ಕೌಟುಂಬಿಕ ವ್ಯವಸ್ಥೆಯ ಅಳಿವು ಉಳಿವು ಯುವ ಜನಾಂಗದ ಕೈಯಲ್ಲಿದೆ
Team Udayavani, Mar 31, 2021, 8:10 PM IST
ಈ ಪ್ರಪಂಚದಲ್ಲಿಯೇ ಅದ್ಭುತ ಬುದ್ಧಿಶಕ್ತಿ ಹೊಂದಿರುವ ಏಕೈಕ ಜೀವಿ ಮಾನವ.
ತಾನು ಬಯಸಿದ್ದು, ಬೇಡಿದ್ದು ಪಡೆಯುವ ಹಠ ತೊಟ್ಟಿದ್ದು ನನ್ನದಾಗಬೇಕೆಂದು. ಸಾಧಿಸುವ ಛಲ ಸರಿಗಟ್ಟಲು ಬೇರಾರಿಂದಲೂ ಸಾಧ್ಯವಿಲ್ಲ. ಮನುಷ್ಯನ ಜೀವನದ ನಾಲ್ಕು ಹಂತಗಳು ಬಾಲ್ಯ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ. ಈ ಜೀವನ ಪದ್ಧತಿಯನ್ನು ಅನುಸರಿಸಬೇಕೆಂಬ ಚಿಂತನೆ ಬಹಳ ಹಳೆಯದು.
ಇಂದಿನ ಜೀವನಶೈಲಿಯಲ್ಲಿ ವೃದ್ಯಾಪ್ಯ ಎಂಬುವುದು ಒಂದು ಶಾಪ!. ವಿಚಿತ್ರವೆಂದರೆ ತನ್ನ ಮಕ್ಕಳನ್ನು ಹೊತ್ತು ಹೆತ್ತು, ಬೆಳೆಸಿ ಪೋಷಿಸಿ ಲಾಲಿಸಿದ ತಂದೆ-ತಾಯಿ ಇಂದು ಬೀದಿ ಪಾಲಾಗುತ್ತಿರುವುದು ಕಟು ಸತ್ಯ. ತನ್ನ ಮುದ್ದಿನ ಮಕ್ಕಳಿಗೆ ಬೇಡದ ಹೊರೆಯಾಗಿ ಒಳಗಿದ್ದು ಹೊರಗಿನವರಾಗಿ ಅಥವಾ ಮನೆಮನದಿಂದ ದೂರವಾಗಿ ಬಾಳುವ ದುಸ್ಥಿತಿ ಯಾರಿಗೂ ಬರಬಾರದು. ಇಂದಿನ ಸಮಾಜಕ್ಕೆ ಇಂತಹ ಬದುಕೊಂದು ಕಪ್ಪುಚುಕ್ಕೆಯೆಂದರೆ ಅತಿಶಯೋಕ್ತಿಯಲ್ಲ. ಇದರ ಬಗ್ಗೆ ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದಿರುವ ಮಂದಿ ಚಿಂತಿಸಬೇಕಾದದ್ದು ತೀರಾ ಅಗತ್ಯ.
ಯೌವನದಲ್ಲಿ ಅಧಿಕಾರ, ಧನ-ಕನಕಾದಿಗಳು, ನೆರೆಕರೆಯವರು, ನೆಂಟರಿಷ್ಟರು, ಬಂಧು-ಬಾಧವರು, ಪತಿ, ಪತ್ನಿ, ಮಕ್ಕಳು ಎಲ್ಲರೂ ನಮ್ಮನ್ನು ಓಲೈಸುವವರು ಎಂದರೆ ತಪ್ಪಲ್ಲ. ಆದರೆ ಮುಂದೊಂದುದ ದಿನ ನಮ್ಮಲ್ಲಿ ಹರಿಯುವ ಬಿಸಿ ನೆತ್ತರು ತಣಿಯುತಿದ್ದಂತೆ ನಿಧಾನವಾಗಿ ನಮ್ಮ ಸುತ್ತಮುತ್ತಲಿನಿಂದ ಬರುವ ಪ್ರತಿಕ್ರಿಯೆಗಳು ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಮುಪ್ಪಿನೆಡೆಗೆ ಅನಿವಾರ್ಯವಾಗಿ ಸಾಗಿಸುತ್ತವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.
