ದೇಶದ ಬೆಳವಣಿಗೆಗೆ ಸಾಗರೋತ್ತರ ಕನ್ನಡಿಗರ ಸಲಹೆ, ಸೂಚನೆ ಸ್ವೀಕರಿಸಲು ಸಿದ್ಧ
Team Udayavani, Mar 8, 2021, 6:55 PM IST
ಇಟಲಿ : ಕೋವಿಡ್ ಎಲ್ಲರಿಗೂ ಬದುಕುವುದನ್ನು ಕಲಿಸಿದೆ. ಅಂತಹ ಸಂದರ್ಭದಲ್ಲಿ ಉದಯಿಸಿದ ಸಾಗರೋತ್ತರ ಕನ್ನಡಿಗರು ವೇದಿಕೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಖುಷಿ ನೀಡಿದೆ. ನಾವು ಕನ್ನಡಿಗರು ಎಂಬ ಭಾವನಾತ್ಮಕ ಸಂಬಂಧವಿದೆ. ಜಗತ್ತಿನಾದ್ಯಂತ ಎಲ್ಲ ಭಾಗಗಳಲ್ಲಿ ಕನ್ನಡವನ್ನು ಬೆಳೆಸುತ್ತಿದ್ದೀರಿ. ಅದೇ ರೀತಿ ನಿಮ್ಮ ಕಾರ್ಯಕಚೇರಿಗಳು ಎಲ್ಲಡೆ ಸ್ಥಾಪನೆಯಾಗಲಿ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಸಾಗರೋತ್ತರ ಕನ್ನಡಿಗರೊಂದಿಗೆ ನಡೆದ 25ನೇ ಸಂವಾದ ಕಾರ್ಯಕ್ರಮ ಬೆಳ್ಳಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಬೆಳವಣಿಗೆಗೆ ನಿಮ್ಮ ಸಲಹೆ, ಸೂಚನೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸ್ವೀಕರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.
ಗೌರಿಗದ್ದೆ ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್‌ನ ಅವಧೂತ ವಿನಯ್ ಗುರೂಜಿ ಮಾತನಾಡಿ, ಸಾಗರೋತ್ತರ ಕನ್ನಡಿಗರು ಒಂದಾಗಿದ್ದು ಖುಷಿಯ ವಿಚಾರ. ಜಗತ್ತಿಗೆ ಶಾಂತಿಯನ್ನು ನೀಡಿದ ರಾಜ್ಯ ನಮ್ಮ ಕರ್ನಾಟಕ. ಇಲ್ಲಿ ಸಾಕಷ್ಟು ನಿರುದ್ಯೋಗ, ಬಡತನ ಸಮಸ್ಯೆ ಇದೆ. ಅದನ್ನು ಹೋಗಲಾಡಿಸಲು ನಾವು ಶ್ರಮಿಸಬೇಕು. ಹೊರದೇಶಗಳಲ್ಲಿರುವ ಹಿರಿಯ ಕನ್ನಡಿಗರು ಕೊರೊನಾ ಸಮಯದಲ್ಲಿ ಸಾಕಷ್ಟು ಕನ್ನಡಿಗರನ್ನು ಸುರಕ್ಷಿತವಾಗಿ ತಲುಪಿಸಿದ್ದೀರಿ. ಅದು ಬಹಳ ಹೆಮ್ಮೆಯ ವಿಚಾರ ಎಂದರು.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಿಂಗಳಲ್ಲಿ ಒಂದು ದಿನವಾದರೂ ಕೇವಲ ಕನ್ನಡವನ್ನೇ ಮಾತನಾಡಿ. ನಮ್ಮ ದೇಶೀ ವಸ್ತುಗಳು, ಬಟ್ಟೆಗಳನ್ನೇ ಬಳಸಿ. ಆಗ ಮಾತ್ರ ನಮ್ಮ ಜನರ ಶ್ರೇಯವಾಗುತ್ತದೆ. ದೇಶಿಯ ದುಡಿಮೆಯನ್ನು ನಂಬಿದ ಸಾಕಷ್ಟು ಕುಟುಂಬಗಳು ಇವತ್ತು ಕಷ್ಟದಲ್ಲಿವೆ. ನಮ್ಮ ಸಾಹಿತಿಗಳ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸಲು ಪ್ರಯತ್ನಿಸಿ. ಸಾಕಷ್ಟು ಜನ ಕಲಿತು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಅವರಿಗೂ ಉದ್ಯೋಗ ಕಲ್ಪಿಸಲು ಪ್ರಯತ್ನಿಸಿ. ಸಾಗರೋತ್ತರ ವೇದಿಕೆ ಮಹಾ ಸಾಗರವಾಗಿ ಎಲ್ಲ ಕಡೆ ವಿಸ್ತರಿಸಲಿ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಮಾತನಾಡಿ, ಕನ್ನಡಿಗರು ಜಗತ್ತಿನಾದ್ಯಂತ ಇರುವುದು ನಮ್ಮ ಕನ್ನಡಿಗರ ಹೆಮ್ಮೆ. ತಮ್ಮ ಕಷ್ಟಕರ ಜೀವನವನ್ನು ಇಷ್ಟವಾಗುವ ರೀತಿಯಲ್ಲಿ ಎಲ್ಲರಿಗೂ ವಿವರಿಸಿದ್ದು ನಿಜಕ್ಕೂ ಮನ ಮಿಡಿಯುವಂತಾಗಿತ್ತು. ಎಲ್ಲರ ಆಶೀರ್ವಾದದಿಂದ ನನಗೆ ಪದ್ಮಶ್ರೀ ಸಿಕ್ಕಿದೆ ಎಂದು ಹೇಳಿದರು.
