ಬದಲಾದವರು ಯಾರು?
Team Udayavani, Jul 5, 2021, 10:02 PM IST
ಹಾಳಾದ ವೈರಸ್ಸು ನಮ್ಮನ್ನೆಲ್ಲ ಹಗಲೂ- ರಾತ್ರಿ ತನ್ನ ಧ್ಯಾನದಲ್ಲೇ ತೊಡಗಿಸಿರುವಂತೆ ಮಾಡಿರುವುದೂ ಅಲ್ಲದೇ, ವಿಶ್ವದಾದ್ಯಂತ ಅನೇಕ ಹಸಿದ ಹೊಟ್ಟೆಗಳನ್ನೂ, ಸಾವು-ನೋವಿನ ಕಣ್ಣೀರ ಕೋಡಿಯನ್ನೂ ಹರಿಸುತ್ತಿದೆ.
ಈ ವೈರಸ್ಸಿನ ಭೀತಿ ಒಂದು ರೀತಿಯ ಕಾಡ್ಗಿಚ್ಚಿನಂತೆ ಎಲ್ಲ ಕಡೆಗೆ ಹರಡಿದ್ದು, ಇದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಭಸ್ಮವನ್ನಾಗಿಸಿ, ಆ ಜಾಗದಲ್ಲಿ ಮತ್ತೆ ಹೊಸ ಹುಟ್ಟುಗಳನ್ನು ಕಾಣಬಹುದು. ಕೆಲವರು ಈ ವೈರಸ್ಸಿನಿಂದ ಬದುಕಿಗೆ ಆಗಿ ಮಿಗುವಷ್ಟು ಪಾಠ ಕಲಿಯುತ್ತಾರೆ, ಇನ್ನು ಕೆಲವರು ತಮಗೇನೂ ಆಗೇ ಇಲ್ಲ, ಈ ಸೃಷ್ಟಿಯ ಸೌಲಭ್ಯಗಳು ಇರುವುದೇ ನಮ್ಮ ಪೋಷಣೆಗಾಗಿ ಎಂದುಕೊಳ್ಳುವವರೂ ಇದ್ದಾರೆ.
ದೂರದ ಸ್ನೇಹಿತರು, ನೆಂಟರು-ಇಷ್ಟರನ್ನು ಮಾತನಾಡಿಸಲು ಇದು ಸಕಾಲ. ಸಂಜೆಯ ವೇಳೆ (ಆಫೀಸ್‌ನ ಅವಧಿ ಮುಗಿದ ಮೇಲೆ), ವಾರಾಂತ್ಯದಲ್ಲಿ ಎಲ್ಲರೂ ಕೂಡ ಗೊಂದಲವಿಲ್ಲದೇ ಹೆಚ್ಚು ಕಾಲ ಫೋನ್ ಅಥವಾ ವಿಡಿಯೋ ಸಂಭಾಷಣೆಯಲ್ಲಿ ಸಿಗುವುದು ಇತ್ತೀಚಿನ ಒಂದು ಬದಲಾವಣೆ ಎನ್ನಬಹುದು. ನಮ್ಮ ಪರಿವಾರದವರಿಗೆ ನಾವು ಕಷ್ಟಕಾಲದಲ್ಲಿ ಆಗಿ ಬರಲಿಲ್ಲ ಎನ್ನುವ ವ್ಯಥೆ ಒಮ್ಮೊಮ್ಮೆ ಬಾಧಿಸುತ್ತಾದರೂ, ಮರುದಿನ ಫೋನ್‌ನಲ್ಲಿ ಮಾತನಾಡಿದಾಗ ಮನಸ್ಸು ಹಗುರವಾಗುತ್ತದೆ. ಕಾಲ ಎಲ್ಲರನ್ನೂ ಬದಲಾಯಿಸುತ್ತದೆ. ಅದರಲ್ಲೂ ದೇಶ- ಭಾಷೆ- ಬಂಧುಗಳನ್ನು ಬಿಟ್ಟು ದೂರ ಬಂದ ನಾವುಗಳು ಹೆಚ್ಚು ಬದಲಾಗಿದ್ದೇವೆ ಎಂದು ಅನಿಸುತ್ತದೆ.
