ಇತರರ ಭಾವನೆಗಳಿಗೆ ಬೆಲೆ ನೀಡಿದಾಗ ಬಾಂಧವ್ಯ ವೃದ್ಧಿ
Team Udayavani, Jun 29, 2021, 6:20 AM IST
ಸುಂದರ ಬದುಕು ಪ್ರತಿಯೊಬ್ಬರ ಕನಸಾಗಿದೆ. ಅದನ್ನು ಸಾರ್ಥಕಗೊಳಿ ಸುವುದು ಅವರವರ ಕೈಯಲ್ಲಿದೆ. ಆ ಕನಸು ನನಸಾಗಬೇಕಾದರೆ ನಮ್ಮನ್ನು ಚಿಂತೆ, ಖೇದ, ದುಗುಡದಂತಹ ಋಣಾ ತ್ಮಕ ಭಾವಗಳು ಬಾಧಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ಭಾವನಾ ಲೋಕವಿರುವುದರಿಂದ ಆಸೆಗಳು, ಆಚಾರ- ವಿಚಾರಗಳು, ಕಾರ್ಯ ವೈಖರಿಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ನಮ್ಮ ಖುಷಿ, ನೆಮ್ಮದಿ, ದುಃಖ ಗಳೆಲ್ಲವೂ ಸುತ್ತಲಿನ ಜನರು, ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.
ಕುಟುಂಬದ ಸದಸ್ಯರು, ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ನೆರೆಕರೆಯವರ ಜತೆ ಉತ್ತಮ ಒಡನಾಟ ಹೊಂದುವುದರಿಂದ ನಾವು ಸಂತೋಷವಾಗಿ ರುತ್ತೇವೆ. ಇವರೆಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೆ ಮನಸ್ಸು ನೆಮ್ಮದಿಯಿಂದ ಇರುವುದಿಲ್ಲ.
ಪರಸ್ಪರರಲ್ಲಿ ಸಮಾನ ಹಿತಾಸಕ್ತಿಗಳು, ಆಲೋಚನೆಗಳು, ಭಾವನೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹಾಗಾಗಬೇಕಾದರೆ ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಬಾಂಧವ್ಯ ಗಟ್ಟಿಯಾದಂತೆ ಅವರ ಬಗ್ಗೆ ನಮ್ಮಲ್ಲಿ ನಂಬಿಕೆ ಮೂಡಿ ವಿಶ್ವಾಸ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಸಹಜವಾಗಿ ಧೈರ್ಯದ ಮನೋಭಾವ ಮೂಡಿ ಎಂಥ ಪರಿಸ್ಥಿತಿಯನ್ನು ಎದುರಿಸಬಲ್ಲೆವು ಎಂಬ ಛಾತಿ ತನ್ನಿಂತಾನೇ ಒಡಮೂಡ ಲಾರಂಭಿಸುತ್ತದೆ. ಅಷ್ಟು ಮಾತ್ರವಲ್ಲದೆ ಪರರ ಕಷ್ಟ-ಸುಖಗಳಿಗೆ, ನೋವು- ನಲಿವು ಗಳಿಗೆ ಸ್ಪಂದಿಸುವ ಮನೋಗುಣವೂ ಬೆಳೆ ಯುತ್ತದೆ. ಇವೆಲ್ಲವೂ ಸುಂದರ ಬದುಕಿನ ಸೋಪಾನಗಳಾಗಿವೆ.
ಮಹಾಭಾರತದಲ್ಲಿ ಪಂಚಪಾಂಡವ ರಿಗೆ ಗುರು ದ್ರೋಣಾಚಾರ್ಯರು ಎದುರಿಗಿರುವ ಮರವನ್ನು ತೋರಿಸಿ ಮರದಲ್ಲಿ ನಿಮಗೇನು ಕಾಣುತ್ತಿದೆ? ಎಂದು ಒಬ್ಬೊಬ್ಬರನ್ನು ಪರೀಕ್ಷಿಸಿದಾಗ, ಒಬ್ಬನಿಗೆ ಕೇವಲ ಮರವಷ್ಟೇ ಕಾಣುತ್ತದೆ. ಮತ್ತೂ ಬ್ಬನಿಗೆ ರೆಂಬೆ-ಕೊಂಬೆ, ಮಗದೊಬ್ಬನಿಗೆ ಪಕ್ಷಿಗಳು ಕಾಣಿಸುತ್ತವೆ. ಅದರೆ ಅರ್ಜುನ ನಿಗೆ ಅಲ್ಲಿ ಅದಾವುದೂ ಕಾಣಲಿಲ್ಲ. ಅವನಿಗೆ ಕಂಡದ್ದು ಕೇವಲ ಪಕ್ಷಿಯ ಅಕ್ಷಿ ಮಾತ್ರ. ಅಂತೆಯೇ ಇತರರಲ್ಲಿ ಕೆಟ್ಟದ್ದನ್ನು ಅಥವಾ ಒಳ್ಳೆಯದನ್ನು ಕಾಣುವ ಸ್ವಾತಂತ್ರ್ಯ ನಮ್ಮಲ್ಲಿಯೇ ಇದೆ. ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ ಎಂಬುದು ನಿಜ. ಆದರೆ ಪ್ರತಿಯೊಬ್ಬರಲ್ಲಿ ಒಳ್ಳೆಯತನ ಇದ್ದೇ ಇರುತ್ತದೆ. ಆದರೆ ಯಾರಲ್ಲಿ ಏನನ್ನು ಹುಡುಕಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಎಲ್ಲರಲ್ಲೂ ಒಳ್ಳೆಯ ತನವನ್ನೇ ಹುಡುಕುವ ಮನಃಸ್ಥಿತಿ ನಮ್ಮಲ್ಲಿರಬೇಕು. ಗುಲಾಬಿ ಗಿಡದಲ್ಲಿ ಮುಳ್ಳು ಇರಬಹುದು. ಆದರೆ ನಾವು ಕಾಣಬೇಕಾದುದು ಸುಂದರ ಗುಲಾಬಿಯನ್ನು ಮಾತ್ರ.
