ಕೋವಿಡ್ ಲಕ್ಷಣ ಇದ್ದರೂ ನೆಗೆಟಿವ್ ಬರಲು ಕಾರಣ ಏನು ಗೊತ್ತಾ?
Team Udayavani, Apr 26, 2021, 4:56 PM IST
ಕೋವಿಡ್ ಸೋಂಕಿನ ಪ್ರಕರಣಗಳು ನಿತ್ಯ ಹೆಚ್ಚಾಗುತ್ತಲೇ ಇವೆ. ಇದರ ನಡುವೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದು ಸರ್ಕಾರಕ್ಕೆ ಮತ್ತು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಕೆಲವರಿಗೆ ಕೋವಿಡ್ ಲಕ್ಷಣಗಳು ಇದ್ದರೂ ಕೂಡ ವರದಿ ಬಂದಾಗ ನೆಗೆಟಿವ್ ಎಂದು ತೋರಿಸುತ್ತದೆ. ಕೋವಿಡ್ ನ ಎಲ್ಲಾ ಲಕ್ಷಣಗಳನ್ನ ಹೊಂದಿದ ಬಳಿಕವೂ ಕೆಲವರಿಗೆ ನೆಗೆಟಿವ್ ರಿಪೋರ್ಟ್ ತೋರಿಸುತ್ತಿದ್ದು ಜನರನ್ನ ಗೊಂದಲಕ್ಕೆ ತಳ್ಳಿದೆ.
ದೇಶದಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿರೋದರ ಜೊತೆಗೆ ಕೊರೊನಾ ಪರೀಕ್ಷಾ ವರದಿ ನೀಡಲು ವಿಳಂಬ ಮಾಡ್ತಿರೋದಕ್ಕೂ ನಾವು ಸಾಕ್ಷಿಯಾಗುತ್ತಿದ್ದೇವೆ. ಕೊರೊನಾ ಎರಡನೇ ಅಲೆಯ ಭೀಕರತೆಯ ನಡುವೆಯೇ ಕೊರೊನಾ ವರದಿಯಲ್ಲಿ ವಿಳಂಬ ಹಾಗೂ ಸುಳ್ಳು ನೆಗೆಟಿವ್ ವರದಿಗಳು ಕೊರೊನಾ ನಿರ್ವಹಣೆಯಲ್ಲಿ ದೇಶ ವಿಫಲವಾಗುತ್ತಿರೋದಕ್ಕೆ ಹಿಡಿದ ಕೈಗನ್ನಡಿ ಆಗಿದೆ.
ಆರ್ಟಿ ಪಿಸಿಆರ್ ಟೆಸ್ಟ್ಗಳು ಸೂಕ್ಷ್ಮ ರೀತಿಯಲ್ಲಿ ವೈರಸ್ಗಳನ್ನ ಪತ್ತೆ ಮಾಡಲು ನೆರವಾಗುತ್ತವೆ. ಆದರೆ ಯಾವುದೇ ಪರೀಕ್ಷಾ ವಿಧಾನಗಳು 100 ಪ್ರತಿಶತ ನಿಖರ ಎಂದು ಹೇಳಲು ಆಗೋದಿಲ್ಲ.
ಸಂಶೋಧಕರು ಹೇಳುವ ಮಾಹಿತಿಯ ಪ್ರಕಾರ ಆರ್ಟಿ – ಪಿಸಿಆರ್ ಟೆಸ್ಟ್ ವೈರಸ್ ಪತ್ತೆ ಮಾಡುವಲ್ಲಿ ತುಂಬಾನೇ ಸಹಕಾರಿ. ಆದರೆ ವಿವಿಧ ಕಾರಣಗಳಿಂದಾಗಿ ಈ ಆರ್ಟಿ ಪಿಸಿಆರ್ ಟೆಸ್ಟ್ನ ನಿಖರತೆಯಲ್ಲಿ ವ್ಯತ್ಯಾಸ ಉಂಟಾಗುತ್ತೆ ಎಂದು ಅಂದಾಜಿಸಲಾಗಿದೆ.
ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಹೀಗೆ ಜನರು ತಪ್ಪಾದ ಪರೀಕ್ಷಾ ವರದಿಯನ್ನ ಹೊಂದುತ್ತಿರೋದು ನಿಜಕ್ಕೂ ಆಘಾತಕಾರಿ ಮಾಹಿತಿಯಾಗಿದೆ. ಇದರಿಂದ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ತಪ್ಪು ವರದಿಗಳಿಂದಾಗಿ ಸೋಂಕಿತನ ಚಿಕಿತ್ಸೆಯಲ್ಲಿ ವಿಳಂಬ ಆಗೋದು ಹಾಗೂ ಇದರಿಂದಾಗಿ ಸೌಮ್ಯ ಲಕ್ಷಣಗಳನ್ನ ಹೊಂದಿರುವ ವ್ಯಕ್ತಿ ಮುಂದೆ ಗಂಭೀರ ಲಕ್ಷಣಗಳಿಂದ ಬಳಲುವ ಸಾಧ್ಯತೆ ಹೆಚ್ಚಿರಲಿದೆ.
