![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 4, 2021, 10:25 AM IST
ಬೆಂಗಳೂರು: ಪಾಲಿಕೆಯಲ್ಲಿ ಎರವಲು ಸೇವೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ನೇಮಕಾತಿ ಮತ್ತು ಸೇವಾ ಅವಧಿಯ ಬಗ್ಗೆ ವಿವಿಧ ನಿಯಮಗಳಿದ್ದು, ಈ ಗೊಂದಲಗಳಿಗೆ ತೆರೆ ಎಳೆಯಲು ಸರ್ಕಾರ ಮುಂದಾಗಿದೆ.
ಕರ್ನಾಟಕ ಸರ್ಕಾರದ ಸೇವಾ ನಿಯಮಗಳು (ಕೆಸಿಎಸ್‌ಆರ್), ಕೆಸಿಎಸ್‌ಆರ್ ನಿಯಮಗಳನ್ನು ಒಳಗೊಂಡಂತೆ ನಗರಾಭಿವೃದ್ಧಿ ಮತ್ತು ಪಾಲಿಕೆ 2011ರಲ್ಲಿ (ನಗರಾಭಿವೃದ್ಧಿ ನಿಯೋಜನಾ ನೀತಿ -2011) ರೂಪಿಸಿದ ಎರವಲು ಸೇವೆ ಮಾರ್ಗ ಸೂಚಿ ಹಾಗೂ ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮ -2020 ಇದೆ. ಈ ಮೂರು ಭಿನ್ನವಾದ ನಿಯಮಾವಳಿಗಳ ಮಾರ್ಗಸೂಚಿ ಮತ್ತು ಇವುಗಳನ್ನು ಅನುಷ್ಠಾನ ಮಾಡುವುದರಲ್ಲಿ ಗೊಂದ ಇರುವ ಹಿನ್ನೆಲೆಯಲ್ಲಿ ಒಂದು ನಿರ್ದಿಷ್ಟ ಎರವಲು ಸೇವಾ ಕರಡು ರೂಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.
ಕರ್ನಾಟಕ ಸರ್ಕಾರದ ಸೇವಾ ನಿಯಮ ಬಿಬಿಎಂಪಿಗೆ ಅನ್ವಯಿಸುತ್ತದೆ. ಇದರಲ್ಲಿ ಎಂಟು ವರ್ಷಗಳವರೆಗೆ ಸೇವೆ ಸಲ್ಲಿಸುವ ಅವಕಾಶ ಇದೆ. ಇನ್ನು ನಗರಾಭಿವೃದ್ಧಿ ಇಲಾಖೆಯ ಅನ್ವಯ ಮೂರು ವರ್ಷ ಇದೆ. ಈ ರೀತಿ ಒಂದೊಂದರಲ್ಲಿ ಒಂದು ರೀತಿ ಇರುವ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿ ಒಂದು ನಿರ್ದಿಷ್ಟ ಕರಡು ರೂಪಿಸುವು (ಮಾರ್ಗಸೂಚಿ)ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎರವಲು ಸೇವೆಯ ಆಧಾರದ ಮೇಲೆ ಅಧಿಕಾರಿಗಳ ನೇಮಕ ಅವಧಿಯ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿ ರಚನೆ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಇಷ್ಟರಲ್ಲೇ ಅಂತಿಮವಾಗುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರದ ಸೇವಾ ನಿಯಮ 50ರ ಅನ್ವಯ ಎರವಲು ಸೇವೆಯ ಆಧಾರದ ಮೇಲೆ ನೇಮಕಗೊಂಡ ಅಧಿಕಾರಿ ಗರಿಷ್ಠ ಮೂರು ವರ್ಷವಿದ್ದು, ಅವರ ಸೇವೆ ಅವಶ್ಯ ಮತ್ತು ಅತ್ಯತ್ತಮವಾಗಿದ್ದರೆ ಮತ್ತೂಂದು ವರ್ಷ ಮುಂದುವರಿಸಲು ಅವಕಾಶ ಇದೆ. ಗರಿಷ್ಠ ಮೂರು ವರ್ಷದ ಸೇವಾ ಅವಧಿ ಪೂರ್ಣಗೊಂಡ ಮೇಲೆ ಮಾತೃ ಇಲಾಖೆಗೆ ಹಿಂದಿರುಗಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಬೇಕು ಎಂಬ ಸೂಚನೆ ಇದೆ.
