ಸರ್ಕಾರಿ ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಸುರೇಶ್ ಕುಮಾರ್ ಗೆ ಮನವಿ
Team Udayavani, Jul 1, 2021, 5:59 PM IST
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಬಿಜೆಪಿ ಕರ್ನಾಟಕದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠವು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ, ಕೇಂದ್ರ ಸಂಸ್ಕೃತಿ ಸಚಿವಾಲಯದ ಉತ್ಸವ ಅನುದಾನ ಸಮಿತಿ ಸದಸ್ಯರಾದ ಡಾ. ಬಿ.ವಿ. ರಾಜಾರಾಂ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್ ಭೀಮಸೇನ, ರಂಗಾಯಣದ ನಿರ್ದೇಶಕರಾದ ಶ ಅಡ್ಡಂಡ ಕಾರ್ಯಪ್ಪ, ಸಂದೇಶ ಜವಳಿ, ಪ್ರಭಾಕರ ಜೋಷಿ, ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಭುದೇವ ಕಪ್ಪಗಲ್ಲು ಅವರ ನಿಯೋಗವು ಸುರೇಶ್ ಕುಮಾರ್ ಅವರಿಗೆ ಈ ಮನವಿ ಸಲ್ಲಿಸಿತು.
ಇದನ್ನೂ ಓದಿ : ಅಮೆಜಾನ್, ಫ್ಲಿಪ್ ಕಾರ್ಟ್, ಮಿಂತ್ರಾ, ಅಜಿಯೋ ಡಾಟ್ ಕಾಮ್ ಗಳಲ್ಲಿ ಭರ್ಜರಿ ಆಫರ್ ಸೇಲ್
ದೇಶದ ಭವಿಷ್ಯ ರೂಪುಗೊಳ್ಳುವುದೇ ಶಾಲಾ ಕೊಠಡಿಗಳಲ್ಲಿ ಎಂಬುದು ಸರ್ವಕಾಲಿಕ ಸತ್ಯ. ಮಕ್ಕಳ ಕಲಿಕೆಗೆ ಸರಕಾರ, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಸಮುದಾಯವೂ ಬಹಳಷ್ಟು ಶ್ರಮ ಹಾಗೂ ಕಾಳಜಿ ವಹಿಸುತ್ತಿರುವುದು ಅಭಿನಂದನೀಯ. ಕಲಿಕೆಯ ಗುಣಮಟ್ಟ ಸುಧಾರಿಸಲು ಕಾಲಕಾಲಕ್ಕೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಕರ ನೇಮಕ, ಶೈಕ್ಷಣಿಕ ಹಂತದಲ್ಲಿಯೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಭಾವಿ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಆದಾಗ್ಯೂ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ, ಕೌಶಲ್ಯಗಳು ಸೂಕ್ತ ಸಮಯದಲ್ಲಿ ಹೊರತರುವಲ್ಲಿ ನಿರೀಕ್ಷಿತ ಮೇಲುಗೈ ಸಾಧಿಸಿಲ್ಲ ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಆದ್ದರಿಂದ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ರಂಗ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳಲು ಆಗ್ರಹಿಸುತ್ತೇವೆ ಎಂದು ಮನವಿ ತಿಳಿಸಿದೆ.
