“ಅಮ್ಮ’ನ ಪ್ರಪಂಚದಲ್ಲಿ ನಾವೆಲ್ಲರೂ ಮಕ್ಕಳು!
Team Udayavani, May 9, 2021, 6:45 AM IST
ಮೇ 9ರ ರವಿವಾರ ತಾಯಂದಿರ ದಿನ. ಅಮ್ಮಂದಿರ ದಿನದ ಇತಿಹಾಸ ಪ್ರಾಚೀನವಾದುದು. ಗ್ರೀಕ್, ರೋಮನ್‌ರ ಕಾಲದಲ್ಲಿ ಸ್ತ್ರೀ ದೇವತೆಗಳ ಹಬ್ಬವನ್ನು ಅಮ್ಮಂದಿರ ದಿನವೆಂದೇ ಆಚರಿಸಲಾಗುತ್ತಿತ್ತು. ಕಾಲಕ್ರಮೇಣ ಪಾಶ್ಚಾತ್ಯ ದೇಶಗಳಲ್ಲಿ ಅಮ್ಮಂದಿರ ದಿನವನ್ನು ಅಧಿಕೃತವಾಗಿ ಆಚರಿಸಲಾರಂಭಿಸ ಲಾಯಿತು. ಇದೀಗ ಪ್ರತೀ ವರ್ಷ ಮೇ ತಿಂಗಳ ಎರಡನೇ ರವಿವಾರದಂದು “ತಾಯಂದಿರ ದಿನ’ವನ್ನು ಆಚರಿಸುತ್ತಾ ಬರಲಾಗಿದೆ. ಭಾರತದ ಮಟ್ಟಿಗಂತೂ ಪ್ರತೀ ದಿನವೂ ಅಮ್ಮಂದಿರ ದಿನವೇ. ಈ ದಿನದ ಆಚರಣೆ ಏನಿದ್ದರೂ ಸಾಂಕೇತಿಕವಷ್ಟೇ. ಪ್ರತಿಯೊಂದೂ ಕುಟುಂಬ ದಲ್ಲಿ ಅಮ್ಮನಿಗೆ ಅಗ್ರಸ್ಥಾನ. ಪ್ರೀತಿ, ವಾತ್ಸಲ್ಯ, ತ್ಯಾಗ ವಿರಲಿ.. ಅಮ್ಮನಿಗೆ ಸರಿ ಸಾಟಿ ಯಾರೂ ಇಲ್ಲ. ಅಮ್ಮ ನಮ್ಮೆಲ್ಲರ ಪಾಲಿಗೆ ಕಣ್ಣಿಗೆ ಕಾಣುವ ದೇವರು. ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ತಾಯಂದಿರು, ಅಮ್ಮಂದಿರ ಶ್ರೇಷ್ಠತೆಗೆ ಕನ್ನಡಿ ಹಿಡಿಯುವುದರ ಜತೆಯಲ್ಲಿ ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಆಧುನಿಕ ಕಾಲಘಟ್ಟದ ಮಾತೆಯರಿಗೆ ಒಂದಿಷ್ಟು ಕಿವಿಮಾತು ಗಳನ್ನೂ ಹೇಳಿದ್ದಾರೆ.
ತಾಯಿಯನ್ನು ಮಾನವಳಾಗಿ ನೋಡುವ ಸಮಾಜ ನಮ್ಮದಾಗಲಿ
ತಾಯಿ ಎಂದಿಗೂ ಮಕ್ಕಳ ಪಾಲಿನ ನಿತ್ಯ ಜೀವನದ ನಾಯಕಿ. ಎಲ್ಲ ತಾಯಂದಿರು ಅವರದೇ ನೆಲೆಗಳಲ್ಲಿ ತ್ಯಾಗದ ಮೂರ್ತಿಗಳು, ಮಗುವಿನ ಸಮಗ್ರ ಬೆಳವಣಿಗೆಗೆ, ಕುಟುಂಬದ ಪ್ರಮುಖ ಆಧಾರವಾಗಿ, ಸಂಬಂಧ ಗಳ ಕೊಂಡಿಯಾಗಿ ತಾಯಿ ಯಾವತ್ತೂ ಮುನ್ನೆಲೆಯಲ್ಲಿ ನಮ್ಮ ಮುಂದೆ ಕಾಣುತ್ತಾಳೆ.
