ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ
ಶ್ರೀರಾಜ್ ವಕ್ವಾಡಿ, May 16, 2021, 5:30 PM IST
ನಾಗ ಐತಾಳರ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೆ’ ಓದುಗರನ್ನು ತನ್ನೊಂದಿಗೆ ಸೆಳೆದೊಯ್ಯುವ ಒಂದು ಸುಂದರ ಅನುಭವ ಕಥನ. ತಮ್ಮ ಬಹಳಷ್ಟು ಆತ್ಮಕಥಾತ್ಮಕ ವಿವರಗಳನ್ನು ಅವರು ಇದಕ್ಕೆ ಮೊದಲಿನ ಎರಡು ಮೂರು ಕೃತಿಗಳಲ್ಲಿ ಹೇಳಿರುವರಾದರೂ ಅವರ ಬಾಲ್ಯ, ಯೌವನ, ವಾರ್ಧಕ್ಯಗಳ ಅನುಭವಗಳನ್ನೊಳಗೊಂಡ ಈ ಕೃತಿಯು ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಕಣ್ಣಿಗೆ ಕಟ್ಟುವಂತೆ ಪರಿಚಯಿಸುತ್ತದೆ.
ಐತಾಳರು ಹುಟ್ಟಿ ಬೆಳೆದು ಆರಂಭಿಕ ಶಿಕ್ಷಣವನ್ನು ಪಡೆದ ಕೋಟ ಎಂಬ ಪುಟ್ಟ ಊರಿನ ಅಂದಿನ ಪರಿಸರದ ವರ್ಣನೆ, ದೇವಸ್ಥಾನದ ಉತ್ಸವ, ಆಗರ್ಭ ಶ್ರೀಮಂತರೂ ಜಮೀನುದಾರರೂ ಆದ ಅವರ ಹಿರಿಯರು ಬಾಳಿ ಬದುಕಿದ ಅರಮನೆಯಂಥ ಪುರಾತನ ಮನೆಯ ವರ್ಣನೆ, ಕೂಡು ಕುಟುಂಬದಲ್ಲಿ ಐವತ್ತಕ್ಕೂ ಹೆಚ್ಚು ಮಂದಿಯ ಸಹಬಾಳ್ವೆಯ ಚಿತ್ರಣ, ಪೂಜೆ-ಪುನಸ್ಕಾರ, ಹಬ್ಬ-ಹರಿದಿನ, ಆಹಾರ ವೈವಿಧ್ಯಗಳ ವರ್ಣನೆ , ಅಣ್ಣ ತಮ್ಮಂದಿರು-ಅಕ್ಕ-ತಂಗಿಯರು, ಅಜ್ಜ, ಚಿಕ್ಕಪ್ಪ ದೊಡ್ಡಪ್ಪಂದಿರ ಜತೆಗಿನ ಸಂಬಂಧದ ವೈಖರಿ-ಹೀಗೆ ಎಲ್ಲರನ್ನೂ ಅಂದು ತಾವು ಕಂಡಂತೆ ಚಿತ್ರಿಸುವ ಕೃತಿಯ ಮೊದಲರ್ಧ ಭಾಗವು ಅಪೂರ್ವ ಚಿತ್ರಕ ಶಕ್ತಿಯಿಂದ ತುಂಬಿದೆ. ಮನೆಯ ಕಲಾತ್ಮಕ ರಚನೆ ಮತ್ತು ಕುಸುರಿ ಕೆಲಸಗಳ ಭವ್ಯತೆಯ ಇಂಚಿಂಚು ವರ್ಣನೆಯಂತೂ ಕಣ್ಣಿಗೆ ಕಟ್ಟುವಂತಿದೆ.
