ಕೋವಿಡ್ ಗೆಲ್ಲಲು ಎಲ್ಲರೂ ಪ್ರಾಮಾಣಿಕರಾಗಬೇಕಿದೆ
Team Udayavani, Apr 29, 2021, 7:10 AM IST
2020ರ ಅದೇ ದಿನಗಳು ಮತ್ತೆ ಮರುಕಳಿಸಿವೆ. ಅಂದು ಜನರನ್ನು ಬಲಾತ್ಕಾರವಾಗಿ ಮನೆಯೊಳಗಿರಲು ಸರಕಾರ ಕಠಿನ ಕ್ರಮ ತೆಗೆದುಕೊಂಡಿತು. ಆದರೂ ಸಂಪೂರ್ಣವಾಗಿ ಕೊರೊನಾ ಮರೆಯಾಗಲಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮತ್ತೆ ಹಿಂದಿನ ವ್ಯವಸ್ಥೆಗೆ ತಲುಪುತ್ತಿದ್ದ ಜನರಿಗೆ ಕೊರೊ ನಾದ ಭೀಕರತೆ ಮರೆತೇ ಹೋಯಿತು. ಮಾಸ್ಕ್ ಕಾಟಾಚಾ ರವಾಯಿತು.
ಅಂತರ ಕಾಪಾಡಲು ಇಷ್ಟೊಂದು ಜನಸಂಖ್ಯೆ ಇರುವ ನಮ್ಮಲ್ಲಿ ಸಾಧ್ಯವಾಗಲೇ ಇಲ್ಲ. ಸರಕಾರದ ಕ್ರಮಗಳು ಆದೇಶಗಳಾಗಿ ಕಾಗದಗಳಲ್ಲೇ ಉಳಿದವು. ಕೊರೊನಾಗೆ ಕ್ಯಾರೇ ಅನ್ನದೆ ಎಲ್ಲ ಕಡೆಯಲ್ಲೂ ಜನಸಂದಣಿ ಹೆಚ್ಚುತ್ತಲೇ ಹೋಯಿತು. ಜಾತ್ರೆ, ಕೋಲ, ಕಂಬಳ, ಮದುವೆ, ಉತ್ಸವ, ಹಬ್ಬ, ಚುನಾವಣೆಗಳ ಸಂಭ್ರಮದಲ್ಲಿದ್ದ ನಮ್ಮ ನಾಯಕರು ಮತ್ತು ನಮಗೆ ಕೊರೊನಾ ಎರಡನೇ ಅಲೆ ಅಪ್ಪಳಿ ಸಿದ್ದೇ ಅರಿವಾಗಲಿಲ್ಲ. ಎರಡನೆಯ ಅಲೆಯ ಕುರಿತು ತಜ್ಞರು ಎಚ್ಚರಿಸುತ್ತಿದ್ದರೂ ಸರಕಾರವಾಗಲೀ ಜನರಾಗಲೀ ಗಂಭೀರವಾಗಿ ಪರಿಗಣಿಸಲಿಲ್ಲ. ಕೊರೊನಾ-2 ಮೊದಲಿಗಿಂತ ವೇಗವಾಗಿ ಹರಡಲು ಜನ ಮತ್ತು ಸರಕಾರದ ಈ ನಿರ್ಲಕ್ಷ್ಯಗಳೇ ಕಾರಣ. ಅದರ ಗಂಭೀರತೆಯನ್ನು ತಿಳಿಯುವಷ್ಟರ ಹೊತ್ತಿಗೆ ಅದು ಸಮುದಾಯದತ್ತ ತನ್ನ ಬಾಹುಗಳನ್ನು ಚಾಚಿ ಯಾಗಿತ್ತು. ಈಗ ಈ ರೋಗದ ಭೀಕರತೆಯನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಇದು ಈಗ ನಿಯಂತ್ರಣಕ್ಕೆ ಸಿಗದೆ ವ್ಯಾಪಿಸುತ್ತಿದೆ.