ತಾಯಂದಿರ ದಿನದಂದು ನಾವು ಗ್ರಾಮೀಣ ಪ್ರದೇಶದ ಬಡ ತಾಯಂದಿರ ಬಗ್ಗೆಯೂ ಬೆಳಕು ಚೆಲ್ಲಬೇಕು, ಅವರ ಮಮತೆಯ, ತ್ಯಾಗದ, ನೋವಿನ, ವಿಚಾರಗಳನ್ನು ಈ ದಿನದಂದು ಇನ್ನಷ್ಟು ಚಿಂತಿಸಬೇಕು.ಯಾವತ್ತೂ ತನ್ನತನದ ಹಂಗಿನಲ್ಲಿ ಬದುಕದೆ ಎಲ್ಲವನ್ನೂ ತನ್ನವರಿಗಾಗಿ ಮುಡಿಪಾಗಿರಿಸುವ ಈ ತಾಯಂದಿರು ನಿಜವಾ ಗಿಯೂ ದೇವರುಗಳೆ!. ಮಕ್ಕಳ ಸಣ್ಣ ಪುಟ್ಟ ಬಯಕೆಗಳನ್ನು ತೀರಿಸುವುದಕ್ಕಾಗಿ ಸರ್ವಸ್ವವನ್ನೇ ಮುಡಿಪಾಗಿಡುವವಳು ತಾಯಿ.
“ಹೆಣ್ಣುಮಕ್ಕಳನ್ನೇ ಹಡೆದವಳು’ ಎಂಬ ಟೀಕೆಗೆ ನೋವುಣ್ಣುವವಳು, ಮಗಳ ಮದುವೆ ಆಗದಿದ್ದರೂ ಮದುವೆ ಆದ ಮಗಳು ಮರಳಿ ತವರಿಗೆ ಬಂದಾಗಲೂ ಸಮಾಜಕ್ಕೆ ಹೆದರಿ ಕುಗ್ಗಿ, ಬಗ್ಗಿ ನಡೆಯುವವಳು, ಮಕ್ಕಳು ಮಾಡುವ ತಪ್ಪುಗಳಿಗೆಲ್ಲ ಇಂಥವಳ ಮಗ, ಮಗಳು ಎಂಬ ಅಪಕೀರ್ತಿಯನ್ನು ಅಂಟಿಸಿ ಕೊಳ್ಳುವವಳು. ಗಂಡ ಇದ್ದು ಕಷ್ಟ-ಸುಖಗಳಲ್ಲಿ ನೆರವಾಗುವವ ನಾದರೆ ಎಂಥ ಬಡತನವನ್ನಾದರೂ ಸಹಿಸಿ ಮುನ್ನುಗ್ಗುವ ಕೆಚ್ಚೆದೆ ತೋರುವವಳು ಈ ತಾಯಿ.
