ಸಂಪೂರ್ಣವಾದ ಪ್ರೀತಿ, ಭಕ್ತಿ
Team Udayavani, May 24, 2021, 1:26 AM IST
ಒಂದು ದಿನ ಶ್ರೀಕೃಷ್ಣ ತನ್ನ ಗೆಳೆಯ ಉದ್ಧವನ ಮನೆಗೆ ಹೋದ. ಅದು ಪೂರ್ವನಿಗದಿತ ಭೇಟಿಯಲ್ಲ; ಹೇಳದೆ- ಕೇಳದೆ ಅಚಾನಕ್ ಆಗಿ ಹೋದದ್ದು. ಶ್ರೀಕೃಷ್ಣ ಬರುತ್ತಾನೆ ಎಂಬ ಸೂಚನೆಯೂ ಉದ್ಧವನ ಮನೆಯವರಿಗೆ ಇರಲಿಲ್ಲ. ಹಾಗಾಗಿ ಕೃಷ್ಣನ ಭೇಟಿಯ ಸಂದರ್ಭದಲ್ಲಿ ಉದ್ಧವ ಮನೆಯಲ್ಲಿ ಇರಲಿಲ್ಲ, ಎಲ್ಲೋ ಹೊರಗೆ ಹೋಗಿದ್ದ. ಮನೆಯಲ್ಲಿದ್ದದ್ದು ಉದ್ಧವನ ಪತ್ನಿ ಮತ್ತು ಮಕ್ಕಳು ಮಾತ್ರ.
ಬಂದವನು ದೇವರಲ್ಲವೆ! ಹಾಗಾಗಿ ಉದ್ಧವನ ಹೆಂಡತಿ ದಿಗೂ¾ಢಳಾದಳು. ಆಕೆಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಶ್ರೀಕೃಷ್ಣ “ಮನೆಯೊಳಗೆ ಬರಬಹುದೇ’ ಎಂದು ಪ್ರಶ್ನಿಸಿದ್ದಕ್ಕೆ ಕನಸಿನಲ್ಲಿ ದ್ದವಳಂತೆ ಉತ್ತರಿಸಿದಳು. ಒಳಗೆ ಬಂದ ದೇವರಿಗೆ ಸೂಕ್ತ ಆಸನ ಕೊಡಬೇಕು ಎಂಬುದೂ ಆಕೆಗೆ ಹೊಳೆ ಯಲಿಲ್ಲ. ಕೊನೆಗೆ ಶ್ರೀಕೃಷ್ಣನೇ ಒಂದು ಪೀಠವನ್ನು ಹುಡುಕಿ ಆಸೀನನಾಗ ಬೇಕಾಯಿತು. ಬಂದ ವಿಶೇಷ ಅತಿಥಿಗೆ ಉಪಚಾರ ಮಾಡಬೇಕು ಎಂಬುದೂ ಉದ್ಧವನ ಹೆಂಡತಿಗೆ ತಿಳಿಯಲಿಲ್ಲ. ಕೃಷ್ಣನೇ ನಸುನಗುತ್ತ “ಒಳಗೆ ತಿನ್ನಲು ಏನಾದರೂ ಇದ್ದರೆ ತಾರಮ್ಮ’ ಎಂದು ಕೇಳಬೇಕಾಯಿತು.
ಉದ್ಧವನ ಹೆಂಡತಿ ಅದೇ ಸ್ಥಿತಿಯಲ್ಲಿ ಒಳಗೋಡಿ ಒಂದಿಷ್ಟು ನೀರು ಮತ್ತು ಬಾಳೆಯ ಹಣ್ಣುಗಳನ್ನು ತಂದಳು. ಕೃಷ್ಣನ ಕಾಲಬುಡದಲ್ಲಿ ಕುಳಿತು ಬಾಳೆಯ ಹಣ್ಣುಗಳನ್ನು ಸುಲಿದು ತಾನೇ ತಿನ್ನಿಸಿ ದಳು. ಆಕೆಯ ದಿಗ್ಭ್ರಾಂತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಆಕೆ ಹಣ್ಣನ್ನು ಅತ್ತ ಎಸೆದು ಸಿಪ್ಪೆಯನ್ನು ಕೃಷ್ಣನಿಗೆ ಕೊಡುತ್ತಿದ್ದಳು!
ಸ್ವಲ್ಪ ಹೊತ್ತಿನ ಬಳಿಕ ಉದ್ಧವ ಮನೆಗೆ ಬಂದ. ಹೆಂಡತಿ ಬಾಳೆಯ ಹಣ್ಣುಗಳನ್ನು ಎಸೆದು ಸಿಪ್ಪೆಯನ್ನು ಕೃಷ್ಣನಿಗೆ ತಿನ್ನಿಸುತ್ತಿದ್ದು ದನ್ನು ಕಂಡು ಅಚ್ಚರಿಗೊಂಡ. ಹೆಂಡತಿಗೆ ಆಕೆ ಮಾಡುತ್ತಿದ್ದ ಪ್ರಮಾದವನ್ನು ತಿಳಿಸಿ ಹೇಳಿದ. ಆಕೆ ಆಗಷ್ಟೇ ಕನಸಿನಿಂದ ಎಚ್ಚರ ಗೊಂಡವಳಂತೆ ನಾಚಿ ಕೃಷ್ಣನ ಕ್ಷಮೆ ಕೇಳಿ ಒಳಗೋಡಿದಳು.
