ಕನ್ನಡವನ್ನು ಉಸಿರಾಡಿದ ಜೀವಿ
Team Udayavani, Apr 20, 2021, 12:25 AM IST
ಪ್ರೊ| ಜಿ. ವೆಂಕಟಸುಬ್ಬಯ್ಯನವರು ಕನ್ನಡ ಭಾಷೆಯ ಸೂಕ್ಷ್ಮ ಸಂವೇದನೆಯ ಅಂತಃಕರಣ ದಂತಿದ್ದರು. ನೂರೆಂಟು ವರ್ಷಗಳ ತುಂಬು ಬಾಳನ್ನು ಬಾಳಿದ ಅವರು ಇಪ್ಪತ್ತನೇ ಶತಮಾನದ ಕನ್ನಡದ ಆದ್ಯ ಪುರುಷರೊಂದಿಗೂ 21ನೇ ಶತಮಾನದ ಹೊಸಕಾಲದ ಪ್ರತಿಭೆಗಳ ಜತೆಗೂ ನಿಕಟ ಸಂಪರ್ಕ ಹೊಂದಿದ್ದ ಸೇತುವಿನಂತಿದ್ದರು.
ಡಾ| ಎಸ್. ರಾಧಾಕೃಷ್ಣನ್ ಅವರು ಜಿ.ವಿ. ಅವರ ಅರಂಭದ ಗುರುವರ್ಯ. ಪ್ರೊ| ತಳುಕಿನ ವೆಂಕಣ್ಣಯ್ಯ, ತೀನಂಶ್ರೀ, ಡಿ.ಎಲ್. ನರಸಿಂಹಾಚಾರ್, ರಾ. ಅನಂತಕೃಷ್ಣ ಶರ್ಮ, ಎ.ಆರ್. ಕೃಷ್ಣಶಾಸ್ತ್ರಿಗಳಂಥ ಕನ್ನಡದ ಆಚಾರ್ಯ ಪುರುಷರು ಜಿ.ವಿ. ಅವರನ್ನು ಗಾಢ ವಾಗಿ ಪ್ರಭಾವಿಸಿದ ಪ್ರಾಧ್ಯಾಪಕರು. ಜಿ.ವಿ. ಅವರಿಗೆ ಶಬ್ದಕೋಶ ರಚನೆಯ ಬಗ್ಗೆ ಆಸಕ್ತಿ ಕುದು ರಿಸಿದವರು ಪ್ರೊ| ಎ.ಆರ್. ಕೃಷ್ಣಶಾಸ್ತ್ರಿಗಳು.
ಶಬ್ದಕೋಶ ಬಿಟ್ಟರೆ ಜೀವಿಯ ಆಸಕ್ತಿಯ ಇತರ ರಂಗಗಳು ಗ್ರಂಥ ಸಂಪಾದನೆ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ ರಚನೆ. ಅವರು 60 ಹಳೆಯ ಕೃತಿಗಳನ್ನು ಸಂಪಾದಿಸಿದ್ದಾರೆ. ಮೂರು ಮಕ್ಕಳ ಕೃತಿಗಳನ್ನು ರಚಿಸಿದ್ದಾರೆ. ಶಬ್ದಕೋಶ ನಿರ್ಮಾಣದಲ್ಲಂತೂ ಅವರದು ಉಲ್ಲೇಖೀಸಲೇ ಬೇಕಾದ ಹೆಸರು. 8 ಸಂಪುಟಗಳಲ್ಲಿ, 10 ಸಹಸ್ರ ಪುಟಗಳಿಗೂ ಮೀರಿದ ಕನ್ನಡ ಶಬ್ದಕೋಶವು ಜಿ.ವಿ. ಅವರ ನೇತೃತ್ವದಲ್ಲಿ ಸಹ ಸಂಪಾದಕರ ಸತತ ಶ್ರಮದಿಂದ 3 ದಶಕಗಳ ಕಾರ್ಯಯೋಜನೆಯ ಫಲವಾಗಿ ನಿರ್ಮಿತವಾಗಿದೆ. ಅದು ಜಿ.ವಿ. ಅವರ ಆಚಾರ್ಯ ಕೃತಿ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ಹೆಸರನ್ನು ಅಮರಗೊಳಿಸಿರುವಂಥದ್ದು.
