ನನ್ನ  ಅನಂತರ ಏನು…!


Team Udayavani, Jun 27, 2021, 1:14 PM IST

Arogyavani

ಪ್ರತಿಯೊಬ್ಬ ಸಂಸಾರಿ ತನ್ನ ಜೀವನದ ಒಂದಲ್ಲ ಒಂದು ಹಂತದಲ್ಲಿ “ತನ್ನ ಅನಂತರ’  ಮನೆಯವರ ಸ್ಥಿತಿ ಏನಾಗಬಹುದು ಎನ್ನುವುದರ ಬಗ್ಗೆ ಆಲೋಚನೆ ಮಾಡಬಹುದು. ಆದರೆ ಈ ಆಲೋಚನೆಯ ತೀವ್ರತೆ ಸಾಮಾನ್ಯವಾಗಿ ವಿಕಲ ಚೇತನ ಮಕ್ಕಳ ಪೋಷಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಆಲೋಚನೆ ಯಾವಾಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರೆ, ತಂದೆ ತಾಯಿಯರ ವಯಸ್ಸು ಹೆಚ್ಚಾಗುತ್ತ ಹೋದಂತೆ ಅಥವಾ ಅವರ ಕೆಲಸದ ನಿವೃತ್ತಿ ಸಮಯ ಹತ್ತಿರ ಬಂದಾಗ, ವಯೋಮಾನ ಸಹಜವಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಅಥವಾ ತನ್ನ ಮಗ/ಮಗಳು ಪ್ರೌಢಾವಸ್ಥೆಗೆ ಕಾಲಿಟ್ಟಾಗ, ತಂದೆ ತಾಯಂದಿರಿಗೆ ಭವಿಷ್ಯದ ಬಗ್ಗೆ ಕಾಳಜಿ ಹುಟ್ಟಿಕೊಳ್ಳಲು ಪ್ರಾರಂಭವಾಗುತ್ತದೆ.

ಇನ್ನೂ ಕೆಲವು ವಿಚಾರಗಳು ತಂದೆ ತಾಯಿಯರನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತವೆ. ಅವುಗಳೆಂದರೆ, ತನ್ನ ವಯಸ್ಕ ಮಗನನ್ನು/ ಮಗಳನ್ನು ನೋಡಿಕೊಳ್ಳಲು ಈ ಮುದಿ ತಂದೆ ತಾಯಿಯರನ್ನು ಬಿಟ್ಟು ಬೇರೆ ಯಾರು ಇಲ್ಲದೇ ಇರುವುದು. ಹಾಗೆಯೇ, ತನ್ನ ಹತ್ತಿರದ ಅಥವಾ ದೂರದ ಸಂಬಂಧಿಗಳು ವಿಕಲ ಚೇತನನಾಗಿರುವ ಮಗನನ್ನು ನೋಡಿಕೊಳ್ಳಲು ಅಷ್ಟೊಂದು ಆಸಕ್ತಿಯನ್ನು ತೋರಿಸದೇ ಇರುವುದು ಅಥವಾ ತಮ್ಮ ಸ್ವಂತ ಇತರ ಆರೋಗ್ಯವಂತ ಮಕ್ಕಳನ್ನು ಸಂಪೂರ್ಣವಾಗಿ ಅವಲಂಬಿಸುವುದು ಯಾವುದೋ ಒಂದು ಕಾರಣಕ್ಕೆ ಕಷ್ಟ ಸಾಧ್ಯವೆಂದು ಅನ್ನಿಸಿದಾಗ ತಂದೆ ತಾಯಂದಿರಿಗೆ ತಮ್ಮ ವಿಕಲ ಚೇತನ ಮಗನ/ಮಗಳ ಭವಿಷ್ಯದ ಬಗ್ಗೆ ಕಾಳಜಿ ಹುಟ್ಟಿಕೊಳ್ಳಲು ಪ್ರಾರಂಭವಾಗುತ್ತದೆ.

ಇನ್ನು ಕೆಲವು ಬಾರಿ, ಮಾನಸಿಕ ತಜ್ಞರ ಸಲಹೆಯ ಮೇರೆಗೆ ನೆರೆಮನೆಯವರ, ಸಂಬಂಧಿಗಳ ಶಿಫಾರಸಿನ ಮೇರೆಗೆ ತಂದೆ ತಾಯಂದಿರು ತಮ್ಮ ಅನಂತರ ಮಗನ/ಮಗಳ ಜೀವನ ಏನಾಗಬಹುದು ಅಥವಾ ಹೇಗಿರಬೇಕು ಅನ್ನುವ ವಿಚಾರ ಮಾಡಲು ಆರಂಬಿಸುತ್ತಾರೆ.