ಉದ್ಧವನ ಕೈಗಳಿಂದ ಬಾಳೆಯ ಹಣ್ಣು ಗಳನ್ನು ತಿಂದ ಕೃಷ್ಣ ಹೇಳಿದ, “ಉದ್ಧವ, ಬಾಳೆಯ ಹಣ್ಣುಗಳು ಸಿಹಿಯಾಗಿವೆ. ಆದರೆ ನಿನ್ನ ಹೆಂಡತಿ ಆಗ ಮುಗ್ಧ ಭಕ್ತಿ ಯಿಂದ ನೀಡಿದ್ದ ಹಣ್ಣಿನ ಸಿಪ್ಪೆಗಳು ಇನ್ನಷ್ಟು ಸಿಹಿಯಾಗಿದ್ದವು’.
ಆತ್ಯಂತಿಕವಾದ ಭಕ್ತಿ ಎಂದರೆ ಇದು. ಪ್ರೀತಿ, ಭಕ್ತಿ, ಗೆಳೆತನ, ಶ್ರದ್ಧೆ ಇವೆಲ್ಲ ವುಗಳಿಗೂ ಇದು ಅನ್ವಯವಾಗುತ್ತದೆ. . ಯಾವುದೇ ಆಗಿದ್ದರೂ ಹೀಗೆ ಸಂಪೂರ್ಣವಾದ ಅರ್ಪಣೆ ಇರಬೇಕು.
ಶ್ರೀಕೃಷ್ಣನ ಬಾಲ್ಯದ ಇನ್ನೊಂದು ಘಟನೆ ಯನ್ನು ನೋಡೋಣ.
ಕೃಷ್ಣ ಮತ್ತು ಸುಧಾ ಮರು ಬಾಲ್ಯ ಕಾಲದ ಗೆಳೆಯರು. ಸಾಂದೀಪನಿ ಮುನಿಗಳ ಗುರುಕುಲ ದಲ್ಲಿದ್ದರು. ಒಂದು ದಿನ ಇಬ್ಬರೂ ಹತ್ತಿರದ ಮಾವಿನ ಮರದ ಬಳಿಗೆ ಹೋಗಿ ಕೆಲವು ಮಾವಿನ ಹಣ್ಣುಗಳನ್ನು ಕೆಡವಿದರು. ಬಳಿಕ ಇಬ್ಬರೂ ಮಾವಿನ ಹಣ್ಣುಗಳನ್ನು ತಿನ್ನಲು ಕುಳಿತರು. ಕೃಷ್ಣ ಒಂದೊಂದೇ ಹಣ್ಣನ್ನೆತ್ತಿ ಸುಧಾಮನಿಗೆ ನೀಡತೊಡಗಿದ. ಆತ ತಿನ್ನತೊಡಗಿದ. ಒಂದು ಹಣ್ಣಾಯಿತು, “ಬಹಳ ಸಿಹಿಯಾಗಿದೆ’ ಎಂಬ ಉದ್ಘಾರ ಸುಧಾಮನಿಂದ ಬಂತು. ಎರಡನೆಯ ಹಣ್ಣು ತಿಂದಾಗಲೂ ಅದೇ ಮಾತು. ಮೂರಾಯಿತು, ನಾಲ್ಕಾಯಿತು, ಐದು, ಆರು, ಏಳು… “ಸಿಹಿಯಾಗಿದೆ’ ಎನ್ನುತ್ತಿದ್ದ ಸುಧಾಮ. ಕೃಷ್ಣ ಕೊನೆಯ ಹಣ್ಣನ್ನು ಎತ್ತಿಕೊಂಡಾಗಲೂ ಸುಧಾಮ ಬಾಯಿ ಚಾಚಿದ.
ಆಗ ಕೃಷ್ಣ, “ಸಿಹಿಯಾದ ಇಷ್ಟೆಲ್ಲ ಹಣ್ಣುಗಳನ್ನು ಒಬ್ಬನೇ ತಿಂದು ಈಗ ಕೊನೆಯ ಹಣ್ಣಿಗೂ ಆಸೆಪಡುತ್ತಿರುವೆ ಯಲ್ಲ! ನಾಚಿಕೆಯಾಗಬೇಕು ನಿನಗೆ’ ಎಂದು ಹೇಳುತ್ತ ಆ ಹಣ್ಣನ್ನು ತಾನು ಕಚ್ಚಿದ. ಅದು ಬಹಳ ಹುಳಿಯಾಗಿತ್ತು. “ಥೂ’ ಎಂದು ಆಚೆಗೆ ಎಸೆದ ಕೃಷ್ಣ.
ಆಗ ಸುಧಾಮ “ಕೃಷ್ಣ, ನೀನು ಕೈಯಾರೆ ಕೊಟ್ಟ ಮಾತ್ರಕ್ಕೆ ಆ ಅಷ್ಟೂ ಹಣ್ಣುಗಳು ಹುಳಿ ಎನಿಸದೆ ನನಗೆ ಸಿಹಿಯೇ ಆಗಿದ್ದವು. ಇದೊಂದು ಹಣ್ಣು ನಿನಗೆ ಹುಳಿಯಾಯಿತೇ!’ ಎಂದ.
( ಸಾರ ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.