ಮತಗಳ ಲೆಕ್ಕದ ಜತೆ ಸೋಲು-ಗೆಲುವಿನ ಲೆಕ್ಕಾಚಾರ
ಕಾಂಗ್ರೆಸ್-ಬಿಜೆಪಿ ಇಬ್ಬರಿಗೂ ಜಯದ ವಿಶ್ವಾಸ! ಯಾರಿಗೆ ಮಣೆ ಹಾಕಿದ್ದಾನೆ ಮತದಾರ ಪ್ರಭು?
Team Udayavani, Apr 19, 2021, 8:36 PM IST
ವರದಿ : ಕೇಶವ ಆದಿ
ಬೆಳಗಾವಿ: ಕಳೆದ ನಾಲ್ಕು ಚುನಾವಣೆಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ತನ್ನ ವಶ ಮಾಡಿಕೊಳ್ಳಲಿದೆಯೇ? ಜಾತಿ ಲೆಕ್ಕಾಚಾರ, ಅನುಭವದ ರಾಜಕಾರಣ ಮತ್ತು ಅನುಕಂಪದ ಅಲೆಯಲ್ಲಿ ಯಾವುದಕ್ಕೆ ಮತದಾರ ಮಣೆ ಹಾಕಿದ್ದಾನೆ? ಅನುಭವ ಮತ್ತು ಅನುಕಂಪದ ನಡುವೆ ಯಾವುದು ಮಂಕಾಗಲಿದೆ? – ಇದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದೂ ವಿಶೇಷವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳ ಜೋರಾಗಿ ನಡೆದಿರುವ ಲೆಕ್ಕಾಚಾರ.
ಕೊರೊನಾ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ನಿರೀಕ್ಷೆಗಿಂತ ಬಹಳ ಕಡಿಮೆಯಾಗಿರುವುದರಿಂದ ಈ ಲೆಕ್ಕಾಚಾರ ಬಹಳ ಕುತೂಹಲ ಪಡೆದಿದೆ. ಹೆಚ್ಚಿನ ಮತದಾನವಾದರೆ ನಮಗೇ ಲಾಭ ಎಂದು ಬೀಗುತ್ತಲೇ ಇದ್ದ ಬಿಜೆಪಿ ಚಿಂತೆಗೆ ಬಿದ್ದಿದೆ. ಕಾಂಗ್ರೆಸ್ ಪಾಳೆಯದಲ್ಲಿ ಗೆಲುವಿನ ವಿಶ್ವಾಸ ಮೊದಲಿಗಿಂತ ಇಮ್ಮಡಿಯಾಗಿದೆ. ವಿಧಾನಸಭೆವಾರು ಶಾಸಕರ ಲೆಕ್ಕ ನೋಡಿದರೆ ಬಿಜೆಪಿ ಕಣ್ಣು ಮುಚ್ಚಿ ಗೆಲ್ಲಬೇಕು.ಎಂಟು ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ.
ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ ಸೇರಿದಂತೆ ಎಲ್ಲರೂ ಪ್ರಭಾವಶಾಲಿಗಳು. ರಾಜಕೀಯ ಅರೆದು ಕುಡಿದವರು. ಆದರೆ ಕಳೆದ ಲೋಕಸಭಾ ಚುನಾವಣೆಗಿಂತ ಸುಮಾರು ಶೇ.10 ಮತದಾನ ಕಡಿಮೆಯಾಗಿರುವುದು ಸಹಜವಾಗಿಯೇ ಬಿಜೆಪಿ ಪಾಳೆಯದಲ್ಲಿ ಸ್ವಲ್ಪ ತಳಮಳ ಹುಟ್ಟಿಸಿದೆ. ಇದರ ಜತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಒಂದಾಗಿ ಚುನಾವಣೆ ಎದುರಿಸಿದ್ದು ಅದಕ್ಕೆ ತೆರೆಮರೆಯಲ್ಲಿ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿರುವುದು ಬಿಜೆಪಿ ಆತಂಕಕ್ಕೆ ಮತ್ತೂಂದು ಕಾರಣ. ಈ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿ ಶುಭಂ ಶೇಳಕೆ ಹೆಚ್ಚು ಮತ ಪಡೆದಷ್ಟು ಬಿಜೆಪಿಗೆ ಅಪಾಯ ತಪ್ಪಿದ್ದಲ್ಲ. ಈ ಚುನಾವಣೆಯನ್ನು ಸ್ವಲ್ಪ ಗಂಭೀರವಾಗಿಯೇ ತೆಗೆದುಕೊಂಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳಿಂದ ಅಂದಾಜು 40 ಸಾವಿರ ಮತಗಳ ನಿರೀಕ್ಷೆ ಮಾಡಿದೆ.
