ಮಧ್ಯಮ ಮಾರ್ಗದಿಂದ ಬದುಕಿನ ಸುನಾದ
Team Udayavani, Mar 3, 2021, 3:00 AM IST
ಒಂದಾನೊಂದು ಕಾಲದಲ್ಲಿ ಶ್ರಾವಸ್ತಿ ಯನ್ನು ಒಬ್ಬ ರಾಜ ಆಳುತ್ತಿದ್ದ. ಭೋಗ ಲಾಲಸೆಯ ಪರಾಕಾಷ್ಠೆ ಅವನು. ಹಗಲಿಡೀ ನಿದ್ದೆ, ರಾತ್ರಿ ಮೋಜು-ಮಸ್ತಿ, ಪಾನಕೂಟಗಳು, ಜೂಜಿನಲ್ಲಿ ತೊಡಗಿರು ತ್ತಿದ್ದ. ಅವನ ಅರಮನೆ ಅತ್ಯಂತ ವಿಲಾಸ ಮಯವಾಗಿತ್ತು. ಅವನ ಸಿಂಹಾಸನದತ್ತ ಸಾಗುವ ಸೋಪಾನಗಳಿಗೆ ಹಿಡಿಕೆಗಳು ಇರಲಿಲ್ಲ; ಬದಲಾಗಿ ಎರಡೂ ಬದಿಗಳಲ್ಲಿ ಸುಂದರ ಸ್ತ್ರೀಯರು ನಿಂತಿರುತ್ತಿದ್ದರು. ಅವರ ಮೇಲೆ ಕೈಯಿಕ್ಕುತ್ತ ಆತ ಸಿಂಹಾಸನ ದತ್ತ ನಡೆಯುತ್ತಿದ್ದ. ವಿಲಾಸೀ ಜೀವನದ ಪರಮೋಚ್ಚ ಸ್ಥಿತಿ.
ಇಂಥ ರಾಜನಿಗೆ ಆಪ್ತ ರಾದ ಕೆಲವರು ಒಂದು ಬಾರಿ ಬುದ್ಧನ ಬಗ್ಗೆ ಹೇಳಿದರು. ಒಮ್ಮೆ ಯಾದರೂ ಬುದ್ಧನ ಪ್ರವಚನವನ್ನು ಆಲಿಸಲು ವಿನಂತಿಸಿದರು. “ಬುದ್ಧ ನಲ್ಲಿ ಅಲೌಕಿಕ ಕಾಂತಿ ಯಿದೆ. ಅವನ ಸ್ನಿಗ್ಧ ನಗು, ಪ್ರಶಾಂತ ಮುಖ, ಮೆಲು ಮಾತುಗಳಲ್ಲಿ ವಿಶೇಷ ಆಕರ್ಷಣೆ ಇದೆ. ಒಮ್ಮೆ ಬುದ್ಧನನ್ನು ಕಂಡುಬನ್ನಿ’ ಎಂದು ಕೇಳಿಕೊಂಡರು.
ಮೊದಮೊದಲು ನಿರ್ಲಕ್ಷಿಸಿದರೂ ಹಲವರು ಹಲವು ಬಾರಿ ಹೇಳಿದ ಬಳಿಕ ರಾಜನಿಗೆ ಬುದ್ಧನನ್ನು ಕಂಡುಬರಬಾರ ದೇಕೆ ಎಂಬ ಆಲೋಚನೆ ಮೂಡಿತು. ಒಂದು ದಿನ ಹೊರಟ. ಬುದ್ಧನ ಮಾತುಗಳನ್ನು ಕೇಳಿದ ಮೇಲೆ ರಾಜನಲ್ಲಿ ಅಪೂರ್ವ ಬದಲಾವಣೆ ಉಂಟಾಯಿತು. “ಗುರುವೇ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ನಾನೂ ಬಿಕ್ಕುವಾಗುವೆ’ ಎಂದ ರಾಜ.
ಎಲ್ಲರಿಗೂ ಇದೊಂದು ಅಚ್ಚರಿ! ರಾಜ ಹೀಗೆ ಬದಲಾಗುತ್ತಾನೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಬುದ್ಧನೂ, “ಆತುರ ಸಲ್ಲದು’ ಎಂದ. ಆದರೆ ರಾಜ ಕೇಳಲಿಲ್ಲ, ಬುದ್ಧ ಒಪ್ಪಲೇ ಬೇಕಾಯಿತು.
ಬೌದ್ಧ ಬಿಕ್ಕುಗಳು ನಗ್ನರಾಗಿರುವುದಿಲ್ಲ. ಆದರೆ ಈತ ವಸ್ತ್ರಗಳನ್ನು ತ್ಯಜಿಸಿದ. ಅವನು ನಿಜಕ್ಕೂ ಬಹುದೊಡ್ಡ ಸನ್ಯಾಸಿ ಯಾಗಿರಬೇಕು ಎಂದುಕೊಂಡರು ಜನರು. ಬುದ್ಧನಲ್ಲಿ ಈ ಬಗ್ಗೆ ಹೇಳಿ ಕೊಂಡರು. ಬುದ್ಧ ನಕ್ಕು ಸುಮ್ಮನಿದ್ದ.