ಪೋಷಣೆ: ಯಾವ ರೀತಿಯ ಪೋಷಣೆಯನ್ನು  ತಂದೆ-ತಾಯಂದಿರು ಬಯಸುತ್ತಾರೆ ?

ಸಾಮಾನ್ಯವಾಗಿ ಎಲ್ಲ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಎಲ್ಲ ಸವಲತ್ತು, ಸೌಲಭ್ಯಗಳು ಸಿಗಲಿ, ತಮಗೆ ಸಿಗದೇ ಹೋದದ್ದು ತನ್ನ ಮಕ್ಕಳಿಗೆ ಸಿಗಲಿ ಎಂದು ಬಯಸುತ್ತಾರೆ ಹಾಗೂ ಇದಕ್ಕೆ ಸರಿಯಾದ ಪೋಷಣೆಯನ್ನು ನೀಡುತ್ತಾರೆ. ಅದೇ ರೀತಿ ಈ ಮಕ್ಕಳು ಮುಂದೆ ಬೆಳೆದು ಸ್ವತಂತ್ರವಾಗಿ ತನ್ನ ತಂದೆ-ತಾಯಂದಿರ ನೆರವು ಇಲ್ಲದೆ ಬದುಕಲು ಶಕ್ತರಾಗುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ವಿಕಲ ಚೇತನ ಮಕ್ಕಳ ತಂದೆ- ತಾಯಂದಿರ ಬಯಕೆಯು, ತಮ್ಮ ಅನಂತರ ತಮ್ಮ ಮಗ/ಮಗಳಿಗೆ ಜೀವನಾವಶ್ಯಕವಾದ ಒಳ್ಳೆಯ ಆಹಾರ, ಬಟ್ಟೆ, ಆಶ್ರಯ, ರಕ್ಷಣೆ ಸಿಗಲಿ ಮತ್ತು ಪ್ರೀತಿ, ವಾತ್ಸಲ್ಯ, ಆರೋಗ್ಯ ಮತ್ತು ಪುನಃಶ್ಚೇತನ ಪ್ರಕ್ರಿಯೆಗಳು ನಿರಂತರವಾಗಿ ಸಿಗುತ್ತಿರಲಿ ಎಂಬುದಾಗಿರುತ್ತದೆ.

 

ಇದು ಸಾಧ್ಯವೇ?

ಹೌದು. ಇದು ಸಾಧ್ಯವಿದೆ. ಆದರೆ ಹೇಗೆ ಸಾಧ್ಯವೆಂದು ತಿಳಿದುಕೊಳ್ಳುವ ಮೊದಲು ನಾವು ಕೆಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಅದೇನೆಂದರೆ, ಸಾಮಾನ್ಯವಾಗಿ ತಂದೆ-ತಾಯಿಯರು ತಮ್ಮ ಮಕ್ಕಳ ಜನ್ಮದತ್ತವಾದ ರಕ್ಷಕರಾಗಿರುತ್ತಾರೆ. ಅದೇ ರೀತಿ ಅವರ ಕಾಲಾನಂತರ ವಿಕಲ ಚೇತನ ಮಗನ/ಮಗಳ ಜವಾಬ್ದಾರಿಯನ್ನು ತನ್ನ ಇತರ ಆರೋಗ್ಯವಂತ ಮಕ್ಕಳು ವಹಿಸಿಕೊಳ್ಳಲಿ ಅನ್ನುವ ಆಕಾಂಕ್ಷೆಯನ್ನು ಹೊಂದಿರುತ್ತಾರೆ ಅಥವಾ ಇತರ ಮಕ್ಕಳು ತಾವಾಗಿಯೇ ಈ ಕರ್ತವ್ಯವನ್ನು ವಹಿಸಿಕೊಳ್ಳಲು ಬಹುದು. ಆದರೆ ಯಾವುದೋ ಕಾರಣಕ್ಕಾಗಿ ಇದು ಸಾಧ್ಯವಾಗದೆ ಇದ್ದಾಗ; ಉದಾಹರಣೆಗೆ, ಒಡಹುಟ್ಟಿದವರು ಬಡವರಾಗಿದ್ದು, ನಿರುದ್ಯೋಗ ಅಥವಾ ಬದಲಾಗುತ್ತಿರುವ ಕುಟುಂಬ ವ್ಯವಸ್ಥೆಗಳು, ಒಬ್ಬನೇ ಪೋಷಕನಿರುವುದು ಅಥವಾ ಸ್ವತಃ ತಂದೆ-ತಾಯಂದಿರಿಗೆ ತಮ್ಮ ಇತರ ಮಕ್ಕಳು ವಿಕಲ ಚೇತನನಾಗಿರುವ ಸಹೋದರನನ್ನು, ಸಹೋದರಿಯನ್ನು ನೋಡಿಕೊಳ್ಳುತ್ತಾರೆಯೇ ಇಲ್ಲವೇ ಎಂಬ ಗೊಂದಲವು ಕೆಲವೊಮ್ಮೆ ಇರಬಹುದು. ಈ ವಿಷಯಗಳಿಂದಾಗಿ ಕೆಲವರು ಮದುವೆಯ ಬಗ್ಗೆ ಯೋಚನೆ ಮಾಡುತ್ತಾರೆ.