ಇದನ್ನೂ ಓದಿ : ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ
ತಾವು ಪ್ರಾಥಮಿಕ ಶಿಕ್ಷಣ ಪಡೆದ ಗಿಳಿಯಾರು ಶಾಲೆಯ ನೆನಪುಗಳು ಅವರಿಗೆ ಈಗಲೂ ಸುಂದರವೆನ್ನಿಸಿದರೂ ನಿರಪರಾಧಿಗಿದ್ದ ತನ್ನನ್ನು ಶಿಕ್ಷಕರು ಅನ್ಯಾಯವಾಗಿ ಶಿಕ್ಷಿಸಿದ ಒಂದೆರಡು ಅನುಭವಗಳು ನೋಯಿಸುವ ಗಾಯಗಳಾಗಿ ಉಳಿದುಕೊಂಡದ್ದನ್ನು ಅವರು ಹೇಳುತ್ತಾರೆ. ಆದರೆ ತನ್ನ ತಮ್ಮಂದಿರನ್ನು ಗೋಳಾಡಿಸುತ್ತ ಅವರ ಪಾಲಿನ ತಿಂಡಿಯನ್ನು ಮೋಸದಿಂದ ಗೆಲ್ಲುತ್ತಿದ್ದ ಬಗ್ಗೆ ತಮ್ಮ ಪಶ್ಚಾತ್ತಾಪವನ್ನೂ ವ್ಯಕ್ತ ಪಡಿಸುತ್ತಾರೆ. ಕುಟುಂಬದೊಳಗೇ ಇದ್ದ ಚಿಕ್ಕಪ್ಪನ ವರ್ತನೆಯ ಬಗ್ಗೆ ಮುಚ್ಚುಮರೆಯಿಲ್ಲದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಸಾಧು ಸ್ವಭಾವದವರು ಯಾರಾದರೂ ಸಿಕ್ಕರೆ ಅವರನ್ನು ನೋಯಿಸುವ ರೀತಿಯಲ್ಲಿ ತಮಾಷೆ ಮಾಡಿ ಮಜಾ ತೆಗೆದುಕೊಳ್ಳುವ ಕ್ರೌರ್ಯವನ್ನು ಲೇಖಕರು ಇಷ್ಟ ಪಡುವುದಿಲ್ಲ. ಅಲ್ಲದೆ ಜಾಣೆಯೂ ಸಹನಾಮಯಿಯೂ ಆದ ಹೆಂಡತಿ(ಕಿಟ್ಟಕ್ಕ) ಮನೆಯಲ್ಲಿರುವಾಗ ಮನೆಗೆಲಸದ ಚಂದುವನ್ನು ಉಪಪತ್ನಿಯಾಗಿಟ್ಟುಕೊಳ್ಳುವುದು ಮಾತ್ರವಲ್ಲದೆ ಅವಳಿಗೆ ಅನಗತ್ಯ ಸಲುಗೆ ಕೊಟ್ಟು ತಲೆಯ ಮೇಲೆ ಕೂರಿಸಿದ ಚಿಕ್ಕಪ್ಪನ ಬಗ್ಗೆ ಲೇಖಕರಿಗೆ ಎಳ್ಳಷ್ಟೂ ಗೌರವ ಇರುವುದಿಲ್ಲ.
ಮೊದಲ ಹೆಂಡತಿ ಅಕಾಲ ಮರಣಕ್ಕೆ ತುತ್ತಾದಾಗ ತಂದೆಯವರು ತಮಗಿಂತ 27 ವರ್ಷ ಚಿಕ್ಕವಳಾದ ತನ್ನ ತಾಯಿಯನ್ನು ವಿವಾಹವಾಗಿದ್ದು, ಆದರೂ ಎಲ್ಲ ಕಷ್ಟಗಳನ್ನೂ ಧೈರ್ಯವಾಗಿ ಎದುರಿಸಿ ಇಡೀ ಕುಟುಂಬದ ಜವಾಬ್ದಾರಿಯನ್ನು ಆಕೆ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದನ್ನು ಲೇಖಕರು ಬಹಳ ಮೆಚ್ಚುಗೆಯಿಂದ ನೆನಪಿಸಿಕೊಳ್ಳುತ್ತಾರೆ. ಆದರೆ ತಂದೆ ತಮ್ಮ ಹನ್ನೆರಡು ಮಂದಿ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ತುಂಬಾ ಕಷ್ಟ ಪಟ್ಟು ಬೇಕು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದರೂ ಅವರ ಬಗ್ಗೆ ಹೆಚ್ಚು ಸಲುಗೆ ಪ್ರೀತಿಗಳನ್ನು ಅವರು ಯಾಕೋ ಬೆಳೆಸಿಕೊಳ್ಳಲಿಲ್ಲ. ಆ ಬಗ್ಗೆ ಅವರು ಖೇದ ಪಡುತ್ತಾರೆ.
