ಕಾಯಿಲೆಯ ಬಗ್ಗೆ ತಿಳಿವಳಿಕೆಯನ್ನು ವಿಸ್ತರಿಸುವ ಪ್ರಯತ್ನ ಇಲ್ಲಿದೆ.
- ಲ್ಯುಕೇಮಿಯಾ ಎಂದರೇನು? :
ರಕ್ತದ ಕ್ಯಾನ್ಸರ್ ಎಂದೂ ಇದನ್ನು ಕರೆಯಲಾಗುತ್ತದೆ. ರಕ್ತದಲ್ಲಿ ಉಂಟಾಗುವ ಕ್ಯಾನ್ಸರ್‌ಗಳ ಒಂದು ಗುತ್ಛ ಇದು. ರಕ್ತದಲ್ಲಿರುವ ವಿವಿಧ ಜೀವಕೋಶಗಳ ಪೈಕಿ ಯಾವುದು ಕೂಡ ಕ್ಯಾನ್ಸರ್‌ಪೀಡಿತವಾಗಬಹುದು. ಕ್ಯಾನ್ಸರ್‌ಪೀಡಿತ ಜೀವಕೋಶವು ಹಾನಿಕರವಾದ ತನ್ನದೇ ತದ್ರೂಪಿಗಳನ್ನು ಉತ್ಪಾದಿಸಲು ಆರಂಭಿಸುತ್ತದೆ. ಈ ತದ್ರೂಪಿ ಜೀವಕೋಶಗಳು ನಮಗೆ ನಿಷ್ಪ್ರಯೋಜಕವಾಗಿರುವುದು ಮಾತ್ರವಲ್ಲದೆ, ಅಪಾಯಕಾರಿಯೂ ಆಗಿವೆ. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇವು ಪ್ರಾಣಹಾನಿಗೂ ಕಾರಣವಾಗುತ್ತವೆ.
- ಲ್ಯುಕೇಮಿಯಾದ ಲಕ್ಷಣಗಳೇನು? :
ರೋಗಿಯು ಲ್ಯುಕೇಮಿಯಾದಿಂದ ಪೀಡಿತನಾಗಿದ್ದಾನೆ ಎಂದು ಖಚಿತವಾಗಿ ಹೇಳುವು ಯಾವುದೇ ನಿರ್ದಿಷ್ಟ ಲಕ್ಷಣಗಳು ಇರುವುದಿಲ್ಲ. ರಕ್ತದಲ್ಲಿ ಉಂಟಾಗಿರುವ ಅಸಹಜತೆಯನ್ನು ಆಧರಿಸಿ ಲಕ್ಷಣಗಳು ಬದಲಾಗುತ್ತವೆ. ಹಿಮೊಗ್ಲೊಬಿನ್ ಸಂಖ್ಯೆ ಕಡಿಮೆಯಾಗಿದ್ದರೆ ವ್ಯಕ್ತಿಯು ದಣಿವು, ಉಸಿರುಗಟ್ಟುವಿಕೆಯಂತಹ ಲಕ್ಷಣಗಳನ್ನು ಪ್ರದರ್ಶಿಸುತ್ತಾನೆ. ಸಾಮಾನ್ಯವಾಗಿ ರೋಗಿಗಳಲ್ಲಿ ಜ್ವರ ಕಂಡುಬರಬಹುದಾಗಿದ್ದು, ಇದು ರೂಢಿಗತ ಆ್ಯಂಟಿಬಯೋಟಿಕ್ ಮತ್ತು ಪೂರೈಕೆ ಆರೈಕೆಗಳಿಂದ ವಾಸಿಯಾಗುವುದಿಲ್ಲ. ಕೆಲವು ರೋಗಿಗಳಲ್ಲಿ ವಸಡಿನಲ್ಲಿ ರಕ್ತಸ್ರಾವ, ಮೂತ್ರ ಅಥವಾ ಮಲದಲ್ಲಿ ರಕ್ತ, ಮಹಿಳೆಯರಲ್ಲಿ ಋತುಸ್ರಾವ ಸಂದರ್ಭ ಅಧಿಕ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬರುತ್ತವೆ. ಕೆಲವು ರೋಗಿಗಳ ಕುತ್ತಿಗೆ, ಭುಜ ಅಥವಾ ತೊಡೆಯ ಭಾಗದಲ್ಲಿ ದೃಢ ಮತ್ತು ವೃತ್ತಾಕಾರವಾದ ಊತಗಳು ಕಂಡುಬರಬಹುದು. ಈ ಊತಗಳು ನೋವುರಹಿತವಾಗಿದ್ದರೂ ಕ್ರಮೇಣ ಗಾತ್ರದಲ್ಲಿ ವೃದ್ಧಿಸಬಹುದಾಗಿರುತ್ತವೆ.
- ಲ್ಯುಕೇಮಿಯಾದ ವಿಧಗಳಾವುವು? ;
ಆರಂಭವಾದ ಸಮಯ ಅಥವಾ ಬಾಧಿತವಾಗಿರುವ ಜೀವಕೋಶಗಳು ಅಥವಾ ಈ ರೋಗಿಗಳಲ್ಲಿ ಕಂಡುಬರುವ ವಿವಿಧ ವಂಶವಾಹಿ ಅಸಹಜತೆಗಳ ಆಧಾರದಲ್ಲಿ ಲ್ಯುಕೇಮಿಯಾವನ್ನು ವಗೀಕರಿಸಬಹುದು. ಆರಂಭವಾದ ಸಮಯದ ಆಧರಿಸಿ ಲ್ಯುಕೇಮಿಯಾವನ್ನು ಕ್ಷಿಪ್ರ ಅಥವಾ ದೀರ್ಘಕಾಲಿಕ ಎಂದು ವರ್ಗೀಕರಿಸಬಹುದು. ಜೀವಕೋಶಗಳನ್ನು ಆಧರಿಸಿ ಮೈಲಾಯ್ಡ ಅಥವಾ ಲಿಂಫಾಯ್ಡ ಲ್ಯುಕೇಮಿಯಾ ಎಂದು ಗುರುತಿಸಬಹುದು. ವಿವಿಧ ವಂಶವಾಹಿ ಅಸಹಜತೆಗಳನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆಯು ಲ್ಯುಕೇಮಿಯಾವನ್ನು 100ಕ್ಕೂ ಅಧಿಕ ಉಪಗುಂಪುಗಳಲ್ಲಿ ವರ್ಗೀಕರಿಸಿದೆ. ನಿರ್ದಿಷ್ಟ ಉಪವಿಧವನ್ನು ಆಧರಿಸಿ ಚಿಕಿತ್ಸೆ ಮತ್ತು ಗುಣಹೊಂದುವ ದರಗಳಲ್ಲಿ ವ್ಯತ್ಯಯವಾಗುತ್ತದೆ.
- ದೀರ್ಘಕಾಲಿಕ ಮತ್ತು ಕ್ಷಿಪ್ರ ಲ್ಯುಕೇಮಿಯಾ ನಡುವಣ ವ್ಯತ್ಯಾಸಗಳೇನು? :
ದೀರ್ಘಕಾಲಿಕ ಲ್ಯುಕೇಮಿಯಾವು ಕೆಲವು ತಿಂಗಳುಗಳಿಂದ ಆರಂಭಿಸಿ ವರ್ಷಗಳ ತನಕದ ದೀರ್ಘ ಅವಧಿಯಲ್ಲಿ ಬೆಳವಣಿಗೆ ಹೊಂದುತ್ತದೆ. ಅಲ್ಲದೆ, ರೋಗಪೀಡಿತನು ಕನಿಷ್ಠ ಚಿಕಿತ್ಸೆಯೊಂದಿಗೆ ಅಥವಾ ಚಿಕಿತ್ಸೆ ಇಲ್ಲದೆ ದೀರ್ಘಕಾಲದ ವರೆಗೆ ಬದುಕಿರಬಹುದಾಗಿದೆ. ಇನ್ನೊಂದೆಡೆ, ಕ್ಷಿಪ್ರ ಲ್ಯುಕೇಮಿಯಾವು ಕೆಲವು ದಿನಗಳು ಅಥವಾ ವಾರಗಳ ಕಿರು ಅವಧಿಯಲ್ಲಿ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತದೆ, ಸರಿಯಾದ ಚಿಕಿತ್ಸೆ ಸಕಾಲದಲ್ಲಿ ದೊರೆಯದೆ ಇದ್ದರೆ ಕೆಲವೇ ವಾರ ಗಳಲ್ಲಿ ಪ್ರಾಣಾಂತಿಕವಾಗಬಹುದಾಗಿದೆ. ಕ್ಷಿಪ್ರ ಲ್ಯುಕೇಮಿಯಾ ಉಂಟಾ ದರೆ ರೋಗಿಯ ಜೀವ ಉಳಿಸಲು ತುರ್ತಾಗಿ ಚಿಕಿತ್ಸೆ ಆರಂಭಿಸುವುದು ಅಗತ್ಯವಾಗಿರುತ್ತದೆ.
