ರಾಜಕಾರಣಕ್ಕೆ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ಬಲಿ
Team Udayavani, Mar 10, 2021, 9:00 AM IST
“ಒಂದು ರಾಷ್ಟ್ರ ಒಂದು ಚುನಾವಣೆ’ ವಿಷಯ ರಾಜ್ಯ ವಿಧಾನಮಂಡಲದಲ್ಲಿ ಎರಡು ದಿನ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತಾದರೂ ಮೂಲ ಉದ್ದೇಶ ಸಾಕಾರಗೊಳ್ಳಲಿಲ್ಲ. ಆದರೆ, ವಿಧಾನಸಭೆಯಲ್ಲಿ ವಿಷಯ ಮಂಡನೆ ಮೂಲಕ ಸದನದ ಕಡತಕ್ಕೆ ಸೇರಿಸುವ ಆಡಳಿತಾರೂಢ ಬಿಜೆಪಿಯ “ಗುರಿ’ ಈಡೇರಿತು. ಚರ್ಚೆಗೆ ನಾವು ಅವಕಾಶ ಕೊಡಲಿಲ್ಲ ಎಂಬ ವಿಪಕ್ಷ ಕಾಂಗ್ರೆಸ್‌ನ “ಹಠ’ ಸಾಧನೆಯಾಯಿತು. ಜೆಡಿಎಸ್ “ಅಸಮ್ಮತಿ’ ದಾಖಲಿಸಿ ಮೌನವಹಿಸಿದಂತಾಯಿತು.
ಆದರೆ, ಎರಡು ದಿನದ ವಿದ್ಯಮಾನಗಳನ್ನು ಯಾರೂ ಒಪ್ಪುವಂತಿರಲಿಲ್ಲ. ಹತ್ತು ದಿನಗಳ ಹಿಂದೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸ್ಪೀಕರ್-ಸಭಾಪತಿಯವರ ಸಮ್ಮುಖದಲ್ಲಿ ನಡೆದ ಸಂಸದೀಯ ಮೌಲ್ಯಗಳ ಕುಸಿತ ಆತ್ಮಾವಲೋಕನ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಅದೇ ಸ್ಪೀಕರ್-ಸಭಾಪತಿ ಪೀಠದ ಮುಂದೆ ಎರಡು ದಿನ ನಡೆದ ಘಟನಾವಳಿಗಳು ತದ್ವಿರುದ್ಧ. ಎರಡೂ ದಿನ ನಡೆದದ್ದು ರಾಜಕೀಯ ಮೇಲಾಟವೇ.
ಎರಡು ದಿನ ಸದನದಲ್ಲಿ ನಡೆದ “ಪ್ರಹಸನ’ ಗಮನಿಸಿದರೆ “ಒಂದು ರಾಷ್ಟ್ರ ಒಂದು ಚುನಾವಣೆ’ ವಿಷಯದ ಚರ್ಚೆಗಾಗಿ ಎರಡು ದಿನಗಳ ವಿಶೇಷ ಅಧಿವೇಶನ ನಿಗದಿಪಡಿಸುವ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಒಮ್ಮತ ಏರ್ಪಡದಿರುವುದು ಸ್ಪಷ್ಟ. ಸಂವಿಧಾನ ಕುರಿತು ವಿಶೇಷ ಚರ್ಚೆ, ಸಂಸದೀಯ ಮೌಲ್ಯಗಳ ಕುಸಿತ ತಡೆಯುವಿಕೆ ಆತ್ಮಾವಲೋಕನ ಸಂವಾದ ಆಯೋಜನೆ ವಿಚಾರದಲ್ಲಿ ಪ್ರತಿಪಕ್ಷಗಳ ಸಹಮತ ಹಾಗೂ ಸಹಕಾರ ಪಡೆದಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ವಿಚಾರದಲ್ಲಿ ಅದು ಸಾಧ್ಯವಾಗದಿರುವುದು ಸತ್ಯ. ನಾಲ್ಕೈದು ಬಾರಿ ಸದನ ಮುಂದೂಡಿಕೆಯಾಗಿ ಕೊನೆಗೂ ಚರ್ಚೆಯೇ ಆಗದೆ ಎರಡು ದಿನಗಳ ಕಲಾಪ ಬರ್ಖಾಸ್ತುಗೊಳ್ಳುವಂತಾಗಿದ್ದು ದುರಂತ.