ಮದುವೆ ಒಂದು ಪರಿಹಾರ  ಮಾರ್ಗ ಆಗಬಹುದೇ ?

ತಮ್ಮ ಅನಂತರವೂ ವಿಕಲ ಚೇತನನಾಗಿರುವ ಮಗ/ಮಗಳಿಗೆ ಹೇಗಾದರೂ ಸಹಾಯ ಮಾಡಲೇ ಬೇಕು ಎನ್ನುವ ಉತ್ಕಟ ಆಸೆಯಿಂದ ಕೆಲವು ತಂದೆ-ತಾಯಂದಿರು ಮದುವೆ ಮಾಡಿಸುವ ಬಗ್ಗೆ ಯೋಚಿಸುತ್ತಾರೆ. ಕಾರಣ, ಮದುವೆಯಿಂದ ಮುಂದೆ ಅವರ ಜೀವನ ಸಂಗಾತಿಯ ರಕ್ಷಣೆ ದೊರೆಯಬಹುದೆಂಬ ಆಸೆ.

ಒಂದು ವೇಳೆ ಉತ್ತಮ ಜೀವನ ಸಂಗಾತಿ ಸಿಕ್ಕಿದರೆ ಈ ಆಸೆ ನಿಜವಾಗಿ ಪರಿವರ್ತನೆಯಾಗಬಹುದು.ಇಂತಹ ನಿದರ್ಶನಗಳು ನಮ್ಮ ಸಮಾಜದಲ್ಲಿ ನಡೆದಿವೆ ಕೂಡ. ಆದರೆ ಕೆಲವು ಬಾರಿ ಇದು ತಿರುಗುಬಾಣವಾಗಿ ಪರಿಣಮಿಸಿದ್ದೂ ಇದೆ.

ನಿಜ ವಿಷಯಗಳನ್ನು ಮುಚ್ಚಿಟ್ಟು, ಅನಂತರ ಅದು ಗೊತ್ತಾಗಿ, ಜೀವನ ಸಂಗಾತಿಯೆನಿಸಿಕೊಂಡ ವ್ಯಕ್ತಿ ಜವಾಬ್ದಾಯನ್ನು ವಹಿಸಿಕೊಳ್ಳಲು ಒಪ್ಪಿಕೊಳ್ಳದೆ ಅಥವಾ ಸ್ವತಃ ವಿಕಲಚೇತನಾಗಿರುವ ವ್ಯಕ್ತಿಗೆ ವೈವಾಹಿಕ ಜೀವನದ ಜವಾಬ್ದಾರಿಗಳನ್ನು ಹಾಗೂ ತನ್ನ ಸಂಗಾತಿಯ ಲೈಂಗಿಕ ಆಕಾಂಕ್ಷೆಗಳನ್ನು, ಸಂತಾನವೃದ್ಧಿಯ ಹೊಣೆಗಾರಿಕೆಗಳನ್ನು ನಿರ್ವಹಿಸಲಾಗದೆ ಇದ್ದಾಗ ಅಥವಾ ಮಾನಸಿಕ, ದೈಹಿಕ ಕಾಯಿಲೆಗಳ ವಂಶ ಪಾರಂಪಾರ್ಯತೆಯ ಸವಾಲುಗಳು ಎದುರಾದಾಗ ಮದುವೆಯ ಸಂಬಂಧದ ಜತೆ ಜತೆಗೆ ತಂದೆ-ತಾಯಂದಿರ ಕನಸುಗಳು ಕೂಡ ಮುರಿದು ಹೋಗುವ ಸಂಭವಗಳು ಹೆಚ್ಚಾಗಿರುತ್ತವೆ.