“ಹತ್ತು ಮಕ್ಕಳ ತಾಯಿ ಹಾದಿಯಲ್ಲಿ ಬಿದ್ದು ಸತ್ತಳು’-ಎಂಬ ಗಾದೆ ಮಾತಿನಂತೆ, ಕಾಶಿಯಂಥ ಪುಣ್ಯ ಕ್ಷೇತ್ರಗಳಲ್ಲಿ ಮಕ್ಕಳು ಬಿಟ್ಟು ಹೋಗಿರುವ ಅನೇಕ ವಿಧವೆಯರು, ತಾಯಂದಿರಲ್ಲಿ “ಮಗ ಈಗ ಬರ್ತಾನೆ, ಇವತ್ತು ಬರ್ತಾನೆ’ ಅಂತ ಕಾಯುವವರೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಪ್ರತೀ “ತಾಯಂದಿರ ದಿನ’ಕ್ಕೆ ಇಂಥ ಅಸಹಾಯಕ ತಾಯಂದಿರ ಸಂಖ್ಯೆ ಕಡಿಮೆ ಯಾಗಲಿ ಅನ್ನುವುದೇ ನಮ್ಮ ಸದಾಶಯ ಹೆಣ್ಣನ್ನು, ತಾಯಿಯನ್ನು ದೇವತೆಯಾಗಿ ಅಲ್ಲದಿದ್ದರೂ ಮಾನವಳಾಗಿ ನೋಡುವ ಸಹೃದಯ ಸಮಾಜದ ನಿರ್ಮಾಣವಾಗಲಿ ಎಂದು ಹಾರೈಸೋಣ.
– ಹೇಮಾವತಿ ವೀ.ಹೆಗ್ಗಡೆ, ಅಧ್ಯಕ್ಷರು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ
**
ಸುಸಂಸ್ಕೃತ ಬದುಕಿಗೆ ಆರಂಭದ ಬೆಳಕೇ ತಾಯಿ
ಅತ್ಯಂತ ಪ್ರಾಚೀನವಾದ ಹಿಂದೂ ಸಂಸ್ಕೃತಿಯು ಸ್ತ್ರೀಯರಿಗೆ ಹೆಚ್ಚಿನ ಗೌರವವನ್ನು ನೀಡಿದೆ. ಹೆತ್ತ ತಾಯಿಯನ್ನು, ಹೊತ್ತ ಭೂಮಿಯನ್ನು ನಾವು ಮಾತೆ ಎಂದೇ ಕರೆದವರು. ಗೃಹಿಣಿ ಇಲ್ಲದ ಮನೆಯು ಕಾಡಿಗಿಂತಲೂ ಕನಿಷ್ಠವೇ. ಪತಿಯನ್ನು ಸಂತೈಸಿ, ಹಾರೈಸಿ, ಮಕ್ಕಳನ್ನು ಸಾಕಿ, ಪೋಷಿಸಿ ಕಾಪಾಡುವವಳು ತಾಯಿ.
ಸಂಸ್ಕಾರದ ಮೂಲ ಮಾತೆಯಿಂದಲೇ ಆರಂಭವಾಗುವುದು. ಸುಸಂಸ್ಕೃತ ಬದುಕಿಗೆ ಆರಂಭದ ಬೆಳಕೇ ತಾಯಿ. ಹೆತ್ತವಳು ಮಾತ್ರ ತಾಯಿಯಲ್ಲ. ಮಾತೃತ್ವ ಇದ್ದವಳು ಮಾತ್ರ ತಾಯ್ತನಕ್ಕೆ ಅರ್ಹಳು. ಹೊತ್ತು, ಹೆತ್ತ ತಾಯಿ ಎಷ್ಟು ಕಷ್ಟವನ್ನು ಅನುಭವಿಸುತ್ತಾಳ್ಳೋ ಇದರ ಅರಿವಿನ ಕೊರತೆಯಿಂದಲೂ ಸಂಸ್ಕೃತಿ ಕುಂಠಿತ ಗೊಳ್ಳುತ್ತದೆ. ಸಂಸ್ಕೃತಿಯನ್ನು ಸಂಸ್ಕಾರದ ಮೂಲಕ ರೂಪುಗೊಳಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಸಹನೆಗೆ ಇನ್ನೊಂದು ಹೆಸರು ತಾಯಿ. “ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರುವು’ ಇದು ಒಪ್ಪುವಂತಹುದು. ತಂದೆ ಬುದ್ಧಿ ಪ್ರಧಾನ, ತಾಯಿ ಭಾವ ಪ್ರಧಾನಳು. ಮಕ್ಕಳ ಶಿಕ್ಷಣ-ಸಂಸ್ಕಾರಕ್ಕೆ ಅಡಿಪಾಯ ತಾಯಿಯಾದವಳು ಮಾತ್ರ ಹಾಕಬಲ್ಲಳು. ಮಕ್ಕಳ ಮನಸ್ಸನ್ನು ಪರಿವರ್ತಿಸಿ ಸುಸಂಸ್ಕೃತರ ನ್ನಾಗಿಸುವುದು ತಾಯಿಯ ಹೊಣೆ.
