ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ ನೋಂದಣಿ ಗೊಂದಲ
Team Udayavani, Mar 3, 2021, 12:25 PM IST
ಥಾಣೆ: ಕೋವಿಡ್ ಲಸಿಕೆ ಅಭಿಯಾನದ ಮೂರನೇ ಹಂತ ಪ್ರಾರಂಭವಾಗುತ್ತಿದ್ದಂತೆ ಕೋವಿನ್ ವೆಬ್‌ಸೈಟ್ ನೋಂದಣಿ ಗೊಂದಲದಿಂದಾಗಿ ಥಾಣೆ ಜಿಲ್ಲೆಯ ವಿವಿಧೆಡೆಗಳಲ್ಲಿ ಲಸಿಕೆಗಾಗಿ ಕೇಂದ್ರಗಳಲ್ಲಿ ಜಮಾವಣೆಗೊಂಡಿದ್ದ ಹಲವರು ಲಸಿಕೆ ಸಿಗದೆ ನಿರಾಸೆಗೊಂಡ ಘಟನೆ ಸಂಭವಿಸಿದೆ.
ಮೂರನೇ ಹಂತದಲ್ಲಿ 45ರಿಂದ 60 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಕೇಂದ್ರ ಸರಕಾರ ಆದೇಶಿಸಿದೆ. ಆದರೆ ಕೋವಿನ್-2 ವೆಬ್‌ಸೈಟ್‌ನಲ್ಲಿ ನೋಂದಾಯಿಸುವಲ್ಲಿನ ತೊಂದರೆಗಳು, ಮುನ್ಸಿಪಲ್ ಕಾರ್ಪೊರೇಶನ್ ಸಹಿತ ಖಾಸಗಿ ಆಸ್ಪತ್ರೆಗಳ ನಿರ್ವಹಣೆ ಅನುಷ್ಠಾನದ ಬಗ್ಗೆ
ಸ್ಪಷ್ಟತೆಯ ಕೊರತೆಯಿಂದಾಗಿ ಅನೇಕರು ಲಸಿಕೆ ಪಡೆಯದೆ ಮನೆಗೆ ಮರಳಬೇಕಾಯಿತು. ಈ ಗೊಂದಲಗಳಿಂದಾಗಿ ಥಾಣೆ, ಕಲ್ಯಾಣ್-ಡೊಂಬಿವಲಿ, ಉಲ್ಲಾಸ್‌ನಗರ, ಭಿವಂಡಿ, ಅಂಬರ್‌ನಾಥ್, ಬದ್ಲಾಪುರದ ಸರಕಾರಿ ಆಸ್ಪತ್ರೆಗಳಲ್ಲೂ ಹೆಚ್ಚಿನ ಜನಸಂದಣಿ ಉಂಟಾಗಿತ್ತು.
ಬೆಳಗ್ಗೆಯಿಂದಲೇ ನಾಗರಿಕರ ಜಮಾವಣೆ :
ಕೋವಿಡ್ ಲಸಿಕೆ ಸರಕಾರಿ ಲಸಿಕೆ ಕೇಂದ್ರಗಳಲ್ಲದೆ ಖಾಸಗಿ ಆಸ್ಪತ್ರೆ ಕೇಂದ್ರಗಳಲ್ಲಿಯೂ ನೀಡಲಾಗುವುದು. ಲಸಿಕೆ ಅಭಿಯಾನಕ್ಕಾಗಿ ಥಾಣೆ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆದ್ದರಿಂದ ಆಕಾಂಕ್ಷಿಗಳ ಗುಂಪು ಬೆಳಗ್ಗೆಯಿಂದ ಈ ಆಸ್ಪತ್ರೆಗಳ ಸುತ್ತ ಜಮಾವಣೆಗೊಳ್ಳಲು ಪ್ರಾರಂಭಿಸಿತು. ವಾಸ್ತವವಾಗಿ ಈ ಸ್ಥಳದಲ್ಲಿ ಯಾವುದೇ ಲಸಿಕೆ ಲಭ್ಯವಿರಲಿಲ್ಲ. ಆದ್ದರಿಂದ ದಿನವಿಡೀ ಸಂಬಂಧಪಟ್ಟ ಆಸ್ಪತ್ರೆಯ ಆಡಳಿತ, ಜಿಲ್ಲಾಡಳಿತ ಮತ್ತು ಪುರಸಭೆ ಆಡಳಿತದ ನಡುವೆ ಗೊಂದಲದ ವಾತಾವರಣವಿತ್ತು. ಕೆಲವು ನಾಗರಿಕರು ಲಸಿಕೆಗಾಗಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಆಯಾ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಲಸಿಕೆ ಲಭ್ಯವಿಲ್ಲದ ಕಾರಣ ಅವರು ಮರಳಬೇಕಾಯಿತು.
