ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರು, ಶಿಕ್ಷಕರ ಪಾತ್ರ
Team Udayavani, Apr 15, 2021, 6:50 AM IST
ಪ್ರತಿಯೊಂದು ಮಗುವೂ ವಿಭಿನ್ನ. ನಮ್ಮ ಹೂದೋಟದ ವಿಶಿಷ್ಟ ಬಣ್ಣ , ವಾಸನೆ, ಆಕಾರಗಳ ಕುಸುಮಗಳಿದ್ದಂತೆ. ಅವು ಅರಳಿ ಕಂಪು ಸೂಸಬೇಕಾ ದರೆ ತಂದೆ-ತಾಯಿಯರ ಜತೆಗೆ ಶಿಕ್ಷಕರು ಜವಾಬ್ದಾ ರಿಯುತವಾಗಿ ನಡೆದುಕೊಳ್ಳಬೇಕು. ಅವರೊಡನೆ ಸ್ನೇಹಿತರಂತೆ ಬೆರೆತು ಅವರ ಆಲೋಚನೆ, ಅಭಿಪ್ರಾ ಯಗಳಿಗೆ ಮನ್ನಣೆ ನೀಡುವ ಕೆಲಸವಾ ಗಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಆತ್ಮಸ್ಥೈರ್ಯ, ಸಕಾರಾತ್ಮಕ ಚಿಂತನೆ, ಪ್ರೇರಣೆ, ನಿರ್ದಿಷ್ಟ ಗುರಿ ಇತ್ಯಾದಿ ವಾಸ್ತವಾಂಶಗಳನ್ನು ಮನೆಯಲ್ಲಿ ಮತ್ತು ಶಾಲೆಯಲ್ಲಿ ಮನದಟ್ಟು ಮಾಡಿಸಬೇಕು. ಮನೆ – ಮನಗಳಲ್ಲಿ ಮುಕ್ತ ವಾತಾವರಣವಿರಬೇಕು. “ಇಂದಿನ ಮಕ್ಕಳು ಮುಂದಿನ ಪ್ರಜೆಗಳು’ ಎಂಬುದನ್ನು ಮೊದಲು ಅರಿಯಬೇಕು. ಪೌಷ್ಟಿಕಾಂಶಯುಕ್ತ ಉತ್ತಮ ಆಹಾರ, ಒಳ್ಳೆಯ ಶಿಕ್ಷಣ, ಸುಶಿಕ್ಷಿತರ ಸಹವಾಸ ಇತ್ಯಾದಿ ಪೂರಕ ಅಂಶಗಳನ್ನು ಒದಗಿಸುವ ಕೆಲಸವನ್ನು ನಾವು ನಿರ್ವಹಿಸಬೇಕಾಗುತ್ತದೆ.
ಗಿಡದ ಬೇರು ಚಿಗುರೊಡೆಯಲು ಹೇಗೆ ಸುತ್ತ ಲಿನ ತೇವಭರಿತ ಪೋಷಕಸಹಿತ ಮಣ್ಣು ಕಾರಣೀಭೂತವಾಗುತ್ತದೆಯೋ ಅದೇ ರೀತಿಯಲ್ಲಿ ಹೆತ್ತವರು, ಶಿಕ್ಷಕರು, ನೆರೆಕರೆಯವರು ಮಕ್ಕಳ ಸರ್ವ ತೋಮುಖ ಬೆಳವಣಿಗೆಗೆ ಬೇಕಾದ ಸಾರವನ್ನು ಚಿಕ್ಕ ವಯಸ್ಸಿನಲ್ಲಿಯೇ ನೀಡುವುದು ಮುಖ್ಯ. ಬಾಲ್ಯದ ಹೊಂಬೆಳಕು ಪಸರಿಸಲು ಇಂಬುನೀಡಬೇಕು.