ಹಾಗಾದರೆ, ಈ ಎಲ್ಲ ಗೊಂದಲಗಳಿಗೆ ಕಾನೂನಾತ್ಮಕ ಪರಿಹಾರ ಏನಾದರೂ ಇರಬಹುದೇ?

ಹೌದು. ಇದಕ್ಕೂ ಕಾನೂನು ರಿತ್ಯಾ ಸೂಕ್ತ ಪರಿಹಾರಗಳು ಲಭ್ಯವಿವೆ. ಪ್ರತಿಯೊಬ್ಬ ತಂದೆ-ತಾಯಂದಿರು ತಮ್ಮ ವಿಕಲ ಚೇತನ (ಬುದ್ಧಿ ಮಾಂದ್ಯ, ಆಟಿಸಂ,

ಸೆರೆಬ್ರಲ್‌ ಪಾಲ್ಸಿ, ಮಾನಸಿಕ ತೊಂದರೆಗಳು ಅಥವಾ ಇನ್ನಿತರ ಯಾವುದೇ ಮಾನಸಿಕ, ದೈಹಿಕ ತೀವ್ರ ತರನಾದ ತೊಂದರೆಗಳಿರುವ) ಮಗ/ಮಗಳು 18 ವರ್ಷ ದಾಟಿದ ಅಥವಾ ಅದಕ್ಕೂ ಮುನ್ನ ಕಾನೂನಾತ್ಮಕ ರಕ್ಷಣೆಯನ್ನು ಕೊಡಬಹುದಾದ ವ್ಯಕ್ತಿ, ವ್ಯಕ್ತಿಗಳನ್ನು ಅಥವಾ ಸಂಸ್ಥೆಯನ್ನು ನೇಮಕ ಮಾಡುವುದು ಅವರ ಭವಿಷ್ಯದ ದೃಷ್ಟಿಕೋನದಿಂದ ಸೂಕ್ತವೆನಿಸುತ್ತದೆ.

ಬಹುಷಃ ಅಂತಹ ಕಾನೂನುಗಳು ಯಾವುವೆಂದು ನೀವು ಈಗ ಆಲೋಚಿಸುತ್ತಿರಬಹುದು. ಇದಕ್ಕೆ ಉತ್ತರವಾಗಿ ಹಾಗೂ ನಿಮ್ಮ ಮಗನ/ಮಗಳ ಸಮಸ್ಯೆಗೆ ಅನುಗುಣವಾಗಿ ಎರಡು ಮುಖ್ಯವಾದ ಕಾನೂನುಗಳನ್ನು ಉಲ್ಲೇಖೀಸಬಹುದು.

ಉದಾಹರಣೆಗೆ, ಒಂದು ವೇಳೆ ನಿಮ್ಮ ಮಗನಿಗೆ/ಮಗಳಿಗೆ ಬುದ್ಧಿಮಾಂದ್ಯ ಅಥವಾ ಆಟಿಸಂ, ಸೆರೆಬ್ರಲ್‌ ಪಾಲ್ಸಿ ಅಥವಾ ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಸಮಸ್ಯೆಗಳು ಇದ್ದ ಸಂದರ್ಭದಲ್ಲಿ ನೀವು ನ್ಯಾಶನಲ್‌ ಟ್ರÓr… ಕಾಯಿದೆ 1999ರ ಮುಖಾಂತರ ನಿಮ್ಮ ಮಗನ/ಮಗಳ ಭವಿಷ್ಯದ ರಕ್ಷಕನ ನೇಮಕ ಮಾಡಬಹುದು. ಹಾಗೆಯೇ ಒಂದು ವೇಳೆ, ನಿಮ್ಮ ಮಗ/ಮಗಳಿಗೆ ತೀವ್ರತರನಾದ ಮಾನಸಿಕ ಕಾಯಿಲೆ ಇದ್ದು ಹಾಗೂ ಅವರಿಗೆ ತನ್ನ ಜೀವನದ ಸಾಮಾಜಿಕ, ಆರ್ಥಿಕ, ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟಕರವೆಂದು ನಿಮಗೆ ಅನಿಸಿದಲ್ಲಿ ನೀವು ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017 (ಮೆಂಟಲ್‌ ಹೆಲ್ತ್‌ ಕೇರ್‌ ಆ್ಯಕ್ಟ್ 2017) ಯಲ್ಲಿ ನಮೂದಿಸಿರುವಂತೆ “ನಾಮ ನಿರ್ದೇಶಿತ ಪ್ರತಿನಿಧಿ’ (ನಾಮಿನೇಟೆಡ್‌ ರೆಪ್ರಸೆಂಟೇಟಿವ್‌) ನೇಮಕ ಮಾಡಬಹುದು.

