ಮನೆಗೇ ಬರಲಿದ್ದಾರೆ ಶಿಕ್ಷಕರು : ಹೊಸ ಮಾದರಿಯಲ್ಲಿ ವಿದ್ಯಾಗಮ ಜಾರಿ
Team Udayavani, Apr 6, 2021, 7:20 AM IST
ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಿದ್ಯಾಗಮ ಮತ್ತು ನೇರ ತರಗತಿಯನ್ನು ಸರಕಾರ ಸ್ಥಗಿತಗೊಳಿಸಿದ್ದರೂ ಮನೆ ಮನೆಗೆ ಭೇಟಿ ನೀಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಮೂಲಕ ವಿದ್ಯಾಗಮವನ್ನು ಹೊಸ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ, ಕ್ಲಸ್ಟರ್‌ಗಳ ಸಿಆರ್‌ಪಿಗಳಿಗೆ ಈ ಬಗ್ಗೆ ಜ್ಞಾಪನ ಪತ್ರ ಕಳುಹಿಸಿದ್ದಾರೆ. 1ರಿಂದ 5ನೇ ತರಗತಿಯ ಮಕ್ಕಳಿಗೆ ವಿದ್ಯಾಗಮದಂತೆ ಮನೆ ಮನೆಗೆ ಭೇಟಿ ನೀಡಿ, ಅಭ್ಯಾಸ ಹಾಳೆ ನೀಡಿ ಕಲಿಕೆಯ ಅವಲೋಕನ ನಡೆಸಬೇಕು. 6ರಿಂದ 9ನೇ ತರಗತಿಗಳಿಗೆ ಎ.28ರ ವರೆಗೆ ನೇರ ತರಗತಿ ಸ್ಥಗಿತಗೊಳಿಸಲಾಗಿದ್ದು, ಈ ಅವಧಿಯಲ್ಲಿ ಮಕ್ಕಳ ಜತೆಗೆ ನಿರಂತರ ಸಂಪರ್ಕದಲ್ಲಿರಬೇಕು. ಈ ಮೂಲಕ ಮಕ್ಕಳು ಕಲಿಕೆಯನ್ನು ಮುಂದುವರಿಸಲು ಪ್ರೇರೇಪಣೆ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಆಡಳಿತಾತ್ಮಕ ಕಾರ್ಯ
ಎಲ್ಲ ಶಿಕ್ಷಕರು ಕಡ್ಡಾಯವಾಗಿ ಬೆಳಗ್ಗೆ 10ರಿಂದ ಸಂಜೆ 4.30ರ ವರೆಗೆ ಶಾಲೆಯಲ್ಲಿ ಇರಬೇಕು. ರೂಪಣಾತ್ಮಕ ಮೌಲ್ಯಮಾಪನದ ಗ್ರೇಡ್‌ಗಳನ್ನು ನಿರ್ವಹಿಸಬೇಕು. ಶಾಲೆ ಗಳಲ್ಲಿರುವ ಅನಗತ್ಯ ವಸ್ತುಗಳ ವಿಲೇವಾರಿ ಮಾಡ ಬೇಕು. ಶಾಲಾವರಣ ಮತ್ತು ತರಗತಿ ಕೊಠಡಿ ಸ್ವತ್ಛತೆ ಕಾಪಾಡಬೇಕು. ಶಾಲಾ ತಪಾಸಣೆಗೆ ಬೇಕಾದ ದಾಖಲೆ ಸಿದ್ಧಪಡಿಸಬೇಕು. ಗ್ರಂಥಾಲಯದಲ್ಲಿ ಶಿಥಿಲವಾಗಿರುವ ಪುಸ್ತಕಗಳನ್ನು ತೆಗೆದುಹಾಕಿ, ಉಳಿದ ಪುಸ್ತಕಗಳನ್ನು ಸರಿಯಾಗಿ ಜೋಡಿಸುವುದರ ಸಹಿತ ಆಡಳಿತಾತ್ಮಕ ಕಾರ್ಯಗಳನ್ನು ಈ ಅವಧಿಯಲ್ಲಿ ಮುಗಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಶಿಕ್ಷಕರಲ್ಲಿ ಆತಂಕ
ಜ್ಞಾಪನ ಪತ್ರದ ಆಧಾರದಲ್ಲಿ ಗ್ರಾಮೀಣ ಭಾಗದ ಬಹುತೇಕ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಸಹ ಶಿಕ್ಷಕರನ್ನು ಮಕ್ಕಳ ಮನೆಗಳಿಗೆ, ವಠಾರಕ್ಕೆ ಕಳುಹಿಸಿ ಬೋಧನೆಗೆ ಸೂಚನೆ ನೀಡುತ್ತಿದ್ದಾರೆ. ಸರಕಾರ ಈ ಬಗ್ಗೆ ನಿರ್ದಿಷ್ಟ ಆದೇಶ ನೀಡಿಲ್ಲ ಎಂದರೂ ಮುಖ್ಯ ಶಿಕ್ಷಕರು ಒಪ್ಪುತ್ತಿಲ್ಲ, ಮನೆ ಮನೆಗೆ ಭೇಟಿ ನೀಡಲು ಹೇಳುತ್ತಿದ್ದಾರೆ ಎಂದು ಶಿಕ್ಷಕ ಸಮೂಹ ಕಳವಳ ವ್ಯಕ್ತಪಡಿಸಿದೆ.
ಕೋವಿಡ್ ಕಾರಣ ಸರಕಾರ ನೇರ ತರಗತಿಗಳನ್ನು ಸ್ಥಗಿತ ಮಾಡಿದೆ. ಶಿಕ್ಷಕರು ಯಾರು ಕೂಡ ತರಗತಿ ನಡೆಸುವುದಿಲ್ಲ ಎಂದು ಹೇಳಿಲ್ಲ. ಆದರೂ ಶಿಕ್ಷಕರಿಗೆ ಈ ರೀತಿ ಮಾಡುವುದು ಸರಿಯಲ್ಲ. ಈ ಹಿಂದೆ ಮಕ್ಕಳ ಜತೆಗೆ ನೇರ ಸಂಪರ್ಕದಿಂದ ಕೊರೊನಾ ಹೆಚ್ಚಿದ ಕಾರಣ ವಿದ್ಯಾಗಮ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಈಗ ಮತ್ತೆ ಅದನ್ನು ಜಾರಿಗೆ ತರುವುದು ಸರಿಯಲ್ಲ. ಜತೆಗೆ ಒಂದೊಂದು ಜಿಲ್ಲೆಗೆ ಒಂದೊಂದು ನೀತಿ ಎಂಬಂತಾಗಿದೆ. ಸರಕಾರ ತರಗತಿ, ವಿದ್ಯಾಗಮ ಸ್ಥಗಿತಗೊಳಿಸಲು ನೀಡಿದ ಆದೇಶಕ್ಕೆ ಬೆಲೆ ಇಲ್ಲವೇ ಎಂದು ಶಿಕ್ಷಕರು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.