ಕೊರೊನಾ ಎರಡನೆ ಅಲೆಯಿಂದಾಗಿ ಪ್ರಯೋಗಾಲಯದ ಸಿಬ್ಬಂದಿಗೆ ಮೇಲೆ ಹೆಚ್ಚುತ್ತಿರುವ ಒತ್ತಡ ಹಾಗೂ ಹೆಚ್ಚೆಚ್ಚು ಪರೀಕ್ಷೆಗಳು ಈ ರೀತಿ ತಪ್ಪು ವರದಿ ಬರಲು ಕಾರಣವಾಗಿದೆ. ಆರ್ಟಿ – ಪಿಸಿಆರ್ ಟೆಸ್ಟ್ಗಳು ಯಾವ ಸಮಯದಲ್ಲಿ ಗಂಟಲುದ್ರವ ಸಂಗ್ರಹ ಮಾಡಿದರು ಎಂಬ ಆಧಾರದ ಮೇಲೆಯೂ ನಿಂತಿರುತ್ತೆ. ಅಲ್ಲದೇ ಸರಿಯಾಗಿ ಸ್ವ್ಯಾಬ್ ಸಂಗ್ರಹ ಮಾಡದ ಸಂದರ್ಭದಲ್ಲಿ ಅಥವಾ ನಿಖರವಾದ ತಾಪಮಾನದಲ್ಲಿ ಸ್ವ್ಯಾಬ್ಗಳನ್ನ ಇಡದೇ ಹೋದಲ್ಲಿ ವೈರಾಣುಗಳನ್ನ ಪತ್ತೆ ಮಾಡೋದು ಕಷ್ಟವಾಗಲಿದೆ.
ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ವೈರಾಣುಗಳು ಇದ್ದಲ್ಲಿ ಪರೀಕ್ಷಾ ವರದಿ ನೆಗೆಟಿವ್ ಬರುವ ಸಾಧ್ಯತೆ ಇದೆ. ಗುರುತಿಸಲು ಆಗದೇ ಇರುವಷ್ಟು ಕಡಿಮೆ ಪ್ರಮಾಣದಲ್ಲಿ ವೈರಸ್ ದೇಹದಲ್ಲಿ ಇದ್ದರೆ ನೆಗೆಟಿವ್ ರಿಪೋರ್ಟ್ ಬರಬಹುದು.
ಸೋಂಕಿನ ಲಕ್ಷಣ ಶುರುವಾದ ಕೂಡಲೇ ಪರೀಕ್ಷೆ ಮಾಡಿಸಿದ್ರೂ ಒಮ್ಮೊಮ್ಮೆ ತಪ್ಪು ವರದಿ ಬರಬಹುದು. ಹೀಗಾಗಿ ಲಕ್ಷಣಗಳು ಕಾಣಿಸಿಕೊಂಡ 3- 4 ದಿನ ಐಸೋಲೇಟ್ ಆಗಿ ಬಳಿಕ ಪರೀಕ್ಷೆಗೆ ಒಳಗಾಗೋದು ಉತ್ತಮ.
ಒಂದು ವೇಳೆ ಲಕ್ಷಣಗಳು ಇದ್ದ ಬಳಿಕವೂ ನಿಮ್ಮ ವರದಿಯಲ್ಲಿ ನೆಗೆಟಿವ್ ಎಂದು ತೋರಿಸುತ್ತಿದ್ದರೆ ನೀವು ಮಾಡಬಹುದಾದ ಉತ್ತಮ ಕೆಲಸ ಅಂದರೆ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುವುದು. ಅಲ್ಲದೇ ಎರಡನೇ ಪರೀಕ್ಷೆಯ ವರದಿಯ ಫಲಿತಾಂಶ ಬರುವವರೆಗೂ ಕ್ವಾರಂಟೈನ್ನಲ್ಲೇ ಇರೋದು ಇನ್ನೂ ಸೂಕ್ತವಾಗಿದೆ.
ಅಲ್ಲದೇ ನಿತ್ಯ ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಎರಡನೇ ವರದಿ ಬರುವವರೆಗೂ ವೈದ್ಯರ ಸಂಪರ್ಕದಲ್ಲಿರಿ. ಸರಿಯಾದ ಚಿಕಿತ್ಸೆಯನ್ನ ಪಡೆಯುವುದು ಅವಶ್ಯಕವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.