ಇದನ್ನೂ ಓದಿ : ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ ಸಹಾಯದಿಂದ ರಕ್ಷಣೆ
ಕೃತಿಯ ಉತ್ತರಾರ್ಧವನ್ನು ಪೂರ್ತಿಯಾಗಿ ಲೇಖಕರು ತಮ್ಮ ಒಡಹುಟ್ಟಿದವರ ಮತ್ತು ಬಂಧು ಬಳಗದವರ ಕುರಿತು ಮತ್ತು ಅವರೊಂದಿಗೆ ತಮ್ಮ ಸಂಬಂಧ ಹೇಗಿತ್ತು ಎಂಬುದನ್ನು ತೋರಿಸಲು ಬಳಸಿದ್ದಾರೆ. ಕಾದಂಬರಿಯೊಂದರ ಪಾತ್ರ ಚಿತ್ರಣದಂತೆ ಇಲ್ಲಿ ಎಲ್ಲರ ಕುರಿತಾದ ಸಮೃದ್ಧ ವಿವರಗಳಿವೆ. ಅದರಲ್ಲೂ ತನ್ನ ತಮ್ಮ ವಾಸುದೇವ ಸಾಕಷ್ಟು ಕಲಿತು ಪದವಿ ಗಳಿಸಿ ಒಳ್ಳೆಯ ಉದ್ಯೋಗ ಸಿಕ್ಕಿದರೂ ಅವೆಲ್ಲವನ್ನೂ ಬಿಟ್ಟು ಹಿರಿಯರು ಕಾಪಾಡಿಕೊಂಡು ಬಂದ ಆಸ್ತಿ-ಮನೆ ವ್ಯವಹಾರಗಳನ್ನು ನೋಡಿಕೊಳ್ಳಲೆಂದು ಊರಿಗೆ ಬಂದು ನೆಲೆಸಿ ಬೇಸಾಯದ ಕೆಲಸವನ್ನು ಕೈಗೊಂಡ ಬಗ್ಗೆ ಲೇಖಕರು ಅವನನ್ನು ಕೃತಜ್ಞತೆಯಿಂದ ನೆನೆಸಿ ಕೊಳ್ಳುತ್ತಾರೆ. ಕಿರಿಯ ತಂಗಿ ಯಶೋದಾ ಬೆಂಗಳೂರಿನಲ್ಲಿ ನೆಲೆಸಿ ತಾವು ಪ್ರತಿ ಬಾರಿ ಅಮೆರಿಕಾದಿಂದ ಬಂದಾಗಲೂ ತನ್ನ ಮನೆಯಲ್ಲೇ ವಾರಗಟ್ಟಲೆ-ತಿಂಗಳುಗಟ್ಟಲೆ ನಿಸ್ಸಂಕೋಚವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿರುವುದರ ಬಗ್ಗೆ ಲೇಖಕರಿಗೆ ಅಪಾರ ಸಂತೋಷವಿದೆ. ಬದುಕಿನಲ್ಲಿ ಎಷ್ಟೇ ಏಳು ಬೀಳುಗಳಿದ್ದರೂ ಇಂದಿನ ಇಳಿವಯಸ್ಸಿನಲ್ಲಿ ಆ ಘಟನೆಗಳನ್ನು ಮೆಲುಕು ಹಾಕುವುದು ಅವರಿಗೆ ಹಿತವಾಗಿ ಕಾಣಿಸುತ್ತದೆ. ಅಂತೆಯೇ ಕೊನೆಯಲ್ಲಿ ಅವರು ‘ ಬದುಕಿನಲ್ಲಿ ಕಷ್ಟಗಳನ್ನು ಎದುರಿಸಲೇ ಬೇಕಾಗುತ್ತದೆ. ಆದರೆ ಎಂತಹ ಕಷ್ಟ ಬಂದರೂ ಅದನ್ನು ಸಹಿಸಿ, ಸರಿಪಡಿಸಿ ಮುಂದಕ್ಕೆ ಸಾಗುತ್ತಿದ್ದರೆ ನಾವು ಬಹಳಷ್ಟು ತೃಪ್ತಿ ಪಡೆಯುತ್ತೇವೆ. ಅಂದರೆ, ಮನಸ್ಸನ್ನು ನಿಯಂತ್ರಿಸಿಕೊಂಡು ನಮ್ಮ ನಮ್ಮ ಬದುಕನ್ನು ಸಮಯೋಚಿತವಾಗಿ ರೂಪಿಸಿಕೊಳ್ಳುವುದೇ ತೃಪ್ತಿಯ ಬಹು ಮುಖ್ಯ ಸಾಧನ’ ಎಂಬ ತಾತ್ವಿಕ ನಿರ್ಣಯಕ್ಕೆ ಬರುತ್ತಾರೆ.
