ಕ್ಷಣಿಕ ಸುಖದ ಮತ್ತಿನಲ್ಲಿ ಜೀವನವನ್ನೇ ಹಾಳುಗೆಡವದಿರಿ
ಇಂದು ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ
Team Udayavani, Jun 26, 2021, 6:45 AM IST
ಕಳೆದ ಶತಮಾನದಲ್ಲಿ ಯುದ್ಧ ಮತ್ತು ಸಾಂಕ್ರಾಮಿಕ ರೋಗಗಳ ಭಯದೊಂದಿಗೆ ಮಾನವ ಸಮಾಜದ ಹೋರಾಟ ನಡೆದಿತ್ತು. ಈ ಶತಮಾನದಲ್ಲಿ ಈ ಭಯಗಳು ಒಂದಿಷ್ಟು ಕಡಿಮೆಯಾದರೂ ಮಾದಕ ವ್ಯಸನ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಮಾದಕ ದ್ರವ್ಯ ಸೇವನೆಯ ವ್ಯಸನ ಈಗ ವಿಶ್ವವ್ಯಾಪಿಯಾಗಿದೆ. ಬಡ ರಾಷ್ಟ್ರಗಳಲ್ಲಿ ಜನರು ತಮ್ಮ ಆಹಾರದ ಬವಣೆಯನ್ನು ನೀಗಿಸಿಕೊಳ್ಳಲು ಇದನ್ನೊಂದು ಅಸ್ತ್ರವನ್ನಾಗಿಸಿಕೊಂಡಿದ್ದರೆ ಇನ್ನು ಶ್ರೀಮಂತ ರಾಷ್ಟ್ರಗಳಲ್ಲಿ ಜನರು ಮಾದಕ ವಸ್ತುಗಳನ್ನು ಮೋಜಿಗಾಗಿ ಸೇವಿಸಿ ಅದರ ದಾಸರಾಗುತ್ತಿದ್ದಾರೆ. ವರ್ಷಗಳುರುಳಿದಂತೆಯೇ ಈ ದುಶ್ಚ ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಬಲಿಯಾಗುತ್ತಿರುವುದು ತೀರಾ ಕಳವಳಕಾರಿ ವಿಷಯ. ಈ ದುಶ್ಚಟದಿಂದ ಮಾನವ ಸಮಾಜವನ್ನು ದೂರವಿರಿಸುವ ಪ್ರಯತ್ನವಾಗಿ ವಿಶ್ವಸಂಸ್ಥೆ, ಪ್ರತೀ ವರ್ಷ “ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನು ಆಚರಿಸುತ್ತಿದೆ. “ಮಾದಕ ದ್ರವ್ಯದ ಬಗೆಗಿನ ನಿಜಾಂಶಗಳನ್ನು ಹಂಚಿಕೊಳ್ಳಿ, ಜೀವ ಉಳಿಸಿ’-ಇದು ಈ ವರ್ಷದ ಧ್ಯೇಯವಾಗಿದೆ.
“ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ ವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅನುಮತಿಯೊಂದಿಗೆ 1989 ರ ಜೂನ್ 26 ರಂದು ಮೊದಲು ಆರಂಭಿಸಲಾಯಿತು. ಮಾದಕ ದ್ರವ್ಯಗಳ ಬಳಕೆ ಮತ್ತು ಸಾಗಾಟದ ನಿಷೇಧವೇ ಈ ದಿನದ ಗುರಿ. 1997ರಲ್ಲಿ ವಿಶ್ವಸಂಸ್ಥೆಯು, “ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ’ವನ್ನು ಪ್ರತ್ಯೇಕವಾಗಿ ಪ್ರಾರಂಭಿಸಿ ಪ್ರತೀ ವರ್ಷ ಮಾದಕ ವ್ಯಸನದ ಬಗೆಗಿನ ಜಾಗತಿಕ ವರದಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. 2021ರ ವರದಿಯ ಪ್ರಕಾರ ಜಗತ್ತಿನ 27.5 ಕೋಟಿ ಜನರು ಮಾದಕ ವ್ಯಸನಿಗಳಾಗಿದ್ದು ಇವರಲ್ಲಿ 3.7 ಕೋಟಿ ಜನರು ತತ್ಸಬಂಧೀ ರೋಗಗಳಿಂದ ಬಳಲುತ್ತಿದ್ದಾರೆ.
