ಹೊತ್ತಿ ಉರಿದ ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕ; ತನಿಖೆಗೆ ಜಿಲ್ಲಾಡಳಿತ ಸೂಚನೆ
Team Udayavani, Apr 6, 2021, 4:20 AM IST
ಮಹಾನಗರ: ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ರವಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಅಲ್ಲಿದ್ದ ಯಂತ್ರೋಪಕರಣಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ನಷ್ಟ-ಹಾನಿ ಸಂಭವಿಸಿದೆ. ಜತೆಗೆ, ಈ ಬೆಂಕಿ ಅವಘಡದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಿದೆ.
ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ರವಿವಾರ ರಾತ್ರಿ ಕಾಣಿಸಿಕೊಂಡ ಬೆಂಕಿ ಸೋಮವಾರ ಬೆಳಗ್ಗಿನ ಜಾವ 4 ಗಂಟೆಯವರೆಗೆ ಹೊತ್ತಿ ಉರಿದಿತ್ತು. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಈ ಹಿಂದೆಯೂ ಹಲವು ಸಲ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಬೆಂಕಿಗೆ ಶಾರ್ಟ್ ಸರ್ಕ್ನೂಟ್ ಕಾರಣವೇ? ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂಬ ಬಗ್ಗೆ ತಿಳಿಯಲು ತನಿಖೆಗೆ ಜಿಲ್ಲಾಡಳಿತ ಮುಂದಾಗಿದೆ.
ರವಿವಾರ ರಾತ್ರಿ ಸುಮಾರು 8.30ರ ವೇಳೆಗೆ ಈ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಆರಂಭವಾಗಿತ್ತು. ಹೊತ್ತು ಕಳೆದಂತೆ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತಲು ವ್ಯಾಪಿಸಿ ಸಾರ್ವಜನಿಕರಿಗೆ ಭೀತಿ ಉಂಟುಮಾಡಿತ್ತು. ಆ ಸಮಯಕ್ಕಾಗಲೇ ಸುತ್ತಮುತ್ತಲ ಮಂದಿ ಸ್ಥಳಕ್ಕೆ ಜಮಾಯಿಸಿದ್ದರು. ಬೆಂಕಿಯ ಜತೆ ದಟ್ಟವಾದ ಹೊಗೆಯಿಂದಾಗಿ ತುರ್ತು ಕಾರ್ಯಾಚರಣೆಗೆ ಸ್ವಲ್ಪ ಹಿನ್ನೆಡೆ ಉಂಟಾಗಿತ್ತು. ಆದರೂ ಸ್ಥಳೀಯರು ಮತ್ತು ಅಗ್ನಿಶಾಮಖ ಇಲಾಖೆ ಸಿಬಂದಿ ಬೆಂಕಿಗೆ ನೀರು ಹಾಯಿಸುವ ಮುಖೇನ ಬೆಂಕಿಯ ತೀವ್ರತೆ ಕಡಿಮೆ ಮಾಡಲು ಪ್ರಯತ್ನಿಸಿದರು.
ಸ್ಥಳೀಯ ಮನಪಾ ಸದಸ್ಯೆ ಸಂಗೀತ ನಾಯಕ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ರವಿವಾರ ರಾತ್ರಿ ಕಾಣಿಸಿಕೊಂಡ ಬೆಂಕಿಯ ತೀವ್ರತೆ ಸೋಮವಾರ ಬೆಳಗ್ಗಿನ ಜಾವ ಸುಮಾರು 4 ಗಂಟೆಯವರೆಗೂ ಇತ್ತು. ಜೇಸಿಬಿ, ಟ್ಯಾಂಕರ್, ಅಗ್ನಿಶಾಮಕ ದಳದ ಸಿಬಂದಿ, ಸಾರ್ವಜನಿಕರ ಸಹಕಾರದಿಂದ ಬೆಂಕಿ ಆರಿಸುವ ಕೆಲಸ ಸೋಮವಾರ ಬೆಳಗ್ಗೆವರೆಗೆ ಮುಂದುವರಿದಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಪಾಲಿಕೆ ಮೇಯರ್, ಆಯುಕ್ತರು ಸಹಿತ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ’ ಎಂದಿದ್ದಾರೆ.
ಯಂತ್ರಗಳೆಲ್ಲ ಬೆಂಕಿಗೆ ಆಹುತಿ
“ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವ ಉದ್ದೇಶಕ್ಕೆ ಸ್ಥಳದಲ್ಲಿ ಸುಮಾರು 14 ಬೃಹತ್ ಯಂತ್ರಗಳಿದ್ದವು. ಅದರಲ್ಲಿ ಬಹುತೇಕ ಯಂತ್ರಗಳು ಹೊಸತು. ಒಟ್ಟಾರೆ ಸುಮಾರು 60 ಲಕ್ಷ ರೂ.ಗೂ ಮಿಕ್ಕಿ ಬೆಲೆಯುಳ್ಳ ಯಂತ್ರ ಇವುಗಳಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಅವುಗಳೆಲ್ಲ ಸುಟ್ಟು ಹೋಗಿವೆ. ಇವುಗಳನ್ನು ಸರಿಪಡಿಸಲು ಕೂಡ ಅಸಾಧ್ಯವಾಗುವಷ್ಟು ಸುಟ್ಟಿದ್ದು, ಮರು ಬಳಕೆ ಅಸಾಧ್ಯ’ ಎನ್ನುತ್ತಾರೆ ಕಾರ್ಮಿಕರು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, “ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ತತ್‌ಕ್ಷಣ ಭೇಟಿ ನೀಡಿದ್ದೆ. ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಇದೇ ಮೊದಲ ಬಾರಿಗೆ ಬೆಂಕಿ ತಗುಲಿದ್ದು, ಈ ಬಗ್ಗೆ ತನಿಖೆ ನಡೆಸಲಿದ್ದೇವೆ. ಸೋಮವಾರ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆ ಪ್ರದೇಶಕ್ಕೆ ಸಿ.ಸಿ. ಟಿವಿ ಅಳವಡಿಸಲು ಈಗಾಗಲೇ ಟೆಂಡರ್ ಕರೆದಿದ್ದು, ಕೂಡಲೇ ಅಳವಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ.
