ಪಾಳುಬಿದ್ದ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಹೊಸ ಕಳೆ
ಎಕ್ಸ್‌ಪ್ರೆಸ್ ರೈಲು ನಿಲುಗಡೆಗೂ ಜನರ ಒತ್ತಾಯ! ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್ ಸೇರಿ ಸ್ಕೈವಾಕ್ ನಿರ್ಮಾಣ
Team Udayavani, Mar 17, 2021, 8:07 PM IST
ಬಳ್ಳಾರಿ: ಅಕ್ರಮ ಚಟುವಟಿಕೆಗಳ ಆವಾಸ ಸ್ಥಾನವಾಗಿದ್ದ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಕೊನೆಗೂ ಅಭಿವೃದ್ಧಿಪಡಿಸಲಾಗಿದೆ.
ಕಳೆದ ಎರಡು ದಶಕಗಳಿಂದ ಪಾಳುಬಿದ್ದ ಕೊಂಪೆಯಂತಾಗಿದ್ದ ಈ ರೈಲು ನಿಲ್ದಾಣ ಫ್ಲಾಟ್‌ಫಾರ್ಮ್, ಸ್ಕೈವಾಕ್ ಸುಣ್ಣಬಣ್ಣಗಳಿಂದ ಕಂಗೊಳಿಸುತ್ತಿದ್ದು ಪ್ರಯಾಣಿಕರ ಬಳಕೆಗೆ ಅಣಿಯಾಗಲಿದೆ. ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಪ್ರಯಾಣಿಕರಿಗೆ ಟಿಕೆಟ್ ವಿತರಿಸಲು ಸಿಬ್ಬಂದಿಯೊಬ್ಬರನ್ನು ನಿಯೋಜಿಸಿದ್ದರೂ, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ನಿಲ್ದಾಣದಲ್ಲಿ ಎಲ್ಲೆಡೆ ಮುಳ್ಳುಕಂಟಿಗಳು ಬೆಳೆದಿದ್ದವು. ಪರಿಣಾಮ ಸ್ಥಳೀಯ ನಿವಾಸಿಗಳ ನಿತ್ಯ ಕರ್ಮಗಳಿಗೆ ಬಳಕೆಯಾಗುತ್ತಿತ್ತು. ರಾತ್ರಿ ವೇಳೆಯಲ್ಲಿ ಮದ್ಯವ್ಯಸನಿಗಳಿಗೆ ಮದ್ಯ ಸೇವಿಸುವ ಆವಾಸ ಸ್ಥಾನವಾಗಿತ್ತು. ಈ ನಿಲ್ದಾಣದ ಹಿನ್ನೆಲೆ, ಅವಶ್ಯಕತೆಯನ್ನು ಅರಿತಿದ್ದ ಸ್ಥಳೀಯ ನಿವೃತ್ತ ನೌಕರರೊಬ್ಬರು ಹಲವು ಬಾರಿ ರೈಲ್ವೆ ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯದ ಹಲವು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿರುವ ರೈಲ್ವೆ ಇಲಾಖೆ, ಬಳ್ಳಾರಿಯ ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸುತ್ತಿರುವುದು ನಗರದ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.
ನಿಲ್ದಾಣದಲ್ಲಿ ಏನೇನು ನಿರ್ಮಿಸಲಾಗಿದೆ: ಕಂಟೋನ್ಮೆಂಟ್ ರೈಲು ನಿಲ್ದಾಣದ ಮೂಲ ಕಟ್ಟಡವನ್ನು ಮರು ನಿರ್ಮಿಸಲಾಗಿದೆ. ಕಂಟೋನ್ಮೆಂಟ್ ರೈಲ್ವೆ ಗೇಟ್‌ನಿಂದ ಹಿಡಿದು ಸುಧಾಕ್ರಾಸ್ ರೈಲ್ವೆ ಗೇಟ್ ವರೆಗೆ ಎರಡು ಬದಿ ಪ್ಲಾಟ್‌ಫಾಮ್‌ಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಎರಡೂ ಫ್ಲಾಟ್‌ಫಾಮ್‌ಗಳಲ್ಲಿ ಮೇಲ್ಛಾವಣಿ ನಿರ್ಮಿಸಿ ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ಒಂದು ಫ್ಲಾಟ್‌ಫಾಮ್‌ನಿಂದ ಮತ್ತೂಂದು ಫ್ಲಾಟ್‌ಫಾರ್ಮ್ ಗೆ ರೈಲ್ವೆ ಹಳಿಗಳ ಮೇಲೆ ಹೋಗದಂತೆ ಸ್ಕೈವಾಕ್‌ನ್ನು ನಿರ್ಮಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ನಿಲ್ದಾಣವನ್ನು ಸಹ ನಿರ್ಮಿಸಲಾಗಿದೆ.