ಮಾದಕ ವಸ್ತುಗಳು ಮತ್ತು ಬಳಕೆ
ಮಾದಕ ವ್ಯಸನಿಗಳಲ್ಲಿ ಗಾಂಜಾ(ಮರಿಜುವಾನ) ಜನಪ್ರಿಯ. ಒಂದು ಅಂದಾಜಿನ ಪ್ರಕಾರ ಜಗತ್ತಿನ 19.2 ಕೋಟಿಗೂ ಹೆಚ್ಚು ವ್ಯಸನಿಗಳು ಇದನ್ನು ಬಳಸುತ್ತಾರೆ. ಕೊಕೇನ್, ಹೆರಾಯಿನ್, ಗಾಂಜಾ ಇತ್ಯಾದಿ ಜತೆಗೆ ಅಗ್ಗದ ಫ್ಲಾಕಾ, ಕ್ರೊಕೊಡೈಲ್ ಸಂಯುಕ್ತಗಳೂ ಫೆಂಟಾನಿಲ್, ಕೋಡೆನ್ ಕಫ್ ಸಿರಪ್, ಮಾರ್ಫಿನ್, ಕ್ರೇಟಂ ಇತ್ಯಾದಿ ಪ್ರಿಸ್ಕ್ರಿಪ್ಶನ್ ಔಷಧಗಳೂ ಮಾದಕ ವಸ್ತುಗಳಾಗಿ ಬಳಕೆಯಾಗುತ್ತಿವೆ. ಬಡ ದೇಶಗಳಲ್ಲಿ ವೈಟ್ನರ್, ಗಮ್, ಜೆಟ್ ಆಯಿಲ…, ಪೇಂಟ್, ಟಿನ್ನರ್‌ಗಳನ್ನು ಮಾದಕ ವಸ್ತುಗಳಾಗಿ ಬಳಸಲಾಗುತ್ತಿದೆ.
ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡದಲ್ಲಿ ಮಾದಕ ವಸ್ತುಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚು. ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ ಬಳಿಕ ಈ ಮಾದಕ ವಸ್ತುಗಳ ಮಾರಾಟ ಕ್ರಮ ಬದಲಾಗಿದೆ. ಕಳ್ಳಸಾಗಣೆದಾರರು ವಿನೂತನ ಮಾರ್ಗ(ಡಾರ್ಕ್ ನೆಟ್ ಇತ್ಯಾದಿ)ಗಳ ಮೂಲಕ ಮಾದಕ ವಸ್ತುಗಳನ್ನು ವ್ಯಸನಿಗಳಿಗೆ ಪೂರೈಸುತ್ತಿ¨ªಾರೆ. ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ಈ ಪ್ರಕ್ರಿಯೆಯನ್ನು ಭಯೋತ್ಪಾದಕರು, ಭೂಗತ ಜಗತ್ತಿನವರು ನಿಯಂತ್ರಿಸುತ್ತಿರುವುದರಿಂದಲೂ ಜಗತ್ತಿನೆಲ್ಲೆಡೆ ಈ ವಸ್ತುಗಳು ಬಿಕರಿಯಾಗುವುದು ಮತ್ತು ರಾಸಾಯನಿಕ ಕ್ರಿಯೆಗಳ ಅರಿವಿದ್ದವರೇ ಇಂತಹ ವಸ್ತುಗಳನ್ನು ಸೃಷ್ಟಿಸಿ ಮಾರುತ್ತಿರುವುದರಿಂದ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.
ಮಾದಕ ವ್ಯಸನದ ವಿಲಕ್ಷಣ ಮುಖ
ಬಿಬಿಸಿ, ವೈಸ್ ನಂತಹ ಚಾನೆಲ್‌ಗಳಲ್ಲಿ ನಿರ್ಮಿಸಿ, ಪ್ರಸಾರ ಮಾಡಿರುವ ಸಾಕ್ಷ್ಯಚಿತ್ರಗಳಲ್ಲಿ ಜಗತ್ತಿನ ಮಾದಕ ವ್ಯಸನದ ವಿಲಕ್ಷಣ ಮುಖವನ್ನು ತೆರೆದಿಡಲಾಗಿದೆ. ಹಸಿವಾಗದಿರಲೆಂದು “ಜೆಟ್ ಆಯಿಲ್’ ಸೇವಿಸುವ ನೈಜೀರಿಯಾದ ಬಡ ಜನರು ಒಂದೆಡೆಯಾದರೆ ಇನ್ನು ಸೈಬೀರಿಯಾದಲ್ಲಿ ಆಹಾರವಿಲ್ಲದೇ ಬದುಕುವ ನಿರ್ಗತಿಕರಿಗೆ ಮಾದಕ ವ್ಯಸನ ಹಸಿವು ಮರೆಸುವ ಸಾಧನ. ಕೆಮ್ಮು, ಕಫದ ಸಿರಪ್ ಕುಡಿಯುತ್ತಾ ಹಲ್ಲು, ನಾಲಗೆಯ ಸಿಪ್ಪೆಯನ್ನು ಕಳೆದುಕೊಂಡಿರುವ ವ್ಯಸನಿಗಳು, “ಕ್ರೊಕೊಡೈಲ್’ ಎನ್ನುವ ದ್ರವ್ಯ ಸೇವನೆಯ ದುಷ್ಪರಿಣಾಮದಿಂದ ಚರ್ಮ ಕಿತ್ತು, ಕೈ-ಕಾಲು ಕಳೆದುಕೊಂಡಿರುವವರನ್ನೂ ನಾವು ಕಾಣಬಹುದು.