ತಪ್ಪಿದ ದೊಡ್ಡ ದುರಂತ !
ಮಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಪಚ್ಚನಾಡಿಯಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಾಟಲ್‌ಗಳು, ಪ್ಲಾಸ್ಟಿಕ್ ಚೀಲಗಳನ್ನು ಯಂತ್ರಗಳ ಮುಖೇನ ಇಲ್ಲಿ ಕ್ರಶ್ಶಿಂಗ್ ಮಾಡಲಾಗುತ್ತದೆ. ಇದಕ್ಕೆಂದು ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಎದುರು ಭಾಗದಲ್ಲಿರುವ ವಿಶಾಲವಾದ ಜಾಗದಲ್ಲಿ ಪ್ರತ್ಯೇಕ ಘಟಕ ಇದೆ. ಸಂಸ್ಕರಣೆ ಮಾಡುವ ಉದ್ದೇಶಕ್ಕೆಂದು ಖಾಸಗಿ ಸಂಸ್ಥೆಗೆ ಲೀಸ್‌ಗೆ ನೀಡಲಾಗಿದೆ. ಈ ಘಟಕದಲ್ಲಿ ಸುಮಾರು 40ಕ್ಕೂ ಮಿಕ್ಕಿ ಕಾರ್ಮಿಕರು ದುಡಿಯುತ್ತಾರೆ. ರವಿವಾರ ಆದ ಕಾರಣ ಕಾರ್ಮಿಕರು, ಭದ್ರತ ಸಿಬಂದಿ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಒಂದುವೇಳೆ, ತ್ಯಾಜ್ಯ ಸಂಸ್ಕರಣೆ ಸಮಯದಲ್ಲಿ ಈ ದುರಂತ ಸಂಭವಿಸುತ್ತಿದ್ದರೆ ಹೆಚ್ಚಿನ ಅಪಾಯವಾಗುತ್ತಿತ್ತು.
ಈ ಹಿಂದೆಯೂ ಬೆಂಕಿ ಕಾಣಿಸಿಕೊಂಡಿತ್ತು
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಕಳೆದ ವರ್ಷ ಮತ್ತು ಅದಕ್ಕೂ ಅದರ ಹಿಂದಿನ ವರ್ಷ ಕೆಲವು ಬಾರಿ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿತ್ತು. ಬಳಿಕ ಮೂರ್‍ನಾಲ್ಕು ದಿನ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸುವ ಕೆಲಸ ಮಾಡಲಾಗಿತ್ತು. ಜೇಸಿಬಿ, ಲಾರಿ ಮುಖೇನ ಸ್ಥಳಕ್ಕೆ ಮಣ್ಣು ಹಾಕುವ ಕಾರ್ಯ ನಡೆದಿತ್ತು. ಆದರೆ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಪ್ರಯತ್ನಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.
ವರದಿ ಸಲ್ಲಿಕೆಗೆ ಸೂಚನೆ
ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ರವಿವಾರ ಬೆಂಕಿ ತಗುಲಿದ್ದು, ಶಾರ್ಟ್ ಸರ್ಕ್ನೂಟ್‌ನಿಂದ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಬೇರೆ ಕಾರಣ ಇದೆಯೇ ಎಂಬ ಬಗ್ಗೆ ಪೊಲೀಸ್ ಮಟ್ಟದಲ್ಲಿಯೂ ತನಿಖೆ ನಡೆಸಲಾಗುತ್ತದೆ. ಈ ಘಟನೆಯ ಕುರಿತಂತೆ ಪಾಲಿಕೆ ಪರಿಸರ ಅಭಿಯಂತರರ ಮುಖೇನ ವರದಿಸಲ್ಲಿಕೆ ಮಾಡಲು ಮನಪಾ ಆಯುಕ್ತರಿಗೆ ಸೂಚಿಸಿದ್ದೇನೆ.
-ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
ನೀರು ಸ್ಟೋರೇಜ್ ವ್ಯವಸ್ಥೆ
ಕೆಲವು ತಿಂಗಳುಗಳ ಹಿಂದೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ತ್ಯಾಜ್ಯದಲ್ಲಿ ಬೆಂಕಿ ಕಾಣಿಕೊಂಡಿತ್ತು. ಇದೀಗ ತ್ಯಾಜ್ಯ ಸಂಸ್ಕರಣ ಘಟಕಕ್ಕೂ ಬೆಂಕಿ ತಗುಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಉದ್ದೇಶದಿಂದ ಸ್ಥಳದಲ್ಲಿ ಸುಮಾರು 20 ಲಕ್ಷ ಲೀ. ಸಾಮರ್ಥ್ಯದ ನೀರು ಸಂಗ್ರಹ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.