ಕಳೆದ ವರ್ಷ ಭಾರತಕ್ಕೆ ಹೋಗಿದ್ದಾಗ ನಮ್ಮ ಹಳೆಯ ಸಂಬಂಧಿಕರೆನ್ನೆಲ್ಲ ನೋಡಿ ಮಾತನಾಡಿಸುವ ಅವಕಾಶವೊಂದು ಬಂದಿತ್ತು. ಭಾರತದ ಬೇರುಗಳನ್ನು ಬಿಟ್ಟು ಬಂದವರಿಗೆ ಈ ರೀತಿಯ ಸುಯೋಗಗಳು ಸಿಗುವುದು ಅಪರೂಪವಷ್ಟೇ. ನಾವು ಎಷ್ಟೇ ದೂರದಿಂದ ಫೋನ್‌ನಲ್ಲಿ ಮಾತನಾಡಿದರೂ ಹತ್ತಿರ ಕುಳಿತು, ಪರಸ್ಪರ ಭೇಟಿಯಾಗಿ ಮಾತನಾಡುವ ಅನುಕೂಲ ಸುಖಕ್ಕೆ ಯಾವ ರೀತಿಯಲ್ಲೂ ತಾಳೆ ನೋಡಲಾಗದು. ಇತ್ತೀಚಿನ ತಂತ್ರಜ್ಞಾನದ ಉನ್ನತಿಯ ದೆಸೆಯಿಂದ ಅಪರೂಪಕ್ಕೊಮ್ಮೆ ವಿಡಿಯೋ ಕಾಲ್ ಮಾಡಿದರೂ ಸಹ ಅದೂ ಕೂಡ ಪರಸ್ಪರ ಭೇಟಿಯ ಅನುಭವವನ್ನು ಕೊಡಲು, 8,000 ಮೈಲಿಯ ದೂರದ ಅಂತರದಲ್ಲಿ ಸೋಲುತ್ತದೆ ಎಂದೇ ಹೇಳಬೇಕು.
ನಮ್ಮ ಸಹಪಾಠಿಗಳು, ಸ್ನೇಹಿತರು, ನೆಂಟರು, ಇಷ್ಟರು, ಬಂಧು-ಬಳಗದವರು ಇವರನ್ನೆಲ್ಲ ಲೆಕ್ಕ ಹಾಕಿದರೆ ಸುಮಾರು ಎರಡು ಸಾವಿರ ಜನರಷ್ಟಾಗಬಹುದು. ನಮ್ಮ ಮದುವೆಗಳಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಜನರಾದರೂ ಬಂದಿರುತ್ತಾರಲ್ಲ.
ಹೀಗೇ ಒಂದು ಭೇಟಿಯಲ್ಲಿ, ನಮ್ಮ ಹಿರಿಯ ತಲೆಗಳನ್ನು ನೋಡಿ ಮಾತನಾಡಿಸುವ ಸುಯೋಗ ಬಂದಿತ್ತು. ನಾನು ಅವರುಗಳ ಮನೆಗೆ ಹೋದಾಗ ಅವರು ನನ್ನನ್ನು “ಅತಿಥಿ’ಯಾಗಿ ನೋಡಿಕೊಳ್ಳುವ ರೀತಿಯಲ್ಲಿ ಅನೇಕ ಹೊಸತುಗಳಿದ್ದವು. ದೂರದಿಂದ ಬಂದಿ¨ªಾನೆ ಎಂದು ಒಂದಿಷ್ಟು ಉಪಚಾರ ಗಳು, ಅವುಗಳ ನಡುವೆ ನೆಲದ ಮೇಲೆ ಕೂರಿಸಿ ಊಟಕ್ಕೆ ಹಾಕಬೇಕೋ ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕೂರಿಸಬೇಕೋ ಎನ್ನುವ ಕಸಿವಿಸಿ. ಎಲೆಯಿಟ್ಟು ಊಟ ಮಾಡುತ್ತಾರೋ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಬೇಕೋ ಎನ್ನುವ ಮುಜುಗರ. ಊಟಕ್ಕೆ ಏನು ಬಡಿಸಬೇಕು ಅಥವಾ ಬೇಡ ಎನ್ನುವ ಅಳುಕು. ಹೀಗೇ ನನ್ನ ಭೇಟಿಯುದ್ದಕ್ಕೂ ಸ್ಥಳೀಯ ಭಾಷೆಯನ್ನು ಬಿಟ್ಟು ಯಾರದ್ದೋ ಜತೆಗೆ ನಡೆಸಬಹುದಾದ ಗ್ರಾಂಥಿಕ ಭಾಷೆಯನ್ನು ಬಳಸುವ ಸಂವಾದದ ಸಂಕಟ.. ಈ ಎಲ್ಲದರ ಹಿನ್ನೆಲೆಯಲ್ಲಿ ನಾನು ಯಾರ ಮನೆಗೆ ಬಂದಿದ್ದೇನೆ, ಇವರಿಗೆಲ್ಲ ಏನಾಗಿದೆ? ಒಂದು ಕಾಲದಲ್ಲಿ ಎಷ್ಟೊಂದು ಸಹಜವಾಗಿ ವರ್ತಿಸುತ್ತಿದ್ದ ನಮ್ಮ ಜನರಿಗೆ ಈ ರೀತಿ ಇರುಸುಮುರುಸು ಯಾಕಾಗುತ್ತಿದೆ ಎಂದು ಯೋಚಿಸಲು ತೊಡಗಿದೆ. ನಾನು ಊರಿಗೆ ಹೋದೊಡನೆ ಅಲ್ಲಿನ ಸ್ಥಳೀಯ ಉಡುಪುಗಳನ್ನು ತೊಡುವುದರ ಮೂಲಕ “ಎಲ್ಲರೊಳಗೊಂದಾಗ’ ಬಯಸುವ ನನ್ನ ಪ್ರಯತ್ನಕ್ಕೆ ಅನಾಯಾಸ ಸೋಲು! ಹೀಗಾಗಿ ನಾನು ದಂಗಾಗಿ ಹೋಗಿದ್ದೆ.
