ಜನಸಂಖ್ಯೆ ನಿಯಂತ್ರಣ ಅನಿವಾರ್ಯ : ಇಂದು ವಿಶ್ವ ಜನಸಂಖ್ಯಾ ದಿನ
Team Udayavani, Jul 11, 2021, 6:30 AM IST
ಜನಸಂಖ್ಯೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದು ಕೇವಲ ಸಂಖ್ಯೆಗೆ ಮಾತ್ರ ಸೀಮಿತವಾಗಿರದೇ ಸಂಪನ್ಮೂಲವಾಗಿ ಪರಿವರ್ತಿತವಾಗ ಬೇಕು. ಇಲ್ಲವಾದಲ್ಲಿ ಅತಿಯಾದ ಜನಸಂಖ್ಯೆ ಕೇವಲ ದೇಶ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಸದ್ಯ ವಿಶ್ವದ ಬಹುತೇಕ ದೇಶಗಳು ಅದರಲ್ಲೂ ಭಾರತ ಸಹಿತ ಅಭಿವೃದ್ಧಿ ಶೀಲ ದೇಶಗಳನ್ನು ಕಾಡುತ್ತಿರುವುದು ಇದೇ ಸಮಸ್ಯೆ. ಈಗ ವಿಶ್ವದ ಜನಸಂಖ್ಯೆ ಒಂದು ಅಂದಾಜಿನಂತೆ 780 ಕೋಟಿ. 2050 ರ ಹೊತ್ತಿಗೆ ಅದು 970 ಕೋಟಿ ದಾಟಲಿದೆ. ಜನಸಂಖ್ಯಾ ಹಂಚಿಕೆಯೂ ಸಮನಾಗಿಲ್ಲ. ಬ್ರೆಜಿಲ್, ಚೀನ ಮತ್ತು ಭಾರತದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯಿದೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೇ ಒಂದಂಶದಷ್ಟು. ಜೀವಿಸಲು ಪೂರಕ ವಾತಾವರಣವಿದ್ದರೂ ಚೀನ ಮತ್ತು ಭಾರತಕ್ಕೆ ಜನಸಂಖ್ಯಾ ಸ್ಫೋಟದ ಭೀತಿಯು ಕಾಡುತ್ತಿದೆ.
ವಿಶ್ವ ಜನಸಂಖ್ಯೆಯು ವಾರ್ಷಿಕ ಸುಮಾರು 7.4 ಕೋಟಿಯಷ್ಟು ಏರುತ್ತಿದೆ. ಜನಸಂಖ್ಯಾ ವೃದ್ಧಿಯು ಜಗತ್ತಿನ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದೆ. 1987 ರ ಜುಲೈ 11ರಂದು ಜಾಗತಿಕ ಜನಸಂಖ್ಯೆ 500 ಕೋಟಿ ದಾಟಿದಾಗ ರಾಷ್ಟ್ರಗಳು ಅದರ ಗಂಭೀರತೆಯನ್ನು ಅರಿತುಕೊಂಡವು. 1989ರಲ್ಲಿ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಗವರ್ನರಿಂಗ್ ಕೌನ್ಸಿಲ್, ಜುಲೈ 11 ನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿತು. ಜನಸಂಖ್ಯಾ ನಿಯಂತ್ರಣದ ತುರ್ತು ಅಗತ್ಯದ ಬಗ್ಗೆ ಗಮನ ಸೆಳೆಯುವುದು ಇದರ ಉದ್ದೇಶ.
ಜನಸಂಖ್ಯಾ ನಿಯಂತ್ರಣ ಅನಿವಾರ್ಯ ಏಕೆ?
ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಜನಸಂಖ್ಯೆ 138 ಕೋಟಿ. ಇದೇ ಗತಿಯಲ್ಲಿ ಮುಂದುವರಿದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಚೀನವನ್ನು ಮೀರಿಸುವ ಮೂಲಕ ಭಾರತ ಜಗತ್ತಿನಲ್ಲೇ ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಲಿದೆ. ಈ ಶತಮಾನದ ಮಧ್ಯಭಾಗದಲ್ಲಿ ಅದು 18 ಕೋಟಿಗಳಷ್ಟು ಹಿಗ್ಗಲಿದೆ! ಭಾರತಕ್ಕೆ ದೊಡ್ಡ ಸವಾಲು ಎಂದರೆ ಇಷ್ಟು ದೊಡ್ಡ ಜನಸಂಖ್ಯೆಯನ್ನು ಭರಿಸುವುದು. ದೇಶವನ್ನು ಈಗಾಗಲೇ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ನೈಸರ್ಗಿಕ ಸಂಪನ್ಮೂಲದ ನಾಶ, ಸಸ್ಯ ಮತ್ತು ಪ್ರಾಣಿಸಂಕುಲದ ನಿರ್ನಾಮ, ಜೀವಭೀತಿಯ ಮಾಲಿನ್ಯ, ಶಿಶು ಮರಣ, ಹಸಿವು ಮತ್ತು ಕಡುಬಡತನದಿಂದ ದೇಶ ಕಂಗೆಟ್ಟಿದೆ. ದೇಶದಲ್ಲಿ 1950ರಲ್ಲಿಯೇ ಜನಸಂಖ್ಯಾ ನೀತಿ ರೂಪಿಸಲಾಗಿದ್ದರೂ ಏಳು ದಶಕಗಳು ಕಳೆದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.
