ಪ್ರಾಪರ್ಟಿ ಕಾರ್ಡ್: ಅವ್ಯವಸ್ಥೆಯ ಆಗರ; ಬಗೆಹರಿಯದ ಗೊಂದಲ
ಯೋಜನೆಗೆ ಸರಕಾರದ ಆಸಕ್ತಿ ಕೊರತೆ
Team Udayavani, Mar 17, 2021, 5:55 AM IST
ಮಹಾನಗರ: ಕರಾವಳಿ ಕರ್ನಾಟಕದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ ಅನುಷ್ಠಾನಗೊಂಡಿದ್ದ ಪ್ರಾಪರ್ಟಿ ಕಾರ್ಡ್ (ನಗರ ಆಸ್ತಿ ಮಾಲಕತ್ವದ ದಾಖಲೆ) ಯೋಜನೆಗೆ ಸರಕಾರದ ಆಸಕ್ತಿ ಕೊರತೆ, ಅನುಷ್ಠಾನದಲ್ಲಿ ಗೊಂದಲಗಳಿಂದಾಗಿ ಅದು ಈಗ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ಪ್ರಸ್ತುತ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ರಾಜ್ಯ ಸರಕಾರ ಮುಂದಿನ ಆದೇಶದವರೆಗೆ ಮುಂದೂಡಿಕೆ ಮಾಡಿದೆ. ಆದರೆ ಮುಂದಕ್ಕೆ ಇದು ಕಡ್ಡಾಯವಾಗಲಿದೆಯೇ ಅಥವಾ ಕೈಬಿಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಕೂಡ ಸ್ಪಷ್ಟ ನಿಲುವು ಸರಕಾರದ ಕಡೆಯಿಂದ ವ್ಯಕ್ತವಾಗದಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಇನ್ನೂ ಗೊಂದಲದಲ್ಲಿದ್ದಾರೆ. ಪ್ರಸ್ತುತ ಪ್ರಾಪರ್ಟಿ ಕಾರ್ಡ್ ಮಾಡುವ ಪ್ರಕ್ರಿಯೆ ಮುಂದುವರಿದಿದೆಯಾದರೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸಮಸ್ಯೆಗಳ ಗೂಡಾಗಿದೆ.
ಅವ್ಯವಸ್ಥೆಯ ಆಗರ
ಸರಕಾರದ ನಿರಾಸಕ್ತಿ ಹಾಗೂ ಕಾರ್ಯ ನಿರ್ವಹಣೆಯ ಮೇಲಿನ ನಿಗಾ ಕೊರತೆಯಿಂದಾಗಿ ಇಡೀ ಪ್ರಾಪರ್ಟಿ ಕಾರ್ಡ್ ವ್ಯವಸ್ಥೆಯ ಅನುಷ್ಠಾನದಲ್ಲಿ ಬಹಳಷ್ಟು ಅವ್ಯವಸ್ಥೆಗಳು ತಲೆದೋರಿವೆ. ಪ್ರಾಪರ್ಟಿ ಕಾರ್ಡ್ ವ್ಯಾಪ್ತಿಗೆ 36 ಗ್ರಾಮಗಳು ಬರುತ್ತಿದ್ದು 30 ಸೆಕ್ಟರ್‌ಗಳಿವೆ. ಅಳತೆ ಹಾಗೂ ಪರಿಶೀಲನೆಗೆ ಸುಮಾರು 30 ಸರ್ವೇಯರ್‌ಗಳು ಅವಶ್ಯವಿದ್ದು ಪ್ರಸ್ತುತ ಇಲ್ಲಿರುವುದು 10 ಸರ್ವೇಯರ್‌ಗಳು. ಸುಮಾರು 40 ಕಂಪ್ಯೂಟರ್‌ಗಳು ಅವಶ್ಯವಿದ್ದು, 20 ಕಂಪ್ಯೂಟರ್‌ಗಳು ಮಾತ್ರ ಇವೆ. ಈ ಹಿಂದೆ ಇಲ್ಲಿದ್ದ ಸಾರ್ವಜನಿಕ ಮಾಹಿತಿ ಕೇಂದ್ರ ಇದೀಗ ಮಾಯ ವಾಗಿದ್ದು, ಸಾರ್ವಜನಿಕರು ಕಾರ್ಡ್ ಬಗ್ಗೆ ಮಾಹಿತಿ, ವಿಚಾರಣೆ ಬಗ್ಗೆ ಮೇಜುಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ.