ಒಂದು ಕಾಲದಲ್ಲಿ ಎಷ್ಟೊಂದು ವಿಷಯಗಳಿಗೆ ಬಡಿದಾಡುತ್ತಿದ್ದೆವು, ತಾಳಮದ್ದಳೆಯ ಪ್ರತೀಕವಾಗಿ ಅನೇಕ ವಾದ-ವಿವಾದಗಳನ್ನು ಹೂಡುತ್ತಿದ್ದೆವು, ಆಯಾ ಸಮಯದ ಮಟ್ಟಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮ ಸಂಘರ್ಷಗಳಲ್ಲಿ ಘರ್ಷಣೆಗಳಿದ್ದವು, ಘೋಷಣೆಗಳಿದ್ದವು. ಮದುವೆ-ಮುಂಜಿಯ ಮಾತುಗಳು ಬರುತ್ತಿದ್ದವು. ಜಾತಿ- ಆಸ್ತಿ- ಅಂತಸ್ತಿನ ವಿಚಾರಗಳು ಇಣುಕಿ ಹಾಕುತ್ತಿದ್ದವು. ಆದರೆ, ಈ ಅಸಹಜ ವರ್ತಮಾನದ ಒಡನಾಟದಲ್ಲಿ ಈ ಮೇಲಿನೆಲ್ಲವೂ ಮಾಯವಾಗಿ, ಯಾರೋ (ದಾರಿ ತಪ್ಪಿ ಬಂದ) ಅತಿಥಿಗಳ ಸತ್ಕಾರದಂತೆ ನಮ್ಮ ಭೇಟಿ ನಡೆಯತೊಡಗಿದ್ದನ್ನು ನೋಡಿ ಮನ ಹಿಂಡಿಹೋಗಿತ್ತು.
ಇದನ್ನು ಹೀಗೇ ಬಿಟ್ಟರೆ, ನನ್ನವರೆನ್ನುವವರನ್ನೆಲ್ಲ ಎಲ್ಲಿ ದೀರ್ಘಕಾಲೀನವಾಗಿ ಕಳೆದುಕೊಳ್ಳಬೇಕಾಗುತ್ತೋ ಎಂದು ನಾನು ಅನೇಕ ಸೂಕ್ಷ ¾ ವಿಷಯಗಳನ್ನು ಎತ್ತಿ ನಿಧಾನವಾಗಿ ವಾದಗಳನ್ನು ಮಂಡಿಸತೊಡಗಿದೆ. ಹೀಗಾದಾರೂ ಅವರುಗಳು ತೆರೆದುಕೊಳ್ಳಲಿ ಎಂದು… ಊಹೂn, ನಾನು ಏನೇ ಮಾಡಿದರೂ ಅವರು ತಿಪ್ಪೆ ಸಾರಿಸಿದ ಹಾಗೆ ಉತ್ತರಗಳನ್ನೇ ಕೊಡುತ್ತಾ ಬಂದರು. ಹೀಗೇ ಬಿಟ್ಟರೆ, ಇವರುಗಳು ನನ್ನಿಂದ ದೂರವೇ ಇರುತ್ತಾರೆ ಎಂಬ ಯೋಚನೆ ಬಂದಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತು. ಮರುದಿನ ಒಂದು ಹೊಸ ಆಲೋಚನೆಯೊಡನೆ ಅವರನ್ನೆಲ್ಲ ಭೇಟಿ ಮಾಡಲು ಹೋದೆ.