ಪ್ರತಿಷ್ಠೆ ಬೇಕಿರಲಿಲ್ಲ
“ಒಂದು ರಾಷ್ಟ್ರ ಒಂದು ಚುನಾವಣೆ’ ವಿಚಾರ ಮಹತ್ವದ್ದು ಹಾಗೂ ಚರ್ಚಾರ್ಹ. ವಿರೋಧ ಇದ್ದರೆ ಅಥವಾ ಭಿನ್ನಾಭಿ ಪ್ರಾಯ ಹೊಂದಿದ್ದರೆ ಸದನದಲ್ಲಿ ಚರ್ಚೆ ವೇಳೆ ವ್ಯಕ್ತಪಡಿಸಲು ಅವಕಾಶ ಇದ್ದೇ ಇತ್ತು. ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆ ಮಾಡಿದ ತತ್‌ಕ್ಷಣ ಆ ಬಗ್ಗೆ ನಿರ್ಣಯ ಅಥವಾ ಅಂತಿಮ ತೀರ್ಮಾನವೇನೂ ಆಗುತ್ತಿರಲಿಲ್ಲ. ಇದು ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅಜೆಂಡಾ ಎಂದು ಆರೋಪಿಸಿದ ಕಾಂಗ್ರೆಸ್ ಅದು ಹೇಗೆ ಎಂಬುದನ್ನು ತಿಳಿ ಸಬಹುದಿತ್ತು.ಅದು ಬಿಟ್ಟು ಎರಡೂ ದಿನ ಪ್ರತಿಭಟನೆಗೆ ಸೀಮಿ ತವಾಗಿದ್ದು ಯಾವ ರೀತಿಯ ನಡೆ ಎಂಬುದು ಅರ್ಥ ವಾಗುತ್ತಿಲ್ಲ. ಈ ವಿಚಾರ ದಲ್ಲಿ ಪ್ರಾರಂ ಭದಲ್ಲಿ ಮೌನವಹಿಸಿದ್ದ ಜೆಡಿಎಸ್ ಶಾಸಕರು, ಕಾಂಗ್ರೆಸ್ ಪ್ರತಿ ಭಟನೆಯಿಂದ ಜ್ಞಾನೋದಯ ವಾದಂತೆ ಮಧ್ಯಾಹ್ನ ಸಭಾತ್ಯಾಗ ಮಾಡಿದರು. ಏಕ ಕಾಲದ ಚುನಾವಣೆ ಪ್ರಾದೇಶಿಕ ಪಕ್ಷಗಳಿಗೆ ಮಾರಕ ಎಂಬುದು ಅವರ ವಾದ. ಚರ್ಚೆ ಸಂದರ್ಭ ದಲ್ಲಿ ಹೇಗೆ ಮಾರಕ ಎಂಬುದಾದರೂ ಹೇಳಬಹುದಿ ತ್ತಾದರೂ ಅದೂ ಆಗಲಿಲ್ಲ. ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ವಿಷಯ ಎರಡೂ ದಿನ ಚರ್ಚೆಯಾಗಿದ್ದರೆ ರಾಜ್ಯದ ಜನತೆಗೂ ಸ್ಪಷ್ಟತೆ ಸಿಗುತ್ತಿತ್ತು. ಪರ ಅಥವಾ ವಿರೋಧ ಯಾಕೆ ಎಂಬುದು ಗೊತ್ತಾಗುತ್ತಿತ್ತು. ಆದರೆ, ಇದ್ಯಾವುದಕ್ಕೂ ಅವಕಾಶವೇ ಆಗಲಿಲ್ಲ.
ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆ ಬೇಕಿರಲಿಲ್ಲ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ಸ್ಪೀಕರ್ ಹಾಗೂ ಸಭಾಪತಿಯವರು ಪೂರ್ವಭಾವಿಯಾಗಿ ವಿಪಕ್ಷ ನಾಯಕರು ಹಾಗೂ ಸಭಾನಾಯಕರ ಮುಖಾಮುಖೀ ಸಭೆ ನಡೆಸಬಹುದಿತ್ತು. ಇಲ್ಲವೇ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಬಹುದಿತ್ತು ಎಂಬ ವ್ಯಾಖ್ಯಾನಗಳೂ ಇವೆ.
ಒಪ್ಪುವಂತದ್ದಲ್ಲ: ಗದ್ದಲ-ಪ್ರತಿಭಟನೆ ನಡುವೆಯೇ “ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 18 ಪುಟಗಳ ಪುಸ್ತಕದ ಭಾಷಣ ಮಾಡುವಂತಾಗಿದ್ದು, ಸ್ಪೀಕರ್ ಆರ್‌ಎಸ್‌ಎಸ್ ಏಜೆಂಟ್ ಎಂಬ ಘೋಷಣೆ ಸದನಕ್ಕೆ ಗೌರವ ತರುವಂತದ್ದಂತೂ ಅಲ್ಲವೇ ಅಲ್ಲ. ಚರ್ಚೆಯಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಕಾಂಗ್ರೆಸ್‌ನಿಂದ 19 ಶಾಸಕರ ಹೆಸರು ನೀಡಲಾಗಿತ್ತು. ಜೆಡಿಎಸ್‌ನಿಂದ 13 ಶಾಸಕರು ಹೆಸರು ನೀಡಲಾ ಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎರಡೂ ಪಕ್ಷಗಳ ಸದಸ್ಯರು ಚರ್ಚೆಯಿಂದ ದೂರ ಉಳಿದರು. ಇದೂ ಸಹ ವಿಚಿತ್ರವೇ. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ನಾಯಕ ಎಚ್.ಕೆ. ಪಾಟೀಲ್ ಜತೆಗೂಡಿ ಸಭೆ ನಡೆಸಿದ ಅನಂತರ ವಿಚಾರದಲ್ಲಿ ಸದನದ ಒಳಗೆ ಕಾಂಗ್ರೆಸ್‌ನ ಕಾರ್ಯತಂತ್ರ ಬದಲಾಗಿರಲೂಬಹುದು. ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆಸರು ಕೊಟ್ಟಿದ್ದು ನಿಜ. ಆದರೆ, ಯಾವ ನಿಯಮಾವಳಿ ಪ್ರಕಾರ ಚರ್ಚೆಗೆ ಅವಕಾಶ ಎಂಬುದರ ಬಗ್ಗೆ ನಮಗೆ ಸ್ಪಷ್ಟನೆ ಬೇಕಿತ್ತು. ವಿಪಕ್ಷ ನಾಯಕರು ಎದ್ದು ನಿಂತು ಮಾತನಾಡುತ್ತಿರುವಾಗಲೇ ಸ್ಪೀಕರ್ ಅವರು ಭಾಷಣ ಆರಂಭಿಸಿ ಬಿಟ್ಟರು. ಎಚ್.ಕೆ.ಪಾಟೀಲ್ ಅವರು ಕ್ರಿಯಾಲೋಪ ಎತ್ತಿದರೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಿರುವಾಗ ಪ್ರತಿಭಟನೆ ಮಾಡದೆ ನಮಗೆ ಬೇರೆ ದಾರಿ ಇರಲಿಲ್ಲ ಎಂಬುದು ಕಾಂಗ್ರೆಸ್ ವಾದ.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಗಳ ನಿಯಮ 363 ರಡಿ ವಿಧಾನಸಭಾಧ್ಯಕ್ಷರ ವಿವೇಚನೆಯಡಿ ಅವಕಾಶ ಕೊಟ್ಟು ನಿಗದಿಪಡಿಸಿದ್ದೇನೆ ಎಂಬು ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮರ್ಥನೆ. ಆದರೆ, ಇದನ್ನು ಒಪ್ಪಲು ಕಾಂಗ್ರೆಸ್ ಸಿದ್ಧವಿರಲಿಲ್ಲ.