ನೇರ ನೇಮಕಾತಿ ಹುದ್ದೆಗಳ ಸಂಖ್ಯೆ ಹೆಚ್ಚಿಸಿಲ್ಲ: ಪಾಲಿಕೆ ಎರವಲು ಸೇವೆ ಆಧಾರದ ಮೇಲೆ ನೇಮಕವಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಅವಲಂಬನೆ ಆಗಿರುವುದಕ್ಕೆ ಪಾಲಿಕೆಯಲ್ಲಿ ನೇರ ನೇಮಕಾತಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ ಹಾಗೂ ನೇರ ನೇಮಕಾತಿಗೆ ಆದ್ಯತೆ ನೀಡದೆ ಇರುವುದೇ ಮುಖ್ಯ ಕಾರಣ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಾಲಿಕೆ ಅಧಿಕಾರಿಗಳು.
ಕಳೆದ ಹಲವು ವರ್ಷಗಳಿಂದ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಅಂದಿನ ಅಗತ್ಯತೆಗಿಂತ ಇಂದು ಅಧಿಕಾರಿ ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚು ಬೇಕಾಗಿದೆ. ಪಾಲಿಕೆಯ ಒಟ್ಟು ವಿಸೀರ್ಣವೂ ಹೆಚ್ಚಾಗಿದೆ. ಅಧಿಕಾರಿಗಳ ಕೊರತೆಯೂ ಇದೆ. ಈಗ ಏಕಾಏಕಿ ಎರವಲು ಸೇವೆಯಲ್ಲಿರುವವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲು ಆಗುವುದಿಲ್ಲ. ಹಂತ- ಹಂತವಾಗಿ ನೇರ ನೇಮ ಕಾತಿ ಹೆಚ್ಚಳ ಮತ್ತು ಎರವಲು ಸೇವೆ ಕಡಿತ ಮಾಡಬೇಕಿದೆ ಎಂದರು.
ಪಾಲಿಕೆಯಲ್ಲಿ 500ಕ್ಕೂ ಹೆಚ್ಚು ಎರವಲು ಸಿಬ್ಬಂದಿ: ಪಾಲಿಕೆಯಲ್ಲಿ ಎರವಲು ಸೇವೆ ಆಧಾರದ ಮೇಲೆ ಲೋಕೋಪಯೋಗಿ ಮತ್ತು ಇತರೆ ಇಲಾಖೆಯಿಂದ 89 ಜನ ಸಹಾಯಕ ಕಾರ್ಯನಿರ್ವಾಹಕರು, 162 ಜನ ಸಹಾಯಕ ಎಂಜಿನಿಯರ್, ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಆರು ಜನ, ಕಾರ್ಯಪಾಲಕ ಎಂಜಿನಿಯರ್ ಆಗಿ 35 ಜನ ಸೇರಿದಂತೆ ಲೆಕ್ಕ ಪತ್ರ ವಿಭಾಗ, ಹಣಕಾಸು ಹಾಗೂ ಆರೋಗ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಂದಾಜು 500ಕ್ಕೂ ಹೆಚ್ಚು ಸಿಬ್ಬಂದಿ ಎರವಲು ಸೇವೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೀದಿಗಿಳಿದಿದ್ದ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ: ಪಾಲಿಕೆಯಲ್ಲಿ ಎರವಲು ಸೇವೆಯ ಆಧಾರದ ಮೇಲೆ ನೇಮಕವಾಗುವ ಅಧಿಕಾರಿಗಳು 8ರಿಂದ 12 ವರ್ಷದವರೆಗೆ ಇರುವವರೂ ಇದ್ದಾರೆ. ಇದರಿಂದ ಮೂಲ ಪಾಲಿಕೆಯ ಅಧಿಕಾರಿಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಾವಳಿ -2020 ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದು ಆಗ್ರಹಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.