ಈ ಕಾನೂನಾತ್ಮಕ ರಕ್ಷಕ ಅಥವಾ ನಾಮ ನಿರ್ದೇಶಿತ ಪ್ರತಿನಿಧಿ ಒಬ್ಬ ವ್ಯಕ್ತಿ ಅಥವಾ ಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳು ಅಂದರೆ ಇವರು ನಿಮ್ಮ ಮಗನ/ಮಗಳ ಒಡ ಹುಟ್ಟಿದವರಾಗಿರಬಹುದು ಅಥವಾ ನಿಮ್ಮ ಸಂಬಂಧಿಗಳು ಆಗಿರಬಹುದು, ನಿಮ್ಮ ಶುಭ ಚಿಂತಕರು ಆಗಿರಬಹುದು.

ಆದರೆ ಒಂದು ವೇಳೆ ಈ ಮೇಲೆ ಸೂಚಿಸಿದ ಯಾರು ಕೂಡ ಒಪ್ಪಿಕೊಳ್ಳದ ಸಂದರ್ಭದಲ್ಲಿ ಅಥವಾ ಈ ಮೇಲೆ ಹೇಳಿದ ಯಾರೂ ಇಲ್ಲದ ಸಂದರ್ಭದಲ್ಲಿ ಒಂದು ಸಾಮಾಜಿಕ ಸಂಸ್ಥೆಯನ್ನು ಕೂಡ ನೀವು ನಿಮ್ಮ ಮಗನ/ಮಗಳ ರಕ್ಷಕನಾಗಿ ನೇಮಕ ಮಾಡಬಹುದು.

ಈಗ ನಿಮ್ಮ ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಮೂಡಿರಬಹುದು. ಈ ಸಂಸ್ಥೆಗಳು ಎಲ್ಲಿವೆ, ಇವುಗಳನ್ನು ಯಾರು ಹುಡುಕುವುದು ಅಥವಾ ಇವುಗಳ ಬಗ್ಗೆ ಯಾರು ಮಾಹಿತಿ ಕೊಡಬಲ್ಲರು ಎಂಬುದಾಗಿ.

ಆದರೆ ನೀವು ಅಷ್ಟೊಂದು ಚಿಂತಿಸಬೇಕಾಗಿಲ್ಲ. ನೀವು ನಿಮ್ಮ ಜಿಲ್ಲೆಯ “ಜಿಲ್ಲಾ ಅಂಗ ವೈಕಲ್ಯ ಕಲ್ಯಾಣ ಅಧಿಕಾರಿ’ ಅಥವಾ “ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ’ ಗಳು ನಿಮಗೆ ಈ ನಿಟ್ಟಿನಲ್ಲಿ ಮಾಹಿತಿಯನ್ನು ಒದಗಿಸುತ್ತಾರೆ.

ಈಗ ನಿಮ್ಮ ಮನಸ್ಸಿನಲ್ಲಿ ಇನ್ನೂ ಒಂದು ಪ್ರಶ್ನೆ ಮೂಡಿರಬಹುದು. ಅದೇನೆಂದರೆ ಈ ಕಚೇರಿ ಉಡುಪಿಯಲ್ಲಿ ಎಲ್ಲಿದೆ? ಮಣಿಪಾಲದ ರಜತಾದ್ರಿ ಕಟ್ಟಡದಲ್ಲಿ ಈ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅದರಂತೆ, ನಿಮ್ಮ ಹತ್ತಿರದ ಯಾರಾದರೂ ವಕೀಲರ ಕಚೇರಿಯನ್ನು ಸಂಪರ್ಕಿಸಿದರೆ ಅವರು ಕೂಡ ನಿಮಗೆ ಸಹಾಯ ಮಾಡಬಲ್ಲರು.

