ಜಿಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಕಡಿವಾಣ ಹಾಕಿದ ಕೊರೊನಾ
Team Udayavani, Jul 5, 2021, 8:13 PM IST
ವರದಿ: ಕೇಶವ ಆದಿ
ಬೆಳಗಾವಿ: ಗ್ರಾಮಗಳಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳು ಸಿಗಬೇಕು. ಮನೆ ಬಾಗಿಲಲ್ಲೇ ಸಾಧ್ಯವಾದಷ್ಟು ಪರಿಹಾರ ದೊರೆಯಬೇಕು. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಬೇಕು ಎಂಬ ಉದ್ದೇಶದೊಂದಿಗೆ ಐದು ತಿಂಗಳ ಹಿಂದೆ ಸರಕಾರ ಆರಂಭಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಜನರಲ್ಲಿ ಹೊಸ ವಿಶ್ವಾಸ ಮೂಡಿಸುವ ಮೊದಲೇ ಬಾಗಿಲು ಹಾಕಿಕೊಂಡಿದೆ.
ರಾಜ್ಯದಾದ್ಯಂತ ಏಕಕಾಲಕ್ಕೆ ಫೆಬ್ರುವರಿ 20 ರಂದು ಚಾಲನೆ ನೀಡಿದ್ದ ಕಂದಾಯ ಸಚಿವ ಆರ್ ಅಶೋಕ ಅವರಿಗೆ ಇದರ ಯಶಸ್ಸಿನ ಸವಿ ಅನುಭವಿಸುವ ಅವಕಾಶ ದೊರೆಯಲಿಲ್ಲ. ಪ್ರತಿ ತಿಂಗಳ ಮೂರನೇ ಶನಿವಾರ ಈ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ ಒಂದು ಕಡೆ ವಿಧಾನಸಭೆ ಹಾಗೂ ಲೋಕಸಭಾ ಉಪ ಚುನಾವಣೆ ಹಾಗೂ ನಂತರ ಬಂದ ಕೊರೊನಾ ಎರಡನೇ ಅಲೆಯ ಹೊಡೆತ ಸಚಿವರ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿದವು. ಸರಕಾರ ತಮ್ಮ ಮನೆ ಬಾಗಿಲಿಗೆ ಬರುತ್ತಿದೆ.
ಉನ್ನತ ಅಧಿಕಾರಿಗಳಿಗೆ ನಮ್ಮ ಕಷ್ಟದ ಅರಿವಾಗಲಿದೆ. ನಾವು ಅವರಿಗೆ ನೇರವಾಗಿ ಸಮಸ್ಯೆ ಹೇಳಬಹುದು. ನಮ್ಮ ಸಮಸ್ಯೆಗಳಿಗೆ ನಮ್ಮ ಗ್ರಾಮದಲ್ಲೇ ಪರಿಹಾರ ಸಿಗಲಿದೆ ಎಂದು ಜನರು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಫಲ ಪಡೆಯುವಾಗಲೇ ಕೊರೊನಾ ಎಲ್ಲದಕ್ಕೂ ಅಡ್ಡಿಯಾಯಿತು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ಹಳ್ಳಿಯ ಕಡೆ ಹೆಜ್ಜೆ ಹಾಕಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆರಂಭಿಸಿದ್ದರು.
ಬೆಳಿಗ್ಗೆ ಗ್ರಾಮಕ್ಕೆ ಬಂದಾಗ ಅಧಿಕಾರಿಗಳ ತಂಡಕ್ಕೆ ಅದ್ದೂರಿ ಸ್ವಾಗತವೇ ಸಿಕ್ಕಿತ್ತು. ಗ್ರಾಮದ ಜನರ ಮುಖದಲ್ಲಿ ಸಹ ಯಾವುದೋ ಹೊಸ ಆಶಾಭಾವನೆ ಕಂಡಿತ್ತು. ಕಂದಾಯ ಸಚಿವ ಅರ್.ಅಶೋಕ್ ಅವರ ಆಶಯದಂತೆ ಅನುಷ್ಠಾನಕ್ಕೆ ತಂದಿರುವ ಯೋಜನೆ ಇದಾಗಿದೆ. ಪ್ರತಿ ತಿಂಗಳ ಮೂರನೇ ಶನಿವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಳ್ಳಿಗಳಲ್ಲಿ ಒಂದು ದಿನದ ವಾಸ್ತವ ಹೂಡಿ ಜನರ ಸಮಸ್ಯೆಗಳನ್ನು ಆಲಿಸುವ ಹಾಗೂ ಅವುಗಳನ್ನು ಪರಿಹರಿಸುವ ಪ್ರಯತ್ನವನ್ನು ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದ್ದರು. ಅದರಂತೆ ಫೆಬ್ರುವರಿ 20 ರಂದು ಜಿಲ್ಲೆಯ 14 ಗ್ರಾಮದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ಆಯಾ ತಾಲೂಕುಗಳ ತಹಶೀಲ್ದಾರರ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಮುಂದೆ ಎಲ್ಲವೂ ಅಂದುಕೊಂಡಂತೆ ನಡೆಯಲೇ ಇಲ್ಲ. ಕೊರೊನಾ ಎರಡನೇ ಅಲೆ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆ ಸರಕಾರದ ಈ ಮಹತ್ವದ ಯೋಜನೆಗೆ ಕೊಡಲಿ ಪೆಟ್ಟು ನೀಡಿತು.
