![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 8, 2021, 5:10 AM IST
ಬೆಂಗಳೂರು ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ 75. ಈ ಹೆದ್ದಾರಿ ಮೇಲಿನ ಒತ್ತಡವೂ ಉಳಿದ ಎಲ್ಲ ಹೆದ್ದಾರಿಗಿಂತ ದುಪ್ಪಟ್ಟು. ಒಂದುವೇಳೆ ಈ ರಸ್ತೆ ನಾಲ್ಕು ಗಂಟೆ ಸ್ತಬ್ಧಗೊಂಡರೂ ಸಾವಿರಾರು ವಾಹನಗಳು ಬೇರೆ ಹಾದಿಯನ್ನು ಹಿಡಿಯಬೇಕು. ಇಷ್ಟೆಲ್ಲ ಪ್ರಾಮುಖ್ಯತೆ ಪಡೆದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಈ ಹೆದ್ದಾರಿ ಕಂಡರೆ ಅಷ್ಟಕಷ್ಟೇ. ನಾಲ್ಕು ವರ್ಷಗಳಿಂದ ಕಾಮಗಾರಿ ನಿಂತು ಜನ ಹೈರಾಣಾಗಿದ್ದರೂ ಪ್ರಾಧಿಕಾರ ಅಧಿಕಾರಿಗಳು ಮಾತ್ರ ಹವಾನಿಯಂತ್ರಿತ ಕಚೇರಿಯಲ್ಲಿ ತಣ್ಣಗಿ ದ್ದಾರೆ. ರಸ್ತೆಯೆಲ್ಲ ಅಗೆದು ಮಣ್ಣು ರಾಶಿ ಹಾಕಿ, ಜನ ಕೊಂಚ ಜೋರು ಧ್ವನಿಯಲ್ಲಿ ಮಾತನಾಡಿದರೆ, ಜನಪ್ರತಿನಿಧಿಗಳ ದುಂಬಾಲು ಬಿದ್ದರೆ ಅವರ ಕಣ್ಣೊರೆಸಲಿಕ್ಕೆ ಒಂದಿಷ್ಟು ತೇಪೆ ಹಾಕುವುದು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ನೀವು ಯಾವಾಗಲೇ ಕೇಳಿದರೂ ಅಧಿಕಾರಿಗಳು ಹೇಳುವ ಉತ್ತರ ಏನು ಗೊತ್ತೇ? “ಟೆಂಡರ್
ಆಗಿದೆ. ಇನ್ನೇನು ಕಾಮಗಾರಿ ಆರಂಭವಾಗಲಿದೆ’ !
ರಾಷ್ಟ್ರೀಯ ಹೆದ್ದಾರಿ 75ರ ಸಮಸ್ಯೆಯನ್ನು ವಿವರಿಸಲಿಕ್ಕೇ ಈ ಸರಣಿ
“ರಾಷ್ಟ್ರೀಯ ಹೆದ್ದಾರಿ 75: ರಸ್ತೆ ಒಂದು ಸಮಸ್ಯೆ ನೂರಾ ಒಂದು’ ಇಂದಿನಿಂದ.
ಬಂಟ್ವಾಳ: ಕರಾವಳಿ ಜಿಲ್ಲೆಗಳನ್ನು ರಾಜಧಾನಿಯೊಂದಿಗೆ ಸಂಪರ್ಕಿಸುವ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75. ಈ ರಸ್ತೆಯ ಯೋಗವೋ ಅಥವಾ ದುರದೃಷ್ಟವೋ ಏನೋ? ಸಾದಾ ಯಾವುದಾದರೊಂದು ಭಾಗ ಸದಾ ದುರಸ್ತಿಯಲ್ಲಿರುತ್ತದೆ!
