ಪಿಲಿಕಜೆ ಗುಂಡ್ಯ ಸರಕಾರಿ ಶಾಲೆ ಮೇಲ್ದರ್ಜೆಗೆ ಬೇಡಿಕೆ
ಹಿರಿಯ ಪ್ರಾಥಮಿಕ ಶಿಕ್ಷಣ ಪಡೆಯಲು ಗ್ರಾಮೀಣ ಮಕ್ಕಳ ಪರದಾಟ
Team Udayavani, Mar 5, 2021, 4:00 AM IST
ಕಡಬ: ಅಭಿವೃದ್ಧಿಯ ವಿಚಾರದಲ್ಲಿ ಭಾರೀ ಹಿಂದುಳಿದಿರುವ ಕೊಂಬಾರು ಗ್ರಾ.ಪಂ.ವ್ಯಾಪ್ತಿಯ ಸಿರಿಬಾಗಿಲು ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ ಪಡೆದ ಸ್ಥಳೀಯ ಮಕ್ಕಳು ಹಿರಿಯ ಪ್ರಾಥಮಿಕ ಶಿಕ್ಷಣ ಪಡೆಯಲು ಹತ್ತಿರದಲ್ಲಿ ಶಾಲೆ ಇಲ್ಲದೆ ಕಷ್ಟಪಡುವಂತಾಗಿದೆ.
ಗುಂಡ್ಯದಲ್ಲಿರುವ ಪಿಲಿಕಜೆ ಗುಂಡ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ತನಕ ವ್ಯಾಸಂಗ ಮಾಡಿದ ಮಕ್ಕಳು ಮುಂದಿನ ಶಿಕ್ಷಣಕ್ಕಾಗಿ ದೂರದ ಸುಬ್ರಹ್ಮಣ್ಯಕ್ಕೆ 22 ಕಿ.ಮೀ. ದೂರ ಪ್ರಯಾಣಿಸುವ ಅನಿವಾರ್ಯ ಎದುರಾಗಿದೆ. ಆದುದರಿಂದ ಪಿಲಿಕಜೆ ಗುಂಡ್ಯ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಶಿಕ್ಷಕ-ವಿದ್ಯಾರ್ಥಿಗಳ ಅನು ಪಾತವನ್ನು ಪರಿಗಣಿಸದೆ ಅಗತ್ಯ ಶಿಕ್ಷಕರನ್ನು ನೀಡಿ ಪರಿಸರದ ಮಕ್ಕಳು ಅದೇ ಶಾಲೆಯಲ್ಲಿ 6 ಮತ್ತು 7ನೇ ತರಗತಿಯ ಶಿಕ್ಷಣ ಪಡೆಯುವಂತೆ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಸ್ಥಳೀಯ ಮಕ್ಕಳ ಪೋಷಕರ ಆಗ್ರಹವಾಗಿದೆ.
ಕಾಡು ದಾರಿಯಲ್ಲಿ ನಡೆದು ಬರುವ ಮಕ್ಕಳು :
ಹೇಳಿ ಕೇಳಿ ಸಿರಿಬಾಗಿಲು ಗ್ರಾಮದ ಬಹುಪಾಲು ಪ್ರದೇಶ ಅರಣ್ಯದಿಂದಲೇ ಆವೃತವಾಗಿದೆ. ಪಿಲಿಕಜೆ ಗುಂಡ್ಯ ಶಾಲೆಗೆ ಪೆರ್ಜೆ, ದೇರಣೆ, ರೆಂಜಾಳ, ಗುಂಡ್ಯತೋಟ ಹಾಗೂ ಗುಂಡ್ಯ ಪರಿಸರದಿಂದ ಬರುವ ಪುಟಾಣಿ ಮಕ್ಕಳು ಕೂಡ ಅರಣ್ಯ ಪ್ರದೇಶದಿಂದಲೇ ನಡೆದು ಬರಬೇಕಿದೆ. ಮೊದಲೇ ಹಗಲು ಹೊತ್ತಿನಲ್ಲಿಯೇ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳು ಕಂಡುಬರುವ ಆ ಪ್ರದೇಶದಲ್ಲಿ ಪ್ರತೀದಿನ ಬೆಳಗ್ಗೆ ಮತ್ತು ಸಂಜೆ ಮಕ್ಕಳನ್ನು ಹಿರಿಯರೇ ಶಾಲೆಗೆ ಕರೆತರಬೇಕಾದ ಅನಿವಾರ್ಯ ಇದೆ. ಇಷ್ಟೆಲ್ಲಾ ತೊಂದರೆಗಳ ನಡುವೆ ಕಿರಿಯ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳು ಹಿರಿಯ ಪ್ರಾಥಮಿಕ ಶಿಕ್ಷಣ ಪಡೆಯಲು ದೂರದ ಸುಬ್ರಹ್ಮಣ್ಯಕ್ಕೆ ಬಸ್‌ನಲ್ಲಿ ಪ್ರಯಾಣಿಸಿ ಸಂಜೆ ಹಿಂದಿರುಗಿ ಬಂದು ಅಪಾಯಕಾರಿ ಅರಣ್ಯ ದಾರಿಯಲ್ಲಿ ನಡೆದು ಮನೆ ತಲುಪುವಾಗ ಕತ್ತಲಾಗುತ್ತದೆ. ಈ ತೊಂದರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಹತ್ತಿರ ಇರುವ ಸಂಬಂಧಿಕರ ಮನೆಗಳಲ್ಲಿ ಬಿಟ್ಟು ಶಾಲೆಗೆ ಕಳುಹಿಸುವಂತಾಗಿದೆ. ಅದರಿಂದ ಮಕ್ಕಳು ಎಳವೆಯಲ್ಲಿ ಹೆತ್ತವರ ಪ್ರೀತಿಯಿಂದ ವಂಚಿತರಾಗಿ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಗಳಿದ್ದರೂ ವಾಹನ ಸಂಪರ್ಕವಿಲ್ಲ ;
ಕೊಂಬಾರಿನ ಬೋಳ್ನಡ್ಕ, ಸಿರಿಬಾಗಿಲು ಗ್ರಾಮದ ಗಡಿ ಭಾಗವಾದ ಮಣಿಭಾಂಡ ಹಾಗೂ ಮುಗೇರಡ್ಕದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಗುಂಡ್ಯ ಭಾಗದ ಮಕ್ಕಳು ಆ ಶಾಲೆಗೆ ಹೋಗಬೇಕಿದ್ದರೆ ಅಲ್ಲಿಗೆ ಸಮರ್ಪಕ ವಾಹನದ ವ್ಯವಸ್ಥೆಗಳಿಲ್ಲ. ಗುಂಡ್ಯದ ತನಕ ನಡೆದು ಬಂದು ಅಲ್ಲಿಂದ ಬಸ್‌ನಲ್ಲಿ ಪ್ರಯಾಣಿಸಿ ಶಾಲೆ ತಲುಪಬೇಕಿದ್ದರೆ ಬಸ್ ಇಳಿದು ಸಾಕಷ್ಟು ದೂರ ನಡೆದು ಕ್ರಮಿಸಬೇಕಿದೆ. ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಗುಂಡ್ಯದಿಂದ ಬಸ್ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಮಕ್ಕಳು ಸುಬ್ರಹ್ಮಣ್ಯದ ಶಾಲೆಯನ್ನು ಅವಲಂಬಿಸಿದ್ದಾರೆ.
ಮಕ್ಕಳು ಹೆತ್ತವರಿಂದ ದೂರವಿದ್ದು ಉನ್ನತ ಶಿಕ್ಷಣ ಪಡೆಯುವುದು ಸಹಜ. ಆದರೆ ನಮ್ಮಲ್ಲಿನ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೇ ಹಾಸ್ಟೆಲ್ ಅಥವಾ ಸಂಬಂಧಿಕರ ಮನೆಯನ್ನು ಆಶ್ರಯಿಸುವಂತಾಗಿದೆ. ಆದುದರಿಂದ ಪಿಲಿಕಜೆ ಗುಂಡ್ಯ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಸ್ಥಳೀಯ ಮಕ್ಕಳಿಗೆ ನೆರವಾಗಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿದೆ. –ದಾಮೋದರ ಗುಂಡ್ಯ,
ಯಾವುದೇ ಶಾಲೆಯನ್ನು ಮೇಲ್ದರ್ಜೆಗೇರಿಸಬೇಕಿದ್ದರೆ ಸರಕಾರದ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಮಕ್ಕಳ ಅನುಕೂಲಕ್ಕಾಗಿ ಇಲಾಖೆಯ ನಿಯಮಾನುಸಾರ ಪಿಲಿಕಜೆ ಗುಂಡ್ಯ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. –ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.