ಈ ಎಲ್ಲ ಮತಗಳು ಬಹುತೇಕ ಬಿಜೆಪಿ ಮತಗಳು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಕನಿಷ್ಠ 60 ಸಾವಿರ ಮುನ್ನಡೆ ಬೇಕು: ಈಗ ಆಗಿರುವ ಮತದಾನ ಪ್ರಮಾಣದ ಲೆಕ್ಕ ನೋಡಿದರೆ ಬಿಜೆಪಿ ಈ ಉಪಚುನಾವಣೆಯನ್ನು ಗೆಲ್ಲಬೇಕಾದರೆ ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರಗಳಿಂದ ಕನಿಷ್ಠ 60 ಸಾವಿರ ಮತಗಳ ಮುನ್ನಡೆ ಪಡೆಯಬೇಕು. ಆಗ ಫಲಿತಾಂಶ ಬಿಜೆಪಿ ಪರವಾಗಿರಲಿದೆ ಎಂಬುದು ಪಕ್ಷದ ಮುಖಂಡರ ಹೇಳಿಕೆ. ಆದರೆ ಚುನಾವಣೆಗೆ ಮೊದಲೇ ಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರ ಮಾಡಿದ್ದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಕಾಣುತ್ತಿದೆ. ಮತದಾನ ಪ್ರಮಾಣ ಕಡಿಮೆಯಾಗಿದ್ದರೂ ಅದು ಪಕ್ಷದ ಗೆಲುವಿನ ಮೇಲೆ ಪರಿಣಾಮ ಬೀರಲ್ಲ. ಗೆಲುವಿನ ಅಂತರ ಕಡಿಮೆಯಾಗಬಹುದು. ಬಿಜೆಪಿ ಮತದಾರರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬುದು ನಾಯಕರ ಬಲವಾದ ವಿಶ್ವಾಸ.
ಬಿಜೆಪಿ ಗೆಲುವಿನ ಅಂತರ 50 ಸಾವಿರದಿಂದ ಒಂದು ಲಕ್ಷದವರೆಗೆ ಇರಲಿದೆ. ಗೋಕಾಕ, ಬೈಲಹೊಂಗಲ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಹಾಗೂ ರಾಮದುರ್ಗದಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಅರಭಾವಿ-ಸವದತ್ತಿಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು. ಇಲ್ಲಿ ನಾವು ಕಡಿಮೆ ಮತಗಳನ್ನು ಪಡೆದರೂ ಕಾಂಗ್ರೆಸ್‌ಗೆ ಅದನ್ನು ದಾಟಿ ಮುಂದೆ ಹೋಗಲು ಸಾಧ್ಯವಿಲ್ಲ ಎಂಬುದು ಬಿಜೆಪಿ ಪರ ಕಳೆದ ಎಂಟು ಚುನಾವಣೆಗಳನ್ನು ಮಾಡಿರುವ ಹಿರಿಯ ಮುಖಂಡ ಆರ್.ಎಸ್.ಮುತಾಲಿಕ ಅವರ ಖಚಿತ ಲೆಕ್ಕಾಚಾರ. ಒಂದು ವೇಳೆ ಬಿಜೆಪಿಗೆ ಹಿನ್ನಡೆಯಾದರೆ ಅದಕ್ಕೆ ಪಕ್ಷದೊಳಗಿನ ನಕಾರಾತ್ಮಕ ಅಂಶಗಳೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಕಷ್ಟು ಸಂಖ್ಯೆಯಲ್ಲಿದ್ದ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗದ ಕಾರಣ ಪ್ರಚಾರದಿಂದ ಅಂತರ ಕಾಯ್ದುಕೊಂಡರು. ಇನ್ನು ಕೆಲವರು ಪ್ರಚಾರಕ್ಕೆ ಬಂದರೂ ಅದು ತೋರಿಕೆಗೆ ಮಾತ್ರ. ಕೆಲ ನಾಯಕರು ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಕೆಲಸ ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಹುಬ್ಬಳ್ಳಿ ನಾಯಕರ ಹಸ್ತಕ್ಷೇಪ ಜಿಲ್ಲಾ ನಾಯಕರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತ್ತು. ಇದೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಯಲ್ಲಿರುವಷ್ಟೇ ವಿಶ್ವಾಸ ಕಾಂಗ್ರೆಸ್ ಪಾಳೆಯದಲ್ಲೂ ಕಾಣುತ್ತಿದೆ. ಮತದಾನ ಮುಗಿದ ಬೆನ್ನಲ್ಲೇ ನಾವು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ.
ಮೂರೂ ಪ್ರಮುಖ ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್ ಪರ ವಾಲಿರುವುದು ಈ ವಿಶ್ವಾಸಕ್ಕೆ ಸಾಕ್ಷಿ. ಕಾಂಗ್ರೆಸ್ ಮೂಲಗಳ ಪ್ರಕಾರ ಅರಭಾವಿ, ಸವದತ್ತಿ, ಬೈಲಹೊಂಗಲ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮತಗಳು ಬಂದಿವೆ. ಗೋಕಾಕ, ರಾಮದುರ್ಗ, ಬೆಳಗಾವಿ ದಕ್ಷಿಣದಲ್ಲಿ ಪ್ರತಿಶತ 50 ಮತಗಳು ಕಾಂಗ್ರೆಸ್ ಪರವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರಿಗೆ ಇದು ಸತ್ವ ಪರೀಕ್ಷೆಯ ಕಾಲ. ಫಲಿತಾಂಶ ಏರುಪೇರಾದರೆ ಇದು ಬಿಜೆಪಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು. ಅದರ ಪರಿಣಾಮ ಜಾರಕಿಹೊಳಿ ಸಹೋದರರ ಮೇಲೆ ಆದರೂ ಅಚ್ಚರಿಯಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.