ಯಾವ ರೀತಿ ಮಕ್ಕಳನ್ನು ಬೆಳೆಸಬೇಕು ಮತ್ತು ಸುಶಿಕ್ಷಿತರನ್ನಾಗಿ ಮಾಡಬೇಕು ಎನ್ನುವ ಪ್ರಶ್ನೆ ನಮ್ಮ ಮುಂದಿದೆ. ಈಗಿನ ಕಾಲದಲ್ಲಿ ದಂಪತಿಗೆ ಒಂದು ಮಗು ಅಥವಾ ಎರಡು ಮಕ್ಕಳು. ಹಾಗೆಂದು ಅವರನ್ನು ಮುದ್ದು ಮುದ್ದಾಗಿ ಬೆಳೆಸಬೇಕೆ? ಅಥವಾ ತುಂಬಾ ಸಿಟ್ಟು ಸಿಡುಕಿನಿಂದ ಕೋಲೇ ಬಸವನ ರೀತಿಯಲ್ಲಿ ಬೆಳೆಸಬೇಕೆ?. ಎರಡೂ ಅಲ್ಲ, ಮಕ್ಕಳನ್ನು ಮುದ್ದು ಮಾಡುವ ಸಮಯದಲ್ಲಿ ಮುದ್ದಿಸಬೇಕು. ಕೆಲವೊಮ್ಮೆ ಹೆದರಿಸಿ, ಬೆದರಿಸಲೂ ಬೇಕು. ಹೆತ್ತವರ ಸಿಟ್ಟು ಮಗುವಿನಲ್ಲಿ ಸಕಾರಾತ್ಮಕ ಮನೋಭಾವನೆಗೆ ಮೆಟ್ಟಿಲಾಗಬೇಕು.
ಹಿಂದಿನ ಕಾಲದಲ್ಲಿ ದಂಪತಿಗೆ ತುಂಬಾ ಮಕ್ಕಳಿರು ತ್ತಿದ್ದರು. ಅವರು ಈಗಿನ ಹೆತ್ತವರಂತೆ ಮಕ್ಕಳನ್ನು ಅತೀ ಮುದ್ದಾಗಿ ಕಾಣುತ್ತಿರಲಿಲ್ಲ. ಆದರೂ ಅವರು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಸದೃಢರಾಗಿದ್ದರು. ಆದರೆ ಈಗ? ಈಗಿನ ಕಾಲದಲ್ಲಿ ಇರುವ ಒಂದು-ಎರಡು ಮಕ್ಕಳನ್ನು ಪೋಷಿಸಲು ತಂದೆ-ತಾಯಂದಿರು ಹರಸಾಹಸ ಪಡುತ್ತಿರುವುದು ನೈಜ ಸಂಗತಿ.
ಒಂದೆಡೆ ಅದು ತಿನ್ನಬೇಡ, ಇದು ದೇಹಕ್ಕೆ ಒಳಿತಲ್ಲ ಎಂಬಿತ್ಯಾದಿ ವಿಷಯಗಳನ್ನು ಅವರ ಮನಸ್ಸಿನಲ್ಲಿ ತುರುಕಿಬಿಡುತ್ತೇವೆ. ಇನ್ನೊಂದೆಡೆ ನಮ್ಮ ಮಕ್ಕಳಿಗೆ ಅಲ್ಲಿಗೆ ಹೋಗಬೇಡ, ಅವರೊಂದಿಗೆ ಮಾತನಾಡಬೇಡ ಇತ್ಯಾದಿ ಬೇಡಗಳನ್ನು ಕಲಿಸಿರುತ್ತೇವೆ.