ಜನಸಂಖ್ಯಾ ನ್ಪೋಟವೇ ಅಂತರಾಷ್ಟ್ರೀಯ ರ್‍ಯಾಂಕಿಂಗ್‌ನಲ್ಲಿ ಭಾರತದ ಕಳಪೆ ಸ್ಥಿತಿಗೆ ಕಾರಣ. ಜಾಗತಿಕ ಹಸಿವು ಸೂಚ್ಯಂಕದಲ್ಲಿ(ಇಂಡೆಕ್ಸ್) 103ನೇ ಸ್ಥಾನ, ಸಾಕ್ಷರತಾ ದರದಲ್ಲಿ 168, ವಿಶ್ವ ಸಂತೋಷ ಮಾಪನದಲ್ಲಿ 133, ಲಿಂಗ ತಾರತಮ್ಯದಲ್ಲಿ 125, ಕನಿಷ್ಠ ವೇತನದಲ್ಲಿ 124, ಉದ್ಯೋಗ ದರದಲ್ಲಿ 42, ರೂಲ್ ಆಫ್ ಲಾ ಇಂಡೆಕ್ಸ್ ನಲ್ಲಿ 66, ಜೀವನದ ಗುಣಮಟ್ಟದಲ್ಲಿ 43, ಆರ್ಥಿಕ ಅಭಿವೃದ್ಧಿಯಲ್ಲಿ 51, ಪರಿಸರ ಕ್ಷಮತೆಯಲ್ಲಿ 177ಮತ್ತು ಜಿಡಿಪಿಯಲ್ಲಿ 139ನೇ ಸ್ಥಾನವನ್ನು ಹೊಂದಿದ್ದು ಇವೆಲ್ಲವೂ ದೇಶ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳಿಗೆ ಕನ್ನಡಿ ಹಿಡಿಯುತ್ತವೆ.
ಭಾರತದ ಪಾಡು ಇಲ್ಲಿಗೇ ಕೊನೆಗೊಂಡಿಲ್ಲ. ಮಿಲಿಯ ಗಟ್ಟಲೆ ಜನರು ದೀನ ದರಿದ್ರರಾಗಿದ್ದಾರೆ. ಸಾವಿರಾರು ರೈತರು ಪ್ರತೀವರ್ಷ ಆತ್ಮಹತ್ಯೆಗೆ ಶರಣಾಗುತ್ತಾರೆ. 5 ವರ್ಷದೊಳಗಿನ ಸುಮಾರು ಶೇ. 40ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ದೇಶದ ಜನಸಂಖ್ಯೆಯ ಶೇ.21.9ಮಂದಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಮುಂಬರುವ ಎರಡು ದಶಕಗಳಲ್ಲಿ ದುಡಿಯುವ ಜನಸಂಖ್ಯೆ 20 ಕೋಟಿ ದಾಟಬಹುದು. ಆಗ 15 ರಿಂದ 30 ವರ್ಷ ಹರೆಯದ ಶೇ.30 ರಷ್ಟು ಭಾರತೀಯರು ನಿರುದ್ಯೋಗಿಗಳಾಗುವ ಸಂಭವನೀಯತೆಯಿದೆ. ಹಳ್ಳಿಯಿಂದ ನಗರಗಳ ಕಡೆಗೆ ಜನಸಂಖ್ಯಾ ವಲಸೆಯೂ ಆತಂಕವ ನ್ನುಂಟು ಮಾಡುತ್ತಿದೆ. ತ್ಯಾಜ್ಯವಸ್ತು ಮತ್ತು ತ್ಯಾಜ್ಯನೀರಿನ ನಿರ್ವಹಣೆಯು ದುಸ್ತರವಾಗಲಿದೆ. ಏರುತ್ತಿರುವ ಜನಸಂಖ್ಯೆ ಯಿಂದ ಅಪರಾಧಗಳು ಹೆಚ್ಚುತ್ತವೆ. ಟ್ರಾಫಿಕ್ ಸಮಸ್ಯೆಗಳು, ಮಾಲಿನ್ಯ ಇತ್ಯಾದಿ ಉಂಟಾಗುತ್ತವೆ. ವಾಸಕ್ಕೆ ಒದಗುವ ಭೂ ಪ್ರದೇಶದ ಗಾತ್ರವೂ ಕಿರಿದಾಗುತ್ತದೆ.
ಪರಿಹಾರವೇನು?
