ಕೋವಿಡ್ ನಿಯಂತ್ರಣ: ವಿಶ್ವಕ್ಕೇ ಮಾದರಿಯಾದ ಧಾರಾವಿ ಕೊಳೆಗೇರಿ!
Team Udayavani, Jun 4, 2021, 6:10 AM IST
ದೇಶವಿನ್ನೂ ಕೋವಿಡ್ ಎರಡನೇ ಅಲೆಯಿಂದ ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ ಕೆಲವೊಂದು ರಾಜ್ಯಗಳು ಮತ್ತು ನಗರಗಳು ಕೋವಿಡ್ ಸೋಂಕಿನ ಸರಪಳಿಯನ್ನು ತುಂಡರಿಸುವಲ್ಲಿ ಯಶಸ್ವಿಯಾಗಿವೆ. ಈ ಮೂಲಕ ಕೊರೊನಾ ಸಾಂಕ್ರಾಮಿಕದ ಕಬಂಧಬಾಹುಗಳಿಂದ ಬಿಡಿಸಿಕೊಂಡು ಯಥಾಸ್ಥಿತಿಯತ್ತ ಮರಳತೊಡಗಿವೆ. ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಕೊರೊನಾ ಸೋಂಕನ್ನು ಒಧ್ದೋಡಿಸುವುದು ಕಷ್ಟಸಾಧ್ಯವೇನಲ್ಲ ಎಂಬುದಕ್ಕೆ ಇದೀಗ ಸಾಕ್ಷಿಯಾಗಿ ನಿಂತಿದೆ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯ ಕೊಳೆಗೇರಿಯಾಗಿರುವ ಧಾರಾವಿ.
ಏಷ್ಯಾದ ಅತೀ ದೊಡ್ಡ ಕೊಳೆಗೇರಿಗಳಲ್ಲಿ ಒಂದಾಗಿರುವ ಧಾರಾವಿ ಅತ್ಯಂತ ಹೆಚ್ಚು ಜನ ಸಾಂದ್ರತೆ ಇರುವ ಪ್ರದೇಶ. ವಿಸ್ತೀರ್ಣದಲ್ಲಿ ಕಿರಿದಾಗಿದ್ದರೂ ಇಲ್ಲಿನ ಜನಸಂಖ್ಯೆ 8.5 ಲಕ್ಷ. ಈ ಕೊಳೆಗೇರಿಯಲ್ಲಿ ನೈರ್ಮಲ್ಯ, ಶುಚಿತ್ವಗಳೆಲ್ಲವನ್ನು ಊಹಿಸುವುದೂ ಕಷ್ಟಸಾಧ್ಯ. ಇಂಥ ಪರಿಸ್ಥಿತಿಯಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿದಾಗ ಅಲ್ಲಿನ ಪರಿಸ್ಥಿತಿ ಹೇಗಿರ ಬಹುದು? ಎಂದು ಅರೆಕ್ಷಣ ಯೋಚಿಸಿದರೆ ಎಲ್ಲರೂ ಭಯಭೀತರಾಗುವುದು ಸಹಜ. ಆದರೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯ ವ್ಯವಸ್ಥಿತ ಕಾರ್ಯ ಯೋಜನೆ ಮತ್ತು ಬದ್ಧತೆ ಹಾಗೂ ಸ್ಥಳೀಯರ ಸಹಕಾರದಿಂದಾಗಿ ಕೊರೊನಾವನ್ನು ಹಿಮ್ಮೆಟ್ಟಿ ಸಲು ಸಾಧ್ಯವಾಗಿದೆ. ಈ ಮೂಲಕ ಧಾರಾವಿ ಕೊರೊನಾ ನಿಯಂತ್ರಣ ವಿಚಾರದಲ್ಲಿ ಇಡೀ ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಮಾದರಿ ಎನಿಸಿಕೊಂಡಿದೆ. ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಎಪ್ರಿಲ್ 8ರಂದು ಅತ್ಯಧಿಕ ಅಂದರೆ 99 ಪಾಸಿಟಿವ್ ಪ್ರಕರಣಗಳು ಧಾರಾವಿಯಲ್ಲಿ ದಾಖಲಾಗಿದ್ದವು. ಆದರೆ ಕಳೆದೆರಡು ವಾರಗಳಿಂದೀಚೆಗೆ ಇಲ್ಲಿ ದಿನಕ್ಕೆ ಒಂದೆರಡು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದರೆ ಗುರುವಾರ ಒಂದು ಪ್ರಕರಣವಷ್ಟೇ ಧೃಡಪಟ್ಟಿದೆ. ಅಷ್ಟು ಮಾತ್ರವಲ್ಲದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಇಳಿದಿದೆ. ಕೊರೊನಾ ಸೋಂಕಿನ ಪ್ರಸರಣಕ್ಕೆ ತಡೆ ಒಡ್ಡುವಲ್ಲಿ ಬಿಎಂಪಿ ಅನುಸರಿಸಿದ ಕಾರ್ಯತಂತ್ರ ಮತ್ತು ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಈ ಕಾರ್ಯತಂತ್ರವೀಗ “ಧಾರಾವಿ ಮಾದರಿ’ ಎಂದೇ ಖ್ಯಾತವಾಗಿದೆ.
