3ನೇ ಹಂತದ ಮುಳುಗಡೆ ಪ್ರಕ್ರಿಯೆ
ಶುರು 10 ಕೋಟಿ ಮೊತ್ತದ ಮೊದಲ ಆರಂಭಿಕ ಕಾಮಗಾರಿಗೆ ಅನುಮೋದನೆ | 5801 ಎಕರೆ ಭೂ ಸ್ವಾಧೀನ
Team Udayavani, Apr 20, 2021, 7:40 PM IST
ವರದಿ : ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲಿ ಮುಳುಗಡೆಯಾಗಲಿರುವ ಬಾಗಲಕೋಟೆ ನಗರದ ಸಂತ್ರಸ್ತರಿಗೆ ಪುನರ್‌ವಸತಿ, ಪುನರ್ ನಿರ್ಮಾಣ ಕಲ್ಪಿಸುವ ಬಹು ಮಹತ್ವದ ಕಾರ್ಯಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. 3ನೇ ಯೂನಿಟ್ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಿದೆ.
ಹೌದು, ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯ 523 ಮೀಟರ್‌ದಿಂದ 525 ಮೀಟರ್ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರು, ಬಾಡಿಗೆದಾರರಿಗೆ ಪುನರ್ ವಸತಿ ಕಲ್ಪಿಸಲು ನಗರದ ದಡ್ಡೇನವರ ಕ್ರಾಸ್‌ನಿಂದ ಮುಚಖಂಡಿ ಹಾಗೂ ಶಿಗಿಕೇರಿ ವ್ಯಾಪ್ತಿಯ 1640 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಭೂಮಿಯಲ್ಲಿ ಒಟ್ಟು 5 ಬ್ಲಾಕ್ ಮಾದರಿಯ ಸೆಕ್ಟರ್‌ಗಳನ್ನು ನಿರ್ಮಿಸಿ, ನಗರದ 3ನೇ ಹಂತದ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
5801 ಎಕರೆ ಭೂ ಸ್ವಾಧೀನ:
ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲಿ ಮುಳುಗಡೆಯಾದ ಬಾಗಲಕೋಟೆಯ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು 1987-89ರಲ್ಲಿ 4544 ಎಕರೆ ಸ್ವಾಧೀನ ಪಡಿಸಿಕೊಂಡರೆ, 2013-14ರಲ್ಲಿ 1257 ಎಕರೆ ಬಿಟಿಡಿಎ ವಶಪಡಿಸಿಕೊಂಡಿದೆ. 3ನೇ ಹಂತದ 1640 ಎಕರೆ ಭೂಮಿ ಅಗತ್ಯವಿದ್ದು, ಅದರಲ್ಲಿ 282 ಎಕರೆ ಭೂಮಿಯ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಅದನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನವನಗರ ಯೂನಿಟ್ -1ರ ನಿರ್ಮಾಣಕ್ಕೆ 1521 ಎಕರೆ, 2ನೇ ಯೂನಿಟ್ ನಿರ್ಮಾಣಕ್ಕೆ 1333 ಎಕರೆ ಬಳಸಿಕೊಂಡಿದ್ದು, ಯೂನಿಟ್ -3ರ ನಿರ್ಮಾಣಕ್ಕಾಗಿ 1257 ಎಕರೆ ಬಳಕೆ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನುಳಿದ ನೀರು ಸರಬರಾಜು ಯೋಜನೆಗಳಿಗೆ 69 ಎಕರೆ, ತೋಟಗಾರಿಕೆ ವಿವಿಗೆ 300 ಎಕರೆ, ಕೆಐಎಡಿಬಿ ಯೂನಿಟ್-1ರ ನಿರ್ಮಾಣಕ್ಕೆ 257 ಎಕರೆ, ಸರ್ಕಾರಿ, ಅರೆಸರಕಾರಿ, ಖಾಸಗಿ ಸಂಸ್ಥೆಗಳಿಗೆ 610.8 ಎಕರೆ ಹಂಚಿಕೆ ಮಾಡಿದ್ದು, ಮುರಮ್ ಕ್ವಾರಿ 22 ಎಕರೆ, ಲಿಂಕ್ ರಸ್ತೆಗಳಿಗಾಗಿ 117 ಎಕರೆ ಬಳಸಿಕೊಳ್ಳಲಾಗುತ್ತಿದೆ.
4584 ಸಂತ್ರಸ್ತರು: ಯೂನಿಟ್-3ರ ವ್ಯಾಪ್ತಿಗೆ (523ರಿಂದ 525 ಮೀಟರ್ ವ್ಯಾಪ್ತಿಯಲ್ಲಿ) ಬರುವ ಸಂತ್ರಸ್ತರ ಕುರಿತು ಸಾಮಾಜಿಕ, ಆರ್ಥಿಕ ಸಮೀಕ್ಷೆ ಕೈಗೊಂಡಿದ್ದು, ಇದರ ಅನ್ವಯ 2421 ಜನ ಮೂಲ ಸಂತ್ರಸ್ತರು, 1163 ಬಾಡಿಗೆದಾರರು ಸಂತ್ರಸ್ತರಾಗಲಿದ್ದಾರೆ. ಈ ಸಂತ್ರಸ್ತರಿಗೆ ಯೂನಿಟ್-3ರಲ್ಲಿ ಪುನರ್ ವಸತಿ ಕಲ್ಪಿಸಲಾಗುತ್ತಿದೆ. ಯೂನಿಟ್-3ರನ್ನು ಸುಮಾರು 300ರಿಂದ 500 ಎಕರೆಗೆ 1 ಬ್ಲಾಕ್‌ದಂತೆ ಆಧುನಿಕ ಮಾದರಿಯ 5 ಬ್ಲಾಕ್ ರಚಿಸಲು ಉದ್ದೇಶಿಸಲಾಗಿದೆ. ಇಲ್ಲಿ ಎ ಮಾದರಿ ನಿವೇಶನಗಳನ್ನು 8,238, ಬಿ ಮಾದರಿ-3,866, ಸಿ ಮಾದರಿ-2236, ಡಿ ಮಾದರಿ-2262, ಇ ಮಾದರಿ 1337 ಸೇರಿ ಒಟ್ಟು 17,939 ನಿವೇಶನ ರಚಿಸಲಾಗುತ್ತಿದೆ. ಯೂನಿಟ್-3ರ ನಕ್ಷೆ ಅನುಮೋದನೆ ದೊರೆತಿದ್ದು, ಬಾಗಲಕೋಟೆ ನಗರದ ಮಹಾ ಯೋಜನೆಗೆ ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ.
ವಿವಿಧ ಕಾಮಗಾರಿಗೆ ಅನುಮೋದನೆ: ಯುನಿಟ್-3ರಲ್ಲಿ ರಸ್ತೆ, ರಸ್ತೆ ಬದಿಯಲ್ಲಿನ ಚರಂಡಿ ಹಾಗೂ ಇತರೆ ಕಾಮಗಾರಿ ಸೇರಿದಂತೆ ಒಟ್ಟು 10.50 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಜತೆ 13 ಕೋಟಿ ರೂ. ಗಳ ಬೇರೆ ಬೇರೆ ಕಾಮಗಾರಿಗಳಿಗೆ ಬಿಟಿಡಿಎ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.