ಕುಟುಂಬ ಯೋಜನೆಯಲ್ಲಿ ಭಾರತ ಮುಂಚೂಣಿಯಲ್ಲಿ ದ್ದರೂ ಗುರಿ ಸಾಧನೆಯಲ್ಲಿ ಹಿಂದಿದ್ದೇವೆ. ಜನಸಂಖ್ಯಾ ನಿಯಂತ್ರಣ ಪ್ರಕ್ರಿಯೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚೀನದ ಒಂದು ಮಗು ನೀತಿ (ಅತಿಯಾದ ಹೆಣ್ಣು ಭ್ರೂಣಹತ್ಯೆಯಿಂದಾಗಿ 2015 ರಲ್ಲಿ ಹಿಂಪಡೆಯಲಾಯಿತು) ಯನ್ನು ಪ್ರಸ್ತಾವಿಸಲಾಯಿತು. ಭಾರತದಲ್ಲಿ ಆ ನೀತಿ ಅಸಾಧ್ಯ. ತುರ್ತುಪರಿಸ್ಥಿತಿಯ ಸಮಯದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ಜನಸಂಖ್ಯಾ ನೀತಿಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದರು. ಸುಮಾರು 80 ಲಕ್ಷ ಜನರು ಸಂತಾನಹರಣ ಚಿಕಿತ್ಸೆಗೆ ಒಳಗಾದರು. ಆದರೆ ಇದರಿಂದ ಜನಸಂಖ್ಯಾ ಏರಿಕೆಯನ್ನು ತಡೆಗಟ್ಟಲಾಗಲಿಲ್ಲ. ಎರಡು ಮಗು ನೀತಿ, ಹೆರಿಗೆಯ ನಡುವಿನ ಅಂತರ, ಸಂತಾನ ನಿರೋಧ ವಿಧಗಳು ಮತ್ತು ಸಾಧನಗಳ ಲಭ್ಯತೆ ಮತ್ತು ಅರಿವು, ಪುಟ್ಟ ಕುಟುಂಬಕ್ಕೆ ಉತ್ತೇಜನ, ಸಂತಾನಹರಣ ಇತ್ಯಾದಿಗಳನ್ನು ಹೆಚ್ಚು ಆಕ್ರಮಣಶೀಲತೆಯಿಂದ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು.
ಜನಸಂಖ್ಯಾ ನಿಯಂತ್ರಣಕ್ಕೆ ಕೆಲವೊಂದು ಅಸಾಂಪ್ರದಾಯಿಕ ವಿಧಾನವನ್ನು ಅನುಸರಿಸುವುದು ಕೂಡ ಸದ್ಯದ ಸ್ಥಿತಿಯಲ್ಲಿ ನ್ಯಾಯೋಚಿತವೇ. ಉದಾ: ಮದುವೆಯ ಪ್ರಾಯವನ್ನು ಮುಂದೂಡುವುದರ ಮೂಲಕ ಸಂತಾನೋತ್ಪಾದನೆಯ ಅವಧಿಯನ್ನು ಕಡಿಮೆಗೊಳಿಸುವುದು. ಮೇಲಾಗಿ 2002 ರ ವೆಂಕಟಾಚಲಯ್ಯ ಆಯೋಗದ ವರದಿಯನ್ನು ಅನುಷ್ಠಾನಿಸುವುದು. ಸಂವಿಧಾನ ವಿಧಿ 47 ಎ ಯನ್ನು ಸೇರಿಸುವುದರ ಮೂಲಕ ತಿದ್ದುಪಡಿಯನ್ನು ತಂದು ಜನಸಂಖ್ಯಾ ನಿಯಂತ್ರಣ ಕಾನೂನನ್ನು ರಚಿಸುವುದು.
ಹರಿಯಾಣ ಮಾದರಿ
ಎರಡು ಮಕ್ಕಳಿಗಿಂತ ಹೆಚ್ಚಿರುವ ವ್ಯಕ್ತಿಯು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹ ಎಂಬ ನೀತಿಯನ್ನು ಹರಿಯಾಣ ರಾಜ್ಯ ಸರಕಾರ ಜಾರಿಗೊಳಿಸಿದೆ. ಎರಡು ಮಕ್ಕಳ ನಿಯಮ ಸರಕಾರೀ ಉದ್ಯೋಗ, ಅನುದಾನ ಮತ್ತು ಸಬ್ಸಿಡಿಗೆ ಸಾಮಾನ್ಯ ಮಾನದಂಡವಾಗಿದೆ. ಎರಡು ಮಕ್ಕಳ ನೀತಿಯನ್ನು ಉಲ್ಲಂ ಸುವವರ ಮತದಾನದ ಹಕ್ಕು, ಸ್ಪರ್ಧಿಸುವ ಹಕ್ಕು, ಆಸ್ತಿ ಹಕ್ಕು, ಮುಕ್ತ ವಸತಿ ಹಕ್ಕು, ಉಚಿತ ಕಾನೂನು ಸಹಾಯ ಇತ್ಯಾದಿಗಳನ್ನು ಹಿಂಪಡೆಯಬಹುದಾಗಿದೆ. ಎಲ್ಲ ರಾಜ್ಯಗಳಲ್ಲೂ ಇಂತಹ ಸಮಾನ ನೀತಿ ಜಾರಿಗೊಳ್ಳಬೇಕು.
– ಜಲಂಚಾರು ರಘುಪತಿ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.