ರಾ. ಹೆ. ಪ್ರಾಧಿಕಾರದ ಅಧಿಕಾರಿಗಳ ಭಾಷೆಯಲ್ಲಿ ಹೇಳುವುದಾದರೆ “ಕಾಮಗಾರಿ ಪ್ರಗತಿಯಲ್ಲಿದೆ’. ಈ ಹೆದ್ದಾರಿಯ ಒಂದು ಭಾಗವಾದ ಬಿ.ಸಿ. ರೋಡ್-ಅಡ್ಡಹೊಳೆ ಹೆದ್ದಾರಿಯನ್ನು ಚತುಷ್ಪಥ ಗೊಳಿಸಿ ಮೇಲ್ದರ್ಜೆಗೇರಿಸುವ ಯೋಜನೆಯ ಕಾಮಗಾರಿ ಇಷ್ಟರಲ್ಲೇ ಮುಗಿಯಬೇಕಿತ್ತು. ಆದರೆ ಪರಿಸ್ಥಿತಿ ಸಂಪೂರ್ಣ ಭಿನ್ನ. ಕಾಮಗಾರಿ ಇನ್ನೂ ಪ್ರಗತಿಯಲ್ಲಿಲ್ಲ; ಕಾಮಗಾರಿ ಸ್ಥಗಿತಗೊಂಡು ಹಲವು ತಿಂಗಳಾಗಿವೆ!
ಬಿ.ಸಿ.ರೋಡು- ಅಡ್ಡಹೊಳೆ ಮಧ್ಯೆ 65 ಕಿ.ಮೀ.ಹೆದ್ದಾರಿ ಅಭಿವೃದ್ಧಿಗೆ 2017ರಲ್ಲಿ 821 ಕೋ.ರೂ.ಗೆ ಎಲ್‌ಎನ್‌ಟಿ ಕಂಪೆನಿ ಟೆಂಡರ್‌ನಲ್ಲಿ ಪಡೆದಿತ್ತು. ಆ ಕೂಡಲೇ ಕಂಪೆನಿಯು ಕಾಮಗಾರಿ ಆರಂಭಿಸಿತು. ನಿರೀಕ್ಷಿತ ರೀತಿಯಲ್ಲಿ ಕಾಮಗಾರಿ ನಡೆದಿದ್ದರೆ ಒಂದೂವರೆ ವರ್ಷ ಹಿಂದೆಯೇ (2019ರಲ್ಲೇ) ಕಾಮಗಾರಿ ಮುಗಿದುಬಿಡಬೇಕಿತ್ತು. ಆದರೆ ಈವರೆಗೂ ಹಳೆ ರಸ್ತೆ ಅಗೆದಿರುವುದು ಬಿಟ್ಟರೆ ಬೇರೇನೂ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಇದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದು, ನಾಳೆ ನೋಡೋಣ ಎಂದು ಸಮಯ ದೂಡುತ್ತಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಹಾಗಾಗಿ ಅಧಿಕಾರಿಗಳ ಕಾರಣದಿಂದ ಒಂದು ವ್ಯವಸ್ಥಿತ ಹೆದ್ದಾರಿ ಆಗಬೇಕಾದದ್ದು ಅವ್ಯವಸ್ಥಿತ ಹೆದ್ದಾರಿ ಎಂಬ ಕುಖ್ಯಾತಿಗೆ ಒಳಗಾಗಿದೆ.
ಯಾಕೆ ಮುಖ್ಯ ಈ ಹೆದ್ದಾರಿ?
ರಾಜಧಾನಿಗೆ ಉಡುಪಿ, ಮಂಗಳೂರು ಕಡೆ ಯಿಂದ ತೆರಳುವವರಿಗೆ ಇರುವ ನೇರವಾದ ದಾರಿ ಇದೊಂದೇ. ಚಾರ್ಮಾಡಿ ಕಡೆಯಿಂದ ಬೆಂಗಳೂರನ್ನು ತಲುಪಬಹುದಾದರೂ ಕಿ.ಮೀ. ಕೊಂಚ ಹೆಚ್ಚು. ಇನ್ನು ಮೈಸೂರು ಮಾರ್ಗವಾಗಿ ಬೆಂಗಳೂರು ತಲುಪುವ ಎಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ. ಶಿವಮೊಗ್ಗ ಮಾರ್ಗವಾಗಿ ಬೆಂಗಳೂರನ್ನು ತಲುಪುವುದೂ ಮೈಸೂರು ಮಾರ್ಗದಂತೆ ತಲುಪುವುದೂ ಎರಡೂ ಒಂದೇ.
