ಸ್ವರ್ಗಕ್ಕೆ ಮೂರೇ ಗೇಣು
Team Udayavani, Jun 9, 2021, 8:00 AM IST
ಸಾಂದರ್ಭಿಕ ಚಿತ್ರ
ಮೇ ತಿಂಗಳಲ್ಲಿ ವರುಣನು ತಾನು ಇಳೆಯನ್ನು ಸಂಧಿಸಲು ಬರುತ್ತಿರುವುದಾಗಿ ಟೆಲಿಗ್ರಾಮ್ ವೊಂದನ್ನು ಮುನ್ಸೂಚನೆಯಾಗಿ ಬೀಸುವ ಗಾಳಿ ಮತ್ತು ಸಣ್ಣಪುಟ್ಟ ಹನಿಗಳೊಂದಿಗೆ ಇಳೆಗೆ ತಿಳಿಸುವನು. ಜೂನ್ ತಿಂಗಳಿನಲ್ಲಿ ಅಧಿಕೃತವಾಗಿ ಗುಡುಗು-ಸಿಡಿಲಿನ ವಾದ್ಯಮೇಳಗಳ ದಿಬ್ಬಣದೊಂದಿಗೆ ಕರಿ ಮೋಡವೆಂಬ ಪರದೆಯನ್ನು ಸರಿಸಿ ಸ್ವಾತಿ ಮುತ್ತಿನ ಹನಿಗಳಂತೆ ಧರೆಯನ್ನು ಚುಂಬಿಸುವ ಸಮಯ. ಬೇಸಗೆಯ ಧಗೆಯಿಂದ ದಣಿದಿದ್ದ ಧರೆಯನ್ನು ತಂಪು ಮಾಡಲು ಪಣತೊಟ್ಟು ಸುರಿವ ಮಳೆಯು, ನೆಲವನ್ನೆಲ್ಲ ತೋಯ್ದು ಮಣ್ಣಿನ ಕಂಪು ಸುಗಂಧದ ಪರಿಮಳದಂತೆ ಪಸರಿಸಿ ತನುಮನಗಳಿಗೆ ಸುವಾಸನೆಯ ಮುದವನ್ನೀಯುವುದು.
ಎಲ್ಲೆಲ್ಲೂ ಹಸುರಿಗೆ ಆದರದ ಸ್ವಾಗತವನ್ನು ಕೋರುವ ಹವಾಮಾನ. ಭೂಮಿಗೆ ಬಿದ್ದ ಬೀಜಗಳಿಗೆಲ್ಲ ಮಳೆಯ ಸ್ಪರ್ಶ ತಾಗಿ ಚಿಗುರೊಡೆಯುವ ಸಂಭ್ರಮ. ಬಿಸಿಲ ಬೇಗೆಗೆ ಬಳಲಿ ಬೆಂಡಾದ ಜೀವಗಳನ್ನು ತಣಿಸುವುದು ಗಾಳಿಯೊಂದಿಗೆ ಸುರಿಯುವ ಈ ತುಂತುರು ಮಳೆ. ಬೀಸುವ ಗಾಳಿಗೆ ಒಣಗಿದ ತರಗೆಲೆಗಳು ಹಾರಿ, ವರುಣನು ಮರಗಿಡಗಳ ಪಾದಸ್ಪರ್ಶವ ಮಾಡುವನು ಅವುಗಳಿಗೆ ನವಚೈತನ್ಯ ತುಂಬಲು.
ಬಿಡದೆ ಸುರಿಯುವ ಜಡಿಮಳೆ, ಒಣಗಿ ಬತ್ತಿಹೋದ ಕೆರೆಕಟ್ಟೆ, ಸರೋವರ, ಕಾಲುವೆ, ಬಾವಿ, ಸಣ್ಣಪುಟ್ಟ ಹಳ್ಳಗಳು, ತೋಡು, ನದಿ, ಜಲಪಾತಗಳನ್ನೆಲ್ಲ ತುಂಬಿ ಅವುಗಳೊಂದಿಗೆ ಹರಿದು ತಾನೂ ಸಮುದ್ರ ಸೇರುವುದು.