ಗಿಳಿಮರಿಯಾಗದೇ ಕೌಶಲ್ಯದ ಚಿಲುಮೆ ಆಗಲಿ: ಮಕ್ಕಳನ್ನು ಕಲಿಕೆಯ ಗಿಳಿಮರಿಗಳನ್ನಾಗಿಸದೇ ಕೌಶಲ್ಯದ ಚಿಲುಮೆಯಾಗಿಸಬೇಕೆಂಬುದು ಎಲ್ಲ ಮುತ್ಸದ್ಧಿಗಳ ಆಶಯವಾಗಿದೆ ಹಾಗೂ ಈಗ ದೇಶವೂ ಕೂಡಾ ಕೌಶಲ್ಯಾಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಪ್ರತಿ ವಿದ್ಯಾರ್ಥಿಯ ಕಲಿಕೆಯ ಕ್ರಮ, ಅವರ ಹಿನ್ನೆಲೆಯ ಕಾರಣದಿಂದಾಗಿ ವಿಭಿನ್ನವಾಗಿರುತ್ತದೆ. ಇಂಥವರನ್ನು ಒಂದು ಚೌಕಟ್ಟಿಗೆ ತಂದು ಶೈಕ್ಷಣಿಕ ಗುರಿ ಸಾಧನೆ ಮಾಡುವಲ್ಲಿ ಮತ್ತು ತಮ್ಮ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಂಪ್ರದಾಯಿಕ ಶಿಕ್ಷಣದ ಚೌಕಟ್ಟಿನೊಳಗೇ ‘ರಂಗ ಮುಖೇನ ಶಿಕ್ಷಣ’ ಪ್ರಯೋಜನವಾಗಬಲ್ಲದು. ಶಿಕ್ಷಣವು ಈಗ ‘ವಿದ್ಯಾರ್ಥಿ ಸ್ನೇಹಿ’ ಆಗುತ್ತಾ ಬೋಧನೆ ನೀರಸವಾಗುತ್ತಿದೆ. ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿಸಿ, ಪ್ರಾಯೋಗಿಕವಾಗಿ ಕಲಿಸಲು ಮತ್ತು ಕಲಿಯಲು ಈ ಕ್ರಮ ಸೂಕ್ತವಾಗಿದೆ ಎಂದು ವಿವರಿಸಲಾಗಿದೆ.
ರಂಗ ಶಿಕ್ಷಕರು ಮಕ್ಕಳನ್ನು ಅವರ ಕಲಿಕೆಯ ಜೊತೆಗೆ ಅವರ ಸುಪ್ತ ಪ್ರತಿಭೆ ಹೊರತರಲು ಸೂಕ್ತ ತರಬೇತಿ ನೀಡಿ ಸಂಗೀತ ಅಭಿನಯ, ಪ್ರಸಾಧನ, ವೇಷಭೂಷಣಗಳÀ ಬಗ್ಗೆ ಸಂದರ್ಭೋಚಿತವಾಗಿ ಬೋಧಿಸುತ್ತ ಪ್ರಾಯೋಗಿಕತೆಗಳ ಮೂಲಕ ಅವರಲ್ಲಿರಬಹುದಾದ ಕೀಳರಿಮೆ, ಭಯ, ಆತಂಕ, ಇತ್ಯಾದಿಗಳನ್ನು ಹೋಗಲಾಡಿಸಿ ಸಮಯ ಪ್ರಜ್ಞೆ ಜೊತೆಗೆ ಸಹಜೀವನ, ಸಾಮೂಹಿಕ ಒಳಗೊಳ್ಳುವಿಕೆಯ ಉದ್ದೀಪನದೊಂದಿಗೆ ವ್ಯಕ್ತಿತ್ವ ವಿಕಸನದ ಪಾಠಗಳನ್ನು ತಂತಾನೇಕಲಿಯುವಂತಾಗುತ್ತದೆ ಎನ್ನುವುದು ರಂಗ ತಜ್ಞರ ಅಭಿಪ್ರಾಯ ಎಂದು ಮನವಿ ತಿಳಿಸಿದೆ.
ಕರ್ನಾಟಕದ ರಂಗಭೂಮಿ ನಮ್ಮ ದೇಶದಲ್ಲೇ ಅತಿ ವಿಶಿಷ್ಟ ಹಾಗೂ ಪ್ರಶಂಸನೀಯವಾಗಿದೆ. ಇಲ್ಲಿಯ ಅಧಿಕೃತ ರಂಗ ಶಿಕ್ಷಣ ಕೇಂದ್ರಗಳಿಂದ ಪ್ರತಿ ವರ್ಷ ಹೊರಬರುವ 200ಕ್ಕೂ ಹೆಚ್ಚು ರಂಗ ಪದವೀಧರರು ಕಠಿಣ ಪರಿಶ್ರಮಿಗಳೂ, ಕೌಶಲ್ಯವಂತರೂ ಹಾಗೂ ಉತ್ಸಾಹಿ ಪ್ರತಿಭಾವಂತರಿದ್ದಾರೆ. ಈ ಹಿಂದೆ 2008ರಲ್ಲಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ 43 ರಂಗ ಶಿಕ್ಷಕರ ನೇಮಕ ಮಾಡಲಾಗಿತ್ತು. ಎಲ್ಲೆಲ್ಲಿ ರಂಗ ಶಿಕ್ಷರ ನೇಮಕವಾಗಿತ್ತೋ ಅಲ್ಲೆಲ್ಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಹಾಜರಾತಿ ಹಾಗೂ ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿರುವುದನ್ನು ಎಲ್ಲರೂ ಗುರುತಿಸಿದ್ದಾರೆ ಎಂದೂ ತಿಳಿಸಲಾಗಿದೆ.