ಮೂಲ ಸೌಲಭ್ಯ ಕೊರತೆ
ಕಚೇರಿಗೆ ದೂರವಾಣಿ ಸಂಪರ್ಕ ಇಲ್ಲದ ಕಾರಣ ಸಾರ್ವಜನಿಕರು ಸಿಬಂದಿ ವೈಯುಕ್ತಿಕ ಮೊಬೈಲ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾದ ಸ್ಥಿತಿ ಇದೆ. ಇದಲ್ಲದೆ ಸಾರ್ವಜನಿಕರಿಂದ ಸಂಗ್ರಹಿಸಿದ ದಾಖಲೆ ಪತ್ರಗಳ ಸಂಗ್ರಹ ವ್ಯವಸ್ಥೆ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಪ್ರಸ್ತುತ ಇರುವ ದಾಖಲೆ ಸಂಗ್ರಹ ಕೊಠಡಿಯಲ್ಲಿ ದಾಖಲೆ ಪತ್ರಗಳನ್ನು ಡಂಪ್ ಮಾಡಲಾಗಿದೆ. ವ್ಯವಸ್ಥಿತವಾಗಿ ಸೆಕ್ಟರ್‌ವಾರು ಜೋಡಿಸಿದ ಕಾರಣ ಪ್ರಾಪರ್ಟಿ ಕಾರ್ಡ್ ತಯಾರಿ ಸಂದರ್ಭದಲ್ಲಿ ಈ ದಾಖಲೆ ಪತ್ರಗಳನ್ನು ಹುಡುಕುವುದೇ ದುಸ್ತರವಾಗಿದ್ದು ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇನ್ನೊಂದೆಡೆ ಸರ್ವರ್ ಸಮಸ್ಯೆಯಿಂದಾಗಿ ಪ್ರಾಪರ್ಟಿ ಕಾರ್ಡ್‌ಗಳ ಸಿದ್ಧಪಡಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ನಡುವೆ ಕೆಲವು ಮಧ್ಯವರ್ತಿಗಳು ಹಾವಳಿ ಯಿಂದಾಗಿ ನೇರವಾಗಿ ಕಚೇರಿಯಲ್ಲಿ ಕಾರ್ಡ್ ಮಾಡಿಸುವರು ಸಮಸ್ಯೆ ಎದುರಿಸಬೇಕಾಗಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.
ಸರಕಾರದ ಆದೇಶದ ಪ್ರಕಾರ ಯೋಜನೆಯನ್ನು ಮುಂದೂಡಿಕೆ ಮಾಡಲಾಗಿದೆ ಹೊರತು ಕೈಬಿಟ್ಟಿಲ್ಲ. ಇದೇ ವೇಳೆ ನಗರದಲ್ಲಿ ಮುಂದಿನ ದಿನಗಳಲ್ಲಿ ಪ್ರಾಪರ್ಟಿ ಕಾರ್ಡ್ ಆಸ್ತಿ ನೋಂದಣಿಗೆ ಮತ್ತೇ ಕಡ್ಡಾಯವಾಗಲಿದೆಯೇ ಅಥವಾ ಕೈಬಿಡಲಿದೆಯೇ ಎಂಬ ಬಗ್ಗೆಯೂ ಸ್ವಷ್ಟ ನಿಲುವು ವ್ಯಕ್ತಪಡಿಸಿಲ್ಲ. ಇದರಿಂದಾಗಿ ಪ್ರಸ್ತುತ ಪ್ರಾಪರ್ಟಿ ಕಾರ್ಡ್ ಪ್ರಕ್ರಿಯೆ ಗಣನೀಯ ಕುಸಿದಿದೆ.