ಬೌದ್ಧ ಬಿಕ್ಕುಗಳು ದಿನಕ್ಕೆ ಒಂದು ಬಾರಿ ಆಹಾರ ಸೇವಿಸುತ್ತಾರೆ. ಆದರೆ ಈತ ಎರಡು ದಿನಗಳಿಗೆ ಒಮ್ಮೆ ಮಾತ್ರ ಉಣ್ಣು ತ್ತಿದ್ದ. ಎಲ್ಲ ಸನ್ಯಾಸಿಗಳೂ ರಸ್ತೆಯ ಮೇಲೆ ನಡೆದರೆ ಈತ ಕಲ್ಲುಮುಳ್ಳುಗಳ ಹಾದಿ ಯಲ್ಲಿ ಬರಿಗಾಲಿನಲ್ಲಿ ಸಾಗುತ್ತಿದ್ದ. ಕಾಲು ಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ಸರಿಯಾಗಿ ಆಹಾರವಿಲ್ಲದ ಕಾರಣ ಕಾಯ ಕೃಶ ವಾಯಿತು. ಬರಿಮೈಯಲ್ಲಿರುತ್ತಿದ್ದುದ ರಿಂದ ದೇಹವೆಲ್ಲ ಕಪ್ಪಾಯಿತು.
ಆತನ ಕಡು ಸನ್ಯಾಸವನ್ನು ಕಂಡು ಎಲ್ಲರೂ ಗೌರವಿಸತೊಡಗಿದರು. ಕೆಲವರು ಬುದ್ಧನಿಗಿಂತಲೂ ಈತನೇ ಮಿಗಿಲು ಅಂದುಕೊಂಡರು. ಬುದ್ಧನ ಅನುಯಾಯಿಗಳಾಗಿರುವುದಕ್ಕಿಂತ ಈ ಮುನಿಯನ್ನು ಅನು ಸರಿಸುವುದು ಒಳಿತು ಎಂದುಕೊಂಡವರೂ ಇದ್ದರು.
ಸ್ವಲ್ಪವೇ ಸಮಯ ದಲ್ಲಿ ಕಾಯ ದಂಡನೆ ಯಿಂದ ಆತನ ಸ್ಥಿತಿ ಬಿಗಡಾಯಿಸಿತು, ಹಾಸಿಗೆ ಹಿಡಿದ. ಒಂದು ದಿನ ಬುದ್ಧ ಅವನನ್ನು ನೋಡಲು ಹೋದ. ಹಾಸಿಗೆಯ ಬದಿಯಲ್ಲಿ ಕುಳಿತು ಮೆಲುದನಿಯಲ್ಲಿ ನುಡಿದ.
“ಹಿಂದೆ ನೀನು ಅತ್ಯುತ್ತಮವಾಗಿ ಸಿತಾರ್ ನುಡಿಸುತ್ತಿದ್ದೆ ಎಂದು ಕೇಳಿಬಲ್ಲೆ. ಸಿತಾರ್ ವಾದನದಲ್ಲಿ ನಿನ್ನಷ್ಟು ನಿಪುಣರು ಭರತಖಂಡದಲ್ಲಿಯೇ ಇಲ್ಲವಂತೆ…’
“ನಿಜ’ ಎಂಬ ಉತ್ತರ ಬಂತು.
“ಈಗ ಹೇಳು. ಸಿತಾರ್‌ನ ತಂತಿಗಳಿಂದ ನಾದ ಹೊರಡುವುದು ಹೇಗೆ? ತೀರಾ ಬಿಗಿಯಾಗಿದ್ದರೆ ಏನಾಗುತ್ತದೆ?’
“ಆಗ ತಂತಿಗಳು ತುಂಡಾಗುತ್ತವೆ’ ಎಂದ ಆತ. “ತೀರಾ ಸಡಿಲವಾಗಿದ್ದರೆ?’ ಬುದ್ಧನ ಪ್ರಶ್ನೆ. “ಆಗ ನಾದ ಹೊರಡು ವುದಿಲ್ಲ’ ಎಂಬುತ್ತರ ಬಂತು.
“ಹಾಗಾದರೆ ಸುನಾದ ಹೊರಡಬೇ ಕಾದರೆ ತಂತಿಗಳನ್ನು ಹೇಗೆ ಬಂಧಿಸಿರ ಬೇಕು’ ಬುದ್ಧನ ಪ್ರಶ್ನೆ.
“ತೀರಾ ಬಿಗಿಯೂ ಅಲ್ಲದೆ, ತೀರಾ ಸಡಿಲವೂ ಅಲ್ಲದೆ ಮಧ್ಯಮ ಬಿಗಿಯಲ್ಲಿರ ಬೇಕು’ ಎಂದ ಆತ.
“ಈ ಬದುಕು ಕೂಡ ವಾದ್ಯದ ತಂತಿ ಗಳಂತೆ. ತೀರಾ ಸಡಿಲವಾಗಿದ್ದರೆ ನಿನ್ನ ಪೂರ್ವಾಶ್ರಮದ ಹಾಗೆ ಬರೇ ವಿಲಾಸ, ಭೋಗವೇ. ತೀರಾ ಬಿಗಿಯಾಗಿದ್ದರೆ ನಿನ್ನ ಈಗಿನ ಸ್ಥಿತಿಯಾಗುತ್ತದೆ. ಇವೆರಡೂ ಸ್ಥಿತಿಗಳಿಂದ ಬದುಕಿನ ಸುನಾದ ಹೊರಡಿ ಸಲು ಸಾಧ್ಯವಾಗದು. ಮಧ್ಯಮ ಮಾರ್ಗದಲ್ಲಿ ನಡೆಯಬೇಕು – ಅದುವೇ ಜೀವನ’ ಎಂದು ಬುದ್ಧ ಮಾತು ಮುಗಿಸಿದ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.