ಒಂದೊಮ್ಮೆ ಕೂಡು ಕುಟುಂಬ ಎಂದರೆ ಅವಿಭಕ್ತ ಕುಟುಂಬವಾಗಿದ್ದ ನಮ್ಮ ಮನೆತನಗಳು ಇಂದು ಒಡೆದ ಕನ್ನಡಿಯಾಗಿದೆ. ಆಧುನಿಕತೆ ಕುಟುಂಬ ವಿಭಜನೆಯಾಗಿ ವಿಭಕ್ತ ಕುಟುಂಬ ವ್ಯವಸ್ಥೆಗೆ ಕಾರಣವಾಗಿದೆ. ಮುಂದೊಂದು ದಿನ ಮನೆಯಲ್ಲಿ ನಾವು ಒಬ್ಬಂಟಿಯಾಗಿ ಇರಬೇಕಾಗಬಹುದು. ಇದರಿಂದ ಮೈಕ್ರೋ ಕುಟುಂಬಕ್ಕೆ ಹೊಸ ಅರ್ಥ ಬರುವುದು ಖಂಡಿತ. ಇದಕ್ಕೆ ಬೇರಾರು ಕಾರಣರಲ್ಲ ನಾವೇ ಹೊಣೆಗಾರರು. ಎಷ್ಟು ವಿಚಿತ್ರ ಸಂಬಂಧಗಳು ಆಂಟಿ, ಅಂಕಲ್ ಎಂದು ತನ್ನ ಸಂಬಂಧಿಕರನ್ನು ಕೆಲಸದವರನ್ನೂ ಏಕ ಪದದಲ್ಲಿ ಕರೆದುಕೊಳ್ಳುವ ನಮ್ಮ ಕುಟುಂಬಜೀವನ ವಿಷಮ ಸ್ಥಿತಿಯನ್ನು ತಲುಪಿದೆ. ಅಳಿವು ಉಳಿವಿನ ವ್ಯವಸ್ಥೆ ಇಂದಿನ ಯುವ ಜನಾಂಗದ ಕೈಯಲಿದೆ ಎಂದರೆ ಆಶ್ಚರ್ಯವಲ್ಲ.
ಆದರೆ ಕಾಲದ ಕೈವಶವಾದ ನಾವು ಏನು ಮಾಡಬಲ್ಲೆಂಬುದರ ಬಗ್ಗೆ ತಲೆಮೇಲೆ ಕೈ ಹೊತ್ತು ಕುಳಿತು ಕೊಳ್ಳುವ ಕ್ಷಣ ನಮಗೆ ಬರಲೇಬಾರದು. ಅದಕ್ಕಾಗಿ ಕೂಡುಕುಟುಂಬಗಳಿಗೆ ಕೊಡಲಿ ಏಟನ್ನು ನೀಡಿದ ಪಾಶ್ಚಾತ್ಯ ಸಂಸ್ಕೃತಿ, ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆ, ಔದ್ಯೋಗಿಕ ಹಾಗೂ ಆರ್ಥಿಕ ಪ್ರಗತಿಗಳು ಸಂಸಾರಿಕ ಸುಖದ ಕಲ್ಪನೆಯನ್ನು ನುಂಗಿ ಹಾಕಿವೆ. ಭಾವನಾತ್ಮಕವಾಗಿ ಯುವ ಜನಾಂಗದವರು ಬೇರೆಯಾಗುತ್ತಿದ್ದಾರೆ ಎಂದರೆ ತಪ್ಪಿಲ್ಲ. ನಮ್ಮ ಹಿರಿಯರ ಭಾವನೆ, ನೋವು-ನಲಿವು, ಅನಿಸಿಕೆ, ಬೇಡಿಕೆಯ ಬಗ್ಗೆ ತಾಳ್ಮೆಯಿಂದ ಕೇಳಿಸಿಕೊಳ್ಳಲು ನಮಗೆ ಸಮಯವೆಲ್ಲಿದೆ?. ಈ ಹೊಂದಾಣಿಕೆ ಶಿಥಿಲಗೊಂಡು ನಮ್ಮ ಸಮಾಜದ ವಯೋವೃದ್ಧರನ್ನು ಹಳೆ ಪೀಠೊಪಕರಣಗಳ ಸಾಲಿಗೆ ತಳ್ಳಿದೆ ಎಂಬುದು ಸತ್ಯ. ಜನರೇಷನ್ ಗ್ಯಾಪ್, ಅಂತಸ್ತು, ಪ್ರತಿಷ್ಠೆ, ಜೀವನಶೈಲಿ, ಸಾಮಾನ್ಯ ಜ್ಞಾನ ಎಂದು ಕರೆಯಲ್ಪಡುವ ಸಣ್ಣ ಪುಟ್ಟ ಕಾರಣಗಳು ಮನೆಗಳನ್ನು ಕೆಡಿಸುತ್ತಿದೆ. ತಂದೆತಾಯಿಗಳ ಜತೆಗೂಡಿ ಆಡುತ್ತಿದ್ದ ಮಕ್ಕಳು ಅಜ್ಜ ಅಜ್ಜಿಯರ ಮಡಿಲಲ್ಲಿ ನಿದ್ರಿಸುತ್ತಿದ್ದ ಮೊಮ್ಮಕ್ಕಳು ಇಂದು ಬೆಳಗ್ಗಿನಿಂದ ರಾತ್ರಿಯತನಕ ಶಾಲಾ ಶಿಕ್ಷಣ, ಟಿವಿ, ಮೊಬೈಲ್ ಫೇಸ್‌ಬುಕ್ ಮೆಸೇಜ್, ವಾಟ್ಸಾಪ್, ಇಂಟರ್‌ನೆಟ್‌ಗಳಲ್ಲಿ ಕರಗಿ ಹೋಗುತ್ತಿದ್ದಾರೆ.. ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.