ದಿನವೊಂದಕ್ಕೆ ಸರಾಸರಿ 8ರಿಂದ 10 ಅರ್ಜಿಗಳು ಮಾತ್ರ ಬರುತ್ತಿವೆ. ಕಾರ್ಡ್ ಕಡ್ಡಾಯ ನಿಯಮದ ಅನುಷ್ಠಾನದಲ್ಲಿದ್ದ ಅವಧಿಯಲ್ಲಿ ದಿನವೊಂದಕ್ಕೆ ಸುಮಾರು 250 ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದರೆ ಇದೀಗ ಇದರ ಸಂಖ್ಯೆ ದಿನೊಂದಕ್ಕೆ ಸರಾಸರಿ 25ಕ್ಕೆ ಕುಸಿದಿದೆ. ಮಂಗಳೂರು ನಗರದಲ್ಲಿ ಆಸ್ತಿಗಳ ಸಂಖ್ಯೆ 2 ಲಕ್ಷ ಇದ್ದು ಪ್ರಸ್ತುತ 67,000 ಕರಡು ಪ್ರಾಪರ್ಟಿಗಳನ್ನು ಸಿದ್ಧಪಡಿಸಲಾಗಿದ್ದು 50,000 ಕಾರ್ಡ್‌ಗಳು ಅಂತಿಮಗೊಂಡಿವೆ.
ಗೊಂದಲದ ಸ್ಥಿತಿ
ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವಾದ ಬಳಿಕ ಒಟ್ಟು ಇದು 4 ಬಾರಿ ಜಾರಿ ಮತ್ತು ಮುಂದೂಡಿಕೆ ಕಂಡಿದೆ. ಸರಕಾರ ಕಡ್ಡಾಯ ಮಾಡಿದ ಸಂದರ್ಭದಲ್ಲೆಲ್ಲ ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಭಾರೀ ಜನಸಂದಣಿ ಕಂಡು ಬಂದಿತ್ತು. ಪರಿಣಾಮ ಮೂಲಸೌಕರ್ಯಗಳು ಕೊರತೆ ತಲೆದೋರಿ ಪ್ರಕ್ರಿಯೆಲ್ಲಿ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿ ಬಂದಿತ್ತು. ಇದೇ ಕಾರಣಕ್ಕೆ ನಗರದಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಗೊಳಿಸಿರುವುದಕ್ಕೆ ಮುಂದಿನ ಆದೇಶದವರೆಗೆ ವಿನಾಯತಿ ನೀಡಲಾಗಿದೆ ಎಂದು 2019 ರ ಅ. 11ಕ್ಕೆ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿಯವರು (ಭೂಮಿ, ಯುಪಿಓಆರ್ ಹಾಗೂ ಮುಜರಾಯಿ ಇಲಾಖಾ) ಎಂಬ ಆದೇಶವನ್ನು ಹೊರಡಿಸಿದ್ದರು. ಮುಂದೂಡಿಕೆ ಆದೇಶ ಹೊರಬಿದ್ದು ಸುಮಾರು ಒಂದೂವರೆ ವರ್ಷ ಕಳೆದಿದ್ದು ಮುಂದಿನ ಕ್ರಮಗಳ ಬಗ್ಗೆ ಸರಕಾರದ ಕಡೆಯಿಂದ ಯಾವುದೇ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.
ಪ್ರಕ್ರಿಯೆಗೆ ವೇಗ ನೀಡಲಾಗುವುದು
ಸರಕಾರದ ವಿವಿಧ ಕಾರ್ಯಕ್ರಮಗಳು ಚಾಲನೆಯಲ್ಲಿರುವುದರಿಂದ ಸರ್ವೇಯರ್‌ಗಳು ಅವುಗಳಿಗೆ ನಿಯೋಜನೆಗೊಂಡಿದ್ದಾರೆ. ಅದುದರಿಂದ ಪ್ರಾಪರ್ಟಿ ಕಾರ್ಡ್ ಸರ್ವೇಗೆ ಸರ್ವೇಯರ್‌ಗಳ ಲಭ್ಯತೆ ಕಡಿಮೆ ಇದೆ. ಪ್ರಾಪರ್ಟಿ ಕಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಸುಮಾರು ಶೇ. 50ರಷ್ಟು ಕರಡು ಕಾರ್ಡ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರಕ್ರಿಯೆಗೆ ವೇಗ ನೀಡಿ ಜನರಿಗೆ ವ್ಯವಸ್ಥಿತವಾಗಿ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ.
– ನಿರಂಜನ್, ಭೂಮಾಪನ ಇಲಾಖೆಯ ಉಪನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.