ಪ್ರಮುಖವಾಗಿ ಇಂಧನ ಟ್ಯಾಂಕರ್‌ಗಳು, ಸರಕು ವಾಹನಗಳಿಗೆ ಈ ಹೆದ್ದಾರಿಯಷ್ಟು ಸುಲಭವಾದದ್ದು ಬೇರೊಂದಿಲ್ಲ. ಪ್ರಯಾಣದ ಸಮಯ ಉಳಿಯುವುದಲ್ಲದೇ, ಇಂಧನ ಉಳಿತಾಯ(ಕಡಿಮೆ ಕಿ.ಮಿ. ಆದ ಕಾರಣ)ವೂ ಸಾಧ್ಯ. ಆದರೆ ಜನರಿಗೆ ಬೇಕಾದದ್ದನ್ನು ಆದಷ್ಟು ಬೇಗ ಈಡೇರಿಸಬೇಕಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದನ್ನು ಆದ್ಯತಾ ಕಾಮಗಾರಿಯಾಗಿ ತೆಗೆದುಕೊಳ್ಳಲು ಮನಸ್ಸೇ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವಾಗಲೂ ಸಮಸ್ಯೆಯೇ
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಉಳಿದ ರಸ್ತೆಗಳೂ ಸಂಚಾರ ಒತ್ತಡದಿಂದ ಬಳಲುತ್ತಿವೆ. ಚಾರ್ಮಾಡಿ ಮೂಲಕ ಸಾಗುವ ರಸ್ತೆಯಲ್ಲೂ ಯಾವಾಗ ಬೇಕಾದರೂ ಗುಡ್ಡ ಜರಿದು ರಸ್ತೆ ಬಂದ್ ಆಗುವ ಆತಂಕ ಇದೆ. ಸಂಪಾಜೆ ಘಾಟಿ ಮೂಲಕ ಸಾಗುವ ರಸ್ತೆಯೂ ಕೆಲವು ವರ್ಷಗಳ ಹಿಂದೆ ಗುಡ್ಡ ಕುಸಿದ ಬಳಿಕ ಬಹಳ ಸುರಕ್ಷಿತ ಹೆದ್ದಾರಿ ಎಂದೆನಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ಅನ್ನೇ ಎಲ್ಲರೂ ಆಶ್ರಯಿಸುತ್ತಾರೆ. ಆದರೆ ಈ ಹಿಂದೆ ಹಲವು ವರ್ಷಗಳ ಕಾಲ ಶಿರಾಡಿ ದಾಟಿ ಹೋಗುವುದು ದುಸ್ತರವಾಗಿತ್ತು. ಕೊನೆಗೂ ಕಾಂಕ್ರೀಟ್ ರಸ್ತೆಯಾಗಿ ಪರಿಸ್ಥಿತಿ ಸುಧಾರಿಸಿತ್ತು ಎನ್ನುವಾಗ ಬಿ.ಸಿ.ರೋಡ್-ಅಡ್ಡ ಹೊಳೆ ರಸ್ತೆಯ ಸಮಸ್ಯೆ ಕಾಡತೊಡಗಿದೆ.
ಏನೇನು ಆಗಬೇಕಿತ್ತು?
ಪ್ರಾರಂಭದಲ್ಲಿ ಸಿದ್ಧಗೊಂಡ ವಿಸ್ತೃತ ಯೋಜನಾ ವರದಿ(ಡಿಪಿಆರ್) ಪ್ರಕಾರ ಹೆದ್ದಾರಿ ಅಭಿವೃದ್ಧಿಯೊಂದಿಗೆೆ 2 ಸಣ್ಣ ಗಾತ್ರದ ಸೇತುವೆಗಳು, 24 ಕಿರು ಸೇತುವೆಗಳು, 27 ಕಡೆಗಳಲ್ಲಿ ತಡೆಗೋಡೆ, ಜತೆಗೆ ನೂರಕ್ಕೂ ಅಧಿಕ ಮೋರಿಗಳು, ಮಧ್ಯದಲ್ಲಿ ವಿಸ್ತಾರವಾದ ಡಿವೈಡರ್ ಎಂಬೆಲ್ಲ ಉದ್ದದ ಪಟ್ಟಿಯಿತ್ತು. ಆದರೆ ಒಂದಷ್ಟು ಮೋರಿಗಳನ್ನು ಬಿಟ್ಟರೆ ಸೇತುವೆಯ ಕಾಮಗಾರಿಯೂ ಅರ್ಧಂಬರ್ಧ ನಡೆದಿದೆ. ಉಳಿದದನ್ನು ಕೇಳುವವರೇ ಇಲ್ಲವಾಗಿದೆ.
You seem to have an Ad Blocker on.
To continue reading, please turn it off or whitelist Udayavani.