ಹಾಗಾದರೆ ಯಾವುದು ನಮ್ಮ “ಬೇಕು’ ಆಗಿರುತ್ತದೆ? ಎಷ್ಟೋ ಮಕ್ಕಳಿಗೆ ತಮ್ಮ ಅಕ್ಕಪಕ್ಕದ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದೇ ಗೊತ್ತಿಲ್ಲ. ಈಗಿನ ಯುಗದಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವುದರಿಂದ ಮಕ್ಕಳಿಗೆ ಸಂಬಂಧಗಳ ನಡುವಿನ ಬಂಧವೇ ಇಲ್ಲದಂತಾಗಿದೆ. ಎಲ್ಲ ಸಂಬಂಧಗಳು ಆಂಟಿ, ಅಂಕಲ್‌ನಿಂದ ಮುಗಿದುಬಿಟ್ಟಿದೆ. ಆತ್ಮಪ್ರತಿಷ್ಠೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇಡೀ ದಿವಸ ಟಿವಿ, ಮೊಬೈಲ್, ಟ್ಯಾಬ್‌ಗಳನ್ನು ಬಿಟ್ಟರೆ ಬೇರೆ ಪ್ರಪಂಚ ಇಲ್ಲ. ಅವರಲ್ಲಿ ಊಟ, ತಿಂಡಿಗೂ ಸಮಯವಿರುವುದಿಲ್ಲ. ಮಕ್ಕಳಿಗೆ ತಮ್ಮ ಪ್ರಶ್ನೆಗಳಿಗೆ ತಂದೆ ತಾಯಿಯಿಂದ ಸಿಗದ ಉತ್ತರ ಸ್ನೇಹಿತರು, ಸಿನೆಮಾ ಮತ್ತು ಅಂತರ್ಜಾಲದ ಮೂಲಕ ಸಿಗುತ್ತದೆ. ಆದ್ದರಿಂದ ಆ ಕಡೆಗೆ ಜಾಸ್ತಿ ವಾಲುತ್ತಾರೆ. ಈ ಮಾಧ್ಯಮದಿಂದ ದೊರಕುವ ಕೆಲವೊಂದು ಮಾಹಿತಿ ನಿಖರವಾಗಿರದೇ ಅಪೂರ್ಣವಾಗಿರುತ್ತದೆಯಲ್ಲದೆ ಪ್ರಚೋದನಕಾರಿಯಾಗಿದ್ದು ಮಕ್ಕಳನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಇಂತಹ ಸನ್ನಿವೇಶಗಳನ್ನು ಒಂದು ಹಂತದಲ್ಲಿ ಎಲ್ಲ ತಂದೆತಾಯಿಯರೂ ಅನುಭವಿಸಿರುತ್ತಾರೆ. ಆದರೆ ಅಂತಹ ಸಂದರ್ಭಗಳಲ್ಲಿ ಸಮಾಧಾನ ಮತ್ತು ಉತ್ತಮ ನಡವಳಿಕೆ ತೋರುವುದು ಮಹತ್ವವಾಗಿರುತ್ತದೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಸಾಮರ್ಥ್ಯ ಸ್ವಲ್ಪ ಕಡಿಮೆ ಇರುತ್ತದೆ. ಆದ್ದರಿಂದ ಮಕ್ಕಳು ದಾರಿ ತಪ್ಪಿದಾಗ ನಿಧಾನವಾಗಿ ಅರ್ಥ ಮಾಡಿಸುವ ಕೆಲಸ ನಮ್ಮದಾಗಬೇಕು. ಮಾನಸಿಕ ಸ್ಥೈರ್ಯ ತುಂಬಬೇಕು. ಮಕ್ಕಳನ್ನು ಸರಿದಾರಿಗೆ ತರುವಲ್ಲಿ ತಂದೆತಾಯಿಯರ ಪಾತ್ರ ಎರಡು ಪಟ್ಟು ಹೆಚ್ಚಾಗಿರುತ್ತದೆ.
ಕೇವಲ ಅಂಕಗಳ ನಿರೀಕ್ಷೆಯಿಂದ ಮಗುವಿಗೆ ಎಡೆಬಿಡದೆ ಬರೆಯುವ ಮತ್ತು ಓದುವ ಒತ್ತಡ. ಜತೆಗೆ ಅಂಕಗಳು ರಾಶಿಯಾಗಿ ಬೀಳುತ್ತವೆ ಎಂಬ ಕುರುಡು ವಿಶ್ವಾಸಗಳಿಂದ ಮಗುವಿನ ಮೈಮನಸ್ಸುಗಳನ್ನು ಥಳಿಸುವುದು ಎಷ್ಟು ಸಮಂಜಸ? ಮುಂದೆ ನದಿ ಇದೆಯೆಂದು ನಡೆಯುವ ದಾರಿಯ ಹೊಯಿಗೆಯಲ್ಲಿ ಮಗುವನ್ನು ತೆವಳಿಸುವ ಕಾರ್ಯ ನಿಜಕ್ಕೂ ಅವೈಜ್ಞಾನಿಕ. ಮಗು ಸ್ವಇಚ್ಛೆಯಿಂದ ಓದಿ ಬರೆದಾಗ ಮಾತ್ರ ನಾವು ಅವರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು.