ಚರ್ಚೆಯಲ್ಲಿ ಪಾಲ್ಗೊಳ್ಳಲು ನಮ್ಮ ಪಕ್ಷದಿಂದ 15 ಮಂದಿ ಮಾತನಾಡಲು ಸಿದ್ಧರಿದ್ದರೂ ಕಾಂಗ್ರೆಸ್ ಪ್ರತಿಭಟನೆ ಮೂಲಕ ಅವರ ಹಕ್ಕುಗಳನ್ನೂ ಕಸಿದುಕೊಂಡಂತಾಯಯಿತು. ವಿಪಕ್ಷ ಸದನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು ಯಾವ ನ್ಯಾಯ ಎಂಬ ಬಿಜೆಪಿ ನಾಯಕರ ಪ್ರಶ್ನೆಗೂ ಉತ್ತರ ಸಿಗಲಿಲ್ಲ. ಒಂದು ಹಂತದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ವಿವೇಚನೆ ವಿಶೇಷ ಸಂದರ್ಭದಲ್ಲಿ ಬಳಕೆ ಮಾಡಬೇಕು ಇಲ್ಲದಿದ್ದರೆ ವಿವೇಚನಾ ಕೋಟಾದಲ್ಲಿ ಸೈಟ್ ಹಂಚಿದಂತೆ ಆಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದು ನೀವು ಸ್ಪೀಕರ್ ಆಗಿ ಕೆಲಸ ಮಾಡಿದವರು ಘನತೆಗೆ ತಕ್ಕಂತೆ ಮಾತನಾಡಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಿಟ್ಟಾಗಿ ಹೇಳಿದ್ದು, ನಿಮ್ಮ ಕೃಪೆಯಿಂದ ನನ್ನ ಘನತೆ ಹೆಚ್ಚಿಸಿಕೊಳ್ಳಬೇಕಾಗಿಲ್ಲ ಎಂದು ರಮೇಶ್‌ಕುಮಾರ್ ಅಷ್ಟೇ ಕೋಪದಿಂದ ಮಾತನಾಡಿದ್ದು ಅನಗತ್ಯವಾಗಿತು. ಒಟ್ಟಾರೆ, ಇಲ್ಲಿ ಯಾರಿಗೂ ಸ್ಪಷ್ಟತೆ ಅಥವಾ ತಾರ್ಕಿಕ ಅಂತ್ಯ ಬೇಕಿರಲಿಲ್ಲ.
ಕರ್ನಾಟಕದಲ್ಲಿ ಬಿಜೆಪಿಯದೇ ಸರ ಕಾರಅಧಿಕಾರದಲ್ಲಿರುವುದರಿಂದ ದೇಶದಲ್ಲಿ ಮೊದಲ ಬಾರಿಗೆ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯ ವಿಧಾನಸಭೆಯಲ್ಲಿ ಮಂಡಿಸಿ ದಂತಾಗಿದೆ ಎಂಬ ಹಿಗ್ಗು ಆಡಳಿತಾರೂಢ ಬಿಜೆಪಿ ಯವರಿಗೆ. ಏನೇ ಆದರೂ ನಾವು ಚರ್ಚೆಗೆ ಅವಕಾಶ ಕೊಡಲಿಲ್ಲ ಎಂಬ ಸಂ “ತೃಪ್ತಿ’ ವಿಪಕ್ಷ ಕಾಂಗ್ರೆಸ್‌ಗೆ. ಎರಡೂ ರಾಷ್ಟ್ರೀಯ ಪಕ್ಷಗಳ ಜಟಾಪಟಿಯಲ್ಲಿ ನಾವು ಕಳೆದುಹೋಗುವಂತಾಗು ತ್ತಿದೆಯಲ್ಲ ಎಂಬ ಶಾಶ್ವತ ಅಸಮಾಧಾನ ಜೆಡಿಎಸ್‌ನದು. ವಿಧಾನ ಸಭೆಯಲ್ಲಿ ಎರಡು ದಿನವೂ ಜಟಾಪಟಿಗೆ ಕಲಾಪ ಬಲಿಯಾದರೆ, ವಿಧಾನಪರಿಷತ್‌ನಲ್ಲಿ ಎರಡೂ ದಿನ ಮಧ್ಯಾಹ್ನದವರೆಗೂ ಪ್ರಶ್ನೋತ್ತರ ಸೇರಿ ಇತರ ಕಲಾಪಗಳು ನಡೆದಿದ್ದು ಸಮಾಧಾನಕರ.
