ಟೋಕಿಯೊ ಒಲಿಂಪಿಕ್ಸ್ : ಆರ್ಚರಿ ರೌಂಡ್ : ದೀಪಿಕಾ ನಂ.9
Team Udayavani, Jul 23, 2021, 11:20 PM IST
ಟೋಕಿಯೊ: ಭಾರತದ ಸ್ಟಾರ್ ಆರ್ಚರ್ ದೀಪಿಕಾ ಕುಮಾರಿ ವನಿತೆಯರ ವೈಯಕ್ತಿಕ ರ್‍ಯಾಂಕಿಂಗ್ ರೌಂಡ್‌ನಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಸುಲಭ ಎದುರಾಳಿ ದೊರೆತಿದ್ದಾರೆ.
ರ್‍ಯಾಂಕಿಂಗ್ ಸುತ್ತಿನಲ್ಲಿ ಕೊರಿಯನ್ನರೇ ಪ್ರಾಬಲ್ಯ ಮೆರೆದರು. ಮೊದಲ 3 ಸ್ಥಾನವನ್ನು ಇವರೇ ಆಕ್ರಮಿಸಿಕೊಂಡರು. ಮೊದಲ ಒಲಿಂಪಿಕ್ಸ್ ಕಾಣುತ್ತಿರುವ 20 ವರ್ಷದ ಆ್ಯನ್ ಸಾನ್ 680 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ವಿಶ್ವದ ನಂ.1 ಖ್ಯಾತಿಯ ದೀಪಿಕಾ 663 ಅಂಕ ಸಂಪಾದಿಸಿದರು. ಅರ್ಧ ಹಾದಿ ಕ್ರಮಿಸುವಾಗ (36 ಬಾಣ) ದೀಪಿಕಾ 334 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರು.
ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಭೂತಾನ್‌ನ 193ನೇ ರ್‍ಯಾಂಕಿಂಗ್ ಆರ್ಚರ್ ಕರ್ಮಾ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ರ್‍ಯಾಂಕಿಂಗ್ ಸುತ್ತಿನಲ್ಲಿ ಕರ್ಮಾ 56ನೇ ಸ್ಥಾನ ಪಡೆದಿದ್ದರು.
ದೀಪಿಕಾ ಕ್ವಾರ್ಟರ್ ಫೈನಲ್ ಪ್ರವೇಶಿದರೆ ಅಲ್ಲಿ ಆ್ಯನ್ ಸಾನ್ ಎದುರಾಗುವ ಸಾಧ್ಯತೆ ಇದೆ. ಇವರಿಬ್ಬರು ಒಮ್ಮೆಯಷ್ಟೇ ಮುಖಾಮುಖೀಯಾಗಿದ್ದರು. ಅದು ಇಲ್ಲೇ ನಡೆದ 2019ರ ಒಲಿಂಪಿಕ್ ಟೆಸ್ಟ್ ಸ್ಪರ್ಧೆಯಾಗಿತ್ತು. ಇದರಲ್ಲಿ ದೀಪಿಕಾಗೆ ಹಿನ್ನಡೆಯಾಗಿತ್ತು.
ಇದನ್ನೂ ಓದಿ :ಒಲಿಂಪಿಕ್ಸ್ ಹಾಕಿ : ನೀಗಲಿ ಭಾರತದ ಪದಕ ಬರಗಾಲ
ಪುರುಷರಿಗೂ 9ನೇ ಸ್ಥಾನ
ಪುರುಷರ ಟೀಮ್ ಹಾಗೂ ಮಿಕ್ಸೆಡ್ ರ್‍ಯಾಂಕಿಂಗ್ ಸುತ್ತಿನಲ್ಲಿ ಭಾರತ 9ನೇ ಸ್ಥಾನಿಯಾಗಿದೆ. ಅಚ್ಚರಿಯೆಂದರೆ, ಮೊದಲ ಒಲಿಂಪಿಕ್ಸ್ ಕಾಣುತ್ತಿರುವ ಪ್ರವೀಣ್ ಜಾಧವ್ ಅನುಭವಿ ಅತನು ದಾಸ್ ಮತ್ತು ತರುಣ್‌ದೀಪ್ ರಾಯ್ ಅವರನ್ನು ಮೀರಿ ನಿಂತದ್ದು. ಆದರೆ ಪ್ರಧಾನ ಸುತ್ತಿನಲ್ಲಿ ಎರಡೂ ವಿಭಾಗಗಳಿಗೆ ಕಠಿನ ಸವಾಲು ಎದುರಾಗದೆ.
ಮಿಶ್ರ ತಂಡಕ್ಕೆ 8ನೇ ರ್‍ಯಾಂಕಿಂಗ್‌ನ ಚೈನೀಸ್ ತೈಪೆ ಎದುರಾಗಿದೆ. ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕೊರಿಯಾ ಕಾದು ಕುಳಿತಿದೆ.
ಪುರುಷರ ತಂಡಕ್ಕೆ ಆರಂಭದಲ್ಲಿ ಕಜಾಕ್‌ಸ್ಥಾನ ಎದುರಾಗಲಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾ ಸಿಗಲಿದೆ. ಕೊರಿಯಾಕ್ಕೆ ಮೊದಲ ಸುತ್ತಿನ ಬೈ ಸಿಕ್ಕಿದೆ.
ವೈಯಕ್ತಿಕ ವಿಭಾಗದಲ್ಲಿ ಮೂರೂ ಬಿಲ್ಗಾರರು 30ರ ಆಚೆಯ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಪ್ರವೀಣ್ ಜಾಧವ್ 31, ಅತನು ದಾಸ್ 35 ಹಾಗೂ ತರುಣ್‌ದೀಪ್ ರಾಯ್ 37ನೇ ಸ್ಥಾನ ಪಡೆದರು. ಈ ಮೂವರು ಕ್ರಮವಾಗಿ 656, 653 ಹಾಗೂ 652 ಅಂಕ ಸಂಪಾದಿಸಿದರು.
ಮಿಕ್ಸೆಡ್‌ನಲ್ಲಿ ದೀಪಿಕಾ-ಪ್ರವೀಣ್
ಪುರುಷರ ವಿಭಾಗದಲ್ಲಿ 31ನೇ ಸ್ಥಾನ ಪಡೆದ ಪ್ರವೀಣ್ ಜಾಧವ್ ಮಿಕ್ಸೆಡ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಜತೆ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಅತನು ದಾಸ್ ಈ ವಿಭಾಗದಲ್ಲಿ ದೀಪಿಕಾ ಜೋಡಿ ಎಂದು ನಿರ್ಧರಿಸಲಾಗಿತ್ತಾದರೂ ಶುಕ್ರವಾರದ ಸ್ಪರ್ಧೆಯಲ್ಲಿ ಪ್ರವೀಣ್‌ಗಿಂತ ಕೆಳಸ್ಥಾನ ಸಂಪಾದಿಸಿದ ಕಾರಣ ಈ ಅವಕಾಶದಿಂದ ವಂಚಿತರಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.