ಪರ್ಯಾಯ ಮಾರ್ಗ

ಈ ಮೇಲೆ ಹೇಳಿದ ವಿಚಾರಗಳಿಗಿಂತ ಹೊರತಾಗಿ ಇನ್ನೂ ಒಂದು ಮಾರ್ಗವಿದೆ. ಅದೇನೆಂದರೆ, ಸಮಾನ ಮನಸ್ಥಿತಿಯನ್ನು ಹೊಂದಿರುವ ತಂದೆ-ತಾಯಂದಿರು ಅಥವಾ ಸಂಬಂಧಿಗಳು ತಮ್ಮದೇ ಆದ “ಟ್ರಸ್ಟ್‌’ ಸ್ಥಾಪನೆಯನ್ನು ಮಾಡಿಕೊಳ್ಳಬಹುದು. ಈ ಟ್ರಸ್ಟ್‌ಗಳನ್ನು “ಭಾರತೀಯ ಟ್ರಸ್ಟ್‌ ಕಾಯಿದೆ 1882’ರ ಅಡಿಯಲ್ಲಿ ಸ್ಥಾಪಿಸಲಾಗುತ್ತದೆ. ಈ ಖಾಸಗಿ ಟ್ರಸ್ಟ್‌ಗಳ ಕಾರ್ಯ ವ್ಯಾಪ್ತಿ ಸೀಮಿತವಾಗಿದ್ದು, ಇದರ ಸದಸ್ಯರಾದ ತಂದೆ-ತಾಯಿಗಳ ಮಕ್ಕಳ ಪ್ರಸ್ತುತ ಮತ್ತು ಭವಿಷ್ಯದ ಪೋಷಣೆಗೆ ಸಂಬಂಧಿತವಾಗಿರುತ್ತದೆ. ಹಾಗಾಗಿ, ಪ್ರತಿಯೊಬ್ಬ ತಂದೆ-ತಾಯಿಯೂ ಜಾಗರೂಕತೆಯಿಂದ ತಮಗೆ ಯಾರ ಮೇಲೆ ನಂಬಿಕೆ ಇರುತ್ತದೆಯೋ ಅಂತಹ ಪೋಷಕರ ಜತೆ ಚರ್ಚಿಸಿ ಈ ಟ್ರಸ್ಟ್‌ ಸ್ಥಾಪನೆ ಮಾಡಬಹುದು. ಅದೇ ರೀತಿ ಈ ಟ್ರಸ್ಟ್‌ ಯಾರ ಸಲುವಾಗಿ, ಯಾರ ಯೋಗಕ್ಷೇಮಕ್ಕಾಗಿ ಸ್ಥಾಪಿಸಲಾಗುತ್ತಿದೆ ಎಂಬುದನ್ನು ಟ್ರಸ್ಟ್‌ನ ಕಾರ್ಯವೈಖರಿಯಲ್ಲಿ ಸಂಕ್ಷಿಪ್ತವಾಗಿ ಬರೆಯುವ ಕ್ರಮವಿರುತ್ತದೆ.

ಅದರಂತೆ ಈ ಟ್ರಸ್ಟ್‌ನ್ನು ತಮ್ಮ ಜಿಲ್ಲಾ ಉಪ-ನೊಂದಣಾಧಿಕಾರಿಯವರ ಕಚೇರಿಯಲ್ಲಿ ನೊಂದಾಯಿಸಿಕೊಳ್ಳುವುದು ಉತ್ತಮ. ಈ

ಟ್ರಸ್ಟ್‌ನ ಸದಸ್ಯರಾದ ತಂದೆ-ತಾಯಂದಿರೆಲ್ಲರ ಸಮಸ್ಯೆ ಒಂದೇ ಆಗಿರುವುದರಿಂದ, ಒಬ್ಬರಿಗೆ ಇನ್ನೊಬ್ಬರ ಅನುಕಂಪ, ಸಹಕಾರ ಸಿಗುವ ಅವಕಾಶಗಳು ಹೆಚ್ಚಾಗಿ ಇರುತ್ತವೆ ಹಾಗೂ ಟ್ರಸ್ಟ್‌ ರಚಿಸಲು ನೀವೇನೂ ತುಂಬಾ ಹಣವಂತರಾಗಿರಬೇಕಾಗಿಲ್ಲ.

