ಯಶಸ್ಸು ಸಾಧಕರ ಸ್ವತ್ತೇ ವಿನಾ ಸೋಮಾರಿಯದಲ್ಲ
Team Udayavani, Jun 10, 2021, 6:00 AM IST
ಯಾರು ಸೋಮಾರಿಯಾಗಿ ಸಮಯವನ್ನು ಯಾರು ವ್ಯರ್ಥ ಮಾಡುತ್ತಾರೋ ಅವರ ಪಾಲಿಗೆ ಯಶಸ್ಸು ಎನ್ನುವುದು ಕೇವಲ ಮರೀಚಿಕೆಯಾಗಿಯೇ ಉಳಿಯುತ್ತದೆ. ಇನ್ನೊಬ್ಬರ ಯಶಸ್ಸು ಅಥವಾ ಸಾಧನೆಯ ಪ್ರಖರತೆಯನ್ನು ಕಂಡು ಅಸೂಯೆಪಟ್ಟರೆ ಅದರಿಂದ ಯಾವುದೇ ರೀತಿಯ ಲಾಭ ಆಗುವುದಿಲ್ಲ. ಅದರ ಬದಲು ಶ್ರಮವಹಿಸಿ ಕೆಲಸ ಮಾಡುವ ಮೂಲಕ ಸಾಧಕರಾಗಿರುವವರ ವಿಶೇಷ ಗುಣಗಳನ್ನು ಅರಿತುಕೊಂಡು ತಾನೂ ಅದನ್ನು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಬಹುದು.
ಒಂದು ದಟ್ಟವಾದ ಕಾಡಿನಲ್ಲಿ ಮಿಂಚು ಹುಳವೊಂದು ತನ್ನ ಪುಟ್ಟ ಸಂಸಾರದೊಂದಿಗೆ ವಾಸಿಸುತ್ತಿತ್ತು. ಅದೊಂದು ಗಾಢವಾದ ಕತ್ತಲಿನ ವೇಳೆ ಒಂದು ವಿಷಪೂರಿತ ಸರ್ಪವು ಆ ಮಿಂಚು ಹುಳವನ್ನು ಹಿಡಿದು ತಿನ್ನಲು ಅಟ್ಟಾಡಿಸಿಕೊಂಡು ಹೋಯಿತು. ಇದರಿಂದ ಭೀತಿಗೆ ಒಳಗಾದ ಮಿಂಚು ಹುಳವು ಆ ವಿಷ ಸರ್ಪದ ಬಾಯಿಯಿಂದ ತಪ್ಪಿಸಿಕೊಂಡು ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ನಿರಂತರವಾಗಿ ಅತ್ತಿಂದಿತ್ತ ಹಾರಾಟ ನಡೆಸಿತು. ಆದರೆ ಹಠಮಾರಿ ಯಾದ ಸರ್ಪವು ಬೆನ್ನು ಬಿಡದೆ ಆ ಮಿಂಚು ಹುಳವನ್ನು ಹಿಡಿದು ತಿನ್ನಲು ಅದನ್ನು ಹಿಂಬಾಲಿಸುತ್ತಲೇ ಇತ್ತು. ಒಂದೆರಡು ದಿನಗಳ ನಿರಂತರ ಹಾರಾಟದ ಅನಂತರ ಮಿಂಚುಹುಳವು ದಣಿದು ಬಿಟ್ಟಿತು.
ಕೊನೆಗೆ ಸುಸ್ತಾದ ಮಿಂಚು ಹುಳವು, ಬೇಸರದಿಂದ ನಾನು ನಿನಗೆ ಮೂರು ಪ್ರಶ್ನೆಗಳನ್ನು ಕೇಳಬಹುದೇ ಎಂದು ತನ್ನನ್ನು ಅಟ್ಟಿಸಿಕೊಂಡು ಬಂದ ಸರ್ಪವನ್ನು ಕೇಳಿತು. ಆಗ ಆ ವಿಷಪೂರಿತ ಸರ್ಪವು ಸಿಟ್ಟಿನಿಂದಲೇ ಸರಿ, ಅದೇನು ನಿನ್ನ ಪ್ರಶ್ನೆ ಇದೆಯೋ ಅದನ್ನು ಕೇಳಿ ಬಿಡು ಎಂದು ಹೇಳಿತು. ಅದಕ್ಕೆ ಆ ಮಿಂಚು ಹುಳವು ಮೊದಲನೆಯ ಪ್ರಶ್ನೆಯಾಗಿ ನಾನು ನಿನ್ನ ಆಹಾರದ ಸರಪಳಿಯ ಪಟ್ಟಿಯಲ್ಲಿ ಇದ್ದೇನೆಯೇ? ಎಂದು ಕೇಳಿತು.
