ಬೆಂಗಳೂರು, ಮೈಸೂರಿನ ಚರಿತ್ರೆಯನ್ನು ತೆರೆದಿಟ್ಟ ಧರ್ಮೇಂದ್ರ ಕುಮಾರ್
ಯುಕೆ ಕನ್ನಡಿಗರೊಂದಿಗೆ ಸಂವಾದ ಕಾರ್ಯಕ್ರಮ
Team Udayavani, Apr 7, 2021, 6:24 PM IST
ಲಂಡನ್ : ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ ಎನ್ನುವ ಮಾತನ್ನು ಅಕ್ಷರಶಃ ಬದುಕಾಗಿಸಿಕೊಂಡ ಅರೇನಹಳ್ಳಿ ಶಿವಶಂಕರ ಧರ್ಮೇಂದ್ರ ಕುಮಾರ್ ತಮ್ಮ ಅನುಭವಗಳನ್ನು ಮಾ. 21ರಂದು ಯುಕೆ ಕನ್ನಡಿಗರೊಂದಿಗೆ ಹಂಚಿಕೊಂಡರು.
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರೂ ಇವರ ಪ್ರವೃತ್ತಿ ಇತಿಹಾಸ. ಇತಿಹಾಸವೆಂದರೆ ಕೇವಲ ಮಹಾಯುದ್ಧಗಳು ಅಥವಾ ದೇಶದಲ್ಲಿ ನಡೆದ ಮತ್ತು ಪಠ್ಯ ಪುಸ್ತಕಗಳಲ್ಲಿ ಕೊಟ್ಟ ಘಟನೆಗಳನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ನಮ್ಮ ಊರು, ನಾವು ಹೋಗುವ ಊರಿನ ಕುರಿತು ತಿಳಿದುಕೊಳ್ಳುವ ಆಸಕ್ತಿ ಇರಬೇಕು ಮತ್ತು ಅದನ್ನು ಗೌರವಿಸುವ ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಕೂಡ ನಮ್ಮದಾಗಬೇಕು ಎಂಬ ಆಶಯದೊಂದಿಗೆ ಬದುಕು ನಡೆಸುತ್ತಿರುವ ಧರ್ಮೇಂದ್ರ ಕುಮಾರ್ ಈ ಬಾರಿ ಯುಕೆ ಕನ್ನಡಿಗರ ಮುಂದೆ ಬಿಚ್ಚಿಟ್ಟದ್ದು ಮೈಸೂರಿನ ಕಥೆಗಳು.
ಅವರು ಸಂಭಾಷಣೆ ಆರಂಭಿಸುವ ರೀತಿಯೇ ವಿಭಿನ್ನ ಮತ್ತು ವಿಶಿಷ್ಟ. ಒಂದು ರಸ್ತೆ, ಒಂದು ಕಟ್ಟಡ, ಯಾವುದೊ ಒಂದು ಚಿಕ್ಕ ಹಳ್ಳಿ. ಅವುಗಳ ಹಿಂದೆ ಇರುವ ಇತಿಹಾಸವನ್ನು ಅವರು ತಿಳಿಸುವ ಪರಿ ಕೇಳುಗರಲ್ಲಿ ಇತಿಹಾಸ ಪ್ರೀತಿಯನ್ನು ಹೆಚ್ಚಿಸುತ್ತದೆ. ರಾಜ ಮಹಾರಾಜರ ಬಗ್ಗೆ ಮಾತ್ರವಲ್ಲ ನಾವು ಹುಟ್ಟಿ ಬೆಳೆದ
ಪ್ರದೇಶ, ನಾವು ವಾಸಿಸುತ್ತಿರುವ ಊರು, ಹಳ್ಳಿ, ಓಡಾಡುವ ರಸ್ತೆ ಇಂತಹ ವಿಷಯಗಳನ್ನು ಆಯ್ದುಕೊಂಡು ಯಾರಿಗೂ ತಿಳಿಯದ ಅಚ್ಚರಿಯ ವಿಷಯಗಳನ್ನು ಬಿಚ್ಚಿಡುತ್ತಾರೆ. ಇದು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಲುಪಿಸುವ ಒಂದು ದಾರಿ ಎನ್ನುವುದು ಹಲವರ ಅಭಿಪ್ರಾಯ.