ಹಳ್ಳಿಗಳಲ್ಲಿ ಸಹಜವಾಗಿ ಸೂರ್ಯ ಹುಟ್ಟುತ್ತಲೇ ಜೀವನ ಆರಂಭವಾಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಆನೇಕ ಮನೆಗಳಲ್ಲಿ ಬೆಳಗಾಗುವುದರ ಒಳಗೆ ಜಾನುವಾರುಗಳಿಗೆ ಬಾಯಾರು (ಗಂಜಿ-ನೀರು) ಕೊಡುವುದರಿಂದ ಹಿಡಿದು, ಅಂಗಳವನ್ನು ಗುಡಿಸಿ ಸಾರಿಸಿ, ಹೊಸ್ತಿಲಿಗೆ ಅರಿಸಿನ- ಕುಂಕುಮವಿಡುವುದರಿಂದ ಹಿಡಿದು, ಮನೆ ಮಂದಿಯೆಲ್ಲ ಮಿಂದು ತಮ್ಮ ತಮ್ಮ ಕೆಲಸ ನೋಡಿಕೊಳ್ಳುವ ವಾಡಿಕೆಯಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ತಿಂಡಿಗೆ ಖಾಯಂ ಅವಲಕ್ಕಿ ಅಥವಾ ದೋಸೆಯ ಪರಿಪಾಠ ಇನ್ನೂ ಜಾರಿ ಇದೆ. ನಾನು ನನ್ನ ಪರಿವಾರವನ್ನು ಬಿಟ್ಟು, ಒಂದು ಲುಂಗಿಯನ್ನು ಸುತ್ತಿಕೊಂಡು,
ಬೆಳ್ಳಂಬೆಳಗ್ಗೆ ಇವರ ಮನೆಯ ಅಡುಗೆ ಮನೆ ತಡಕಾಡಿದರೆ ಒಂದಿಷ್ಟು ದೋಸೆಗೇನೂ ಕಡಿಮೆ ಇಲ್ಲ ಎನ್ನುವ ನಂಬಿಕೆಯಿಂದ ನಮ್ಮ ನೆಂಟರೊಬ್ಬರ ಮನೆಗೆ ಹಿಂಬದಿ ಬಾಗಿಲಿನಿಂದ ಹೋಗಿ ಎಂದಿನಂತೆ ಮಾತಿಗೆ ತೊಡಗುತ್ತಾ, ಅಲ್ಲೇ ಹತ್ತಿರದಲ್ಲಿದ್ದ ಮಣೆಯನ್ನೊಂದು ಎಳೆದುಕೊಂಡು ಕುಳಿತುಕೊಂಡೆ. ಆಗ ನೋಡಿ ನಿಜವಾಗಿ ನಮ್ಮ- ಅವರ ಮಾತುಕಥೆ ಶುರುವಾಗಿದ್ದು. ಉಭಯ ಕುಶಲೋಪರಿಗೆ ಕತ್ತರಿ ಹಾಕಿ, ಕಳೆದ ನಾಲ್ಕು ವರ್ಷಗಳ ಆಗು-ಹೋಗುಗಳ ಒಟ್ಟು ಲೆಕ್ಕಾಚಾರವನ್ನು ನಾಲ್ಕು ಗಂಟೆಗಳಲ್ಲಿ ಮುಗಿಸುವ ಹುನ್ನಾರದಲ್ಲಿದ್ದವನಿಗೆ ಸಮಯ ಹೋದುದೇ ತಿಳಿಯಲಿಲ್ಲ. (ಜತೆಗೆ ಅಕ್ಕ-ಪಕ್ಕದ ಮನೆಗಳಿಂದಲೂ ಪರಿಚಯದವರು ಬಂದು ಸೇರತೊಡಗಿದರು. ನಮ್ಮ ಮಾತುಕಥೆಗಳಲ್ಲಿ “ಬನ್ನಿ- ಹೋಗಿ’ಗಳು ಇರಲಿಲ್ಲ) ತಿಂಡಿ- ಕಾಫಿಯ ಮುಗಿದು, ಮಧ್ಯಾಹ್ನದ ಊಟದ ಸಮಯವೂ ಆಗಿ ಹೋಯಿತು. ನೀವು ಮಾಡಿದ್ದನ್ನೇ ಬಡಿಸಿ ಎಂದು ತೋಚಿಕೊಳ್ಳುವ
ನನಗೆ, ಏನಾದರೂ ವಿಶೇಷವಾದ ಅಡಿಗೆಯನ್ನು ಮಾಡಲೇ ಬೇಕು ಎಂದು ಅವರು, ಒಬ್ಬರಿಗೊಬ್ಬರು ಮತ್ತೆ “ಹೋರಾಟ’ ನಡೆಸಿದೆವು. ಕೊನೆಗೆ ನಾನೇ ಸೋತು, ಅÇÉೇ ಇದ್ದ ಒಂದೆಲಗದ ತಂಬಳಿಯನ್ನು ಮಾಡಿರೆಂದು ಕೇಳಿಕೊಂಡೆ. ಊಟವಾದ ಮೇಲೂ ಮಣೆ ಬಿಡದ ನನ್ನ ಜಿಗಣೆಯ ಜಿದ್ದಿಗೆ ಅವರು ಸೋತಿದ್ದರು. ಕೊನೆಗೆ ಅಲ್ಲಿಯೇ ಇದ್ದ ಎಲೆ-ಅಡಿಕೆ ಬಟ್ಟಲನ್ನು ಎಳೆದುಕೊಂಡು ಕವಳ ಹಾಕಿದ ಮೇಲೆ ಅವರಲ್ಲಿ ಒಬ್ಬನಾಗಿ ಹೋಗಿದ್ದೆ.