- ಲ್ಯುಕೇಮಿಯಾ ಪತ್ತೆಹಚ್ಚುವುದು ಹೇಗೆ? :
ಸಾಮಾನ್ಯವಾಗಿ ಲ್ಯುಕೇಮಿಯಾವನ್ನು ಸಂಪೂರ್ಣವಾದ ರಕ್ತದ ಪರೀಕ್ಷೆಗಳು ಮತ್ತು ಪೆರಿಫರಲ್ ಸೆ¾ಯರ್ ಪರೀಕ್ಷೆಗಳ ಮೂಲಕ ಪತ್ತೆ ಮಾಡಬಹುದು. ಆದರೆ ಅದರ ನಿರ್ದಿಷ್ಟ ಉಪ ವಿಧವನ್ನು ತಿಳಿಯುವುದಕ್ಕಾಗಿ ಫ್ಲೊಸೈಟೊಮೆಟ್ರಿ, ಸೈಟೊಜೆನೆಟಿಕ್ಸ್, ಫಿಶ್ ಪರೀಕ್ಷೆಗಳು ಮತ್ತು ಮಾಲೆಕ್ಯುಲಾರ್ ಪರೀಕ್ಷೆಗಳ ಅಗತ್ಯವಿದೆ. ರೋಗಿಗೆ ಯಾವ ವಿಧವಾದ ಚಿಕಿತ್ಸೆಯನ್ನು ನೀಡಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ವೈದ್ಯರಿಗೆ ಈ ಪರೀಕ್ಷೆಗಳು ಬಹಳ ಮಹತ್ವವಾದವುಗಳಾಗಿವೆ. ಮೇಲ್ಕಂಡ ಪರೀಕ್ಷೆಗಳಿಗಾಗಿ ವೈದ್ಯರು ಅಸ್ತಿಮಜ್ಜೆಯ ಅಧ್ಯಯನ ಕೈಗೊಳ್ಳುತ್ತಾರೆ. ಇದಕ್ಕಾಗಿ ರೋಗಿಗೆ ಅರಿವಳಿಕೆ ನೀಡಿ, ಪೃಷ್ಠದ ಎಲುಬಿನ ಒಳಕ್ಕೆ ಸೂಜಿಯನ್ನು ತೂರಿಸಿ ರಕ್ತ ಮತ್ತು ಎಲುಬಿನ ಅಂಗಾಂಶಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.
- ಈ ಪರೀಕ್ಷೆಗಳು ಯಾಕೆ ದುಬಾರಿಯಾಗಿರುತ್ತವೆ ಮತ್ತು ಅವು ನಿಜವಾಗಿಯೂ ಅಗತ್ಯವೇ? :
ಲ್ಯುಕೇಮಿಯಾ ಯಾವ ವಿಧವಾದುದು ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಈ ಪರೀಕ್ಷೆಗಳ ಅಗತ್ಯವಿದೆ. ಈ ಪರೀಕ್ಷೆಗಳನ್ನು ಕೆಲವೇ ಆಯ್ದ ಶಿಫಾರಸು ಪ್ರಯೋಗಾಲಯಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದು, ಇವು ಅತ್ಯಾಧುನಿಕವಾಗಿವೆ. ಹಾಗಾಗಿ ಇವು ದುಬಾರಿಯಾಗಿರುತ್ತವೆ. ಅಲ್ಲದೆ, ಈ ಪರೀಕ್ಷೆಗಳ ಫಲಿತಾಂಶಗಳನ್ನು ಈ ಕ್ಷೇತ್ರದಲ್ಲಿ ವಿಶೇಷಜ್ಞರಾದ ವೈದ್ಯರು ಮಾತ್ರ ವ್ಯಾಖ್ಯಾನಿಸಲು ಶಕ್ತರಾಗಿರುತ್ತಾರೆ.