ಇದಕ್ಕೆಲ್ಲ ಯಾರು ಹೊಣೆ? ಎಲ್ಲರೂ ಇನ್ನೊಬ್ಬರ ಮೇಲೆ ಬೆಟ್ಟು ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜನರು ಸರಕಾರವನ್ನು, ಸರಕಾರ ಜನರನ್ನು ಹೊಣೆಯಾಗಿಸಿ ದೂರುವಷ್ಟರಲ್ಲಿ ರೋಗ ಜನರನ್ನು ಶ್ಮಶಾನದತ್ತ ತಳ್ಳುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೊದಲು ಒಂದಷ್ಟು ಅಮಾ ಯಕರು ಸಾವನ್ನಪ್ಪಿದ್ದಾರೆ.
ನಮ್ಮನ್ನು ಮುನ್ನಡೆಸಬೇಕಾದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಕೊರೊನಾ ಮಾರ್ಗಸೂಚಿಗಳನ್ನು ಎಷ್ಟು ಪಾಲಿಸಿದರು ಎಂಬುದು ನಮಗೆ ತಿಳಿದೇ ಇದೆ. ರಾಜಕೀಯ ಕಾರಣಗಳಿಗಾಗಿ ವರ್ಷಗಳ ಕಾಲ ಚುನಾವಣೆಯನ್ನು ಮುಂದೂಡಿದ್ದ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಕೊರೊನಾ ವಕ್ಕರಿಸಿದ ಬಳಿಕ ಚುನಾವಣೆ ನಡೆಸುವುದು ಚುನಾವಣ ಆಯೋಗ ಮತ್ತು ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿಬಿಟ್ಟಿತು. ಈ ಚುನಾವಣೆಯ ಭರಾಟೆಯಲ್ಲಿ ಕೊರೊನಾ ಎರಡನೇ ಅಲೆ ಸದ್ದಿಲ್ಲದೆ ದೇಶವ್ಯಾಪಿಯಾಗಿ ಪಸರಿಸಿಬಿಟ್ಟಿತು.
ಇನ್ನು ಜವಾಬ್ದಾರಿಯುತ ನಾಗರಿಕರಾಗಿ ನಾವೇನು ಮಾಡಿದ್ದೇವೆ? ಎಂದು ಎಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಅದೆಷ್ಟು ಜನ ಮಾಸ್ಕ್ ಮರೆತು ಇಷ್ಟು ದಿನ ಮಾತ್ರವಲ್ಲ ಈಗಲೂ ಓಡಾಡುತ್ತಿಲ್ಲ? ನಾವೆಲ್ಲರೂ ಸಾಮಾಜಿಕ ಅಂತರ ಅಗತ್ಯವೇ ಇಲ್ಲ ಅನ್ನುವಂತೆ ಓಡಾಡಿದ್ದೇವೆ. ವಿವಿಧ ಕಾರ್ಯಕ್ರಮ, ಸಮಾರಂಭಗಳಲ್ಲಿ ಅಗತ್ಯವಿಲ್ಲದಷ್ಟು ಜನರನ್ನು ಸೇರಿಸಿ ಸಂಭ್ರಮಿಸಿದ್ದೇವೆ, ಓಡಾಡಿದ್ದೇವೆ. ಅಗತ್ಯವಿಲ್ಲದೆ ಕಾಲ ಕಳೆಯಲು ದೇವಾಲಯ, ಮಾಲು, ಪಾರ್ಕ್, ಬೀಚ್‌ಗಳನ್ನು ಸುತ್ತಿದ್ದೇವೆ. ಕೆಲವರಂತೂ ಕೊರೊನಾ ವೈರಸ್ ಇಲ್ಲವೇ ಇಲ್ಲ ಅಂತ ನಿರ್ಧಾರ ಮಾಡಿಕೊಂಡಿದ್ದೇವೆ. ಈಗ ನಮ್ಮ ನಿರ್ಲಕ್ಷ್ಯಕ್ಕೆ ನಾವೇ ಬಲಿಯಾಗುತ್ತಿದ್ದೇವೆ. ಹೌದು ನಾವೂ ತಪ್ಪು ಮಾಡಿದ್ದೇವೆ.