ನಾವು ಇವುಗಳ ದಾಸರಾಗುತ್ತಿದ್ದೇವೆ. ಎಳವಯಸ್ಸಿನಲ್ಲಿ ನಮ್ಮ ಲಾಲನೆ-ಪಾಲನೆ ಸ್ನಾನ, ಶೌಚಾದಿಗಳನ್ನು ಮಾಡಿಸಿ ನಮ್ಮನ್ನುದ್ಧರಿಸಿದ ಹಿರಿಯ ಚೇತನಗಳ ಜತೆ ಅರ್ಧಗಂಟೆ ಮಾತನಾಡುವ ಸಮಯ ನಮ್ಮಲ್ಲಿಲ್ಲ. ಸದಾ ಟೆನ್ಶನ್, ಕಿರಿಯರಾದ ನಾವು ಹಿರಿಯರ ಜತೆ ನಗುಮೊಗದಿಂದ ಮಾತನಾಡಲು ಹಿಂಜರಿಯುತ್ತೇವೆ. ಯಾಕೆ ಹೀಗೆ?. ಇದರ ಪ್ರಭಾವ ಯಾರ ಮೇಲಾದೀತು?. ತನ್ನ ಮನದ ಚಿಂತೆ, ನೋವು, ಖುಷಿಗಳನ್ನು ಹೇಳಿಕೊಳ್ಳಲಾಗದೆ ನಮ್ಮ ಹಿರಿಯರು ಸಂಕಟಪಡುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ದೈಹಿಕ ಅನಾರೋಗ್ಯ ಕಾಡುತ್ತಿರುವ ಇವರು ಅಪ್ರಯೋಜಕರು ಎಂಬ ಹಣೆಪಟ್ಟಿಯೊಂದಿಗೆ ದೂರವಿಡುವ ಮಕ್ಕಳಿಗೆ ಮುಂದೊಂದು ದಿನ ತಾವು ವಯೋವೃದ್ಧರಾಗಿ ಬದುಕಿನಲ್ಲಿ ತಾವು ನಡೆದು ಬಂದ ರೀತಿ ತಮಗಾಗುತ್ತಿರುವ ಅನುಭವಗಳ ಕಹಿಸತ್ಯ ಅರಿವಾಗಲು ಬಹಳ ಸಮಯಬೇಕಾಗಲಾರದು. ಹಿರಿಯರ ಸೇವೆಯ ಭಾಗ್ಯ ಎಲ್ಲರಿಗೆ ದಕ್ಕದು. ಅವು ನಮ್ಮ ಮಕ್ಕಳಿಗೆ ದಾರಿದೀಪ. ನಮ್ಮ ಹಿರಿಯರ ಜತೆಯ ಪ್ರತಿವರ್ತನೆ ನಮ್ಮ ಮಕ್ಕಳಿಂದ ಪುನರಾವರ್ತನೆಗೊಳ್ಳುತ್ತದೆ ಎಂಬುದಂತೂ ಸತ್ಯ. ನಾವು ಹಿರಿಯರೊಂದಿಗೆ ನಡೆದುಕೊಳ್ಳುವ ಸಕರಾತ್ಮಕ ಮತ್ತು ನಕಾರಾತ್ಮಕ ವರ್ತನೆಗಳು ನಮ್ಮ ಮುಂದಿನ ಬದುಕಿನಲ್ಲಿ ಪರಿಣಾಮ ಬೀರಬಹುದೆನ್ನುವ ಭಯದಿಂದಾದರೂ ನಾವು ಹಿರಿಯರನ್ನು ಪ್ರೀತಿಸೋಣ.