- ಲ್ಯುಕೇಮಿಯಾಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? :
ಲ್ಯುಕೇಮಿಯಾಕ್ಕೆ ಬಹು-ವಿಧಾನ ರೂಪದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಿಮೊಥೆರಪಿ ಮತ್ತು ಇಮ್ಯುನೊಥೆರಪಿಗಳನ್ನು ಸಂಯೋಜಿತವಾಗಿ ಪ್ರಯೋಗಿಸಲಾಗುತ್ತದೆ. ಯಾವ ಉಪವರ್ಗದ ಲ್ಯುಕೇಮಿಯಾ ಪತ್ತೆಯಾಗಿದೆ ಎಂಬುದನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ನಿರ್ದಿಷ್ಟ ಲ್ಯುಕೇಮಿಯಾಕ್ಕೆ ಅಮೆರಿಕ, ಯುರೋಪ್ ಅಥವಾ ಭಾರತದಲ್ಲಿ ಚಿಕಿತ್ಸೆಯ ಆಯ್ಕೆಗಳು ಒಂದೇ ಆಗಿರುತ್ತವೆ. ಬಹುತೇಕ ಚಿಕಿತ್ಸೆಗಳು ಸಾಕ್ಷ್ಯಾಧಾರಗಳನ್ನು ಆಧರಿಸಿದ್ದಾಗಿದ್ದು, ನಿರ್ದಿಷ್ಟ ವೈದ್ಯರು ರೋಗಿಯ ಅನುಭವವನ್ನು ಆಧರಿಸಿ ಚಿಕಿತ್ಸೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇದರಿಂದಾಗಿ ನಮ್ಮ ದೇಶದ ಎಲ್ಲ ಕ್ಯಾನ್ಸರ್ ಕೇಂದ್ರಗಳಲ್ಲಿ ಒಂದೇ ಬಗೆಯ ಚಿಕಿತ್ಸೆ ನೀಡಲ್ಪಡುವುದನ್ನು ನಾವು ಕಾಣಬಹುದಾಗಿದೆ.
- ಒಂದೇ ಬಗೆಯ ಕ್ಯಾನ್ಸರ್ ಹೊಂದಿರುವ ಬೇರೇ ಬೇರೆ ರೋಗಿಗಳು ವಿಭಿನ್ನ ಚಿಕಿತ್ಸೆಯನ್ನು ಪಡೆಯುವುದೇಕೆ ಮತ್ತು ವಿಭಿನ್ನ ಸಮಸ್ಯೆಗಳನ್ನು ಹೊಂದಿರುವುದೇಕೆ? :
ಈ ಹಿಂದೆಯೇ ಹೇಳಿರುವಂತೆ, ಚಿಕಿತ್ಸೆಯು ವ್ಯಕ್ತಿಯ ನಿರ್ದಿಷ್ಟ ವಂಶವಾಹಿ ಅಸಹಜತೆಗಳನ್ನು ಆಧರಿಸಿ ಇರುತ್ತದೆ. ಉದಾಹರಣೆಗೆ, ಕ್ಷಿಪ್ರ ಲಿಂಫೊಬ್ಲಾಸ್ಟಿಕ್ ಲ್ಯುಕೇಮಿಯಾ ಹೊಂದಿರುವ ಇಬ್ಬರು ರೋಗಿಗಳು ಒಂದೇ ವಯೋಮಾನ ಮತ್ತು ಲಿಂಗದವರಾಗಿದ್ದರೂ ವಿಭಿನ್ನ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿದುಕೊಳ್ಳದೆ ಒಂದೇ ಕಾಯಿಲೆಯನ್ನು ಹೊಂದಿರುವ ಬೇರೆ ಬೇರೆ ರೋಗಿಗಳ ಚಿಕಿತ್ಸೆಗಳನ್ನು ಹೋಲಿಸುವುದು ಸರಿಯಲ್ಲ. ಇಷ್ಟು ಮಾತ್ರವಲ್ಲದೆ, ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವ ರಾಸಾಯನಿಕಗಳನ್ನು ನಿಭಾಯಿಸುವ ಪಿತ್ತಕೋಶ ಮತ್ತು ಮೂತ್ರಪಿಂಡಗಳ ಕಾರ್ಯಸಾಮರ್ಥ್ಯ ಬೇರೆ ಬೇರೆ ರೋಗಿ ಗಳಲ್ಲಿ ಬೇರೆ ಬೇರೆಯೇ ಆಗಿರುತ್ತದೆ. ಇದರಿಂದಾಗಿ ಅಡ್ಡ ಪರಿಣಾಮ ಗಳು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗು ತ್ತವೆ.