ಇನ್ನು ಸರಕಾರವೂ ಸೂಕ್ತವಾದ ನೀತಿಗಳನ್ನು ಸರಿಯಾದ ಸಮಯದಲ್ಲಿ ಜಾರಿಗೊಳಿಸದೆ ಜನರಲ್ಲಿ ಗೊಂದಲ ಉಂಟುಮಾಡಿ ಜನರು ಆದೇಶಗಳನ್ನು ಪಾಲಿಸದಿರಲು ದಾರಿ ಮಾಡಿಕೊಟ್ಟಿತು. ಅಪಾರ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರ ಸ್ವ-ನಿಯಂತ್ರಣದ ಸಮನ್ವಯ ಸಾಧ್ಯವಿಲ್ಲದ ಮಾತು. ಕಠಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಎಲ್ಲರಿಗೂ ಸಮಾನವಾಗಿ ಜಾರಿಗೊಳಿಸಿದರೆ ಮಾತ್ರ ನಿಯಂತ್ರಣ ಸಾಧ್ಯ. ಆದರೆ ಈಗಿನ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಜನರು ಸರಕಾರವನ್ನು ದೂಷಿಸುವಂತಾಗಿದೆ. ಬಡವರ ಪರಿಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗೆ ಬೇಕಾದ ಮೂಲ ಆವಶ್ಯಕತೆಗಳಿಗೂ ಪರದಾಡುವಂತಾಗಿದೆ. ಸರಿಯಾದ ಸೌಲಭ್ಯಗಳು ಸಿಗದೆ ಶವವಾದವರ ಅಂತ್ಯ ಸಂಸ್ಕಾರವೂ ತಮ್ಮಿಂದ ಸಾಧ್ಯವಾಗುತ್ತಿಲ್ಲವೆಂದು ಶ್ಮಶಾನದೆದುರು ಸಂಬಂಧಿಕರ ಹೆಣಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಅದೆಷ್ಟು ದುಃಖಕರ.
ಯಾಕೆ ಹೀಗೆ? ಒಮ್ಮೆ ಪ್ರಶ್ನಿಸಿಕೊಂಡರೆ ಉತ್ತರ ಎಲ್ಲರಿಗೂ ಸಿಗುತ್ತದೆ. ಪ್ರಕೃತಿಯನ್ನು ಕ್ರೂರವಾಗಿ ಸಾಯಿಸಿದ್ದಾಗಿ ಪ್ರತಿಯೊಬ್ಬರೂ ಬೆಲೆ ತರುವಂತಾಗಿದೆ. ಪ್ರಾಣಿ ಪಕ್ಷಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬೀದಿಗಳಲ್ಲಿ ನೇತುಹಾಕಿ ಮಾರಾಟ ಮಾಡಿದ್ದಕ್ಕಾಗಿ, ಪ್ರಾಣಿಗಳ ಸಂಸಾರ ನಾಶ ಮಾಡಿದ್ದಕ್ಕಾಗಿ ಪ್ರಕೃತಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆಯೇನೋ? ಹಣದಾ ಸೆಗಾಗಿ ಆಧುನಿಕ ಸೌಕರ್ಯಗಳಿಗಾಗಿ ಭೂಮಿ ತಾಯಿಯನ್ನು