ಬ್ಯಾಂಕ್ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಸಿಗಬೇಕು: ಸಿದ್ದರಾಮಯ್ಯ
Team Udayavani, Jul 13, 2021, 12:51 PM IST
ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ರಾಜ್ಯದ ಯುವಜನರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ನರೇಂದ್ರ ಮೋದಿ ಅವರ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತಾ ಬಂದಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)ಯ ಇತ್ತೀಚಿನ ಸುತ್ತೋಲೆ ಈ ದ್ರೋಹಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ತಕ್ಷಣ ಗಮನಹರಿಸಿ ಈ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಐಬಿಪಿಎಸ್ ಇದೀಗ ಹನ್ನೊಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 3000 ಕಾರಕೂನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಇವುಗಳಲ್ಲಿ 407 ಹುದ್ದೆಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಕನ್ನಡಕ್ಕೆ ಆಗಿರುವ ಅನ್ಯಾಯದಿಂದಾಗಿ ತೀವ್ರ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗ ಯುವಜನರು ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ. 2014ಕ್ಕಿಂತ ಮೊದಲು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ರಾಜ್ಯ ಭಾಷೆಗಳಲ್ಲಿಯೂ ಬರೆಯುವ ಅವಕಾಶ ಇತ್ತು. 2014ರಲ್ಲಿ ಕೇಂದ್ರ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ಮಾಡಿ ಇಂಗ್ಲೀಷ್ ಮತ್ತು ಹಿಂದಿಯೇತರ ಭಾಷಿಕ ಯುವಜನರಿಗೆ ಅನ್ಯಾಯವೆಸಗಿದೆ. ಈ ಅನ್ಯಾಯವನ್ನು ಪ್ರತಿಭಟಿಸಿ ಹಿಂದಿನ ನಮ್ಮ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿತ್ತು. ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಗಮನ ಸೆಳೆದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವ ಭರವಸೆಯನ್ನು ಲೋಕಸಭೆಯಲ್ಲಿ ನೀಡಿದ್ದರೂ ಆ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ತಮಿಳುನಾಡು ನಿರ್ಧಾರದ ಬಗ್ಗೆ ಮಾತನಾಡಲ್ಲ, ನಾವು ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ: ಸಿಎಂ
ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳ ಅನುಷ್ಠಾನ ಬ್ಯಾಂಕ್ ಗಳ ಮೂಲಕವೇ ನಡೆಯುವುದರಿಂದ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಜನತೆ ಹೆಚ್ಚುಹೆಚ್ಚು ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯಿಂದಾಗಿ ಈ ಜನಸಮುದಾಯ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸೌಲಭ್ಯಗಳ ಸುನಾಮಿ ಬರಲಿದೆ ಎಂದು ಲೋಕಸಭಾ ಚುನಾವಣೆಯ ಕಾಲದಲ್ಲಿ ಬುರುಡೆಬಿಟ್ಟ ಬಿಜೆಪಿಯಿಂದ ಆಯ್ಕೆಯಾದ 25 ಸಂಸದರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯ ಬಗ್ಗೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ತಮ್ಮನ್ನು ರಾಜ್ಯದ ಹುಲಿ-ಸಿಂಹಗಳೆಂದು ವಂದಿ-ಮಾಗದರಿಂದ ಘೋಷಣೆ ಕೂಗಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವಾಗ ಮಾತ್ರ ಬೆದರಿದ ಇಲಿಯಾಗುತ್ತಾರೆ. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಯಡಿಯೂರಪ್ಪನವರು ತಕ್ಷಣ ಪ್ರಧಾನಮಂತ್ರಿಯವರ ಗಮನಸೆಳೆದು ಕನ್ನಡಿಗ ಯುವಜನರಿಗೆ ನ್ಯಾಯ ಒದಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.