ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಉತ್ತಮ ಕ್ರಮ
Team Udayavani, May 13, 2021, 6:30 AM IST
ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಮಾದರಿ ಕರ್ಫ್ಯೂ ಜಾರಿಯಾಗಿರುವುದರಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಮೂರು ಹೊತ್ತು ಆಹಾರ ಕೊಡಲು ಸರಕಾರ ತೀರ್ಮಾನ ಕೈಗೊಂಡಿವುದು ಉದ್ಯೋಗ ಇಲ್ಲದೆ ಆತಂಕಗೊಂಡಿದ್ದ ಹಾಗೂ ದಿನದ ದುಡಿಮೆ ನಂಬಿ ಬದುಕುವ ಶ್ರಮಿಕ ವರ್ಗಕ್ಕೆ ಒಂದು ರೀತಿಯ ಸಮಾಧಾನ ತಂದಿದೆ.
ದುರ್ಬಲ ವರ್ಗದವರು ಗುರುತಿನ ಚೀಟಿ ತೋರಿಸಿ ಮೂರು ಹೊತ್ತು ಊಟ ಮತ್ತು ತಿಂಡಿ ಪಡೆಯಲು ಅವಕಾಶ ಮಾಡಿಕೊಟ್ಟಿರುವುದು ಉತ್ತಮ ನಡೆ. ಏಕೆಂದರೆ ದಿನದ ದುಡಿಮೆ ನಂಬಿ ಬದುಕುವ ಆಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಹಾಗೂ ನಿರ್ಗತಿಕರು ಲಾಕ್‌ಡೌನ್ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಮೇ 24ರ ವರೆಗೆ ಬಡವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸಿಗುವುದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗಲಿದ್ದಾರೆ.
ಇದರ ಜತೆಗೆ ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಆಹಾರ ಧಾನ್ಯಗಳನ್ನು ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿರುವುದು ಸ್ವಾಗತಾರ್ಹ. ಇದರಿಂದ ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಧಾನ್ಯ ತಲುಪಿದಂತಾಗಲಿದ್ದು ಹಸಿವು ನೀಗಿಸುವಲ್ಲಿ ಸಹಕಾರಿಯಾಗಲಿದೆ.
ಮತ್ತೂಂದೆಡೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಪಡೆಯಲು ಬಯೋಮೆಟ್ರಿಕ್ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದೆ. ಇದೆಲ್ಲವೂ ಸರಕಾರದ ಸಕಾರಾತ್ಮಕ ಕ್ರಮಗಳೇ ಆಗಿವೆ.
ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಪ್ರಮಾಣ ಕಡಿತ ಮಾಡಲಾಗಿದ್ದು ಈ ಸಂದರ್ಭದಲ್ಲಿ ನೀಡಬೇಕು ಎಂಬ ಆಗ್ರಹವೂ ಇದೆ. ಕೇಂದ್ರ ಸರಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತೀ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿದೆ.
ರಾಜ್ಯ ಸರಕಾರವೂ ಈ ನಿಟ್ಟಿನಲ್ಲಿ ಯೋಚಿಸಿದರೆ ಬಿಪಿಎಲ್ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ವಿತರಣೆಯಾಗದ 1.60 ಲಕ್ಷ ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಲಾಗಿತ್ತು. ಎಪಿಎಲ್ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡಲಾಗಿತ್ತು. ಅಂತಹ ಕ್ರಮಗಳು ಈಗಲೂ ಅಗತ್ಯ.ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣ್ಣು ತರಕಾರಿ ಹೂವು ಬೆಳೆದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಪ್ರತೀ ಎಕರೆಗೆ 15 ಸಾವಿರ ರೂ.ವರೆಗೆ ಪ್ಯಾಕೇಜ್ ನೀಡಲಾಗಿತ್ತು. ಶ್ರಮಿಕ ವರ್ಗಕ್ಕೆ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಲಾಗಿತ್ತು.ಈ ಬಾರಿಯೂ ಅದೇ ರೀತಿ ಪ್ಯಾಕೇಜ್ ನೀಡಬೇಕು ಎಂಬುದು ವಿಪಕ್ಷಗಳ ಆಗ್ರಹವೂ ಆಗಿದೆ. ರಾಜ್ಯ ಸರಕಾರ ಆರ್ಥಿಕ ಇತಿಮಿತಿಯಲ್ಲಿ ಯೋಚಿಸಿ ಸಾಧ್ಯವಾದಷ್ಟೂ ಬಡವರು, ಶ್ರಮಿಕ ವರ್ಗ, ರೈತಾಪಿ ಸಮುದಾಯದ ನೆರವಿಗೆ ಬಂದರೆ ಕಷ್ಟ ಕಾಲದಲ್ಲಿ ಸ್ಪಂದಿಸಿದಂತಾಗುತ್ತದೆ.
ಕೊರೊನಾ ಸೋಂಕು ದೃಢಪಟ್ಟು ಸರಕಾರಿ ಬೆಡ್ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಬಡವರ್ಗ ಲಕ್ಷಾಂತರ ರೂ.
ವೆಚ್ಚ ಮಾಡಿ ಸಾಲದ ಕೂಪಕ್ಕೆ ಹೋಗುತ್ತಿದ್ದಾರೆ. ಇಂತಹ ಕುಟುಂಬ ರಕ್ಷಣೆಗೆ ಸರಕಾರ ಮುಂದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಲಹೆಯಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೊರೊನಾಗೆ ಚಿಕಿತ್ಸೆ ಪಡೆದರೂ 5 ಲಕ್ಷ ರೂ. ವಿಮೆ ಹಣ ದೊರಕುವಂತೆ ಮಾಡಿದರೆ ಎಷ್ಟೋ ಕುಟುಂಬಗಳಿಗೆ ಸಹಾಯವಾಗುತ್ತದೆ. ಈ ಬಗ್ಗೆಯೂ ಸರಕಾರ ಗಂಭೀರವಾಗಿ ಯೋಚಿಸಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.