ಭೀಕರವಾಗಿ ಕೊಲೆ ಮಾಡಿದ್ದಕ್ಕಾಗಿ ಆಕೆಯ ಸಹನೆ ಕಳೆದುಕೊಂಡಂತಿದೆ. ಬೆಟ್ಟ ಕರಗಿಸಿ, ನದಿ ತಿರುಗಿಸಿ, ಕಲ್ಲು ಬಂಡೆಗಳನ್ನೆಲ್ಲ ಪುಡಿಮಾಡಿ ಉಸಿರು ಕೊಡುವ ಹಸುರನ್ನೆಲ್ಲ ನೆಲಸಮ ಮಾಡಿ ಲಾಭದ ದೃಷ್ಟಿಯಿಂದ ಮಹಲುಗಳನ್ನು ಕಟ್ಟಿ ಮೆರೆವ ಮಾನವನ ಮೇಲೆ ತಿರುಗಿ ಬಿದ್ದಿದ್ದಾಳೆ ಪ್ರಕೃತಿ. ಪ್ರಾಕೃತಿಕ ಆಮ್ಲಜನಕದ ಸೆಲೆಯನ್ನು ನಾಶಮಾಡಿ ಈಗ ಕೃತಕ ಆಮ್ಲಜನಕಕ್ಕಾಗಿ ಒದ್ದಾಡುತ್ತಿದ್ದೇವೆ. ಶುದ್ಧವಾದ ಗಾಳಿಗೆ ವಿಷ ತುಂಬಿದ ನಾವು ಈಗ ಮೂಗಿಗೆ, ಬಾಯಿಗೆ ಎರಡೆರಡು ಮಾಸ್ಕ್ ಧರಿಸಿ ಓಡಾಡುವಂತಾಗಿದೆ. ಪ್ರಕೃತಿಯ ನಿಯಂತ್ರಣ ಮೀರಿ ಬೆಳೆಯುವ ಅಸೆ ಮಾನವನಿಗೆ. ಎಷ್ಟಿದ್ದರೂ ಸಾಲದೆಂಬ ದುರಾಸೆಯಿಂದ ಗಿಡಮರ, ಗುಡ್ಡ-ಬೆಟ್ಟಗಳನ್ನೆಲ್ಲ ನಾಶ ಮಾಡಿದ. ಆದರೀಗ ಈ ಎಲ್ಲ ಬೆಳವಣಿಗೆಗಳನ್ನೂ ನಿಯಂತ್ರಿಸಲು ಸಾಂಕ್ರಾಮಿಕ ರೋಗ ಬಂದಿದೆ. ತನ್ನ ಮನೆಯಲ್ಲಿ ತಾನೇ ಬಂಧಿಯಾಗುವ ಸಮಯ ಬಂದಿದೆ. ನಮ್ಮ ನಾಳೆಗಳನ್ನು ನಾವೇ ಸಾಯಿಸಿಕೊಳ್ಳುವ ಕಾಲ ಬಂದಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನಗಳೆಲ್ಲವೂ ಪ್ರಕೃತಿಯೆದುರು ಶೂನ್ಯ. ಮಾನವೀಯತೆ ಮರೆತು ಬಿಟ್ಟ ಮಾನವನಿಗೆ ಕೊರೊನಾ ಪಾಠ ಕಲಿಸ ಹೊರಟಿದೆ. ಸ್ವಾರ್ಥಕ್ಕಾಗಿ ಅಧರ್ಮದ ಮಾರ್ಗ ಹಿಡಿದ ಮಾನವ ಸಂಕುಲಕ್ಕೆ ಪ್ರಕೃತಿ ಪದೇ ಪದೆ ಕಠಿನ ಕಡಿವಾಣ ಹಾಕುವ ಪರಿ ಅದ್ಭುತ! “ಮಾನವ ತನ್ನನ್ನು ತಾನು ನಿಯಂತ್ರಿ ಸಿಕೊಳ್ಳಲು ಸಾಧ್ಯವಾಗದಿದ್ದರೆ ಪ್ರಕೃತಿ ಅದರದ್ದೇ ಆದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’- ಪ್ರಖ್ಯಾತ ಅರ್ಥ ಶಾಸ್ತ್ರಜ್ಞರಾದ ಟಿ. ಆರ್. ಮಾಲ್ತಸ್ ಹೇಳಿದ ಈ ಮಾತು ಈಗಲೂ ಪ್ರಸ್ತುತ.