ನೋಂದಣಿ ಇಲ್ಲದೆ ಲಸಿಕೆಯಿಲ್ಲ :
ಮೊದಲ ಹಂತದ ಲಸಿಕೆ ಉಲ್ಲಾಸ್‌ನಗರದ ಶಾಲಾ ಸಂಖ್ಯೆ 28 ಮತ್ತು ಎಂಜಿನಿಯರಿಂಗ್ ಶಾಲೆಯಲ್ಲಿ ನಡೆಯುತ್ತಿದೆ. ಇಲ್ಲಿ ದಿನಕ್ಕೆ 200 ಡೋಸ್ ಲಸಿಕೆಗಳನ್ನು ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಆದರೆ ಸೋಮವಾರ ಬೆಳಗ್ಗೆಯಿಂದ ಮೂರನೇ ಹಂತದ ಲಸಿಕೆ ವೆಬ್‌ಸೈಟ್‌ನಲ್ಲಿ ನಿರ್ಬಂಧಿಸಲಾಗಿದೆ. ಯಾರೂ ಅರ್ಜಿ ಸಲ್ಲಿಸದ ಕಾರಣ ಮಧ್ಯಾಹ್ನದವರೆಗೆ ಯಾರಿಗೂ ಲಸಿಕೆ ಹಾಕಿಸಲಾಗಿಲ್ಲ ಎಂದು ಉಲ್ಲಾಸ್‌ನಗರ ಪುರಸಭೆಯ ವೈದ್ಯಕೀಯ ಅಧಿಕಾರಿ ಡಾ| ದಿಲೀಪ್ ಪಾಗರೆ ತಿಳಿಸಿದ್ದಾರೆ. ಅಂಬರ್‌ನಾಥ್‌ನ ಡಾ| ಬಿ. ಜಿ. ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿತ್ತು. ಆದರೆ ವ್ಯವಸ್ಥಿತ ಅಡಚಣೆಯಿಂದ ಮಧ್ಯಾಹ್ನದವರೆಗೆ ಯಾವುದೇ ಲಸಿಕೆ ನೀಡಲಾಗಿಲ್ಲ. ಕುಲ್ಗಾಂವ್-ಬದ್ಲಾಪುರ ಪುರಸಭೆಯ ದುಬೆ ಆಸ್ಪತ್ರೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಥಾಣೆಯ 15 ಸ್ಥಳಗಳಲ್ಲಿ ಲಸಿಕೆ ಕೇಂದ್ರಗಳು :
60 ವರ್ಷ ಪೂರೈಸಿದ ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ನಾಗರಿಕರು ಮತ್ತು ನೋಂದಾಯಿಸದ ಆರೋಗ್ಯ ಕಾರ್ಯಕರ್ತರಿಗೆ ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಪ್ರದೇಶದಲ್ಲಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ನಗರದ 15 ಸ್ಥಳಗಳಲ್ಲಿ ಲಸಿಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಲಸಿಕೆ ಕೇಂದ್ರಗಳು ಬೆಳಗ್ಗೆ 12ರಿಂದ ಸಂಜೆ 5ರ ವರೆಗೆ ತೆರೆದಿರುತ್ತವೆ.
ಲಸಿಕೆ ಕೇಂದ್ರ ಎಲ್ಲಿದೆ ? :
ಥಾಣೆಯ ದಾದೋಜಿ ಕೊಂಡದೇವ್ ಕ್ರೀಡಾಂಗಣದಲ್ಲಿನ ಆಯುರ್ವೇದ ಆರೋಗ್ಯ ಕೇಂದ್ರ, ಗ್ಲೋಬಲ್ ಕೋವಿಡ್ ಆಸ್ಪತ್ರೆ, ಸಾಕೇತ್ ಕಲ್ವಾ ಆರೋಗ್ಯ ಕೇಂದ್ರ, ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆ ಕಲ್ವಾ, ರೋಸಾ ಗಾಡೇìನಿಯಾ ಆರೋಗ್ಯ ಕೇಂದ್ರ ಘೋಡ್‌ಬಂದರ್ ರಸ್ತೆ, ಕಿಸನ್‌ನಗರ ಆರೋಗ್ಯ ಕೇಂದ್ರ, ಲೋಕಮಾನ್ಯ ನಗರ ಆರೋಗ್ಯ ಕೇಂದ್ರ, ಮಕೀವಾಡ ಕೇಂದ್ರ, ಶೀಲ್ ಆರೋಗ್ಯ ಕೇಂದ್ರ, ಕೋಪರಿ ಹೆರಿಗೆ ಕೇಂದ್ರ, ಮನಾ³ಡಾ ಆರೋಗ್ಯ ಕೇಂದ್ರ, ಮನೋರಂನಗರ ಆರೋಗ್ಯ ಕೇಂದ್ರ, ಗಾಂಧಿನಗರ ಆರೋಗ್ಯ ಕೇಂದ್ರ ಮತ್ತು ಕೌಸಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ವ್ಯವಸ್ಥೆ ಮಾಡಲಾಗಿದೆ.
ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ :
ವೆಬ್‌ಸೈಟ್‌ನಲ್ಲಿ ನೋಂದಾಯಿಸುವಲ್ಲಿ ಕೆಲವು ತೊಂದರೆಗಳಿದ್ದರೂ ತಂಡವು ಥಾಣೆ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಾಗಿ ಬಂದ ವ್ಯಕ್ತಿಗಳನ್ನು ವೆಬ್‌ಸೈಟ್‌ನಲ್ಲಿ ಮತ್ತೆ ನೋಂದಾಯಿಸಿ ಅವರಿಗೆ ಲಸಿಕೆ ಹಾಕಿದೆ. ನಾಗರಿಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡುವ ಬಗ್ಗೆ ತರಬೇತಿ ನೀಡಲಾಗುವುದು ಎಂದು ಥಾಣೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಕೈಲಾಶ್ ಪವಾರ್ ಹೇಳಿದ್ದಾರೆ.
ಕಲ್ಯಾಣ್-ಡೊಂಬಿವಲಿಯಲ್ಲಿ ಎರಡು ಕೇಂದ್ರಗಳು :
ಕಲ್ಯಾಣ್-ಡೊಂಬಿವಲಿ ಪುರಸಭೆ ಪ್ರದೇಶ ದಲ್ಲಿನ ಎರಡೂ ಗುಂಪುಗಳ ನಿವಾಸಿಗಳಿಗೆ ಲಸಿಕೆ ಹಾಕುವ ಸಲುವಾಗಿ, ಪುರಸಭೆಯು ಕಲ್ಯಾಣ್‌ನ ಬಾಯಿ ರುಕ್ಮಿಣಿಬಾಯಿ ಆಸ್ಪತ್ರೆ ಮತ್ತು ಡೊಂಬಿವಲಿಯ ಶಾಸ್ತ್ರಿನಗರ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಒದಗಿಸಿದೆ. ಕೋವಿನ್ ಆ್ಯಪ್‌ನಲ್ಲಿ ನೋಂದಾಯಿಸಲಾದ ಫಲಾನುಭವಿಗಳಿಗೆ ಈ ಸ್ಥಳದಲ್ಲಿ ಲಸಿಕೆ ಪಡೆಯಲು ಸಾಧ್ಯವಾಗುತ್ತದೆ ಎಂದು ವೈದ್ಯಕೀಯ ಅಧಿಕಾರಿ ಡಾ| ಸಮೀರ್ ಸರ್ವಂಕರ್ ಹೇಳಿದ್ದಾರೆ.
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಲಸಿಕೆಗಾಗಿ ಕೋವಿನ್ ಆಪ್ -1 ಅನ್ನು ಅಭಿವೃದ್ಧಿಪಡಿಸಿದರೆ, ಕೋವಿನ್ -2 ಆ್ಯಪ್ ಅನ್ನು ಮೂರನೇ ಹಂತದ ಲಸಿಕೆ ಅಭಿಯಾನಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಾರಂಭದ ದಿನವಾದ್ದರಿಂದ ಈ ವೆಬ್‌ಸೈಟ್‌ನಲ್ಲಿ ನೋಂದಣಿ ಹೆಚ್ಚಳದಿಂದಾಗಿ ಕೆಲವು ತಾಂತ್ರಿಕ ತೊಂದರೆಗಳು ಉಂಟಾಗಿವೆ. ಅಲ್ಲದೆ ಲಸಿಕೆ ಅಭಿಯಾನವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಕೇಂದ್ರ ಸರಕಾರದ ಸೂಚನೆಗಳನ್ನು ಸ್ವೀಕರಿಸಿದ ಕೂಡಲೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. -ಡಾ| ವಿಪಿನ್ ಶರ್ಮಾ, ಆಯುಕ್ತರು, ಥಾಣೆ ಮಹಾನಗರ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.