- ಕುಟುಂಬ ಸದಸ್ಯರಾಗಿ, ಲ್ಯುಕೇ ಮಿಯಾ ದಿಂದ ಬಳಲುತ್ತಿರುವ ನಮ್ಮ ಸಂಬಂಧಿಗೆ ನಾವು ಹೇಗೆ ಸಹಾಯ ಮಾಡಬಹುದು? :
ಕ್ಯಾನ್ಸರ್ ರೋಗಿಗಳಿಗೆ ಭಾವನಾತ್ಮಕ ಮತ್ತು ಆರ್ಥಿಕ ಬೆಂಬಲ, ನೆರವಿನ ಅಗತ್ಯವಿರುತ್ತದೆ ಎಂಬುದನ್ನು ಕುಟುಂಬ ಸದಸ್ಯರು ಅರ್ಥ ಮಾಡಿಕೊಳ್ಳಬೇಕು. ಅನೇಕ ಕ್ಯಾನ್ಸರ್ ರೋಗಿಗಳನ್ನು ಸಂದರ್ಶಕರಿಗೆ ಪ್ರವೇಶ ಇಲ್ಲದ ವಿಶೇಷ ವಾರ್ಡ್‌ಗಳಲ್ಲಿ ಇರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ರೋಗಿಗಳಿಗೆ ತಮ್ಮ ಫೋನ್‌ಗಳನ್ನು ಜತೆಯಲ್ಲಿ ಇರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಇಂಥ ರೋಗಿಗಳ ಜತೆಗೆ ಫೋನ್ ಮೂಲಕ ಸಂಪರ್ಕ ಇರಿಸಿಕೊಂಡು ಮಾತುಕತೆ ನಡೆಸಿ ಸಮಾಧಾನ ಹೇಳುವ ಅಗತ್ಯವಿರುತ್ತದೆ.
- ಆಹಾರಾಭ್ಯಾಸ ಅಥವಾ ಜೀವನ ವಿಧಾನದಲ್ಲಿ ಬದಲಾವಣೆಯು ಚಿಕಿತ್ಸೆಯಲ್ಲಿ ಬದಲಾವಣೆಯನ್ನು ತರಬಲ್ಲುದೇ? ಮಾರುಕಟ್ಟೆಯಲ್ಲಿ ಲಭ್ಯವಿರುವ “ಸೂಪರ್‌ಫುಡ್’ಗಳು ಕ್ಯಾನ್ಸರನ್ನು ಗುಣಪಡಿಸಬಲ್ಲವೇ? :
ಕ್ಷಿಪ್ರವಾಗಿ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವುದಾಗಿ ಹೇಳಿಕೊಳ್ಳುವ “ಸೂಪರ್‌ಫುಡ್’ಗಳ ಜಾಹೀರಾತುಗಳು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಕಂಡುಬರುತ್ತವೆ. ಆದರೆ ಒಂದು ನೆನಪಿಡಿ, ಒಮ್ಮೆ ಕ್ಯಾನ್ಸರ್ ಪೂರ್ಣರೂಪದಲ್ಲಿ ಬೆಳವಣಿಗೆ ಆದ ಬಳಿಕ ಆಹಾರ ಅಥವಾ ಜೀವನ ಶೈಲಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳಿಂದ ರೋಗವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಕಿಮೋಥೆರಪಿ ಅಥವಾ ಇಮ್ಯುನೋಥೆರಪಿಯಂತಹ ನಿರ್ದಿಷ್ಟ ಚಿಕಿತ್ಸೆಗಳ ಜತೆಗೆ ಆರೋಗ್ಯಪೂರ್ಣ ಆಹಾರ ಶೈಲಿ ಮತ್ತು ಜೀವನ ವಿಧಾನವನ್ನು ಅನುಸರಿಸಿದರೆ ರೋಗಿಯು ಖಂಡಿತವಾಗಿ ಕ್ಯಾನ್ಸರ್ ವಿರುದ್ಧ ಗೆಲುವು ಸಾಧಿಸಬಹುದು.