ಕಾರ್ಯಕ್ರಮದಲ್ಲಿ ಮಾರ್ಚ್ 21 ರ ಕುರಿತಾದ ಇತಿಹಾಸದೊಂದಿಗೆ ಮಾತುಕತೆ ಆರಂಭಿಸಿದ ಧರ್ಮೇಂದ್ರ ಕುಮಾರ್ ಅವರು, ಲಾರ್ಡ್ ಕಾರ್ನವಾಲಿಸ್‌ನು ಬೆಂಗಳೂರು ಕೋಟೆಯನ್ನು 230 ವರ್ಷಗಳ ಹಿಂದೆ ಇದೇ ದಿನ ಹೇಗೆ ಟಿಪ್ಪುವಿನಿಂದ ವಶಪಡಿಸಿಕೊಂಡ ಎನ್ನುವ ಕಥೆಯನ್ನು ವಿವರಿಸಿದರು.
ಬೆಂಗಳೂರು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಬಹದ್ದೂರ್ ಖಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ. ಅವನು ಟಿಪ್ಪುವಿನ ಪಾಳಯದವನು. ಶತ್ರು ಸೈನಿಕನಾದರೂ ಅವನ ಪರಾಕ್ರಮ ಮೆಚ್ಚಿ ಲಾರ್ಡ್ ಕಾರ್ನವಾಲಿಸ್ ಅವನಿಗೆ ಒಂದು ಗೋರಿ ಕಟ್ಟಿದ್ದನು. ಅದು ಈಗಲೂ ಕೆ.ಆರ್. ಮಾರ್ಕೆಟ್ ಹತ್ತಿರ ನೋಡಬಹುದು ಎಂದರು.
ಈಗೀನ ಕೆ.ಆರ್. ಮಾರ್ಕೆಟ್ ಜಾಗವು ಸಿದ್ಧಿಕಟ್ಟೆ ಕೆರೆಯಾಗಿತ್ತು. ಅಲ್ಲಿ ಬ್ರಿಟಿಷರು ಯುದ್ಧದಲ್ಲಿ ಮಡಿದ 6,000 ಸೈನಿಕರನ್ನು ಹೂತು ಕೆರೆಯನ್ನು ಮುಚ್ಚಿದರು ಎಂದು ಅವರು ಹೇಳುವಾಗ, ಇಷ್ಟೊಂದು ಕ್ರೂರವಾದ ಇತಿಹಾಸ ಅಡಗಿದೆಯೇ ಅಲ್ಲಿ ಎಂದೆನಿಸುತ್ತಿತ್ತು. ಅನಂತರ ಮುಂದುವರಿದು ಬೆಂಗಳೂರು ಎಂಬುದು ಹೇಗೆ ಹುಟ್ಟಿತು, ಹೊಯ್ಸಳರ ಸಾಮಂತರಾದ ಕೆಂಪೇಗೌಡರು ಹೇಗೆ ಅದನ್ನು ಕಟ್ಟಿ ಬೆಳೆಸಿದರು, ಬೆಂದಕಾಳೂರು ಅನಂತರ ಬೆಂಗಳೂರು ಆಗಿದ್ದು ಹೇಗೆ ಎನ್ನುವ ಕುರಿತು ಕಥೆಯೆಲ್ಲ ಕಪೋಲ ಕಲ್ಪಿತ ಎನ್ನುವುದನ್ನೆಲ್ಲ ಸೊಗಸಾಗಿ ವಿವರಿಸಿದರು.
ಬೆಂಗಳೂರು ಕಟ್ಟಲು ಗುದ್ದಲಿ ಪೂಜೆ ನಡೆದಿದ್ದು ಈಗಿನ ರಾಜಾ ಮಾರ್ಕೆಟ್ ವೃತ್ತದಲ್ಲಿ ಸಂಕ್ರಾಂತಿಯ ದಿನದಂದು. ಬೆಳಗಿನ ಜಾವ ಜನಸಂಚಾರ ಮತ್ತು ವಾಹನ ದಟ್ಟನೆ ಕಡಿಮೆ ಇರುವ ಸಂದರ್ಭದಲ್ಲಿ ರಾಜಾ ಮಾರ್ಕೆಟ್ ವೃತ್ತಕ್ಕೆ ಹೋದರೆ ಕೆಂಪೇಗೌಡರು ಕಟ್ಟಿಸಿದ 4 ದಿಕ್ಕಿನ ಗೇಟ್‌ಗಳನ್ನು ಈಗಲೂ ಕಾಣಬಹುದು ಎಂದು ಸವಿಸ್ತಾರವಾಗಿ ಬೆಂಗಳೂರಿನ ಇತಿಹಾಸವನ್ನು ಬಿಚ್ಚಿಟ್ಟರು.