ಶಬ್ದಕೋಶ, “ಇಗೋ ಕನ್ನಡ’ದ ಕರ್ತೃ
ಜಿ. ವೆಂಕಟಸುಬ್ಬಯ್ಯನವರು ವಿದ್ವಾಂಸರು. ಆದರೆ ತಪೋಮಗ್ನರಾಗಿ ಗಿರಿಶಿಖರವೇರಿ ಕುಳಿತವರಲ್ಲ. ಪಾಂಡಿತ್ಯದ ಅಂತಸ್ಸತ್ವವನ್ನು ಕಿರು ಗಾಲುವೆಯ ಮೂಲಕ ಸಾಮಾನ್ಯ ಕೃಷಿಕರ ನಿತ್ಯ ವ್ಯವಸಾಯಕ್ಕೆ ಒದಗಿಸಿದವರು. “ಇಗೋ ಕನ್ನಡ’ ಎಂಬ ಕನ್ನಡ ಪದಗಳ ನಿಷ್ಪತ್ತಿ, ಅರ್ಥ, ಧ್ವನಿಗಳನ್ನು ಸರಳವಾಗಿ ವಿವರಿಸುವ ಗ್ರಂಥ ಜಿ.ವಿ. ಅವರ ಸಮಾಜಪ್ರೀತಿಯನ್ನು ತೋರು ವಂತಿದೆ. “ಇಗೋ ಕನ್ನಡ’ದ ಮೂರು ಸಂಪುಟಗಳು ಬಂದಿವೆ. ಭಾಷೆಯಲ್ಲಿ ಆಸಕ್ತಿ ಉಳ್ಳವರು ತಪ್ಪದೆ ಓದಬೇಕಾದ ಕೃತಿಗಳಿವು. ಸಂಘಟಕರಾಗಿ, ವಾಗ್ಮಿಯಾಗಿ, ವಿದ್ಯಾರ್ಥಿಗಳನ್ನು ಪ್ರಭಾವಿಸುವ ಪ್ರಾಧ್ಯಾಪಕರಾಗಿ ಜಿ.ವಿ. ಅವರ ಸಾಧನೆ ಅಸಾಮಾನ್ಯವಾದುದು. ಅವರು ಹಳಗನ್ನಡ ಕಾವ್ಯಗಳನ್ನು, ಪಂಪ, ಕುಮಾರವ್ಯಾಸ, ಲಕ್ಷ್ಮೀಶರನ್ನು ಕುರಿತು ಮಾಡಿದ ಪಾಠ-ಪ್ರವಚನಗಳನ್ನು ಅವರ ವಿದ್ಯಾರ್ಥಿಗಳು ಈಗಲೂ ನೆನೆಯುತ್ತಾರೆ.
ನಿವೃತ್ತನಾದ ಮೇಲೆ ಜಿ.ವಿ. ಅವರ ಸಂಪರ್ಕ ನನಗೆ ನಿಕಟವಾಯಿತು. ಆಗಾಗ ಕಾವ್ಯ -ಭಾಷೆಯ ವಿಷಯದ ಸಮಸ್ಯೆಗಳನ್ನು ಬಿಡಿಸಿ ಕೊಳ್ಳಲು ಅವರ ಮಾರ್ಗದರ್ಶನ ಪಡೆ ಯು ವುದು ನಡೆಯತೊಡಗಿತು. ಜಿ.ವಿ. ತಮ ಗಿಂತ ಕಿರಿಯರಾದ ಜಿ.ಎಸ್.ಎಸ್., ಎಲ್.ಎಸ್. ಎಸ್., ಅ.ರಾ. ಮಿತ್ರ ಮೊದಲಾದ ವಿದ್ವಾಂಸರಿಗೆ ಪ್ರಿಯರಾದವರಾಗಿದ್ದರು. ಜಿ.ವಿ. ಯವರೊಂದಿಗೆ ಸಂಪರ್ಕ ಹೆಚ್ಚಾದ ಮೇಲೆ ಅವರು ವಿದ್ವಾಂಸರಾಗಿರುವಂತೆಯೇ ಸೂಕ್ಷ್ಮ ಗ್ರಾಹಿಗಳಾದ ರಸಿಕರೂ ಹೌದು ಎಂಬುದು ನನಗೆ ಮನವರಿಕೆ ಆಯಿತು.
ಅವರಿಂದ ಉಪಕೃತನಾದ ನಾನು ನನ್ನ “ಶ್ರೀ ರಾಮಚಾರಣ’ ಎಂಬ ಕೃತಿಯನ್ನು ಜಿ.ವಿ. ಅವರಿಗೆ ಅರ್ಪಿಸಿದೆ. ಸ್ವತಃ ಜಿ.ವಿ. ಅವರೇ ಆ ಗ್ರಂಥವನ್ನು ಬಿಡುಗಡೆ ಮಾಡಿ, ಮಾತಾಡಿದ್ದರು.