ಅಂದರೆ ಇನ್ನೊಬ್ಬರ ಒಳ್ಳೆಯತನವನ್ನು ಗುರುತಿಸುವ ಕಲೆ ನಮ್ಮಲ್ಲಿ ಇರಬೇಕು. ಪರರನ್ನು ನಿಂದನೆ ಮಾಡದೆ, ಅವರಲ್ಲಿ ಲೋಪ ಕಂಡು ಹಿಡಿಯದೆ ಅವರನ್ನು ಅರ್ಥಮಾಡಿಕೊಳ್ಳುವ ಮನೋಭಾವ ನಮ್ಮಲ್ಲಿ ಉದ್ಭವವಾಗಬೇಕು. ತನಗೆ ಮುನಿವವರಿಗೆ ತಾ ಮುನಿಯಲೇಕಯ್ನಾತನಗಾದ ಆಗೇನು ಅವರಿಗಾದ ಚೇಗೆಯೇನು ತನುವಿನ ಕೋಪ ತನ್ನ ಹಿರಿತನದ ಕೇಡು ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ ಎಂಬ ಬಸವಣ್ಣನವರ ವಚನವು ಕೋಪ ದ್ವೇಷಕ್ಕೆ ಮೂಲ ಕಾರಣ ಎಂಬುದನ್ನು ತಿಳಿಸುತ್ತದೆ. ಕೋಪ ಮನಸ್ಸನ್ನು ಮತ್ತು ಹೃದಯವನ್ನು ನಾಶಮಾಡುತ್ತದೆ. ಆದುದರಿಂದ ನಾವು ಇತರರಲ್ಲಿ ತಪ್ಪನ್ನು ಹುಡುಕಿ ಕೋಪಿಸಿಕೊಳ್ಳುವುದಕ್ಕಿಂತ ಅವರ ಭಾವನೆಗಳಿಗೆ ಬೆಲೆ ನೀಡಬೇಕು. ನಮ್ಮ ಪರಿಚಯಸ್ಥರು ಸಿಕ್ಕಾಗ ಕಿರುನಗೆ ಬೀರಿ ಸ್ವಲ್ಪ ಹೊತ್ತು ಮಾತನಾಡುವ ಅಭ್ಯಾಸವಿರಬೇಕು. ಆರೋಗ್ಯಕರ ಸಂವಹನವು ಬಾಂಧವ್ಯದ ಬೇರನ್ನು ಬಿಗಿಯಾಗಿಸುತ್ತದೆ. ಕಷ್ಟದಲ್ಲಿ ಪರಸ್ಪರ ಸ್ಪಂದಿಸುವ, ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಾವು ತಪ್ಪು ಮಾಡಿದರೆ ಕ್ಷಮೆ ಕೇಳುವ, ಅವರ ತಪ್ಪುಗಳನ್ನು ಸಾತ್ವಿಕವಾಗಿ ಅಥೆìçಸುವ ಗುಣ ನಮ್ಮಲ್ಲಿ ಇರಬೇಕು. ನಮ್ಮ ಬಗ್ಗೆ ಅತಿಯಾಗಿ ಹೊಗಳಿ ಕೊಳ್ಳಬಾರದು. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸದೆ ಎಲ್ಲರಲ್ಲಿರುವ ಒಳ್ಳೆಯತನ ವನ್ನು ಪ್ರಶಂಸಿಸೋಣ.
ಮನೆಯೇ ಇರಲಿ, ಶಾಲೆಯೇ ಇರಲಿ, ಕಚೇರಿಯೇ ಇರಲಿ, ಎಲ್ಲಿಯೇ ಇರಲಿ ನಾವು ಪರಸ್ಪರರಲ್ಲಿ ಸಹಕಾರ, ಪ್ರೀತಿ, ಸ್ನೇಹ ಹಂಚಿ ಮನಸ್ಸಿನ ಕ್ಷೋಭೆ, ಭಾರವನ್ನು ಕಡಿಮೆ ಮಾಡಿಕೊಂಡು ಸುಂದರ ಬಾಳಿನ ಕನಸನ್ನು ನನಸಾಗಿಸೋಣ.
- ಸುಪ್ರಿಯಾ ಭಂಡಾರಿ,ಬೈಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.