ಸ್ವಾಮೀ ವಿವೇಕಾನಂದರು ಅಮೆರಿಕದಲ್ಲಿ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದ ಸಮಯದಲ್ಲಿ ಓರ್ವರು ಪ್ರಶ್ನಿಸುತ್ತಾರೆ – ಸ್ವಾಮೀಜಿ ನೀವು ಅದ್ಭುತ ಕಥೆಗಾರರು. ಈ ಕಲೆಯನ್ನು ನೀವು ಎಲ್ಲಿಂದ ಕಲಿತಿರೀ? ಆಗ ಸ್ವಾಮೀಜಿ ನನ್ನ ತಾಯಿಯಿಂದ ಎಂದು ಹೇಳಿದ್ದರು. ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ತಾಯಿಗೂ ಇದೆ, ತಂದೆಗೂ ಇದೆ, ಪರಿಸರಕ್ಕೂ ಇದೆ. ಈ ಮೂಲಕ ಬೆಳೆಯೋಣ, ಬೆಳೆಸೋಣ.
ಈಗ ಕೋವಿಡ್ 19ರ ಎರಡನೆಯ ಅಲೆ ಅಬ್ಬರದಲ್ಲಿ ನಾವಿದ್ದೇವೆ. ಬದುಕಿ, ಬದುಕಬಿಡುವ ಆರೋಗ್ಯಪೂರ್ಣ ಕಾರ್ಯ ನಮ್ಮದಾಗಬೇಕು.ಎಲ್ಲ ಮಾತೃ ಹೃದಯದ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.
-ಸಾಧ್ವಿ ಶ್ರೀ ಮಾತಾನಂದಮಯೀ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
***
“ಆರೋಗ್ಯವೇ ಮಹಾಭಾಗ್ಯ’ಕ್ಕೆ ತಾಯಂದಿರು ಪ್ರೇರಣೆ
ಕೊರೊನಾ ವೈರಸ್ ಸಾಂಕ್ರಾಮಿಕ ದಿಂದ ಇಡೀ ಜಗತ್ತು ತಲ್ಲಣಗೊಂಡು ಸಂಕಷ್ಟದ ಸನ್ನಿವೇಶವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ತಾಯಂದಿರು ವಿಶೇಷವಾದ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ.
ಎಲ್ಲೆಡೆ ಆತಂಕ, ಗೊಂದಲ ಕೂಡಿರುವ ಕಾಲದಲ್ಲಿ ಎಲ್ಲರಿಗೂ ಧೈರ್ಯ, ವಿಶ್ವಾಸ ಒದಗಿಸುವ ಮಹಾಶಕ್ತಿಯೇ ತಾಯಿ. ಮಹಿಳೆಯೊಬ್ಬರು ತಾಯಿಯಾಗಿ ತನ್ನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕಾ ಗುತ್ತದೆ. ಹಾಲುಣಿಸುವ ಮಕ್ಕಳಿದ್ದರೆ ಅವರ ಆಹಾರ, ಶೌಚ ಹಾಗೂ ಕಾಲಕಾಲಕ್ಕೆ ನೀಡ ಬೇಕಾದ ಔಷಧಗಳನ್ನು ನೀಡಿ ಆರೋಗ್ಯದ ಕಡೆಗೆ ಬಹಳಷ್ಟು ಗಮನ ಹರಿಸಬೇಕಾಗುತ್ತದೆ. ಅಕಸ್ಮಾತ್ ಮನೆಯ ಯಾವನೇ ಸದಸ್ಯ ಕೊರೊನಾ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ತಾಯಂದಿರ ಜವಾಬ್ದಾರಿ ಅತೀ ಹೆಚ್ಚಿನದ್ದಾಗಿದೆ. ಮೊದಲನೆಯದಾಗಿ ಸೋಂಕು ಹರಡದಂತೆ ಅವರನ್ನು ಐಸೊಲೇಟ್ ಮಾಡಿ ಪ್ರತ್ಯೇಕ ಕೊಠಡಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಿ ಅವರ ಬಗ್ಗೆ ವಿಶೇಷ ನಿಗಾ ವಹಿಸಬೇಕು. ವೈದ್ಯರ ಮಾರ್ಗದರ್ಶನದಂತೆ ನೀಡಬೇಕಾದ ಔಷಧಗಳನ್ನು ಮತ್ತು ಪೌಷ್ಟಿಕ ಆಹಾರವನ್ನು ನೀಡುವುದರ ಜತೆಗೆ, ಅವರಲ್ಲಿ ಮಾನಸಿಕವಾಗಿ ಧೈರ್ಯವನ್ನು ತುಂಬಬೇಕು. ಇಲ್ಲಿ ಉಲ್ಲೇಖೀಸಬೇಕಾದ ಇನ್ನೊಂದು ವಿಷಯವೆಂದರೆ ರೋಗಕ್ಕೆ ಸಂಬಂಧಿಸಿ, ವೈಜ್ಞಾನಿಕವಾದ ಹಲವಾರು ಮಾಹಿತಿಗಳನ್ನು ತಾಯಂದಿರು ತಿಳಿದಿರುವುದು ಕಾಲದ ಆವಶ್ಯಕತೆಯಾಗಿದೆ.
ಮನೆಯೊಂದು ರೋಗ ರಹಿತವಾಗಿದ್ದರೆ ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸ ಬಹುದು. ಏಕೆಂದರೆ “ಆರೋಗ್ಯವೇ ಮಹಾಭಾಗ್ಯ’ ಎಂಬುದು ಈ ಕೊರೊನಾ ಕಾಲಘಟ್ಟದ ಒಂದು ಘೋಷ ವಾಕ್ಯವಾಗಿ, ನಮ್ಮ ಅನುಭವಕ್ಕೆ ಕ್ಷಣ ಕ್ಷಣಕ್ಕೂ ಬರುತ್ತಾ ಇದೆ.
– ಡಾ| ಕವಿತಾ ಡಿ’ಸೋಜಾ
ಮುಖ್ಯಸ್ಥರು, ಹೆರಿಗೆ ಮತ್ತು ಸ್ತ್ರೀರೋಗ ಚಕಿತ್ಸಾ ವಿಭಾಗ, ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಗಳೂರು
***
ಅಮ್ಮನಿಗಿಂತ ಮಿಗಿಲಾದ ಸ್ನೇಹಿತೆ, ಮಾರ್ಗದರ್ಶಕಿ ಇಲ್ಲ
ಜನ್ಮ ನೀಡಿದ ತಾಯಿ ಸ್ವರ್ಗ ಕ್ಕಿಂತಲೂ ಮಿಗಿಲಾದವರು. ನಾವು ಯಾರೂ ಸ್ವರ್ಗವನ್ನು ನೋಡಿಯೇ ಇಲ್ಲ. ನಮ್ಮ ಕಲ್ಪನೆಯಲ್ಲಿ ಸ್ವರ್ಗ ವೆಂದರೆ, ದೇವರು ವಾಸಿಸುವ ಸ್ಥಳ. ಆದರೆ ನಾವೆಲ್ಲ ನಿಜವಾಗಿಯೂ ಇರುವುದು ಸ್ವರ್ಗದಲ್ಲಿಯೇ. ಕಾರಣ ನಾವು ಜನಿಸಿರುವ ನಾಡೇ ಸ್ವರ್ಗಕ್ಕೆ ಸಮಾನ, ನಮಗೆ ಜನ್ಮವನ್ನು ನೀಡಿದ ತಾಯಿಯೇ ನಿಜವಾದ ದೇವರು.
