ಮನೆಯಲ್ಲೇ ಕ್ವಾರಂಟೈನ್ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ
Team Udayavani, May 6, 2021, 9:25 PM IST
ಬೆಂಗಳೂರು: ಮನೆಗಳಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ದೂರವಾಣಿ ಮೂಲಕ ವೈದ್ಯಕೀಯ ಸಲಹೆ (ಟೆಲಿ ಕನ್ಸೆಲ್ಟೆನ್ಸಿ) ನೀಡುವುದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವ ಪೂರ್ಣ ಜವಾಬ್ದಾರಿಯನ್ನು ಆಯಾ ವೈದ್ಯಕೀಯ ಕಾಲೇಜುಗಳ ಡೀನ್ʼಗಳಿಗೇ ವಹಿಸಲಾಗುತ್ತಿದ್ದು, ಇದರಲ್ಲಿ ಕರ್ತವ್ಯ ಲೋಪವಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಗುರುವಾರ ಕೋವಿಡ್ ಹೋಮ್ ಐಸೋಲೇಷನ್ ವಿಭಾಗದ ಉಸ್ತುವಾರಿಯೂ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು ಡಿಸಿಎಂ.
ಒಂದು ವೇಳೆ ಟೆಲಿ ಕನ್ಸೆಲ್ಟೆನ್ಸಿ ಸೇವೆಗೆ ವೈದ್ಯ ವಿದ್ಯಾರ್ಥಿಗಳು ಹಾಜರಾಗದಿದ್ದರೆ ಆಯಾ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರು, ಡೀನ್ ಅಥವಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಟೆಲಿ ಕನ್ಸೆಲ್ಟೆನ್ಸಿ ಸೇವೆ ನೀಡಲು 7,000 ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ 4,000 ಈ ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಕೇವಲ 700 ವಿದ್ಯಾರ್ಥಿಗಳು ಮಾತ್ರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಉಳಿದವರೂ ಈ ಸೇವೆಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ಜವಾಬ್ದಾರಿಯನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಹಾಗೂ ಕೆಲಸವನ್ನೇ ಆಯಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಖ್ಯಸ್ಥರೇ ಹಂಚಿಕೆ ಮಾಡಬೇಕು ಎಂದು ಡಿಸಿಎಂ ಹೇಳಿದರು.
ವೈದ್ಯಕೀಯ ವಿದ್ಯಾರ್ಥಿಗಳೇ ದೂರವಾಣಿ ಕರೆ ಮೂಲಕ ಸೋಂಕಿತರನ್ನು ಸಂಪರ್ಕಿಸಿ ಸಲಹೆ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಸಾಮಾನ್ಯ ಕಾಲ್‌ಸೆಂಟರ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಇದು ಸಾಧ್ಯವಾಗುವುದಿಲ್ಲ ಎಂದರು ಡಿಸಿಎಂ.
ಪರೀಕ್ಷೆಗೆ ಮತ್ತಷ್ಟು ವೇಗ :
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಜತೆ ಚರ್ಚಿಸಿದರು ಡಿಸಿಎಂ, ಲ್ಯಾಬ್‌ಗಳನ್ನು ಮತ್ತಷ್ಟು ಬಲಪಡಿಸಬೇಕು. ಈಗಾಗಲೇ ಮಲ್ಲೇಶ್ವರದಲ್ಲಿ ಸ್ಯಾಂಪಲ್ ಕೊಟ್ಟ 24 ಗಂಟೆ ಒಳಗೇ ಫಲಿತಾಂಶ ಬರುತ್ತಿದೆ. ಈ ವೇಗ ಇಡೀ ಬೆಂಗಳೂರಿಗೆ ವಿಸ್ತರಿಸಬೇಕು. ಎಷ್ಟು ಬೇಗ ಫಲಿತಾಂಶ ಹೊರಬಿದ್ದು ಚಿಕಿತ್ಸೆ ವೇಗಗತಿಯಲ್ಲಿ ನೀಡಲಾಗುತ್ತದೋ ಅಷ್ಟು ಬೇಗ ಸಾವುಗಳನ್ನು ತಡೆಯಬಹುದು. ಈ ಬಗ್ಗೆ ಉಪೇಕ್ಷ ಬೇಡ ಎಂದು ಡಿಸಿಎಂ ಅವರು ಚೋಳನ್ ಅವರಿಗೆ ಸೂಚಿಸಿದರು.
ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾಡಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಐದು ದಿನ ಚಿಕಿತ್ಸೆ ಪಡೆದ ಸೋಂಕಿತರನ್ನು ಇಂಥ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಬೇಕು ಎಂದು ಡಿಸಿಎಂ ಸೂಚಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ, ಡಿಸಿಎಂ ಅವರ ಕಾರ್ಯದರ್ಶಿ ಪಿ.ಪ್ರದೀಪ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.