ಮುಂದುವರಿದ ಈ ಯುಗದಲ್ಲಿ ಶಿಕ್ಷಣವು ತನ್ನದೇ ಆದ ವೈಶಿಷ್ಟéವನ್ನು ಪಡೆದಿದೆ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಪ್ರಥಮತವಾಗಿ ಮಗು ತನ್ನ ಮನೆಯಿಂದಲೇ ಶಿಕ್ಷಣ ಪಡೆಯಲು ಪ್ರಾರಂಭಿಸುತ್ತದೆ. ತಾಯಿಯೇ ಮೊದಲ ಗುರುವಾಗುತ್ತಾಳೆ. ಮಗು ಮನೆಯವರು ಮತ್ತು ತಾಯಿಯ ನೆರವಿನಿಂದ ನಡೆಯುವುದು, ಓಡುವುದು, ಮಾತನಾಡುವುದು ಹೀಗೆ ಬೇರೆ ಬೇರೆ ರೀತಿಯ ಶಿಕ್ಷಣವನ್ನು ಪಡೆಯುತ್ತಿರುತ್ತದೆ. ಅನಂತರ “ಶಾಲೆ’ ಎಂಬ ಮನೆಯೆಡೆಗೆ ತನ್ನ ಪುಟ್ಟ ಪುಟ್ಟ ಹೆಜ್ಜೆ ಇಡುತ್ತದೆ. ಅಲ್ಲಿ ತನ್ನ ಬೇಕುಗಳನ್ನು ಪೂರೈಸಿಕೊಳ್ಳುತ್ತದೆ. ಕೇವಲ ಓದು, ಬರಹ ಮಾತ್ರ ಶಿಕ್ಷಣವಲ್ಲ. ಮಗುವು ಪಡೆಯುವ ಶಿಕ್ಷಣವು ತನ್ನೆಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳುವಂತಿರಬೇಕು. ಅಂತೆಯೇ ಶಾಲೆಯಲ್ಲಿಯೂ ಕೂಡ ಶಿಕ್ಷಕರು ಸಮಾಧಾನದಿಂದ ವಿದ್ಯಾರ್ಥಿಗಳೊಡನೆ ನಡೆದುಕೊಳ್ಳಬೇಕು.
ಬರೀ ಓದು, ಬರೆಹ ಬಂದರೆ ಮಾತ್ರ ಅವನು ಬುದ್ಧಿವಂತ ಅಂತೇನೂ ಅಲ್ಲ. ತಾನು ಪಡೆದ ಶಿಕ್ಷಣವನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಉಪಯೋಗಿಸುವವನೇ ನಿಜವಾದ ಬುದ್ಧಿವಂತ. ತನ್ನ ನಿತ್ಯ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಕೌಶಲಸಹಿತ ಶಿಕ್ಷಣವೇ ನಮ್ಮ ಗುರಿಯಾಗಿರಬೇಕು.
ಶಿಸ್ತು, ಸಂಯಮ, ಆತ್ಮ ವಿಶ್ವಾಸ, ದೃಢ ಸಂಕಲ್ಪ, ಗುರಿಸಾಧನೆ, ಮುಂದಾಲೋಚನೆ, ಹಿರಿಯರನ್ನು ಗೌರವಿಸುವುದು ಮುಂತಾದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸೋಣ. ಸಕಾರಾತ್ಮಕ ಚಿಂತನೆ ಪಾಲಕರಲ್ಲಿದ್ದರೆ ಮಕ್ಕಳು ತನ್ನಿಂತಾನೇ ಅದನ್ನು ಪಾಲಿಸುತ್ತಾರೆ. ಹಿರಿಯ ರಾದ ನಾವು, ಶಿಕ್ಷಕರು ಉತ್ತಮ ಮಾರ್ಗದಲ್ಲಿ ನಡೆದು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗೋಣ. ಆಗ ಮಾತ್ರ ನಮ್ಮ ಮಕ್ಕಳನ್ನು ಒಂದು ಹಂತದಲ್ಲಿ ಸಕಾರಾತ್ಮಕವಾಗಿ ಬೆಳೆಸಬಹುದು. ತನ್ಮೂಲಕ ಸ್ವಸ್ಥ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಮಗುವನ್ನು ಬೆಳೆಸೋಣ -ಮೊಳಕೆಯ ಸಿರಿ ಕವಲೊಡೆಯಲು ಸಹಕರಿಸೋಣ -ಸಮಾಜಕ್ಕೆ ಅದ್ಭುತ ರತ್ನಗಳನ್ನು ನೀಡೋಣ.
– ಗಾಯತ್ರಿ ನಾರಾಯಣ ಅಡಿಗ, ಬೈಂದೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.