ಆ ಪ್ರಶ್ನೆಗೆ ವಿಷ ಸರ್ಪವು ಇಲ್ಲ ಎಂದಿತು. ಎರಡನೆಯ ಪ್ರಶ್ನೆಯಾಗಿ ನಾನು ನಿನಗೆ ಏನಾದರೂ ತೊಂದರೆಯನ್ನು ಮಾಡಿದೆನೇ ಅಥವಾ ನಾನು ನಿನ್ನನ್ನು ಕೆಣಕಿದೆನೇ? ಎಂದು ಮಿಂಚುಹುಳ ಕೇಳಿತು. ಆ ಪ್ರಶ್ನೆಗೂ ಸರ್ಪವು ಇಲ್ಲ ಎಂದು ಉತ್ತರವನ್ನು ನೀಡಿತು. ಹಾಗಾದರೆ ನೀನು ನನ್ನನ್ನು ಏಕೆ ಕೊಂದು ತಿನ್ನಬೇಕು ಎಂದು ನಿರ್ಧರಿಸಿದ್ದೀಯಾ? ಎಂದು ಮೂರನೆಯ ಪ್ರಶ್ನೆಯನ್ನು ಮಿಂಚು ಹುಳವು ಕೇಳಿತು. ಆಗ ವಿಷ ಸರ್ಪವು, ಏಕೆ ಎಂದರೆ ಏನು ಹೇಳಲಿ ನಾನು? ನೀನು ಆ ರೀತಿ ನಿರಂತರವಾಗಿ ಮತ್ತು ಸ್ವತಂತ್ರವಾಗಿ ಮಿನುಗುತ್ತಿರುವ ರೀತಿಯನ್ನು ನೋಡಿ ನನ್ನಿಂದ ಸಹಿಸಿಕೊಳ್ಳಲು ಸಾಧ್ಯ ವಾಗುತ್ತಿಲ್ಲ. ಅದಕ್ಕಾಗಿಯೇ ನಾನು ನಿನ್ನನ್ನು ಕೊಂದು ತಿನ್ನಬೇಕು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿತು.
ಜೀವನದಲ್ಲಿ ಧನಾತ್ಮಕವಾಗಿ ಸಾಧನೆಯ ಹಾದಿಯಲ್ಲಿ ಸಾಗುವವರ ಬದುಕಿನಲ್ಲಿಯೂ ಇಂತಹ ವಿಷಪೂರಿತ ಸರ್ಪಗಳು ಎದುರಾಗುವ ಸಾಧ್ಯತೆಗಳು ಯಥೇತ್ಛವಾಗಿ ಇರುತ್ತವೆ. ಅಂತಹ ಸರ್ಪಗಳನ್ನು ಎದುರಿಸಲು ಎರಡು ರೀತಿಯ ಆಯ್ಕೆಗಳಿವೆ. ಅವೆಂದರೆ ಒಂದೋ ಸಾಧಕರು ತಮ್ಮ ಹೊಳೆಯುವ ಗುಣವನ್ನು (ಸಾಧನೆಯ ಹಾದಿಯಲ್ಲಿ ಸಾಗುವುದನ್ನು) ನಿಲ್ಲಿಸಿಬಿಡುವುದು, ಎರಡನೆಯದು ಸಾಧಕರು ತಮ್ಮ ಸಾಧನೆಯ ಹೊಳಪನ್ನು ಮತ್ತಷ್ಟು ಹೆಚ್ಚಿಸಿಕೊಂಡು ಆ ಹೊಳಪಿನ ಶಕ್ತಿಯಿಂದಲೇ ವಿಷ ಸರ್ಪಗಳನ್ನು ಮಣಿಸುವುದು. ಇಂಥ ಸಂದರ್ಭದಲ್ಲಿ ಸಾಧಕರು ತಮ್ಮ ಸಾಧನೆಯ ಹೊಳಪನ್ನು ಮತ್ತಷ್ಟು ಹೆಚ್ಚಿ ಸಿಕೊಂಡು ಆ ಹೊಳಪಿನ ಪ್ರಖರತೆಯ ತೀಕ್ಷ್ಣತೆಗೆ ಅಸೂಯೆ ಪಡುವ ವಿಷಪೂರಿತ ಸರ್ಪಗಳ ಕಣ್ಣು ಕೋರೈಸುವಂತೆ ಮಾಡಬೇಕು. ಪ್ರತಿಯೊಬ್ಬ ಸಾಧಕರ ಜೀವನದ ಹಾದಿಯಲ್ಲಿ ಕಲ್ಲುಮುಳ್ಳುಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಇವುಗಳಿಗೆ ಅಂಜದೆ ಅವೆಲ್ಲವನ್ನೂ ಮೆಟ್ಟಿ ನಿಂತು ಮುಂದಕ್ಕೆ ಸಾಗುವಂತಹ ದಿಟ್ಟತನ ವನ್ನು ತೋರುವುದು ಮುಖ್ಯ. ಇದರಿಂದ ಯಶಸ್ಸು ಆತನಿಗೆ ಒಲಿಯುತ್ತದೆ.
ಯಶಸ್ಸು ಸಾಧಕರ ಸ್ವತ್ತೇ ವಿನಾ ಸೋಮಾರಿಯದಲ್ಲ ಎಂಬ ಮಾತಿನಂತೆ, ಯಾರು ಯಶಸ್ಸಿಗಾಗಿ ಕಠಿನ ಪರಿಶ್ರಮ ವನ್ನು ಮಾಡಿ ಸಾಧನೆಯನ್ನು ಮಾಡುತ್ತಾರೋ ಅವರ ಬಳಿಯಲ್ಲಿ ಯಶಸ್ಸು ಪ್ರಮುಖ ಆಸ್ತಿಯಾಗಿ ಸದಾ ಉಳಿಯುತ್ತದೆ.
- ಸಂತೋಷ್ ರಾವ್ ಪೆರ್ಮುಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.