ಹಿರಿಯ ಜೀವಗಳ ಬದುಕಿನ ಹಂತಗಳ ಬಗ್ಗೆ ನಾವು ಸ್ವಲ್ಪ ತಿಳಿದುಕೊಂಡರೆ ಒಳ್ಳೆಯದು. 70 ರಿಂದ 80ರ ವಯೋಮಾನ ಅತೀ ತೀವ್ರ ಪೂರ್ಣ ಪರಾವಲಂಬಿಗಳು. ಹಾಸಿಗೆ ಹಿಡಿದ ಸ್ಥಿತಿಯ ಇವರು ತಮ್ಮ ನಿತ್ಯ ಕರ್ಮಗಳಿಂದ ಆಹಾರ ಸೇವನೆಗಳ ತನಕ ಅವಲಂಬಿತರು. ಇವರ ವರ್ತನೆಗಳು ವಯೋಮಾನಕ್ಕೆ ತಕ್ಕಂತೆ ಇರದೆ ಬಾಲಿಶವಾಗಿರಬಹುದು. 80ರಿಂದ ಮುಂದೆ ಅಥವಾ ಆಕಸ್ಮಿಕ ಘಟನೆಗಳಿಂದ ಇವರು ಇಂತಹ ತೀವ್ರ ಮಾನಸಿಕ ಆಘಾತ ಹಾಗೂ ದೈಹಿಕ ದುಸ್ಥಿತಿ ತಲುಪಿದ್ದಾರೆಂದು ಪೂರ್ವಾಗ್ರಹವಿಲ್ಲದೆ ತಿಳಿಯಬೇಕು. ಇವರ ಜತೆ ವಿಶೇಷವಾಗಿ ಪುಟ್ಟ ಮಕ್ಕಳೊಡನೆ ವರ್ತಿಸುವಂತೆ ನಾವು ವ್ಯವಹರಿಸಿ ನಗುಮುಖದಿಂದ ಅವರ ಸೇವೆಯಲ್ಲಿ ತೊಡಗಬೇಕು. ಕನಿಷ್ಠ ನಮ್ಮ ಹೆತ್ತವರನ್ನು ಬದುಕಿರುವಾಗ ಚೆನ್ನಾಗಿ ನೋಡಿಕೊಳ್ಳೋಣ. ಸತ್ತಮೇಲೆ ಸಾವಿರ ಮಂದಿಗೆ ಊಟ ಹಾಕಿ ಉಪಚಾರ ಮಾಡಿ ಭೇಷ್ ಅನ್ನಿಸಿಕೊಳ್ಳುದಕ್ಕಿಂತ ಬದುಕಿರುವಾಗ ನಗುನಗುತಾ ಬಾಳ್ಳೋಣ.
ತಾವು ಹೆತ್ತ ಮಕ್ಕಳನ್ನು ಬಾಲ್ಯದಲ್ಲಿ ಅಂಗನವಾಡಿಗೆ ಕಳಿಸುವಾಗ ಮಗು ಅಪ್ಪ ಅಮ್ಮ ಯಾವಾಗ ಬಂದು ಕರೆದುಕೊಂಡು ಹೋಗುವಿರಿ ಎಂಬ ಮಗುವಿನ ಮುಗ್ಧ ಮಾತಿಗೆ ಸಂಜೆ ಎನ್ನುವ ಹೆತ್ತವರು, ಕರುಳ ಕುಡಿಗಳ ಒತ್ತಡದಿಂದ ತಾವೇ ಕಟ್ಟಿದ ಮನೆಯಿಂದ ಹೊರ ಹೋಗಲೇಬೇಕಾದ ಪರಿಸ್ಥಿತಿ ಬಂದು ವೃದ್ಧಾಶ್ರಮ ಸೇರುವ ಹೊತ್ತಿಗೆ ಹೆತ್ತವರು ಕೇಳುವ ಇದೇ ಪ್ರಶ್ನೆಗೆ ಅವರ ಉತ್ತರಾಧಿಕಾರಿಗಳು ಯಾವುದೇ ಉತ್ತರವನ್ನು ನೀಡದೆ ಮೌನವಾಗಿ ಬಿಡುತ್ತಾರೆ. ಇಂಥವರಿಗೆ ಛೀಮಾರಿ ಹಾಕಲು ಪದಗಳೇ ಇಲ್ಲ. ಮಾನವೀಯತೆ ಎಲ್ಲಿದೆ? ಎಂಬ ಕಹಿಸತ್ಯ ನಮ್ಮನ್ನು ಪದೇಪದೇ ಕಾಡುತ್ತಿದೆ. ಅಲ್ಲವೇ?. ಈಗ ನಮಗೆ ವೃದ್ಧಾಶ್ರಮ ಬೇಕೇ? ಎಂಬ ಚಿಂತನೆಯನ್ನು ತಮ್ಮ ಚಿತ್ತಕ್ಕೆ ಬಿಟ್ಟು ನನ್ನ ಮಾತುಗಳನ್ನು ಸಂಪನ್ನಗೊಳಿಸುತ್ತೇನೆ.
ಷಣ್ಮುಖ. ಅತ್ರಿ. ಎಲ್., ಎಂಜಿಎಂ ಕಾಲೇಜು ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.