ಸಿರಿಧಾನ್ಯ ಎಫ್‌ಪಿಒ ರದ್ಧತಿಗೆ ರೈತರ ಒಕ್ಕೊರಲ ಆಗ್ರಹ
ರೈತರ ಹೆಸರಿನಲ್ಲಿ ಸ್ವಾರ್ಥಕ್ಕೆ ನಿಂತಿರುವ ಕೆಲವರು ತಮ್ಮ ಲೋಪ ಮುಚ್ಚಿಕೊಳ್ಳಲು ದೂರು ನೀಡಿದ್ದಾರೆ.
Team Udayavani, Apr 17, 2021, 6:41 PM IST
ವಿಜಯಪುರ: ಜಿಲ್ಲೆಯಲ್ಲಿ ಸಿರಿಧಾನ್ಯ ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ) ತೆರೆಯುವಲ್ಲಿ ಅಧಿಕಾರಿಗಳು ನಿಯಮ ಮೀರಿ ಕೆಲಸ ಮಾಡಿದ್ದಾರೆ. ಸಿರಿಧಾನ್ಯ ಬೆಳೆಗಾರರೇ ಅಲ್ಲದ ರೈತರನ್ನು ನಿರ್ದೇಶಕರನ್ನಾಗಿ ಮಾಡಿ ಅರ್ಹ ಸಿರಿಧಾನ್ಯ ರೈತರನ್ನು ವಂಚಿಸಿದ್ದಾರೆ. ಹೀಗಾಗಿ ಕೂಡಲೇ ಇಂಡಿ ಹಾಗೂ ನಿಡಗುಂದಿ ತಾಲೂಕಿನ ಸಿರಿಧಾನ್ಯ ಬೆಳೆಗಾರರ ಎಫ್‌ಪಿಒ ರಚಿಸಿರುವುದನ್ನು ರದ್ದು ಮಾಡಬೇಕು ಹಾಗೂ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ರೈತರು
ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್.ಪಾಟೀಲ, ಇಂಡಿ ಭಾಗದ ಎಂ.ಕೆ. ಕುಂಬಳ, ಮಹಾದೇವಿ ಗೋಕಾಕ, ನಿಡಗುಂದಿ ಭಾಗದ ಮಧು ಪಾಟೀಲ ಕೂಡಗಿ ಇತರರು, ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಇವರಿಗೆ ಇಂಡಿ ತಾಲೂಕಿನ ಸಿರಿಧಾನ್ಯ ಬೆಳೆಗಾರ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸುವ ಹಾಗೂ ವಿಜಯಪುರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳಿಗೆ ನಿಡಗುಂದಿ ಸಿರಿಧಾನ್ಯ ಬೆಳೆಗಾರ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸುವ ಜವಾಬ್ದಾರಿಯನ್ನು ನೀಡಿತ್ತು. ಆದರೆ ಈ ಅಧಿ ಕಾರಿಗಳು ರೈತ ಉತ್ಪಾದಕರ ಸಂಸ್ಥೆ ಸ್ಥಾಪನೆ ನಿಯಮ ಮೀರಿ ಸಿರಿಧಾನ್ಯ ಬೆಳೆಗಾರ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿದ್ದಾರೆ. ಅನರ್ಹರನ್ನು ನಿರ್ದೇಶಕರನ್ನಾಗಿ ಮಾಡಿದ್ದಾರೆ. ಎಫ್‌ಐಜಿ ಹಲವರನ್ನು ನಿರ್ದೇಶಕರನ್ನಾಗಿ ಮಾಡಿದ್ದು, ಇದರಿಂದ ನಿಜವಾದ ಸಿರಿಧಾನ್ಯ ಬೆಳೆಗಾರರನ್ನು ಕಡೆಗಣಿಸಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಸದರಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕೇಂದ್ರಗಳ ಅಧಿಕಾರಿಗಳ ಈ ಲೋಪ ಎತ್ತಿ ತೋರಿಸುತ್ತಲೇ ಅಧಿ ಕಾರಿಗಳು ರೈತರನ್ನೇ ಎತ್ತಿಕಟ್ಟಿ, ಆತ್ಮ ಯೋಜನೆಯ ಅ ಧಿಕಾರಿ ಎಂ.ಬಿ. ಪಟ್ಟಣಶಟ್ಟಿ ಇವರ ವಿರುದ್ಧ ಭ್ರಷ್ಟಾಚಾರದ ಆರೋಪದ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಪ್ಪು ಮುಚ್ಚಿಕೊಳ್ಳಲು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ಭ್ರಷ್ಟಾಚಾರ ಮಾಡಿ ದೂರು ನೀಡಿರುವ ವ್ಯಕ್ತಿಗಳು ಸದರಿ ಅಧಿಕಾರಿಯ ವಿರುದ್ಧ ಸೂಕ್ಷ ಸಾಕ್ಷ್ಯಾಧಾರ
ಒದಗಿಸಿ, ಕ್ರಮಕ್ಕೆ ಆಗ್ರಹಿಸಬೇಕು. ಕೇವಲ ಕಪೋಲ ಕಲ್ಪಿತ ದೂರು ನೀಡುವುದು ಸಿರಿಧಾನ್ಯ ಬೆಳೆಗಾರರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವ ಹುನ್ನಾರ ಎಂದು ಹರಿಹಾಯ್ದರು.
ಆತ್ಮಾ ಯೋಜನೆ ಅಧಿಕಾರಿ ಪ್ರಾಮಾಣಿಕವಾಗಿ ರೈತರ ಮಧ್ಯೆ ಕೆಲಸ ಮಾಡುತ್ತಿದ್ದು, ಸರ್ಕಾರದ ಯೋಜನೆಗಳ ಕುರಿತು ರೈತರಲ್ಲಿ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕೆಲವು ರೈತರು ಸ್ವಯಂ ಘೋಷಿತ ರೈತ ಮುಖಂಡರು, ಪ್ರಗತಿಪರರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಸಿರಿಧಾನ್ಯ ಉತ್ಪಾದಕ ರೈತರಿಗೆ ಮಾಹಿತಿಯನ್ನೂ ನೀಡದೇ ಎಫ್ ಪಿಒ ರಚನೆ ಮಾಡಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ರೈತರ ಹೆಸರಿನಲ್ಲಿ ಸ್ವಾರ್ಥಕ್ಕೆ ನಿಂತಿರುವ ಕೆಲವರು ತಮ್ಮ ಲೋಪ ಮುಚ್ಚಿಕೊಳ್ಳಲು ದೂರು ನೀಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇಂಡಿ ಹಾಗೂ ನಿಡಗುಂದಿ ತಾಲೂಕಿನಲ್ಲಿ ಸ್ಥಾಪಿಸಲಾಗಿರುವ ಸಿರಿಧಾನ್ಯ ಬೆಳೆಗಾರ ಸಂಸ್ಥೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು, ಒಂದೊಮ್ಮೆ ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಆತ್ಮ ಯೋಜನೆ ರಾಜ್ಯ ಸಮಿತಿ ಸದಸ್ಯೆ ಸೀತಾ ದೊಡಮನಿ, ಶಿವಾನಂದ ಗೊಳಸಾರ, ಎಂ.ಆರ್. ಮುಲ್ಲಾ ನಾದ ಕೆ.ಡಿ., ಶರಣು ಉಕ್ಕಲಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.