ಅಧಿಸೂಚನೆಯಲ್ಲಿ ರಂಗ ಶಿಕ್ಷಕರ ಸೇರ್ಪಡೆಗೆ ಆಗ್ರಹ: 371 (ಜೆ) ಅಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು, ಕಲಬುರ್ಗಿ ಅವರು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ನೇಮಕಾತಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಶಿಕ್ಷಕರು, ದೈಹಿಕ, ಸಂಗೀತ ಹಾಗೂ ಚಿತ್ರಕಲಾ ಶಿಕ್ಷಕರ ನೇಮಕದ ಉಲ್ಲೇಖ ಮಾತ್ರವಿದ್ದು, ಈ ಅಧಿಸೂಚನೆಯಲ್ಲಿ ರಂಗ ಶಿಕ್ಷಕರ ನೇಮಕಾತಿ ಕುರಿತಂತೆ ಯಾವುದೇ ಪ್ರಸ್ತಾಪವಿಲ್ಲದಿರುವುದು ನಾಡಿನ ಎಲ್ಲ ಶಿಕ್ಷಣ ಪ್ರೇಮಿಗಳಿಗೆ, ರಂಗಕರ್ಮಿಗಳಿಗೆ ಆಘಾತ ತಂದಿದೆ ಎಂದು ತಿಳಿಸಲಾಗಿದೆ.
ಅಭಿವೃದ್ಧಿಗಾಗಿಯೆ ವಿಶೇಷ ಸ್ಥಾನಮಾನ ಪಡೆದ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ರಂಗ ಶಿಕ್ಷಕರಾಗಿ ನೇಮಕ ಹೊಂದಿದವರು ಅತಿವಿರಳ. ಇಲ್ಲಿಯ ಮಕ್ಕಳು ಪ್ರತಿಭಾವಂತರಿದ್ದೂ, ಸೂಕ್ತ ವೇದಿಕೆ ಇಲ್ಲದೇ, ಮಾರ್ಗದರ್ಶನವಿಲ್ಲದೇ ಹಾಗೂ ಒಳ್ಳೆಯ ತರಬೇತಿ ಇಲ್ಲದೇ ಅವಕಾಶ ವಂಚಿತರಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಸುಮಾರು 250ಕ್ಕೂ ಹೆಚ್ಚು ರಂಗ ಪದವೀಧರರಿದ್ದಾರೆ. ಆದ್ದರಿಂದ ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನ 371(ಜೆ) ಅಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ಅಧಿಸೂಚನೆಗೆ ತಿದ್ದುಪಡಿ ತಂದು ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂದು ನಾವು ಈ ಮೂಲಕ ವಿನಂತಿಸುತ್ತೇವೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಕಳೆದೊಂದು ವರ್ಷ ಪೂರ್ತಿ ಶಾಲಾ ಕಾಲೇಜುಗಳು ಮುಚ್ಚಿ ಮಕ್ಕಳಿಗೆ ಕ್ರಮ ಶಿಕ್ಷಣವೇ ತಪ್ಪಿ ಹೋಗಿದೆ. ಸರಿಯಾದ ಶಿಸ್ತು, ಶಿಕ್ಷಣವಿಲ್ಲದ ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ‘ರಂಗ ಮುಖೇನ ಶಿಕ್ಷಣ’ ಶೀಘ್ರ ಫಲಿತಾಂಶ ನೀಡಬಲ್ಲದು. ಆದ್ದರಿಂದ ರಂಗ ಶಿಕ್ಷಕರ ನೇಮಕ ಅಗತ್ಯವೆಂಬುದನ್ನು ಸಹೃದಯಿ ವಿಶ್ವಾಸದ ಸಚಿವರಾದ ತಮ್ಮ ಗಮನಕ್ಕೆ ತರಬಯಸುತ್ತೇವೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಯಪೂರ್ವಕ ಆಗ್ರಹಿಸುತ್ತೇವೆ ಎಂದು ಮನವಿ ತಿಳಿಸಿದೆ.
ಇದನ್ನೂ ಓದಿ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.