ತತ್ವಜ್ಞಾನಿ ಶಾಲಾ ಮಾಸ್ತರ
Team Udayavani, Apr 27, 2021, 5:48 PM IST
ಜಗತ್ತಿನಲ್ಲಿರುವ ಎಲ್ಲ ಭೌತವಸ್ತುಗಳೂ ಆಟಂ ಎಂಬ ಅತಿ ಚಿಕ್ಕ ಘಟಕಗಳಿಂದಾಗಿವೆ. ವಸ್ತುವನ್ನು ವಿಘಟಿಸಬಹುದು, ಆದರೆ, ಆಟಂಗಳನ್ನು ಮತ್ತೆ ಒಡೆಯಲು ಸಾಧ್ಯವಿಲ್ಲ. ಇವು, ಯಾವುದೇ ವಸ್ತುವಿನ ವಿಘಟನೆಯ ಸರಣಿ ಪ್ರಕ್ರಿಯೆಯಲ್ಲಿ ಕೊನೆಗೆ ಉಳಿಯುವ ವಸ್ತುಗಳು. ಪ್ರತಿ ವಸ್ತುವಿನ ಆಟಂ ಕೂಡ ವಿಶಿಷ್ಟ.
ಆ ವಿಶಿಷ್ಟತೆಯಿಂದಾಗಿಯೇ ವಸ್ತುಗಳಿಗೆ ವಿವಿಧ ರೂಪ, ಗುಣ, ಧರ್ಮ -ಎಂಬುದು ವಿಜ್ಞಾನದ ವಿದ್ಯಾರ್ಥಿಗಳು ಓದುವ ಪರಮಾಣು ಸಿದ್ಧಾಂತದ ಮೂಲ ಪಾಠ.
ಈ ಸಿದ್ಧಾಂತವನ್ನು ಪಾಶ್ಚಾತ್ಯ ಜಗತ್ತಿನಲ್ಲಿ ಮೊದಲು ಮಂಡಿಸಿ ದವನು ಜಾನ್ ಡಾಲ್ಟನ್. ಅವು ಹತ್ತೂಂಬತ್ತನೇ ಶತಮಾನದ ಪ್ರಾರಂಭಿಕ ವರ್ಷಗಳು. ಡಾಲ್ಟನ್‌ನ ಸಿದ್ಧಾಂತ ಇಡಿಯ ವಿಜ್ಞಾನಜಗತ್ತನ್ನು ಎಷ್ಟು ಪ್ರಭಾವಿಸಿತೆಂದರೆ ಅದನ್ನು ಕೈಬಿಟ್ಟು ವಿಜ್ಞಾನದ ಅಧ್ಯಯನವೇ ಸಾಧ್ಯವಿಲ್ಲ ಎಂಬಂತಾಯಿತು. ಅದುವರೆಗೆ ಬೆಳೆದು ಬಂದಿದ್ದ ವಿಜ್ಞಾನವನ್ನು ಡಾಲ್ಟನ್‌ನ ಸಿದ್ಧಾಂತದ ಹಿನ್ನೆಲ್ಲೆಯಲ್ಲಿ ಹೊಸದಾಗಿ ಬರೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು.
ಡಾಲ್ಟನ್ ಹುಟ್ಟಿದ್ದು 1766ರಲ್ಲಿ, ಇಂಗ್ಲೆಂಡಿನ ಈಗಲ್‌ಸ್‌ಫೀಲ್ಡ್ ಎಂಬ ಪ್ರಾಂತ್ಯದಲ್ಲಿ. ತಂದೆ ನೇಕಾರ. ಕಷ್ಟದ ಜೀವನ. ಡಾಲ್ಟನ್ ಬುದ್ಧಿವಂತನಾದರೂ ಶಿಷ್ಟ ಶಿಕ್ಷಣವನ್ನು ಕ್ರಮಬದ್ಧವಾಗಿಪಡೆಯುವ ಸವಲತ್ತುಗಳಿರಲಿಲ್ಲ. ಕೆಳಜಾತಿಯವನೆಂಬ ಕಾರಣಕ್ಕೆ ಅವನನ್ನು ಸಮಾಜದ ಉನ್ನತ ವರ್ಗ ದೂರವಿಟ್ಟಿತ್ತು. ಡಾಲ್ಟನ್‌ನಶಿಕ್ಷಣವೆಲ್ಲ ಬಹುತೇಕ ಸ್ವಾಧ್ಯಾಯದ್ದು. 1803ರಲ್ಲಿ, ಕ್ಯಾವೆಂಡಿಷ್, ಪ್ರೌಸ್ಟ್, ಲಾವೋಸಿಯೇ ಮೊದಲಾದ ವಿಜ್ಞಾನಿಗಳ ಹಲವು ಪ್ರಯೋಗ, ಫಲಿತಾಂಶಗಳನ್ನು ಮುಂದಿಟ್ಟುಕೊಂಡು ಡಾಲ್ಟನ್ ತನ್ನ ಪರಮಾಣು ಸಿದ್ಧಾಂತವನ್ನು ರೂಪಿಸಿದ. ಪರಮಾಣು (ಅಥವಾ ವಸ್ತುವಿನ ಕನಿಷ್ಠತಮ ಅವಿಚ್ಛಿನ್ನ ಭಾಗ)ವನ್ನು ಆಟಂ ಎಂದು ವಿಜ್ಞಾನದಲ್ಲಿ ಮೊದಲ ಬಾರಿ ಕರೆದವನು ಡಾಲ್ಟನ್‌ನನೇ.