ಅಬ್ಟಾ! ಇದರ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಅತಿಯಾದರೆ ಅಮೃತವೂ ವಿಷವೆಂಬಂತೆ ಇದೇ ಮಳೆಯು ಮಿತಿಮೀರಿ ಬಂದರೆ, ಶಾಂತವಾಗಿದ್ದ ಸಮುದ್ರ ನದಿ-ಕೊಳಗಳು ತನ್ನ ರೌದ್ರತೆಯನ್ನು ಪ್ರದರ್ಶಿಸುವುದೂ ಉಂಟು. ಮನೆಯಲ್ಲಿ ಮಕ್ಕಳಿಗೆ ಬೇಸಗೆಯಲ್ಲಿ ಮಳೆಗಾಲಕ್ಕೆಂದು ಡಬ್ಬಿಗಳಲ್ಲಿ ತುಂಬಿಟ್ಟಿದ್ದ ಹಲಸಿನ ಹಪ್ಪಳ, ಮಾವಿನ ಮಾಂಬಳ (ಮಾವಿನಹಣ್ಣಿನ ಕಟ್ಟಿ) ಹಾಗೂ ಇನ್ನಿತರ ತಿಂಡಿಗಳನ್ನು ತಿನ್ನುವ ಸಂಭ್ರಮ. ಸಂಜೆಯ ಹೊತ್ತು ಸುರಿಯುವ ಮಳೆಯೊಂದಿಗೆ ಬಿಸಿ ಬಿಸಿ ಸಂಡಿಗೆ, ಹಲಸಿನ ಚಿಪ್ಸ್, ಹಪ್ಪಳ ಹಾಗೂ ಸುಟ್ಟ ಗೇರುಬೀಜಗಳನ್ನು ತಿನ್ನುವ ಖುಷಿಯೇ ಬೇರೆ. ತಂಪಾದ ಹವಾಮಾನದಲ್ಲಿ ಚಹಾ ಹೀರುತ್ತಾ, ಕೈಯಲ್ಲೊಂದು ತೇಜಸ್ವಿಯವರ ಪುಸ್ತಕ ಹಿಡಿದು ಕುಳಿತರೆ ಪುಸ್ತಕ ಪ್ರಿಯರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗುವುದಂತು ಖಚಿತ.
ಈ ತಂಪಾದ ಮಳೆಗಾಲದಲ್ಲಿ ಮೈದುಂಬಿಕೊಂಡು ಎಲ್ಲೆಲ್ಲೂ ಹಸುರಿನ ಸೀರೆಯನ್ನುಟ್ಟು ಕಂಗೊಳಿಸುವ ಪ್ರಕೃತಿಯ ಸೊಬಗನ್ನು ವರ್ಣಿಸಲು ಪದಗಳೇ ಸಾಲದು. ದಿನನಿತ್ಯ ಸುರಿವ ಮಳೆಯು ಒಂದು ದಿನ ಉದಾಸೀನ ತೋರಿ, ಆ ದಿನ ಸೂರ್ಯನು (ಬಿಸಿಲು) ಧರೆಯ ಯೋಗಕ್ಷೇಮ ವಿಚಾರಿಸಿ ಹೆಚ್ಚು ಸಮಯವಿದ್ದರೆ ಸಾಕು. ಗಾಳಿ-ಮಳೆಗೆ ಚದುರಿ ಹೋದ ತನ್ನ ಪುಟ್ಟ ಪುಟ್ಟ ಗೂಡುಗಳನ್ನು ಮತ್ತೆ ಕಟ್ಟಿಕೊಳ್ಳಲು ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ಹಾರಿ ಬರುವ ಸಣ್ಣ ಪುಟ್ಟ ಹಕ್ಕಿಮತ್ತು ಪಕ್ಷಿಗಳ ದಂಡು. ಇದೇ ಸಮಯದಲ್ಲಿ ಮಳೆಗೆ ಒಣಗದೇ ಕುಂಬು ಹಿಡಿದಂತಿರುವ ಬಟ್ಟೆಗಳನ್ನು ಬಿಸಿಲಿಗೆ ಮೈಯೊಡ್ಡಿ ನಿಲ್ಲಿಸುವುದು ಸಹಜ.
-ಜ್ಯೋತಿ ಭಟ್
ಎಸ್‌ಡಿಎಂ ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.