ಒಟ್ಟಾರೆ, ಸಂಕ್ಷಿಪ್ತವಾಗಿ ಹೇಳುವುದಾದರೆ, ತೀವ್ರತರನಾದ ಅಂಗ ವೈಕಲ್ಯವನ್ನು ಹೊಂದಿರುವ ಪ್ರತೀ ವ್ಯಕ್ತಿಯ ತಂದೆ ತಾಯಿಯರು ತಮ್ಮ ಮಗನ/ಮಗಳ ರಕ್ಷಣೆಯನ್ನು ತಮ್ಮ ಕಾಲಾನಂತರವೂ ಮಾಡುವ ಅವಕಾಶಗಳು ಇವೆ. ಇದನ್ನು ಅವರು “ಇಚ್ಛಾ ಪತ್ರ’ದ ಮೂಲಕ ಮಾಡಬಹುದು. ಆದರೆ ಈ ಇಚ್ಛಾ ಪತ್ರವನ್ನು ಬರೆಯುವಾಗ ತಮ್ಮ ಯಾವ ಸಂಬಂಧಿ, ಗೆಳೆಯ/ಗೆಳತಿ, ಸಂಸ್ಥೆಯನ್ನು “ರಕ್ಷಕ’ನಾಗಿ ನೇಮಿಸುತ್ತಿದ್ದೇವೆ ಎನ್ನುವುದನ್ನು ಬರೆಯಬೇಕಾಗುತ್ತದೆ ಹಾಗೂ ಅವರ ಸಹಮತವನ್ನು ಕೂಡ ಪಡೆಯುವುದು ಅಷ್ಟೇ ಪ್ರಮುಖವಾಗಿರುತ್ತದೆ.

ಒಂದು ವೇಳೆ ಯಾರನ್ನೂ ಗುರುತಿಸಲು ಸಾದ್ಯವಾಗದೆ ಇದ್ದ ಸಂದರ್ಭದಲ್ಲಿ ತಂದೆ-ತಾಯಂದಿರು ತಮ್ಮ ಜಿಲ್ಲೆಯ ನ್ಯಾಯಾಲಯವನ್ನು ಕೇಳಿಕೊಂಡಲ್ಲಿ ಸಂಪೂರ್ಣ ಸಹಕಾರವನ್ನು ನೀಡುವುದಲ್ಲದೆ, ಸೂಕ್ತ “ರಕ್ಷಕ’ನನ್ನು ನೇಮಿಸುವಲ್ಲಿ ಅದು ಸಹಾಯ ಮಾಡುತ್ತದೆ.

ರಕ್ಷಕ ಅಥವಾ ನಾಮ ನಿರ್ದೇಶಿತ ಪ್ರತಿನಿಧಿಗಳ ಕರ್ತವ್ಯ

ಈ ಕಾನೂನಿನ ಚೌಕಟ್ಟಿಗೆ ಒಳಪಟ್ಟ “ರಕ್ಷ‌ಕ’ ಅಥವಾ “ನಾಮ ನಿರ್ದೇಶಿತ ಪ್ರತಿನಿಧಿ’ಗಳು ತಮ್ಮ ಕೆಲವು ಜವಾಬ್ದಾರಿ (ವಿಕಲ ಚೇತನ ವ್ಯಕ್ತಿಯ ಪೋಷಣೆ ಹಾಗೂ ಅವರಿಗೆ ಸಂಬಂಧಪಟ್ಟ ಯಾವುದಾದರೂ ಆಸ್ತಿಗಳನ್ನು ನೋಡಿಕೊಳ್ಳುವುದು)ಗಳನ್ನು ಚಾಚೂ ತಪ್ಪದೆ ಮಾಡಬೇಕಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಇದರ ಲೆಕ್ಕಾಚಾರಗಳನ್ನು ನಿಗದಿಪಡಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಅದೇ ರೀತಿ, ತಂದೆ-ತಾಯಂದಿರು ಈ ವ್ಯಕ್ತಿಯ ಸೇವೆಗೆ ಸರಿಯಾಗಿ ಗೌರವಧನ ಕೊಡಲು ಇಚ್ಛೆ ಪಟ್ಟಲ್ಲಿ ಅದನ್ನು ಕೂಡ ನೆರವೇರಿಸಲು ಅವಕಾಶಗಳು ಇವೆ.

ಹಾಗೆಯೇ, ಒಂದು ವೇಳೆ ಇವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಲ್ಲಿ ಮತ್ತು ವಿಕಲಚೇತನ ವ್ಯಕ್ತಿಯನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದ ಪಕ್ಷದಲ್ಲಿ ಅವರನ್ನು ವಜಾಗೊಳಿಸಿ ಹೊಸದಾದ “ರಕ್ಷಕ’ನನ್ನು ನೇಮಿಸುವ ನಿಯಮಾವಳಿಗಳು ಕೂಡ ಜಾರಿಯಲ್ಲಿವೆ.