ಡಾಲ್ಟನ್‌ನ ವಾದ ಬಹಳ ಬೇಗ ಜನಪ್ರಿಯವಾಯಿತು. ವಸ್ತುಗಳ ಭೌತಸ್ಥಿತಿಯನ್ನು ಹೀಗೆ ವಿವರಿಸಿದರೆ ಬಹುತೇಕವಿದ್ಯಮಾನಗಳನ್ನು ಅತ್ಯಂತ ಸಮರ್ಪಕವಾಗಿ, ಕ್ರಮಬದ್ಧವಾಗಿ,ವೈಜ್ಞಾನಿಕ ಹಿನ್ನೆಲೆಯಲ್ಲಿ ವಿವರಿಸಬಹುದು ಎಂಬುದು ವಿಜ್ಞಾನಿಗಳಿಗೆ ಗೊತ್ತಾಯಿತು.
ಡಾಲ್ಟನ್ ಎಷ್ಟು ಪ್ರಸಿದ್ಧನಾದನೆಂದರೆ 1820ರಲ್ಲಿ ಮೋನ್ಸಿಯೇಪೆಲೆಟನ್ ಎಂಬ ವಿಜ್ಞಾನಿ ಡಾಲ್ಟನ್‌ನನ್ನು ಸ್ವತಃ ನೋಡಬೇಕೆಂಬ ಒಂದೇ ಉದ್ದೇಶದಿಂದ ಪ್ಯಾರಿಸ್‌ನಿಂದ ಇಂಗ್ಲೆಂಡಿಗೆ ಬಂದ. ಆತ ಡಾಲ್ಟನ್‌ನ ಕೊಠಡಿಗೆ ಹೋದಾಗ, ಓರ್ವ ನಡುವಯಸ್ಸಿನ ವ್ಯಕ್ತಿ10 ವರ್ಷದ ಹುಡುಗನನ್ನು ಬಳಿಯಲ್ಲಿ ಕೂರಿಸಿಕೊಂಡು ಲೆಕ್ಕಹೇಳಿ ಕೊಡುತ್ತಿದ್ದ. ಅದೇನೂ ಗಹನ ಗಣಿತ ಚರ್ಚೆಯಲ್ಲ; ಸರಳ ಸಂಕಲನದ ಲೆಕ್ಕ! ಸ್ವಲ್ಪ ಗೊಂದಲಕ್ಕೊಳಗಾದ ಪೆಲೆಟನ್ ಕ್ಷಮಿಸಿ, ನಾನು ಬಂದಿರುವುದು ಜಾನ್ ಡಾಲ್ಟನ್ ಎಂಬವರ ಬಳಿಯೇತಾನೆ? ಎಂದು ಪ್ರಶ್ನಿಸಿದಾಗ ಡಾಲ್ಟನ್- ಹೌದು, ನಾನೇ ಆ ವ್ಯಕ್ತಿ. ಸ್ವಲ್ಪ ಸಮಯ ಕೊಡಿ. ನಾನು ಈ ಹುಡುಗನಿಗೆ ಲೆಕ್ಕಮಾಡಿಸಿ ನಂತರ ನಿಮ್ಮ ಜೊತೆ ಮಾತಿಗೆ ಕೂರುತ್ತೇನೆ ಎಂದ!ತಾನು ಬಹುವಾಗಿ ಮೆಚ್ಚಿಕೊಂಡ ಸಿದ್ಧಾಂತವನ್ನುರೂಪಿಸಿದವನು ವಿಶ್ವವಿದ್ಯಾಲಯದ ಪ್ರಾಧ್ಯಾಪಕನಲ್ಲ;ಸಾಧಾರಣ ಶಾಲಾ ಮಾಸ್ತರ ಎಂಬುದು ಪೆಲೆಟನ್‌ಗಾದರೂಹೇಗೆ ಗೊತ್ತಿರಬೇಕು? (ಅದಾಗಿ 6 ವರ್ಷಗಳಲ್ಲಿ, 1826ರಲ್ಲಿ ರಾಯಲ್ ಸೊಸೈಟಿ ಈ ಶಾಲಾ ಮಾಸ್ತರನನ್ನು ಸರ್ ಎಂಬ ಉಪಾಧಿ ಕೊಟ್ಟು ಗೌರವಿಸಿತು)
-ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.