ಹೀಂಗೆ ಬರ್ತಾ ಇರು ಮಾರಾಯ, ನೀ ಬಂದ್ರೆ ಒಂಥರ ಚೆಂದ ನೋಡು! ಎನ್ನುವ ಮನದಾಳದ (ಬರೆಯಲಾರದ) ಷರಾ ವನ್ನು ಹೇಳಿಸಿಕೊಂಡು ಹಿಂತಿರುಗಿ ಹೊರಟೆ.
ಈ ಒಂದು ಘಟನೆಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾಗ, ನನ್ನ ಮನದಲ್ಲಿ ಬದಲಾದವರು ಯಾರು? ಎಂಬ ಪ್ರಶ್ನೆ ಬಲವಾಗಿ ಏಳತೊಡಗಿತು. ಕಾಲ ಕಳೆದಂತೆ ನಮ್ಮ- ನಮ್ಮ ವ್ಯಕ್ತಿತ್ವ, ಪ್ರಬುದ್ಧತೆ, ವಿಚಾರಗಳು ಬದಲಾಗಲಿ. ಆದರೆ, ಈ ಬದಲಾವಣೆಯ ದೆಸೆಯಿಂದ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೆ ಅಥವಾ ಈ ಬದಲಾವಣೆಯ ಕೃಪೆಯಿಂದ ನಮ್ಮವರೊಡನೆ ನಾವೇ ಒಂದಾಗಲಾರದವರಾದರೆ, ಅದು ನಮ್ಮನ್ನು ಬೇರ್ಪಡಿಸಿ, ನಮ್ಮಲ್ಲಿ ಪ್ರತ್ಯೇಕತಾ ಭಾವನೆಯನ್ನು ಮೂಡಿಸೋದಿಲ್ಲವೇ? ಬಂಧುಗಳಿಗೆ, ಸ್ನೇಹಿತರಿಗೆ ಅವರವರ ಧರ್ಮವಿದೆ, ಅವರಿಗೆ ಒಂದು ಕಾರ್ಯಭಾರವಿದೆ, ಪಾತ್ರವಿದೆ… ಅವುಗಳನ್ನೆಲ್ಲ ತೊರೆದು ಅವರು ಅವರಾಗಿಲ್ಲದಿದ್ದಾಗ ನಾವು ನಾವಾಗದಿದ್ದರೆ ಯಾರನ್ನು ನೋಡಲು ಎಷ್ಟು ದೂರ ಹೋದರೆ ಏನು ಪ್ರಯೋಜನ?
ಅಮೆರಿಕದ ನೀರು ಕುಡಿದು ಅಮೆರಿಕನ್ ಇಂಗ್ಲಿಷ್ ಬಳಸಿ ನನ್ನೊಡನೆ ಬರೀ ಇಂಗ್ಲಿಷಿನÇÉೇ ಸಂವಾದಿಸುವ ನನ್ನ ಸ್ನೇಹಿತನಾಗಲಿ ಅಥವಾ ತಮ್ಮತನವನ್ನು ಬಿಟ್ಟು ನಮ್ಮೊಡನೆ ಗ್ರಾಂಥಿಕ ಭಾಷೆಯನ್ನು ಬಳಸಿ ನಟಿಸುವ ನನ್ನ ಹಿರಿಯ ಸಂಬಂಧಿಕರಾಗಲಿ ನನಗೇಕೆ ಬೇಕು? ಬದಲಾದವರು ಯಾರೋ ಅವರೇ ಉತ್ತರ ಕೊಡಬೇಕು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.