ಕಲ್ಯಾಣಪುರ ಬಸವಣ್ಣಜ್ಜನವರಿಂದ ಮೌನಾನುಷ್ಠಾನ
Team Udayavani, Jul 10, 2021, 4:53 PM IST
ಕುಂದಗೋಳ: ನಾಡಿನ ರೈತರು, ಗಡಿ ಕಾಯುವ ಯೋಧರು ಸುಭೀಕ್ಷವಾಗಿ ಇರಲೆಂದು ಪಟ್ಟಣದ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು ಜು. 6ರಿಂದ 21 ದಿನಗಳ ಕಾಲ ಮೌನಾನುಷ್ಠಾನಕ್ಕೆ ಕುಳಿತುಕೊಂಡಿದ್ದಾರೆ.
ಅತಿವೃಷ್ಟಿ-ಅನಾವೃಷ್ಟಿಯಿಂದ ರೈತ ಸಂಕುಲ ಸಂಕಷ್ಟಕ್ಕೆ ಈಡಾಗು ತ್ತಿರುವುದನ್ನು ಕಂಡು ಮರುಗುತ್ತ ಸಮೃದ್ಧ ಮಳೆ ಬೆಳೆ ಕರುಣಿಸೆಂದು ದೇವರಲ್ಲಿ ಪ್ರಾರ್ಥಿಸಿ, ಗಡಿ ಕಾಯುತ್ತಿರುವ ಸೈನಿಕರಿಗೂ ಯಾವುದೇ ತೊಂದರೆ ಆಗದಂತೆ ಇಚ್ಛೆ ಇಟ್ಟುಕೊಂಡು ಕಳೆದ 7 ವರ್ಷಗಳಿಂದ ಪ್ರತಿವರ್ಷ 21 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡದೇ ಸದಾ ಲಿಂಗ ಪೂಜೆ, ಜ್ಞಾನದಲ್ಲಿ ಸ್ವಾಮೀಜಿ ಮಗ್ನರಾಗುತ್ತಿದ್ದಾರೆ.
ಮುಂಜಾನೆ 4 ಗಂಟೆಯಿಂದಲೇ ಲಿಂಗಪೂಜೆಯಲ್ಲಿ ಲೀನರಾಗಿ ಸದಾ ಮಂತ್ರಗಳನ್ನು ಪಠಿಸುತ್ತಾರೆ. ಪ್ರತಿದಿನ ಮುಂಜಾನೆ, ಮಧ್ಯಾಹ್ನ ಹಾಗೂ ರಾತ್ರಿ ಮಡಿ ಸ್ನಾನ ಮಾಡಿ ಕೈಯಲ್ಲಿ ಲಿಂಗ ಪ್ರತಿಷ್ಠಾಪಿಸಿಕೊಂಡು ಬಿಲ್ವಪತ್ರೆ ಇತರೆ ಪೂಜಾ ಸಾಮಗ್ರಿಗಳಿಂದ ಭಕ್ತಿಭಾವದಿಂದ ಪೂಜೆಗೈದು ಜ್ಞಾನಕ್ಕೆ ಕುಳಿತುಕೊಳ್ಳುತ್ತಾರೆ. ಇದೀಗ ದೇಶಕ್ಕೆ ಮಾರಕವಾಗಿ ಕಾಡುತ್ತಿರುವ ಕೋವಿಡ್-19 ಸೋಂಕಿನಿಂದಾಗಿ ಮನುಕುಲವೇ ಬೆಚ್ಚಿಬೀಳುತ್ತಿದ್ದು, ನಾಡು ಯಾವುದೇ ರೋಗರುಜಿನಗಳಿಲ್ಲದೆ ಇರಬೇಕೆಂಬ ಉದ್ದೇಶದಿಂದ ಈ ಬಾರಿ ಈ ಸೋಂಕು ನಿಯಂತ್ರಣಗೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮಠದ ಭಕ್ತರಾದ ರವಿ ಶಿರಸಂಗಿ ಹಾಗೂ ಕುಮಾರಸ್ವಾಮಿ ಎತ್ತಿನಮಠ ಅವರು ವಿವರಿಸಿದರು.
ಮೊದಲಿನ ಲಿಂಗೈಕ್ಯ ಬಸವಣ್ಣಜ್ಜನವರು ಸಹ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸಲು ತಮ್ಮ ಜೀವನವನ್ನೇ ಭಕ್ತರಿಗಾಗಿ ಮೀಸಲಿಟ್ಟಿದ್ದರು. ಅವರ ದಾರಿಯಲ್ಲಿಯೇ ಬೆಳೆದ ಇಂದಿನ ಶ್ರೀಗಳು ಸಹ ನಾಡಿನ ಭಕ್ತ ಕುಲದ ಉದ್ಧಾರಕ್ಕಾಗಿ ಮೌನಕ್ಕೆ ಕುಳಿತುಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.