ಅನಂತರ ಮಾತನಾಡಿದ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಮಾತನಾಡಿ, ಇಸ್ರೋ ಜಗತ್ತಿನ ಅತ್ಯುತ್ತಮ ಬಾಹ್ಯಾಕಾಶ ಕೇಂದ್ರವಾಗಿದೆ. ವಿಕ್ರಮ್ ಸಾರಾಭಾಯ್ ಅವರು ಪ್ರಾರಂಭಿಸಿದ ಈ ಸಂಸ್ಥೆಯಲ್ಲಿ ಕರ್ನಾಟಕದ ಸಾಕಷ್ಟು ಜನ ಇಸ್ರೋಗೆ ಶ್ರಮಿಸಿ¨ªಾರೆ. ಅವರು ಕೆಲಸ ಮೆಚ್ಚುವಂಥದ್ದು, ಇವತ್ತು ಭಾರತ ಬಾಹ್ಯಾಕಾಶದಲ್ಲಿ ಕೆಲವೇ ಕೆಲವು ದೇಶಗಳಲ್ಲಿ ಒಂದು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಅನಂತರ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಹಲವು ದೇಶಗಳ ಅನಿವಾಸಿ ಕನ್ನಡಿಗರು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಸಾಗರೋತ್ತರ ಕನ್ನಡಿಗರು ಸಂಘಟನೆಯ ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ ಅವರು ಗಲ್ಫ್ ದೇಶಗಳಿಂದ ಹಾಗೂ ವೀಡಿಯೋ ಮೂಲಕ ಸಾಗರೋತ್ತರ ಕನ್ನಡಿಗರ ಪರಿಚಯ ನೀಡಿದ ಸಂಘದ ಕಾರ್ಯದರ್ಶಿ ಹೇಮೇಗೌಡ ಮಧು ಅವರು ಯುರೋಪ್ ದೇಶಗಳಿಂದ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಸಾಗರೋತ್ತರ ಕನ್ನಡಿಗರು ವೇದಿಕೆಯ ಉಪಾಧ್ಯಕ್ಷ ಗೋಪಾಲ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಖಜಾಂಚಿ ಬಸವ ಪಾಟೀಲ ಅವರು ಸಾಗರೋತ್ತರ ಕನ್ನಡಿಗರು ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ಸುದೀರ್ಘ 4.30 ಗಂಟೆಗಳ ಕಾಲ ನಡೆದ ಕಾರ್ಯಕ್ರಮ ಕೊನೆಗೆ ಸಾಗರೋತ್ತರ ಕನ್ನಡಿಗರು ವೇದಿಕೆಯ ಜಂಟಿ ಕಾರ್ಯದರ್ಶಿ ರವಿ ಮಹದೇವ ಅವರು ವಂದಿಸಿದರು.
ಸಿನೆಮಾ ಚಿತ್ರೀಕರಣ ಅವಕಾಶ ಸದುಪಯೋಗವಾಗಲಿ :
ಕನ್ನಡ ಚಿತ್ರನಟಿ ಮತ್ತು ನಿರ್ದೇಶಕಿ ರೂಪಾ ಅಯ್ಯರ್ ಮಾತನಾಡಿ, ಸಾಗರೋತ್ತರ ಕನ್ನಡಿಗರು ವೇದಿಕೆ ತನ್ನ 25ನೇ ಕಾರ್ಯಕ್ರಮ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ನಾನು ಮೂಲತಃ ಸಿನೆಮಾ ಹಿನ್ನೆಲೆಯುಳ್ಳವಳಾಗಿದ್ದರಿಂದ ವಿದೇಶದಲ್ಲಿ ನಮ್ಮ ಕನ್ನಡ ಸಿನೆಮಾಗಳ ಚಿತ್ರೀಕರಣಕ್ಕೆ ಸಾಕಷ್ಟು ಅವಕಾಶಗಳಿವೆ. ಅದನ್ನು ನಮ್ಮ ಕನ್ನಡ ನಿರ್ಮಾಪಕರು, ನಿರ್ದೇಶಕರು ಸದುಪಯೋಗ ಪಡಿಸಿಕೊಳ್ಳಬೇಕು. ಅದಕ್ಕಾಗಿ ಅನಿವಾಸಿ ಕನ್ನಡಿಗರು ಸಹಾಯ ಮಾಡಬೇಕು ಎಂದು ಹೇಳಿದರು.