- ರಕ್ತದ ಕ್ಯಾನ್ಸರನ್ನು ಗುಣಪಡಿಸಬಹುದೇ? :
ನಾವು ರಕ್ತದ ಕ್ಯಾನ್ಸರನ್ನು ಖಂಡಿತವಾಗಿ ಗುಣಪಡಿ ಸಬಹುದು. ಸದ್ಯದ ಪ್ರಕಾರ ಶೇ.50ರಿಂದ ಶೇ. 60ರಷ್ಟು ರಕ್ತದ ಕ್ಯಾನ್ಸರ್ ಪ್ರಕರಣಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಮತ್ತು ಶೇ. 20ರಿಂದ ಶೇ. 30ರಷ್ಟು ಪ್ರಕರಣಗಳನುನ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳಂತೆ ದೀರ್ಘಕಾಲಿಕ ಅನಾರೋಗ್ಯಗಳಾಗಿ ಪರಿವರ್ತಿಸಬಹುದಾಗಿದೆ. ಶೀಘ್ರವಾಗಿ ರೋಗ ಪತ್ತೆ ಮತ್ತು ವೈದ್ಯರು ಶಿಫಾರಸು ಮಾಡಿರುವ ಪ್ರಕಾರ ತಪ್ಪದೆ ಚಿಕಿತ್ಸೆ ಪಡೆಯುವುದು ರೋಗ ಗುಣ ಹೊಂದುವಲ್ಲಿ ನಿರ್ಣಾಯಕವಾಗಿವೆ.
- ಕಿಮೋಥೆರಪಿಯ ಅಡ್ಡ ಪರಿಣಾಮಗಳು ಕ್ಯಾನ್ಸರ್‌ಗಿಂತ ಕಠಿನವೇ? :
ಖಂಡಿತವಾಗಿ ಅಲ್ಲ. ಪ್ರಸ್ತುತ ಲಭ್ಯವಿರುವ ಪೂರಕ ಔಷಧಗಳ ಉಪಯೋಗದಿಂದ ಅಡ್ಡ ಪರಿಣಾಮಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದಾಗಿದೆ. ಅಡ್ಡ ಪರಿಣಾಮಗಳು ಅನಿವಾರ್ಯ, ಆದರೆ ರೋಗಿಯಿಂದ ರೋಗಿಗೆ ಬದಲಾಗುತ್ತವೆ.
- ಲ್ಯುಕೇಮಿಯಾವನ್ನು ತಡೆಗಟ್ಟಬಹುದೇ? :
ಇಲ್ಲ ಎಂಬುದು ಸಾಮಾನ್ಯವಾದ ಉತ್ತರ. ಆದರೆ ಧೂಮಪಾನ, ಮದ್ಯಪಾನಗಳನ್ನು ತಡೆಗಟ್ಟುವುದು, ಜಂಕ್ ಫುಡ್‌ಗಳಿಂದ ದೂರ ಇರುವುದರಿಂದ ಕ್ಯಾನ್ಸರ್ ಉಂಟಾಗುವ ಅಪಾಯದಿಂದ ದೂರ ಇರಬಹುದಾಗಿದೆ. ಆರೋಗ್ಯಪೂರ್ಣ ಆಹಾರ ಶೈಲಿ, ಆರೋಗ್ಯಯುತ ಜೀವನ ವಿಧಾನಗಳ ಅನುಸರಣೆ ಮತ್ತು ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ನಡೆಸುವುದು ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷ್ಯ ಅನುಭವಿಸುವ ಕೀಲಿಕೈಗಳಾಗಿವೆ.
ಡಾ| ಪ್ರಶಾಂತ್ ಬಿ.
ಹೆಮಟಾಲಜಿಸ್ಟ್,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.