ಮೊದಲು ಉಪಚುನಾವಣೆಯ ಕಾರಣದಿಂದ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಕೈಬಿಟ್ಟಿದ್ದ ಜಿಲ್ಲಾಧಿಕಾರಿಗಳು ಆನಂತರ ಅನಿವಾರ್ಯವಾಗಿ ಕೊರೊನಾ ಹೊಡೆತಕ್ಕೆ ಶರಣಾಗಬೇಕಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪ್ರಮಾಣ ಏರಿಕೆಯಾಗಿದ್ದರಿಂದ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ವಿರಾಮ ಹಾಕಬೇಕಾಯಿತು. ಹಾಗೆ ನೋಡಿದರೆ ಜನರ ಅಹವಾಲುಗಳನ್ನು ಆಲಿಸುವುದರ ಜೊತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಮೊದಲ ವಿನೂತನ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿತ್ತು. ಬೈಲಹೊಂಗಲ ತಾಲೂಕಿನ ಬೆ„ಲವಾಡ ಗ್ರಾಮದಲ್ಲಿ ಫೆ.20 ರಂದು ನಡೆದ ಮೊದಲ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಈ ಹೊಸ ಆಶಯಕ್ಕೆ ಜಿಲ್ಲೆಯಲ್ಲಿ ಮುನ್ನುಡಿ ಬರೆದಿದ್ದರು. ಆಗ ಗ್ರಾಮದ ಜನರ ನೋವು-ನಲಿವು ಅನಾವರಣಗೊಂಡಿತ್ತು. ಕಷ್ಟಗಳ ಸರಮಾಲೆ ಅಧಿಕಾರಿಗಳ ಮುಂದೆ ಬಂದು ನಿಂತಿದ್ದವು.
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿದ್ದ ಜಿಲ್ಲಾಧಿಕಾರಿಗಳು ಆಗ ಸುಮಾರು ಎರಡು ತಾಸುಗಳ ಕಾಲ ಬೆ„ಲವಾಡ ಗ್ರಾಮದ ಪ್ರತಿ ಓಣಿಗೂ ಭೇಟಿ ನೀಡಿದ್ದಲ್ಲದೆ ಜನರ ಮನೆಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದ್ದರು. ಗ್ರಾಮದ ಜನರು ಮಾಸಾಶನ, ರೇಷನ್, ಕುಡಿಯುವ ನೀರು, ವಸತಿ, ಸ್ವತ್ಛತೆ, ಗಟಾರು, ಶೌಚಾಲಯ ಸೇರಿದಂತೆ ಹತ್ತಾರು ಸಮಸ್ಯೆಗಳ 210ಕ್ಕೂ ಹೆಚ್ಚು ಅಹವಾಲುಗಳನ್ನು ಸಲ್ಲಿಸಿದ್ದರು. ಸ್ಥಳದಲ್ಲೇ ಹಲವಾರು ಅಹವಾಲುಗಳಿಗೆ ಪರಿಹಾರ ಸಹ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ನಂತರ ಬೈಲವಾಡ ಗ್ರಾಮದಲ್ಲಿ ಹಲವಾರು ಬದಲಾವಣೆ ಕಂಡವು. ರಸ್ತೆಗಳ ನಿರ್ಮಾಣ ಆಯಿತು.
ಹೆಸ್ಕಾಂದಿಂದ ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ಆರಂಭವಾಯಿತು. ಬಡ ಜನರಿಗೆ ವೃದ್ಧಾಪ್ಯ ವೇತನ, ಪಡಿತರ ಕಾರ್ಡ್ ಮೊದಲಾದ ಸೌಲಭ್ಯ ದೊರೆತವು. ಶಾಸಕರಿಂದ ಗ್ರಾ ಪಂ ಗೆ ಅನುದಾನ ಬಿಡುಗಡೆ ಮಾಡಿಸುವ ಭರವಸೆ ಜಿಲ್ಲಾಧಿಕಾರಿಗಳಿಂದ ಸಿಕ್ಕಿತು. ಮೊದಲ ಪ್ರಯತ್ನದಲ್ಲೇ ಅಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಜನರಲ್ಲಿ ಹೊಸ ವಿಶ್ವಾಸ ಮೂಡಿತ್ತು. ಬೈಲವಾಡ ಗ್ರಾಮದ ನಂತರ ಜಿಲ್ಲೆಯ ಅನೇಕ ಹಳ್ಳಿಗಳು ತಮ್ಮ ಸರದಿಗಾಗಿ ಕಾದಿದ್ದವು. ಆದರೆ ಕೊರೊನಾದ ಎರಡನೇ ಅಲೆ ಎಲ್ಲದಕ್ಕೂ ಕಡಿವಾಣ ಹಾಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.