ತಮಗೆ ಅನುರೂಪಳಾಗಿ ತಮ್ಮ ಬಾಳನ್ನು ರೂಪಿಸಿ ಬದುಕನ್ನು ಅರ್ಥಪೂರ್ಣವಾಗಿಸಿದ ಮಡದಿ ಲಕ್ಷ್ಮಿ(ಪುಟ್ಟಮ್ಮ), ಕೌಟುಂಬಿಕ ಬದುಕಿನ ಭದ್ರತೆಯನ್ನಿತ್ತ ಮಕ್ಕಳಾದ ಅನುರಾಧಾ ಮತ್ತು ಅರವಿಂದರ ಬಗ್ಗೆ ಹೇಳಲು ಕೃತಿಯ ಒಂದು ಸಣ್ಣ ಅಧ್ಯಾಯವನ್ನಷ್ಟೇ ಕೊಟ್ಟದ್ದು ಆಶ್ಚರ್ಯ. ಆತ್ಮಕಥೆಯನ್ನು ತೀರಾ ಸ್ವಕೇಂದ್ರಿತವಾಗಿಸದೆ ಬದುಕಿನಲ್ಲಿ ಬೆರೆತು ಹೋದ ಇತರರಿಗೆ ಪ್ರಾಮುಖ್ಯವನ್ನು ಕೊಟ್ಟು ಆತ್ಮಕತೆಗೊಂದು ಹೊಸ ಭಾಷ್ಯವನ್ನು ಬರೆಯುವುದು ಲೇಖಕರ ಉದ್ದೇಶವಾಗಿರಬಹುದು. ಕೃತಿಯುದ್ದಕ್ಕೂ ಬಳಸಿದ ಭಾಷಾ ಶೈಲಿ, ನಿರೂಪಣೆ, ಮತ್ತು ಎಲ್ಲೂ ವಿಷಯಾಂತರಕ್ಕೆ ಹೋಗದ ಬಿಗಿಯಾದ ರಚನಾ ಬಂಧ ಮತ್ತು ಆತ್ಮಕಥೆಯಲ್ಲಿರಬೇಕಾದ ಪ್ರಾಮಾಣಿಕತೆಗಳು ಕೃತಿಯ ಗಟ್ಟಿತನಕ್ಕೆ ಕಾರಣವಾಗಿವೆ.
ಪಾರ್ವತಿ ಜಿ.ಐತಾಳ್
ಹಿರಿಯ ಸಾಹಿತಿಗಳು, ಅನುವಾದಕರು
(ನಾಗ ಐತಾಳ್ ಅವರು ಕೋಟದಲ್ಲಿ ಹುಟ್ಟಿ ಬೆಳೆದು, ಬನಾರಸ್ ಮತ್ತು ಬೆಂಗಳೂರುಗಳಲ್ಲಿ ವಿದ್ಯಾರ್ಜನೆ ಮಾಡಿ ಉದ್ಯೋಗಾರ್ಥವಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿ ಕನ್ನಡ ಸಂಘಗಳನ್ನು ಕಟ್ಟಿ ಕನ್ನಡಕ್ಕಾಗಿ ಸಾಕಷ್ಟು ದುಡಿದಿದ್ದಾರೆ.ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.)
ಕೃತಿಯ ಹೆಸರು : ಕಾಲ ಉರುಳಿ ಉಳಿದುದು ನೆನಪಷ್ಟೆ
ಲೇಖಕರು : ನಾಗ ಐತಾಳ
ಪ್ರಕಾಶಕರು : ಅಭಿನವ, ಬೆಂಗಳೂರು
ಪ್ರಕಟಣೆಯ ವರ್ಷ : 2019
ಇದನ್ನೂ ಓದಿ : ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.