ನಾಡಿನ ಸಂಸ್ಕೃತಿ ಪ್ರಚಾರ ಹೆಮ್ಮೆಯ ವಿಷಯ :
ಅನಿವಾಸಿ ಭಾರತಿ ಸಮಿತಿ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ, ಜಗತ್ತಿನಾದ್ಯಂತ ಸಾಕಷ್ಟು ಕನ್ನಡಿಗರು ಕನ್ನಡವನ್ನು ಬೆಳೆಸುತ್ತಿದ್ದಾರೆ. ಈ ನಾಡಿನ ಸಂಸ್ಕೃತಿಯ ವೈಭವವನ್ನು ಸಾಗರೋತ್ತರ ಕನ್ನಡಿಗರ ಮೂಲಕ ಪಸರಿಸುತ್ತಿರುವುದು ಹೆಮ್ಮೆಯ ವಿಷಯ. ಎಲ್ಲ ದೇಶಗಳಲ್ಲಿ ಕನ್ನಡಿಗರು ಹೆಸರುಗಳಿಸಿ ಕನ್ನಡದ ಕೀರ್ತಿಯನ್ನು ಎತ್ತರಕ್ಕೇರಿಸುತ್ತಿ
ದ್ದಾರೆ. ಅನಿವಾಸಿ ಭಾರತಿ ಸಮಿತಿಗೆ ಸದ್ಯ ಯಾರೂ ಕೂಡ ಉಪಾಧ್ಯಕ್ಷರಾಗಿಲ್ಲ. ಅದಕ್ಕಾಗಿ ಸರಕಾರ ಒಂದು ಸರಿಯಾದ ವ್ಯವಸ್ಥೆಯನ್ನುರೂಪಿಸಬೇಕು ಎಂದು ತಿಳಿಸಿದರು.
*
“ಪರರ ಸೊತ್ತು’ ಹಾಸ್ಯ ನಾಟಕ ಪ್ರದರ್ಶನ :
ದ.ಕ್ಯಾಲಿಫೋರ್ನಿಯಾ : ಕಳ್ಳನೊಬ್ಬ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ದುಡ್ಡಿನ ಬ್ರಿಫ್ ಕೇಸ್ ಎತ್ತಿಕೊಂಡು ಹೋಗುವ ಸಾರವನ್ನು ಒಳಗೊಂಡ ಎಂ.ಎಸ್. ನರಸಿಂಹ ಮೂರ್ತಿ ಅವರು ರಚಿಸಿದ “ಪರರ ಸೊತ್ತು’ ಹಾಸ್ಯ ನಾಟಕವನ್ನು ಸೆರಿಟೊಸ್‌ನ ತಂಡ ಅತ್ಯುತ್ತಮವಾಗಿ ಪ್ರದರ್ಶಿಸಿತ್ತು.
ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘ ನಿಮ್ಮಲ್ಲಿಗೆ ಕನ್ನಡ ಕೂಟದ ಆನ್‌ಲೈನ್ ನಾಟಕೋತ್ಸವದಲ್ಲಿ ಫೆ. 11ರಂದು ವರ್ಚುವಲ್ ವೇದಿಕೆಯಲ್ಲಿ ಇದು ಪ್ರಸಾರವಾಯಿತು.
ನಾಟಕ ರಚನೆಕಾರ ಎಂ.ಎಸ್. ನರಸಿಂಹ ಮೂರ್ತಿ ಅವರು ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಡಪಾಯಿ ವ್ಯಕ್ತಿ ವಿಶ್ವ ಮತ್ತು ಆತನ ಮಾವನ ನಡುವೆ ನಡೆಯುವ ಹಾಸ್ಯ ಸಂಭಾಷಣೆ ನಾಟಕದ ಪ್ರಮುಖ ಆಕರ್ಷಣೆಯಾಗಿತ್ತು.
ನಾಟಕದಲ್ಲಿ ಗುರುಪ್ರಸಾದ್ ರಾವ್, ಅನಂತ ಪ್ರಸಾದ್, ಶಾಂತಾರಾಮ್, ರಜನಿ ಶಾಂತಾರಾಮ್, ಸ್ನೇಹಾ ವೊಂಟಕಲ್, ಶಶಿ ಶಲ್ವ, ಸುಷ್ಮಾ ದೇಸಾಯಿ ಭಾಗವಹಿಸಿದ್ದರು.
ಸತ್ಯಪ್ರಸಾದ್, ಗೋಪಾಲ್ ಶ್ರೀನಾಥ್ ತಾಂತ್ರಿಕ ಸಹಾಯ ನೀಡಿದರು. ಸಂಘದ ಅಧ್ಯಕ್ಷರಾದ ಧಾರಿಣಿ ದೀಕ್ಷಿತ್ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.