ಜಮೀನು ವಿವಾದ : ಜಿ.ಪಂ.ಮಾಜಿ ಉಪಾಧ್ಯಕ್ಷೆಯ ತಂದೆ ಕೊಲೆ; ಪುತ್ರನಿಗೆ ತೀವ್ರ ಗಾಯ
ಮೂವರು ಪೋಲಿಸರಿಗೆ ಶರಣು
Team Udayavani, Jul 6, 2021, 8:33 PM IST
ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಜಮೀನು ವಿವಾದದಿಂದ ನಡೆದ ಜಗಳದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಶಿಕಲಾ ಸೋಮಲಿಂಗಪ್ಪ ಅವರ ತಂದೆ ಗುರುಸ್ವಾಮಪ್ಪ (62) ಕೊಲೆಯಾಗಿದ್ದು, ಅವರ ಪುತ್ರ ಮಂಜುನಾಥ್ (33) ತೀವ್ರವಾಗಿ ಗಾಯಗೊಂಡಿದ್ದಾರೆ.
ಆರೋಪಿಗಳಾದ ಆದೇ ಗ್ರಾಮದ ಮಲೇ ಮಾದಪ್ಪ, ಮಂಗಳಮ್ಮ, ಮಲ್ಲಿಕಾರ್ಜುನ್ ಗ್ರಾಮಾಂತರ ಠಾಣೆಗೆ ಬಂದು ಶರಣರಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ : ಕೊತ್ತಲವಾಡಿ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ಜಮೀನು ಹೊಂದಿದ್ದ ಗುರುಸ್ವಾಮಪ್ಪ ಮತ್ತು ಮಲೇ ಮಾದಪ್ಪ ಅವರ ಕುಟುಂಬದ ನಡುವೆ ಜಮೀನಿನ ವಿವಾದ ಬಹಳ ವರ್ಷಗಳಿಂದ ಇತ್ತು. ನ್ಯಾಯಾಲದಯದಲ್ಲಿಯು ಸಹ ಜಮೀನಿನ ವ್ಯಾಜ್ಯ ನಡೆಯುತ್ತಿತ್ತು. ಮಂಗಳವಾರ ಮಧ್ಯಾಹ್ನ 2.30ರ ಸಮಯದಲ್ಲಿ, ಮಲೇ ಮಾದಪ್ಪ ಮತ್ತು ಆತನ ಪತ್ನಿ ಮಂಗಳಮ್ಮ, ಇವರ ಪುತ್ರ ಮಲ್ಲಿಕಾರ್ಜುನ ಜಮೀನಿನ ಪಕ್ಕದ ಬೇಲಿಯನ್ನು ಕಡಿಯುತ್ತಿದ್ದಾಗ, ಪಕ್ಕದ ಜಮೀನಿನ ಗುರುಸ್ವಾಮಪ್ಪ ಮತ್ತು ಮಂಜುನಾಥ್ ತಗಾದೆ ತೆಗೆದಿದ್ದಾರೆ.
ಮಾತಿಗೆ ಮಾತು ಬೆಳೆದು ಮಲೇ ಮಾದಪ್ಪ, ಅವರ ಪುತ್ರ ಮಲ್ಲಿಕಾರ್ಜುನ್ ಮಚ್ಚಿನಿಂದ ಗುರುಸ್ವಾಮಪ್ಪ ಮತ್ತು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಗುರುಸ್ವಾಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪುತ್ರ ಮಂಜುನಾಥ್ ತೀವ್ರ ಗಾಯಗೊಂಡರು. ನಂತರ ಅಕ್ಕಪಕ್ಕದ ಜಮೀನಿನವರು, ಗ್ರಾಮಸ್ಥರು ಮಂಜುನಾಥ್ ಅವರನ್ನು ಚಾ.ನಗರ ಜಿಲ್ಲಾ ಅಸ್ಪತ್ರೆಗೆ ಕರೆತಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ವಿಷಯ ತಿಳಿದು ಗ್ರಾಮಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್‌ತ್ ಮಾಡಿದ್ದು, ಗುರುಸ್ವಾಮಪ್ಪ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಚಾ.ನಗರಕ್ಕೆ ತರಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.