ಎಲ್ಲಿಂದಲೋ ಬಂದ ಮಹಾಮಾರಿಯ ಎದುರು ನಮ್ಮೆಲ್ಲ ಪ್ರಯತ್ನಗಳು ಸೋಲುತ್ತಿವೆ. ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಸರಕಾರದ ಎಲ್ಲ ಯೋಜನೆಗಳಿಗೂ ಜನರ ಸಹಕಾರ ಬೇಕೇ ಬೇಕು. ಅದೂ ಇಂತಹ ಸಾಂಕ್ರಾಮಿಕ ರೋಗಗಳ ವಿಚಾರದಲ್ಲಿ ನಾವೇ ಜಾಗೃತರಾಗಿರಬೇಕು. ಇತರರಿಂದ ನಮಗೆ, ನಮ್ಮಿಂದ ಇನ್ನೊಬ್ಬರಿಗೆ ಹರಡುವ ಈ ರೋಗದ ಸರಪಳಿಯನ್ನು ನಾವೆಲ್ಲರೂ ಒಟ್ಟಾಗಿ ತುಂಡರಿಸಬೇಕಿದೆ. ಅಧರ್ಮದ ದಾರಿಯಲ್ಲಿ ನಡೆಯುವುದನ್ನು ಬಿಟ್ಟು ಎಲ್ಲರೂ ದೇಶದ ಹಿತವನ್ನು ಕಾಯಬೇಕಿದೆ. ಧರ್ಮ ತಪ್ಪಿ ನಡೆಯುವ ಜನರನ್ನು ದೇವರಿಗೂ ಕಾಪಾಡಲು ಕಷ್ಟ. ಪ್ರಕೃತಿಯನ್ನು ಉಳಿಸಿದರೆ ಮಾತ್ರ ನಾವೆಲ್ಲರೂ ನಾಳೆಯೂ ಚೆನ್ನಾಗಿರಲು ಸಾಧ್ಯ. ಅವರಿವರನ್ನು ದೂರುವುದನ್ನು ಬಿಟ್ಟು ನಾವೆಲ್ಲರೂ ಒಟ್ಟಾಗಿ ರೋಗದ ವಿರುದ್ಧ ಹೋರಾಡಬೇಕಿದೆ. ಸರಕಾರದ ಪ್ರಾಮಾಣಿಕ ಪ್ರಯತ್ನ ಹಾಗೂ ಜನರ ಸ್ವ ನಿಯಂತ್ರಣದ ಅಗತ್ಯವಿದೆ.
ಜವಾಬ್ದಾರಿ ನಿರ್ವಹಿಸಿ
ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಇಷ್ಟು ಮುಂದು ವರಿದ ಮನುಕುಲಕ್ಕೆ ಈ ಸಾಂಕ್ರಾಮಿಕ ರೋಗಗಳು ಸವಾಲಾಗಿವೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯ ಪ್ರಜೆಗಳಾದ ನಮ್ಮ ಜವಾಬ್ದಾರಿಯೂ ಒಂದಷ್ಟಿದೆ. ಅದೇ ವೇಳೆ ನಮ್ಮನ್ನಾಳಲೆಂದೇ ಆರಿಸಿ, ಕಳುಹಿಸಿದ ಜನಪ್ರತಿನಿಧಿಗಳು ಮತ್ತು ಸರಕಾರ ತಮ್ಮತಮ್ಮ ಹೊಣೆ ಗಾರಿಕೆಯಿಂದ ನುಣುಚಿಕೊಳ್ಳಲಾಗದು. ಜನರಿಗೆ ಹೊಟ್ಟೆಯ ಚಿಂತೆಯಾದರೆ ಸರಕಾರಕ್ಕೆ ಬೊಕ್ಕಸದ ಚಿಂತೆ. ಇದರಿಂದಾಗಿ ಜನತೆ ಮತ್ತು ಸರಕಾರಕ್ಕೆ ತಜ್ಞರ ಯಾವುದೇ ಎಚ್ಚರಿಕೆಗಳೂ ಕಿವಿಗೆ ಬೀಳಲೇ ಇಲ್ಲ.
– ವಿದ್ಯಾ ಅಮ್ಮಣ್ಣಾಯ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.