ಕೆಂಪೇಗೌಡರ ವಂಶಸ್ಥರಿಂದ ಬೆಂಗಳೂರು ಬಿಜಾಪುರ ಆದಿಲ್‌ಶಾಹಿಯ ವಶವಾಗುತ್ತದೆ. ಅವನ ಒಬ್ಬ ಸೇನಾಧಿಪತಿಯಾದ ಶಿವಾಜಿಯ ಅಪ್ಪ ಶಹಾಜಿ ಅದನ್ನು ನೋಡಿ ಕೊಳ್ಳುತ್ತಿರುತ್ತಾನೆ. ಅನಂತರ ಬೆಂಗಳೂರು ಔರಂಗಜೇಬನ ವಶಕ್ಕೆ ಬರುತ್ತದೆ. ಅವನಿಂದ ಮೈಸೂರಿನ ಚಿಕ್ಕ ದೇವರಾಯ ಅರಸರು ಬೆಂಗಳೂರನ್ನು ಕೊಳ್ಳುತ್ತಾರೆ. ಚಿಕ್ಕದೇವರಾಯರ ಕಾಲದಲ್ಲಿ ಬೆಂಗಳೂರಿನಲ್ಲಿ ಭಾರತದ 500ಕ್ಕೂ ಹೆಚ್ಚು ಸಂಸ್ಥಾನಗಳ ನಾಣ್ಯಗಳು ಚಲಾವಣೆಯಲ್ಲಿ ಇದ್ದವು. ಅಷ್ಟು ಅಭಿವೃದ್ಧಿ ಹೊಂದಿತ್ತು ಬೆಂಗಳೂರು. ಅನಂತರ ಬೆಂಗಳೂರು ಹೈದರಾಲಿ ವಶಕ್ಕೆ ಬಂತು. ಅವನಿಂದ ಟಿಪ್ಪು, ಟಿಪ್ಪುವಿನಿಂದ ಬ್ರಿಟಿಷರ ವಶಕ್ಕೆ. ಬ್ರಿಟಿಷರು 1799- 1947ರ
ತನಕ ಬೆಂಗಳೂರನ್ನು ಆಳಿದರು. ಬೆಂಗಳೂರಿನಲ್ಲಿ ಅವರಿಗೆ ಪ್ರತ್ಯೇಕ ಸ್ಥಳ ನಿರ್ಮಿಸಿದ್ದರು. ಅದೇ ಕಂಟೋನ್ಮೆಂಟ್ . ಭಾರತೀಯರನ್ನು ದೂರ ಇರಿಸಲು ಮಧ್ಯೆ ಕಬ್ಬನ್ ಪಾರ್ಕ್ ಅನ್ನು ನಿರ್ಮಿಸಿದ್ದರಂತೆ. ಇದರೊಂದಿಗೆ ಇನ್ನೂ ಹಲವು ಸ್ವಾರಸ್ಯಕರ ವಿಷಯಗಳನ್ನು ಅವರು ಹಂಚಿಕೊಂಡರು.
ಅವರ ಮಾತಿನ ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳಿಗೆ ವೀಕ್ಷಕರು ಉತ್ತರ ಪಡೆದರು. ಕನ್ನಡಿಗರು ಯುಕೆ ವತಿಯಿಂದ ರಶ್ಮಿ ಮಚಾನಿ ಸ್ವಾಗತಿಸಿದರು. ರಮೇಶ್ ಅವರು ಧರ್ಮೇಂದ್ರ ಅವರನ್ನು ಪರಿಚಯಿಸಿದರು. ಗಣಪತಿ ಭಟ್ ಅವರು ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳಾಗದಂತೆ ನೋಡಿಕೊಂಡರು.
ಧರ್ಮೇಂದ್ರ ಕುಮಾರ್ ಅವರನ್ನು ಪರಿಚಯಿಸಿದ ವಿಶ್ವನಾಥ್ ಗಟ್ಟ್ ಅವರಿಗೆ ಕೃತಜ್ಞತೆ ಸಲ್ಲಿಸಿ, ಇನ್ನು ಸರಣಿ ಕಾರ್ಯಕ್ರಮಗಳನ್ನು ನಡೆಸುವ ಆಶಯದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕೆಯುಕೆಯ ಪವಿತ್ರಾ ಅವರು ವಂದಿಸಿದರು.
– ಶ್ವೇತಾ, ಲಂಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.