ಎಲ್ಲ ವಿಧದ ರೈಲುಗಳು ನಿಲುಗಡೆ: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ 1993-94ರವರೆಗೆ ಪ್ಯಾಸೆಂಜರ್ ಸೇರಿ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಯಾಗುತ್ತಿದ್ದವು. ನಂತರ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯನ್ನು ರದ್ದುಗೊಳಿಸಿ ಕೇವಲ ಪ್ಯಾಸೆಂಜರ್ ರೈಲು ನಿಲುಗಡೆಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಪರಿಣಾಮ ಅಂದಿನಿಂದ ಹೊಸಪೇಟೆ-ಬೆಂಗಳೂರು, ಹುಬ್ಬಳ್ಳಿ-ಬಳ್ಳಾರಿ, ಹುಬ್ಬಳ್ಳಿ-ತಿರುಪತಿ, ವಿಜಯವಾಡ-ಹುಬ್ಬಳ್ಳಿ ಈ ಪ್ಯಾಸೆಂಜರ್ ರೈಲುಗಳು ಮಾತ್ರ ಇಲ್ಲಿ ನಿಲುಗಡೆಯಾಗುತ್ತಿದ್ದವು. ಬಳ್ಳಾರಿ ನಗರದ ಸಾಕಷ್ಟು ವಿಸ್ತಾರಗೊಂಡಿರುವುದರಿಂದ ಪ್ಯಾಸೆಂಜರ್ ರೈಲಿಗೆ ಬಂದ ಆ ಭಾಗದವರು, ಅಲ್ಲಿಯೇ ಇಳಿಯುತ್ತಿದ್ದರು. ಆದರೆ ಎಕ್ಸ್‌ಪ್ರೆಸ್ ರೈಲಲ್ಲಿ ಬಂದ ಪ್ರಯಾಣಿಕರು ಮುಖ್ಯ ರೈಲು ನಿಲ್ದಾಣಕ್ಕೆ ಬರುವುದು ಅನಿವಾರ್ಯವಾಗುತ್ತಿತ್ತು. ಇದೀಗ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಎಲ್ಲ ಪ್ಯಾಸೆಂಜರ್, ಎಕ್ಸ್‌ಪ್ರೆಸ್ ಎಲ್ಲ ವಿಧದ ರೈಲುಗಳಿಗೂ ನಿಲುಗಡೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎನ್ನುತ್ತಾರೆ ರೈಲ್ವೆ ಇಲಾಖೆ ನೌಕರರ ಪ್ರವೀಣ್.
ಕಂಟೋನ್ಮೆಂಟ್‌ಗೆ ನಿಲ್ದಾಣ, ನಿಲುಗಡೆ ಅಗತ್ಯವಿದೆ: ಬಳ್ಳಾರಿ ನಗರ ದಿನೇದಿನೆ ವಿಸ್ತಾರಗೊಳ್ಳುತ್ತಿದೆ. ಬಳ್ಳಾರಿ ಮುಖ್ಯ ರೈಲು ನಿಲ್ದಾಣದಿಂದ ಕುವೆಂಪುನಗರ, ವಿನಾಯಕನಗರ, ವಿಎಸ್‌ಕೆ ವಿವಿ, ಗೌತಮ್‌ನಗರ, ಟಿಬಿ ಸ್ಯಾನಿಟೋರಿಯಂ ಪ್ರದೇಶದ ಸೇರಿ ಇನ್ನಿತರೆ ಏರಿಯಾ, ಬಡಾವಣೆಗಳು ಸುಮಾರು 6-7 ಕಿಮೀ ದೂರವಾಗಲಿವೆ. ಮುಖ್ಯ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ವಾಪಸ್ ತೆರಳಲು ಆಟೋಗಳಿಗೂ ದುಬಾರಿ ಬಾಡಿಗೆ ತೆತ್ತಬೇಕಾಗಲಿದೆ. ಮೇಲಾಗಿ ಕಂಟೋನ್ಮೆಂಟ್, ಕೌಲ್‌ಬಜಾರ್ ಪ್ರದೇಶದಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಓಪಿಡಿ, 2 ಇಂಜಿನಿಯರಿಂಗ್ ಕಾಲೇಜು, ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ, ತುರ್ತು ಚಿಕಿತ್ಸಾ ವಿಭಾಗ ಟ್ರೋಮಾಕೇರ್ ಸೆಂಟರ್, ಎನ್‌ಸಿಸಿ (ಕರ್ನಾಟಕ 34 ಬೆಟಾಲಿಯನ್) ಸೇರಿ ಹಲವು ಪ್ರಮುಖ ಸಂಸ್ಥೆಗಳು ಇವೆ.
ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಎಲ್ಲ ವಿಧದ ರೈಲುಗಳು ನಿಲುಗಡೆಯಾದಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳು, ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರಿಗೂ ತುಂಬಾ ಅನುಕೂಲವಾಗಲಿದೆ. ಹೀಗಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿರುವ ರೈಲ್ವೆ ಇಲಾಖೆಯವರು ಅಲ್ಲಿ ಎಲ್ಲ ವಿಧದ ರೈಲುಗಳನ್ನು ನಿಲ್ಲಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯ ನಿವಾಸಿಗಳದ್ದಾಗಿದೆ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.