ಭಾರತ ಸುರಕ್ಷಿತವೇ?
ಭಾರತವೂ ಸೇರಿದಂತೆ ವಿವಿಧ ಅಭಿವೃದ್ಧಿಶೀಲ ದೇಶಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಮತ್ತು ತತ್ಸಂಬಂಧೀ ಅಂಕಿಅಂಶಗಳ ಬಗ್ಗೆ ಯಾವುದೇ ಅಧಿಕೃತ ಮತ್ತು ನಿಖರವಾದ ಮಾಹಿತಿಗಳಿಲ್ಲ. ಭಾರತದ ಕೆಲವು ರಾಜ್ಯಗಳಲ್ಲಿ ಈ ರೀತಿಯ ಸರ್ವೇಗಳನ್ನು ನಡೆಸಲಾಗಿದೆ. ದೇಶದಲ್ಲಿ ಗಾಂಜಾ ವ್ಯಸನಿಗಳು ಅದನ್ನು ಸಕ್ರಮಗೊಳಿಸುವ ಬಗೆಗೆ ದನಿ ಎತ್ತಲಾರಂಭಿಸಿದ್ದಾರೆ. ನಮ್ಮ ಪರಂಪರೆಯಲ್ಲಿ, ಆಧ್ಯಾತ್ಮಿಕತೆಯಲ್ಲಿ ಇದು ಇತ್ತು ಎನ್ನುವುದನ್ನಷ್ಟೇ ಪ್ರತಿಪಾದನೆ ಮಾಡುವ ಇವರನ್ನು ಕಂಡಾಗ ದೇಶದ ಭವಿಷ್ಯದ ಬಗೆಗೆ ಸಹಜವಾಗಿಯೇ ಆತಂಕ ಮೂಡುತ್ತದೆ. ಇನ್ನು ಉರುಗ್ವೇ, ಕೊಲಂಬಿಯಾ, ಕೊಲರಾಡೋ ದೇಶಗಳಲ್ಲಿ ಗಾಂಜಾ ಮಾರಾಟವನ್ನು ಕಾನೂನು ಬದ್ಧ ಮಾಡಿದ ಅನಂತರ ತತ್ಸಂಬಂಧೀ ರೋಗದಿಂದ ನರಳುವವರ ಸಂಖ್ಯೆ ಅಧಿಕವಾಗಿರುವುದು ನಮ್ಮ ಕಣ್ಣ ಮುಂದಿದೆ. ಮಾದಕ ವಸ್ತುಗಳ ನಿರಂತರ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂಥವರಲ್ಲಿ ಹೃದಯ ಮತ್ತು ಕೇಂದ್ರೀಯ ನರಮಂಡಲದ ಸಮಸ್ಯೆಗಳೂ ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕ. ಅತೀ ಡೋಸೇಜ್‌ನಿಂದ ಅನಿರೀಕ್ಷಿತ ಸಾವು ಸಂಭವಿಸಬಹುದು ಎಂಬುದು ಹಲವಾರು ವೈದ್ಯಕೀಯ ಮತ್ತು ಅಧ್ಯಯನ ವರದಿಗಳಿಂದ ಸಾಬೀತಾಗಿದೆ.
ವ್ಯಸನ ಮತ್ತು ಚಿಕಿತ್ಸೆ
ಅಪರಾಧ ಮತ್ತು ಮಾದಕ ದ್ರವ್ಯ ಸೇವನೆಯ ವ್ಯಸನಕ್ಕೆ ಖಂಡಿತಾ ನೇರ ಸಂಬಂಧವಿದೆ. ಹೆಚ್ಚಿನ ಎಲ್ಲ ವೃತ್ತಿಪರ ಅಪರಾಧಿಗಳು ವ್ಯಸನಿಗಳೇ ಆಗಿರುತ್ತಾರೆ. ಇದರ ಜತೆಗೆ ಹುಟ್ಟುವ ಭ್ರಮಾಧೀನತೆಯಿಂದಲೂ ಕೆಲವು ಅಪರಾಧಗಳು ಘಟಿಸುತ್ತವೆ. ಮಾದಕದ್ರವ್ಯ ವ್ಯಸನ ಒಂದು ಸಾಂಕ್ರಾಮಿಕ ರೋಗ (ಎಪಿಡೆಮಿಕ್)ಎಂಬ ಅಭಿಪ್ರಾಯ ಇದೆ. ಒಂದು ವೇಳೆ ರೋಗವಾದರೆ ಅದನ್ನು ಗುಣಪಡಿಸುವ ಸಾಧ್ಯತೆ ಇರಬೇಕು. ವ್ಯಸನಿಗಳನ್ನು ಮಾದಕದ್ರವ್ಯ ಮಾರಾಟಗಾರ ರಂತೆಯೇ “ಅಪರಾಧಿ’ಗಳೆಂದು ಜೈಲಿಗೆ ಕಳುಹಿಸಿದರೆ ಅದ ರಿಂದ ಏನೂ ಉಪಯೋಗವಿಲ್ಲ ಎನ್ನುವುದು ಸ್ಪಷ್ಟ. ಮಾದಕ ವಸ್ತು ದೊರಕದೇ ಇದ್ದಾಗ, ಕಾಣಿಸಿ ಕೊಳ್ಳುವ “ವಿಥ್‌ಡ್ರಾವಲ್ ಸಿಂಡ್ರೋಮ್’ನಿಂದ ವ್ಯಸನಿಗಳು ಅತಿರೇಕವಾಗಿ ವರ್ತಿಸಬಹುದು. ಆತ್ಮ ಹತ್ಯೆಗೆ ಪ್ರಯತ್ನಿಸಬಹುದು.