ಪ್ರತಿಕಾಯಗಳೇ ಕಾರಣ? :
ಕಳೆದ ವರ್ಷದ ಜುಲೈಯಲ್ಲಿ ನಡೆಸಲಾದ ಸೀರೋ ಸರ್ವೇಯಲ್ಲಿ ಧಾರಾವಿಯಲ್ಲಿ ಶೇ. 57ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿತ್ತು. ಆ ಬಳಿಕದ ದಿನಗಳಲ್ಲಿ ಇದು ಶೇ. 70-80ರಷ್ಟಾಗಿತ್ತು.ಇಲ್ಲಿನ ನಿವಾಸಿಗಳಲ್ಲಿ ಸ್ವಾಭಾವಿಕ ಸೋಂಕುಗಳಿಂದ ಸಾಕಷ್ಟು ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಯುರೋಪಿಯನ್ ಜರ್ನಲ್ ಆಫ್ ಹೆಲ್ತ್ ಸೈನ್ಸಸ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಧಾರಾವಿಯು ಸಾಮೂಹಿಕ ಪ್ರತಿಕಾಯ ಸೃಷ್ಟಿಸುವಷ್ಟು ಸೀರೋಪಾಸಿಟಿವಿಟಿ ಹೊಂದಿತ್ತು. ಈ ಕಾರಣದಿಂದಾಗಿಯೇ ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ.
ಏನಿದು “ಧಾರಾವಿ ಮಾದರಿ’? : ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡ ಸಂದರ್ಭದ ಕಾರ್ಯತಂತ್ರವನ್ನೇ ಬಿಎಂಸಿ ಈ ಬಾರಿಯೂ ಅನುಸರಿಸಿತು. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ “4ಟಿ’ ಅಂದರೆ ಸೋಂಕಿತರ ಪತ್ತೆ ಹಚ್ಚುವಿಕೆ, ಸಂಪರ್ಕಿತರ ಗುರುತಿಸುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆ. ಈ ನಾಲ್ಕು ವಿಧಾನಗಳನ್ನು ಅನುಸರಿಸಿ ಕೊರೊನಾ ಸೋಂಕಿನ ಸರಪಳಿಯನ್ನು ಕತ್ತರಿಸಲಾಯಿತು. ಇದು ಕೊಳೆಗೇರಿ ನಿವಾಸಿಗಳು ಮಾತ್ರವಲ್ಲದೆ ಬಿಎಂಸಿಗೂ ನಿಟ್ಟುಸಿರು ಬಿಡುವಂತೆ ಮಾಡಿದೆ. ರೋಗಲಕ್ಷಣಗಳನ್ನು ಹೊಂದಿ ರುವವರ ಮನೆ ಬಾಗಿಲಿಗೆ ಹೋಗಿ ಅವರ ತಪಾಸಣೆ, ಪರೀಕ್ಷೆ, ನಿರಂತರ ತಪಾಸಣೆ ನಡೆಸಲಾಯಿತು. ಅಲ್ಲದೆ ಮುಂಬಯಿಯ ವಿವಿಧೆಡೆಗಳಲ್ಲಿ ಡೆಲಿವರಿ ಸಿಬಂದಿಯಾಗಿ, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕೊಳೆಗೇರಿಯ ನಿವಾಸಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಗೊಳಪಡಿಸಲಾಯಿತು. ಈ ಎಲ್ಲ ಉಪಕ್ರಮಗಳು ಕೊರೊನಾ ನಿಯಂತ್ರಣ ದಲ್ಲಿ ನಿರ್ಣಾಯಕ ಪಾತ್ರ ವಹಿಸಿದವು.
ನಾಗಾಲೋಟಕ್ಕೆ ಬ್ರೇಕ್! : ಮುಂಬಯಿಯಲ್ಲಿ ಈಗಲೂ ಪ್ರತೀದಿನ 900ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆಯಾದರೂ ಧಾರಾವಿಯಲ್ಲಿ ಪ್ರಕರಣಗಳ ಸಂಖ್ಯೆಯನ್ನು ಒಂದಂಕಿಗೆ ಇಳಿಸುವಲ್ಲಿ ಬಿಎಂಸಿ ಸಫಲ ವಾಗಿದೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ಧಾರಾ ವಿಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಈ ವರ್ಷದ ಮೇ 26ರ ವರೆಗೆ 354 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಎರಡನೇ ಅಲೆಯ ವೇಳೆ ಈ ವರ್ಷದ ಮಾರ್ಚ್, ಎಪ್ರಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಅಚ್ಚರಿ ಎಂಬಂತೆ ಇದೀಗ ಕೊರೊನಾ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.
