ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲು ಆಗ್ರಹ
ಶವಾಗಾರ ಎದುರು ಹಲ್ಯಾಳ ಗ್ರಾಮಸ್ಥರ ಪ್ರತಿಭಟನೆ! ಪರಿಹಾರ ಭರವಸೆ ನಂತರ ಧರಣಿ ಹಿಂದಕ್ಕೆ
Team Udayavani, Jul 1, 2021, 9:11 PM IST
ಅಥಣಿ: ಕೃಷ್ಣಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ಹಲ್ಯಾಳ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಸಹೋದರರು ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕರು ಆಗಮಿಸಿ ದುಃಖತಪ್ತ ಕುಟುಂಬಕ್ಕೆ ಪರಿಹಾರ ಘೋಷಿಸುವಂತೆ ಆಗ್ರಹಿಸಿ ಹಲ್ಯಾಳ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಘಟನೆ ನಡೆದು ಮೂರು ದಿನ ಕಳೆದರೂ ಸ್ಥಳಕ್ಕೆ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸದೇ ಇರುವುದು ದುರದೃಷ್ಟಕರ. ಘಟನೆಯ ದಿನ ಮೃತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದ ತಹಶೀಲ್ದಾರರು ತಾಂತ್ರಿಕ ನೆಪಗಳನ್ನು ಮುಂದೆ ಮಾಡಿ ಸಂತ್ರಸ್ತ ಕುಟುಂಬಕ್ಕೆ ಅತೀವ ನೋವುಂಟು ಮಾಡಿದ್ದು ಪರಿಹಾರ ಘೋಷಿಸುವವರೆಗೂ ಗ್ರಾಮಸ್ಥರೊಂದಿಗೆ ಧರಣಿ ಸತ್ಯಾಗ್ರಹದಲ್ಲಿ ಮೂಂಚೂಣಿಯಲ್ಲಿರುವುದಾಗಿ ಹೇಳಿದರು.
ನ್ಯಾಯವಾದಿ ಗೌತಮ ಬನಸೋಡೆ ಮಾತನಾಡಿ, ಸರ್ಕಾರ ಪರಿಹಾರ ಘೋಷಿಸುವವರೆಗೂ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ. ಮಾನವೀಯತೆ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾ ಧಿಕಾರಿಗಳು ಭೇಟಿ ನೀಡದೇ ಇರುವುದು ಸರಿಯಲ್ಲ. ದಲಿತರ ವಿಷಯದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ವರ್ತಿಸಬೇಕು ಎಂದರು.
ಧರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಕೆ ಬುಟಾಳಿ, ಶ್ರೀಕಾಂತ ಪೂಜಾರಿ, ಸಂಜೀವ ಕಾಂಬಳೆ, ಚಿದಾನಂದ ಮೂಕಣಿ, ಅಜೀತ ಹಿಂದೆ, ಪ್ರಶಾಂತ ಕಾಂಬಳೆ, ಮಹಾಂತೇಶ ಶಿಂಗೆ, ಸದಾಶಿವ ಬನಸೋಡೆ, ವಿಠuಲ ಕಾಂಬಳೆ, ಮಂಜು ಹೋಳಿಕಟ್ಟಿ ಸೇರಿದಂತೆ ಹಲ್ಯಾಳ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಅಥಣಿ ತಹಶೀಲ್ದಾರ್ ದುಂಡಪ್ಪಾ ಕೋಮಾರ, ಡಿವೈಎಸ್‌ಪಿ ಎಸ್.ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಉಪತಹಶೀಲ್ದಾರ್ ಬಿರಾದಾರ ಭೇಟಿ ನೀಡಿ ಶಾಸಕ ಮಹೇಶ ಕುಮಠಳ್ಳಿ ಅವರ ಜೊತೆ ಮಾತನಾಡಿಸಿ, ಪರಿಹಾರದ ಭರವಸೆ ನೀಡಿದ ಬಳಿಕ ಧರಣಿ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.