ಯಾವುದೋ ಕಾರಣ ದಿಂದ ವ್ಯಸನಕ್ಕೆ ದಾಸರಾದವರನ್ನು ಅದರಿಂದ ಮುಕ್ತ ಗೊಳಿಸಲು ಪೂರಕ ಚಿಕಿತ್ಸೆ ಬೇಕು. ಭಾರತವೂ ಸಹಿತ ಸುಮಾರು 162 ದೇಶಗಳಲ್ಲಿ ಇಂಥ ಸುಧಾರಣ ವ್ಯವಸ್ಥೆ ಗಳಿಲ್ಲ. ಜಗತ್ತಿನ 6 ವ್ಯಸನಿಗಳಲ್ಲಿ ಕೇವಲ ಒಬ್ಬನಿಗೆ ಮಾತ್ರ ಸುಧಾರಣ ಕೇಂದ್ರಗಳ ನೆರವು ದೊರೆಯುತ್ತಿದೆ ಎಂಬುದು ಕಳವಳಕಾರಿ ಸಂಗತಿ.
ಸಮಾಜವೂ ಕೂಡ ಮಾದಕ ವಸ್ತು ವ್ಯಸನಿಗಳನ್ನು ರೋಗಿಗಳಂತೆ ಕಾಣಬೇಕೇ ಹೊರತು ಅಪರಾಧಿಗಳಂತಲ್ಲ. ಸರಕಾರವೂ ಮಾದಕ ದ್ರವ್ಯ ಜಾಲವನ್ನು ಭೇದಿಸುವ ಜತೆಗೆ ಈ ವ್ಯಸನಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳನ್ನು ತೆರೆಯಬೇಕು. ಈಗ ಹೆಚ್ಚಿನ ಕಡೆಗಳಲ್ಲಿ ಎನ್‌ಜಿಒಗಳನ್ನು ಬಿಟ್ಟರೆ ಇಂತಹ ಕೇಂದ್ರಗಳಿಲ್ಲ. ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗವು ಈ ಬಗ್ಗೆ ಅನೇಕ ಚಿಕಿತ್ಸಾ ರೂಪುರೇಷೆಗಳನ್ನು ರೂಪಿಸಿದೆ. “ಕುಟುಂಬ ಥೆರಪಿ’ ಅದರಲ್ಲಿ ಒಂದು. ವ್ಯಸನಿಯ ಕುಟುಂಬದ ಸದಸ್ಯರನ್ನೇ ಚಿಕಿತ್ಸಕರಾಗಿ ತರಬೇತಿ ನೀಡಿ, ವ್ಯಸನಿಗೆ ಆಪ್ತ ಕಾಳಜಿ ಮತ್ತು ಚಿಕಿತ್ಸೆ ದೊರಕುವಂತೆ ಮಾಡುವುದು ಇದರ ಹೆಗ್ಗಳಿಕೆ. ಭಾರತದಂತಹ ರಾಷ್ಟ್ರಗಳಲ್ಲಿ ಅಧಿಕೃತ ಚಿಕಿತ್ಸಾ ಕೇಂದ್ರಗಳು ಕಡಿಮೆ ಇರುವುದರಿಂದ ಸರಕಾರ ಈ ಮಾದರಿಯ ಅನುಷ್ಠಾನದತ್ತ ದೃಷ್ಟಿ ಹರಿಸುವುದು ಸೂಕ್ತ. ಇದರಿಂದ ವ್ಯಸನಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಅವರನ್ನು ಸುಧಾರಿಸಿ, ಮುಖ್ಯವಾಹಿನಿಗೆ ತರಲು ಸಾಧ್ಯ.
– ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.