“ಬೇಗ ಒಂದು ಮಹಾಕಾವ್ಯವನ್ನು ಬರೆಯಿರಿ’ ಎಂದು ನನಗೆ ಅವರು ಯಾವಾಗಲೂ ಹೇಳುತ್ತಿದ್ದರು. ಹೊಸ ಲೇಖಕರಿಗೆ ಅವರು ನೀಡುವ ಪ್ರೋತ್ಸಾಹವನ್ನು ನಾನು ಗಮನಿಸಿದ್ದೇನೆ. ನೂರು ವಯಸ್ಸು ದಾಟಿದ ಮೇಲೂ ಜಿ.ವಿ. ಅವರು ಹೊಸಬರ ಕೃತಿಗಳನ್ನು ಓದಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ಮನೆಗೆ ಹೋದಾಗ ಅವರ ಮೇಜಿನ ಮೇಲೆ ಆ ತಿಂಗಳಷ್ಟೇ ಪ್ರಕಟವಾದ ಅನೇಕ ಹೊಸ ಲೇಖಕರ ಕೃತಿಗಳು ನನ್ನ ಕಣ್ಣಿಗೆ ಬೀಳುತ್ತ ಇದ್ದವು. ವಸುಧೇಂದ್ರ, ಜಯಂತ ಕಾಯ್ಕಿಣಿ, ವೈದೇಹಿ ಅವರ ಕೃತಿಗಳನ್ನು ನಾನು ಅವರ ಮೇಜಿನ ಮೇಲೆ ನೋಡಿದ್ದೇನೆ. ಹಳೆ ಮತ್ತು ಹೊಸಪೀಳಿಗೆಯ ಜತೆಗೆ ಜಿ.ವಿ. ನಿಕಟ ಸಂಪರ್ಕ ಹೊಂದಿದ್ದರು ಎಂದು ಈ ಕಾರಣಕ್ಕಾಗಿಯೇ ನಾನು ಹೇಳಿದ್ದು.
ಕಳೆದ ವರ್ಷ ನನ್ನ “ಬುದ್ಧಚರಣ’ ಎನ್ನುವ ಮಹಾಕಾವ್ಯ ಪ್ರಕಟವಾಯಿತು. ಕೋವಿಡ್ ಆಕ್ರಮಣದ ಕಾಲವದು! ಅಂಚೆಯ ಮೂಲಕ ಗ್ರಂಥವನ್ನು ಜಿ.ವಿ.ಯವರಿಗೆ ಕಳುಹಿಸಿಕೊಟ್ಟೆ. ಆಶ್ಚರ್ಯವೆಂದರೆ, ಒಂದೇ ವಾರದಲ್ಲಿ ಜಿ.ವಿ. ಅವರ ಮಗ ಜಿ.ವಿ. ಅರುಣ ಅವರು ನನಗೆ ಫೋನ್ ಮಾಡಿ “ತಂದೆ ನಿಮ್ಮೊಂದಿಗೆ ಮಾತಾಡುತ್ತಾರಂತೆ…’ ಎಂದರು. ಜಿ.ವಿ. ತಮ್ಮ ಸ್ಪಷ್ಟವಾದ ಧ್ವನಿಯಲ್ಲಿ “ಬುದ್ಧಚರಣ’ದ ಕುರಿತು ಹತ್ತು ನಿಮಿಷ ಮಾತಾಡಿದರು. ತಾವು ಆ ಕೃತಿಯ ಬಹು ಭಾಗವನ್ನು ಓದಿರುವುದಾಗಿ ಹೇಳಿದರು. ಕಾವ್ಯವನ್ನು ಓದಿ ಅವರು ಕಳುಹಿಸಿಕೊಟ್ಟ ಅಭಿಪ್ರಾಯವನ್ನು ನಾನು ನನ್ನ ಬಹು ದೊಡ್ಡ ಸಂಪಾದನೆಯೆಂದು ಭಾವಿಸುತ್ತೇನೆ. ಹೀಗೆ ಅದೆಷ್ಟೋ ಮಂದಿ ಹೊಸ ಪೀಳಿಗೆಯ ಲೇಖಕರನ್ನು ಅವರು ಪ್ರೋತ್ಸಾಹಿಸಿದ್ದಾರೆ.
ಅಮಿತ ಕನ್ನಡ ಪ್ರೇಮಿ
ಕನ್ನಡ ಭಾಷೆ ಅವರ ಜೀವದ ಉಸಿರಾಗಿತ್ತು. ಈ ಭಾಷೆಗೆ ಯಾವತ್ತೂ ಅಳಿವಿಲ್ಲ ಎಂದು ಅಭಿಮಾನದಿಂದ ಹೇಳುತ್ತಿದ್ದರು. ನಗರ ಪ್ರದೇಶಗಳನ್ನು ಮಾತ್ರ ನೋಡಿ ನೀವು ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಸಂದೇಹ ತಾಳಬೇಡಿ ಎನ್ನುತ್ತಿದ್ದರು. ಬಹುವಾಗಿ ಚಾಲ್ತಿಯಲ್ಲಿರುವ ಜಗತ್ತಿನ 26ನೇ ಭಾಷೆ ಕನ್ನಡ ಎನ್ನುತ್ತಿದ್ದರು.