ಹೇಗಿದೆ ಧಾರಾವಿ ಕೊಳೆಗೇರಿ? :
2.1 ಚದರ ಕಿ. ಮೀ. ಅಂದರೆ 520 ಎಕ್ರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಧಾರಾವಿ ಕೊಳೆಗೇರಿಯ ಒಟ್ಟು ಜನಸಂಖ್ಯೆ 8.5 ಲಕ್ಷ. ಅಂದರೆ ಪ್ರತೀ ಚದರ ಕಿ.ಮೀ. ಗೆ 2,77,136 ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಕಿರಿದಾದ ಜೋಪಡಿಯಲ್ಲಿ 8ರಿಂದ 10 ಜನರಿರುತ್ತಾರೆ. ಅಲ್ಲದೆ ಇಲ್ಲಿ ಸಣ್ಣ ಪ್ರಮಾಣದ ಕುಂಬಾರಿಕೆ, ಚರ್ಮ ಮತ್ತು ಜವಳಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅಚ್ಚರಿಯ ವಿಷಯ ಅಂದರೆ ಈ ಕೊಳೆಗೇರಿಯಲ್ಲಿ ಜಿಎಸ್‌ಟಿ ನೋಂದಾಯಿತ 5,000 ಸಣ್ಣ ಉದ್ಯಮಗಳು, ಒಂದೇ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿರುವ 15,000 ಕೈಗಾರಿಕ ಘಟಕಗಳಿವೆ. ಬಿಎಂಸಿ ಅಂಕಿಅಂಶಗಳ ಪ್ರಕಾರ ಇಲ್ಲಿ ವಾರ್ಷಿಕ 100 ಕೋಟಿ ಡಾಲರ್‌ಗಳಷ್ಟು ಅಂತಾರಾಷ್ಟ್ರೀಯ ರಫ್ತು ವ್ಯವಹಾರ ನಡೆಯುತ್ತದೆ.
ಕೋವಿಡ್ ಮುಕ್ತವಾಗಿಸುವ ಸಂಕಲ್ಪ :
ಕಳೆದ ವರ್ಷ ಮುಂಬಯಿಯಲ್ಲಿ ಪ್ರಥಮ ಕೋವಿಡ್ ಪ್ರಕರಣ ದಾಖಲಾದ 20 ದಿನಗಳ ಬಳಿಕ ಅಂದರೆ ಎಪ್ರಿಲ್ 1ರಂದು ಧಾರಾವಿಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಅನಂತರದ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದರಿಂದಾಗಿ ಧಾರಾವಿಯನ್ನು “ಕೋವಿಡ್ ಹಾಟ್‌ಸ್ಪಾಟ್’ ಎಂದು ಘೋಷಿಸಲಾಗಿತ್ತು. ಇದನ್ನೊಂದು ಸವಾಲಾಗಿ ಪರಿಗಣಿಸಿ ಕಾರ್ಯೋನ್ಮುಖವಾದ ಬಿಎಂಸಿ, ಸ್ಥಳೀಯ ವೈದ್ಯರು ಮತ್ತು ಸಮುದಾಯದ ಬೆಂಬಲ ಮತ್ತು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ನಿರಂತರವಾಗಿ ಜನರ ತಪಾಸಣೆ, ಪರೀಕ್ಷೆಗಳನ್ನು ನಡೆಸಿತು. ಇನ್ನು ಕೊಳೆಗೇರಿಯಲ್ಲಿರುವ 450 ಸಮುದಾಯ ಶೌಚಾಲಯಗಳನ್ನು ಇಲ್ಲಿನ ಜನಸಂಖ್ಯೆಯ ಶೇ. 80ರಷ್ಟು ಮಂದಿ ಅವಲಂಬಿಸಿದ್ದು ಇದರ ಸ್ವತ್ಛತೆ ಬಿಎಂಸಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿತು. ದಿನಕ್ಕೆ ಮೂರು ಬಾರಿ ಈ ಶೌಚಾಲಯಗಳನ್ನು ಸ್ವತ್ಛಗೊಳಿಸುವ ಮೂಲಕ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಯಿತು. ಈಗಲೂ ಇದೇ ರೀತಿಯಾಗಿ ಶೌಚಾಲಯಗಳನ್ನು ಸ್ವತ್ಛಗೊಳಿಸಲಾಗುತ್ತಿದೆ. ಸದ್ಯ 11 ಫಿವರ್ ಕ್ಲಿನಿಕ್‌ಗಳು ಮತ್ತು ಸಂಚಾರಿ ಪರೀಕ್ಷಾ ಕೇಂದ್ರಗಳಲ್ಲಿ ನಿರಂತರ ತಪಾಸಣೆಯನ್ನು ಮುಂದುವರಿಸಲಾಗಿದೆ. ಲಸಿಕೆ ನೀಡಿಕೆ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲು ನಿರ್ಧರಿಸಲಾಗಿದೆ. ಇದರ ಜತೆಯಲ್ಲಿ ಸ್ಥಳೀಯ ನಿವಾಸಿಗಳ ತಪಾಸಣೆಯನ್ನು ಮುಂದುವರಿಸುವ ಮೂಲಕ ಕೊಳೆಗೇರಿ ಯನ್ನು ಕೊರೊನಾ ಮುಕ್ತವಾಗಿಸುವ ಸಂಕಲ್ಪ ಬಿಎಂಸಿ ಅಧಿಕಾರಿಗಳದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.