ಕಪ್ಪು ಚುಕ್ಕೆ
ಭದ್ರಾವತಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ವಿಧಾನಸಭೆಯಲ್ಲಿ ಶರ್ಟ್ ಬಿಚ್ಚಿ ತಮ್ಮ ಪ್ರತಿಭಟನೆ ತೋರಿದ್ದು ಸದನದಲ್ಲಿ ಮತ್ತೂಂದು ಕಪ್ಪು ಚುಕ್ಕೆಯಾಗಿ ದಾಖಲಾಯಿತು. ಕುಟುಂಬ ಸದಸ್ಯರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂಬ ನೋವು ಅವರಿಗೆ ಇದ್ದರೂ ಸದನದಲ್ಲಿ ಪ್ರತಿಭಟನೆ, ಪ್ರತಿರೋಧ ತೋರಲು ಒಂದು ಪದ್ಧತಿ ಇದೆ. ಸದನದ ಗೌರವ ಕಾಪಾಡುವುದರ ಜತೆಗೆ ಘನತೆ ಎತ್ತಿ ಹಿಡಿಯುವುದು ಎಲ್ಲ ಪಕ್ಷ, ಸದಸ್ಯರ ಜವಾಬ್ದಾರಿ ಮತ್ತು ಹೊಣೆಗಾರಿಕೆ.ಎರಡು ಲಕ್ಷದ ಎಂಬತ್ತು ಸಾವಿರ ಮತದಾರರನ್ನು ಪ್ರತಿನಿ ಧಿಸುವ ಶಾಸಕರೇ ನನಗೆ ನ್ಯಾಯ ಕೊಡಿಸಿ ಎಂದು ಸ್ಪೀಕರ್ ಪೀಠದ ಮುಂದೆ ಶರ್ಟ್ ಬಿಚ್ಚಿ ನಿಂತರೆ ಹೇಗೆ? ಆ ಕ್ಷೇತ್ರದ ಮತದಾ ರರಿಗೆ ನ್ಯಾಯ ಬೇಕಾದರೆ ಅವರು ಎಲ್ಲಿ ಹೋಗ ಬೇಕು ಹೇಗೆ ತಮ್ಮ ಪ್ರತಿಭಟನೆ ತೋರಬೇಕು. ಜನ ಪ್ರತಿನಿಧಿಗಳು ಮಾದರಿ ಯಗಬೇಕೇ ವಿನಹಃ ಕಪ್ಪುಚುಕ್ಕೆ ಯಂತಹ ಘಟನೆಗಳಿಗೆ ಉದಾಹರಣೆಯಾಗಬಾರದು. ಈ ನಡುವೆ ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವವು ಮಂಡನೆಯಾಗಿ ಅನಿರ್ಧಿ ಷ್ಟಾವಧಿಗೆ ಅಮಾನತು ಮಾಡು ವಂತೆ ಒತ್ತಾಯಿಸಲಾಗಿದ್ದು, ಪ್ರಕರಣವನ್ನು ಹಕ್ಕುಭಾದ್ಯತಾ ಸಮಿತಿಗೆ ವಹಿಸಲಾಗಿದ್ದು, ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.
- ಎಸ್.ಲಕ್ಷ್ಮೀ ನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.