ಹಾಗಾಗಿ, ವಿಕಲಚೇತನ ವ್ಯಕ್ತಿಯ ತಂದೆ-ತಾಯಂದಿರು ಈ “ನಾಮ ನಿರ್ದೇಶಿತ ಪ್ರತಿನಿಧಿ’ ಅಥವಾ “ರಕ್ಷಕ’ನನ್ನು ನೇಮಿಸುವಾಗ ಕೆಲವು ಜಾಗರೂಕತೆಗಳನ್ನು ವಹಿಸುವುದು ಅನಿವಾರ್ಯ. ಅವುಗಳೆಂದರೆ, ಈ ವ್ಯಕ್ತಿಗಳು ಯಾವುದೇ ಕಾನೂನುಬಾಹಿರವಾದ ಇತಿಹಾಸವನ್ನು ಹೊಂದಿಲ್ಲದವರಾಗಿರಬೇಕು ಹಾಗೂ ಯಾವುದೇ ರೀತಿಯ ಮಾನಸಿಕ ಸಮಸ್ಯೆಯನ್ನು ಹೊಂದಿರಬಾರದು ಮತ್ತು ಅತನೇ ಒಬ್ಬ ನಿರಾಶ್ರಿತನಾಗಿದ್ದು, ಇನ್ನೊಬ್ಬರ ಮೇಲೆ ಆಶ್ರಿತನಾಗಿರುವವನು ಆಗಿರಬಾರದು. ಭಾರತೀಯ ಪ್ರಜೆ ಯಾಗಿರಬೇಕು.

ಒಂದು ವೇಳೆ ನೀವು ಒಂದು ಸಂಸ್ಥೆಯನ್ನು “ರಕ್ಷಕ’ನಾಗಿ ನೇಮಿಸುವುದಾದರೆ, ಆ ಸಂಸ್ಥೆಯು ರಾಜ್ಯ ಅಥವಾ ಕೇಂದ್ರೀಯ ಮಟ್ಟದಲ್ಲಿ ನೋಂದಣಿಯಾಗಿದೆಯೇ ಎಂದು ಪರಿಶೀಲಿಸಿ ಹಾಗೂ ವಿಕಲಚೇತನ ವ್ಯಕ್ತಿಗಳನ್ನು ನೋಡಿಕೊಳ್ಳುವುದರಲ್ಲಿ ಕನಿಷ್ಠ ಪಕ್ಷ‌ ಎರಡು ವರ್ಷಗಳ ಅನುಭವ ಹೊಂದಿದೆಯೇ, ಸರಿಯಾದ ಸವಲತ್ತುಗಳು, ಸೂಕ್ತ ರೀತಿಯ ಪುನಶ್ಚೇತನ ಕಾರ್ಯವನ್ನು ನೆರವೇರಿಸಲು ಈ ಸಂಸ್ಥೆ ಶಕ್ತವಾಗಿದೆಯೇ ಎನ್ನುವುದನ್ನು ಗಮನಿಸಿ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಿ.

ಈ ರೀತಿಯಾಗಿ ಪ್ರತೀ ತಂದೆ-ತಾಯಂದಿರು ತಮ್ಮ ವಿಕಲಚೇತನ ಮಕ್ಕಳ ಜವಾಬ್ದಾರಿಯನ್ನು ನಿರಾತಂಕವಾಗಿ ತಮ್ಮ ಕಾಲಾನಂತರವೂ ನೆರವೇರಿಸಬಹುದು.

 

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:

ಮುಖ್ಯಸ್ಥರು,

ಮನಃಶಾಸ್ತ್ರ  ವಿಭಾಗ, ಕೆಎಂಸಿ ಆಸ್ಪತ್ರೆ,  ಮಂಗಳೂರು

 

ಡಾ| ಉಮೇಶ್‌ ತೋನ್ಸೆ

ಸಹಾಯಕ ಪ್ರಾಧ್ಯಾಪಕರು, ಮನೋ ಸಾಮಾಜಿಕ ತಜ್ಞರು, ಮನಃಶಾಸ್ತ್ರ ವಿಭಾಗ

ಕೆ.ಎಂ.ಸಿ. ಮಾಹೆ, ಮಣಿಪಾಲ

ಟಾಪ್ ನ್ಯೂಸ್

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.