ಜಿ.ವಿ. ಅವರದ್ದು ಶಿಸ್ತುಬದ್ಧ ಜೀವನ. ತಮ್ಮ ದಿನದ ಬಹುಕಾಲವನ್ನು ಅಧ್ಯಯನಕ್ಕೆ ವಿನಿಯೋಗಿಸುತ್ತಿದ್ದರು. ಶುಚಿ, ರುಚಿ, ವಿನಯ ಅವರ ಜೀವಿತದ ಆದರ್ಶಗಳಾಗಿದ್ದವು. ಬಿಳಿಯ ಪಂಚೆ, ಜುಬ್ಟಾ ಅಥವಾ ಅರ್ಧತೋಳಿನ ಅಂಗಿ ಅವರಿಗೆ ಪ್ರಿಯವಾದ ಉಡುಗೆ. ಓದುವಾಗ ಕನ್ನಡಕದ ಅಗತ್ಯವಿರಲಿಲ್ಲ. ಅವರ ಹೊರಗಣ್ಣು -ಒಳಗಣ್ಣು ಎರಡೂ ಸ್ವತ್ಛವಾಗಿದ್ದವು. ಇವರೇನಾ ಇಷ್ಟೆಲ್ಲ ಮಹತ್ವದ ಕೃತಿಗಳ ರಚನೆಗಾರರು ಎಂದು ಬೆರಗು ಹುಟ್ಟಿಸುವಂತಿದ್ದರು. ಇಂಥ ನಿಶ್ಶಬ್ದ ಸಾಧಕರಿಗೆ ಪದ್ಮಶ್ರೀ, ಪಂಪ ಪ್ರಶಸ್ತಿ, ಅಕಾಡೆಮಿಯ ಫೆಲೋಶಿಪ್ ಗೌರವ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವೆಲ್ಲ ದೊರೆತದ್ದು ತೀರಾ ಸಹಜವಾಗಿತ್ತು.
ಮೊಬೈಲ್‌ನಿಂದ ದೂರವಿದ್ದ ಜಿ.ವಿ.!
ಅಂಚೆ ಪತ್ರಗಳ ಕಾಲ ದಾಟಿ, ಟೆಲಿಫೋನ್ ಯುಗ ನೋಡಿ, ಸ್ಮಾರ್ಟ್‌ಫೋನ್ ಯುಗಕ್ಕೆ ಬಂದರೂ, ಜಿ.ವಿ. ಮೊಬೈಲ್ ಬಳಸುತ್ತಿರಲಿಲ್ಲ. ಇದರ ಅರ್ಥ, ಅವರು ಅಪ್‌ಡೇಟ್ ಆಗಲಿಲ್ಲ ಅಂತಲ್ಲ. “ಮೊಬೈಲ…, ಕಾಲಹರಣಕ್ಕಾಗಿ ಕಂಡುಹಿಡಿದ ಸಾಧನ’ ಎನ್ನುವುದು ಅವರ ಅಚಲ ನಂಬಿಕೆಯಾಗಿತ್ತು.
ಜಿ.ವಿ. ಅವರಿಗೆ ಸಂದ ಗೌರವಗಳು
ಕಸಾಪ ಕಾರ್ಯದರ್ಶಿ
ಕಸಾಪ ಅಧ್ಯಕ್ಷ (1964- 69)
ಶ್ರೀರಂಗಪಟ್ಟಣದಲ್ಲಿ ನಡೆದ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ
1974ರಲ್ಲಿ ಬೀದರ್‌ನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ಕನ್ನ ನುಡಿ ಪತ್ರಿಕೆಯ ಸಂಪಾದಕ
ಕನ್ನಡ- ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು
ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು
ಅಖೀಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷ
ಕೇಂದ್ರ ಸರಕಾರದ ಭಾರತೀಯ ಭಾಷಾ ಸಮಿತಿ ಕನ್ನಡ ಪ್ರತಿನಿಧಿ
2007ರಲ್ಲಿ ಆಳ್ವಾಸ್ ನುಡಿಸಿರಿ ಸರ್ವಾಧ್ಯಕ್ಷತೆ
2011ರಲ್ಲಿ ಬೆಂಗಳೂರಿನಲ್ಲಿ ನಡೆದ 77ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
2012ರಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ ಶತಾಯುಷಿ ಗೌರವ
2013ರಲ್ಲಿ ವಿಶ್ವ ನುಡಿಸಿರಿ ವಿರಾಸತ್ ಸಮ್ಮೆಳನದಲ್ಲಿ ವಿಶೇಷ ಗೌರವ ಸಮ್ಮಾನ
- ಎಚ್.ಎಸ್. ವೆಂಕಟೇಶಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.