ಹೌದು, ನನಗೆ ನನ್ನ ಅಮ್ಮ ಅಂದರೆ ಸರ್ವಸ್ವ. ಇಂದಿನ ನನ್ನ ಅಸ್ತಿತ್ವಕ್ಕೆ ಅವಳೇ ಕಾರಣ. ಅವರು ಜನ್ಮ ಕೊಟ್ಟಿದ್ದು 5 ಮಕ್ಕಳಿಗಾದರೂ ಸಾವಿರಾರು ಮಕ್ಕಳಿಗೆ ತಾಯಿಯಾದ ಕರುಣಾಮಯಿ. ಲಾಲನೆ, ಪಾಲನೆ, ಬೇಕು-ಬೇಡಗಳನ್ನು ಪೂರೈಸುವಲ್ಲಿ ತಾಯಿ ಎಂದಿಗೂ ಮುಂದೆ.
ನನ್ನ ತಾಯಿ ಸಮಾಜಕ್ಕೂ ತಾಯಿ. ಆಕೆ ಸಮಾಜಕಲ್ಯಾಣ ಇಲಾಖೆಯಲ್ಲಿ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ನೂರಾರು ಮಂದಿಗೆ “ಅಮ್ಮ’ನಾಗುವ ಭಾಗ್ಯ ಒದ ಗಿತು.ಯಾವುದೇ ಹಿನ್ನೆಲೆಯಿಂದ ಬಂದ ಮಕ್ಕಳು, ಮಹಿಳೆಯರು, ಮಾನಸಿಕ ಅಸ್ವಸ್ಥರನ್ನು ಪ್ರೀತಿಯಿಂದ ಆರೈಕೆ ಮಾಡಿ ಅವರೆಲ್ಲರ ಊಟ, ಸ್ನಾನ, ಸ್ವತ್ಛತೆ, ನೈರ್ಮಲ್ಯ, ಔಷಧ, ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಸರಿಯಾಗಿ ಮಾತನಾಡಲೂ ಬಾರದ ಮಕ್ಕಳಿಂದ ನಾನಾ ವಿಧವಾಗಿ ಮಾಹಿತಿ ಪಡೆದು ಮರಳಿ ಮನೆಗೆ ಸೇರಿಸಿದ ಹಲವು ಉದಾಹರಣೆಗಳಿವೆ. ಅಮ್ಮನ ವಿಶಾಲ ಮನೋಭಾವ, ಆಗಾಧವಾದ ಪ್ರೀತಿ, ವಿಶ್ವಾಸ, ಅನ್ಯೋನ್ಯತೆಯನ್ನು ಚಿಕ್ಕ ವಯಸ್ಸಿ ನಿಂದಲೇ ಗಮನಿಸುತ್ತಾ ಬೆಳೆದವಳು ನಾನು. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಅವರ ಮನಸ್ಸು, ಎಲ್ಲರೂ ಚೆನ್ನಾಗಿರಬೇಕು ಎಂಬುದೇ ಅವರ ಆಶಯವಾಗಿತ್ತು. ನನ್ನ ಸ್ನೇಹಿತೆ, ಮಾರ್ಗದರ್ಶಕಿ ಭೌತಿಕ ಶರೀರವನ್ನು ತ್ಯಜಿಸಿ ಹತ್ತು ವರ್ಷಗಳು ಸಂದಿವೆ. ಆದರೆ ಅಮ್ಮ ಇಂದಿಗೂ ನನ್ನ ಉಸಿರಿನಲ್ಲಿ ಪ್ರತೀ ಕ್ಷಣ ಅಣು ಅಣುವಾಗಿ ಬೆರೆತಿದ್ದಾಳೆ. ಅವಳೇ ನಾನು, ನಾನೇ ಅವಳು….
-ಸುಕನ್ಯಾ ಮೇರಿ ಪ್ರಾಂಶುಪಾಲೆ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.