ವೈರಸ್-ಕಳ್ಳರು-ಸುಭಗರ ರೂಪಾಂತರ ವೇಷ
Team Udayavani, Jul 24, 2021, 6:50 AM IST
ಶತಮಾನದ ಬಳಿಕ ಈಗ ಕೊರೊನಾದ ಎರಡನೆಯ ವರ್ಷದಲ್ಲಿದ್ದೇವೆ. ಕೆಲವರು “ಆರೋಗ್ಯ ಇಲಾಖೆಯಿಂದ ಅಕ್ರಮ ದಂಧೆ ನಡೆಯುತ್ತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಎರಡನೆಯ ವರ್ಷ ಅವರೇ ಆ್ಯಂಬುಲೆನ್ಸ್ ಸೇವೆ, ವ್ಯಾಕ್ಸಿನ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಪ್ರಾಯಃ ಒಂದೇ ವರ್ಷದ ಅಂತರದಲ್ಲಿ ಹಾಕಿದ ಅಂತರ್ಲಾಗವನ್ನು ಯಾರೂ ಪ್ರಶ್ನಿಸಿರಲಿಕ್ಕಿಲ್ಲ.
ಕಳೆದ ಶತಮಾನದ ಆರಂಭದಲ್ಲಿ ಕಂಗೆಡಿಸಿದ ಸಾಮೂಹಿಕ ಸೋಂಕೆಂದರೆ ಪ್ಲೇಗ್, ಸ್ಪಾನಿಶ್ ಫ್ಲೂ. ಈಗ ಕೊರೊನಾ ಸೋಂಕು. ಆಗಿನ ಮತ್ತು ಈಗಿನ ವೈರಸ್, ಕಳ್ಳರು, ನಿಸ್ವಾರ್ಥಿಗಳು, ಸೋಗಲಾಡಿಗಳ ನಡುವೆ ತುಲನೆ ಮಾಡಿದರೆ ವೈರಸ್ ಮತ್ತು ಮನುಷ್ಯರ ಕಾರ್ಯವೈಖರಿ ಒಂದೇ ತೆರನಾಗಿ ಕಾಣುತ್ತದೆ.
ಪ್ಲೇಗ್ ಮೈಸೂರು ಪ್ರಾಂತ್ಯದಲ್ಲಿ ಮೊದಲು ಕಂಡುಬಂದುದು 1902ರಲ್ಲಿ. ಅನಂತರ 1903, 1904, 1911ರಲ್ಲಿ ಬಂದಿತ್ತು. ಪ್ಲೇಗ್ ಹರಡುತ್ತಿದ್ದುದು ಇಲಿಗಳಿಂದ. ಆಗ ಮನೆಯಲ್ಲಿ ಇಲಿ ಸತ್ತು ಬಿದ್ದುದನ್ನು ಕಂಡಾಗ ಮನೆಯನ್ನು ಖಾಲಿ ಮಾಡಿ ಬಯಲಿನಲ್ಲಿ ಇಲಿ ಬಾರದ ತಾತ್ಕಾಲಿಕ ಶೆಡ್ ರಚಿಸಿಕೊಂಡು ಇರುತ್ತಿದ್ದರು. ಆಗಲೂ ಪದೇಪದೆ ಶಾಲೆಗಳಿಗೆ ರಜೆ ಕೊಡಿಸುತ್ತಿತ್ತು ಪ್ಲೇಗ್. ಯಾವುದೋ ಊರಲ್ಲಿ ಪ್ಲೇಗ್ ಬಂತೆಂದು ಸುದ್ದಿ ಹೊರಟಾಗ ಎಲ್ಲರಿಗೂ ಭಯ, ಕೆಲವೇ ದಿನಗಳಲ್ಲಿ ಜನರು ಸತ್ತರು ಎಂಬ ಸುದ್ದಿ ಬರುತ್ತಿತ್ತು. ಎಲ್ಲ ಮನೆಗಳಲ್ಲಿಯೂ ಇಲಿ ಸತ್ತು ಬೀಳುತ್ತಿದ್ದವು. ಪ್ಲೇಗ್ ಇರುವ ಊರಿನವರನ್ನು ಇತರ ಊರಿನವರು ಸೇರಿಸಿಕೊಳ್ಳುತ್ತಿರಲಿಲ್ಲ. ಸಂತೆಗಳೂ ನಡೆಯುತ್ತಿರಲಿಲ್ಲ. ಪೂಜಾಮಂದಿರಗಳೆಲ್ಲ ಖಾಲಿ, ಖಾಲಿ. ದೊಡ್ಡವರು ಮಕ್ಕಳನ್ನು ಬೇರೆ ಊರಿಗೆ ಕಳುಹಿಸಿ ಅಲೆಮಾರಿಗಳಂತೆ ಬದುಕುತ್ತಿದ್ದರು. ಸರಕಾರದಿಂದ ಕ್ವಾರಂಟೈನ್ ಇರುತ್ತಿತ್ತು.
ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಮಾತ್ರ ಮೂವರು ಮನೆಯನ್ನು ಬಿಡಲಿಲ್ಲ. ಒಬ್ಬ ಛಾಪಾ ಕಾಗದ ಮಾರುತ್ತಿದ್ದ ರಂಗಣ್ಣ, ಸ್ವಲ್ಪ ಲೇವಾದೇವಿ ಮಾಡುತ್ತಿದ್ದ ಕೇಶವ, ಇನ್ನೊಬ್ಬ ಸಾರಾಯಿ ಸಣ್ಣಪ್ಪ. ಮೂವರೂ (ಕು)ಪ್ರಸಿದ್ಧ ಕಳ್ಳರು. “ಪ್ಲೇಗ್ ಸೊಳ್ಳೆ ಇವರಿಗೆ ಕಡಿದರೆ ಅದು ತಾನಾಗಿ ಸತ್ತು ಹೋಗುತ್ತದೆ’ ಎಂಬುದು ಜನರ ಹಾಸ್ಯದ ಮಾತಾಗಿತ್ತು. ಮನೆಗಳ ಹಿತ್ತಲು ಬಾಗಿಲ ಚಿಲಕ ಮುರಿದು ಒಳನುಗ್ಗಿ ಕದಿಯುತ್ತಿದ್ದರು. ಇವರ ಪ್ರಧಾನ ಕಳ್ಳತನ ಬಿಸಿನೀರಿಗೆ ಹೂಳಿರುವ ಹಂಡೆ. ರಂಗಣ್ಣನಂತೂ ರಾತ್ರಿ ನಾಲೆ ಈಜಿಕೊಂಡು ಹೋಗಿ ವಾಪಸು ಬರುತ್ತಿದ್ದ. ಆತನ ಶಕ್ತಿ ಮೆಚ್ಚತಕ್ಕದ್ದೆ ಎಂದು ಆತ್ಮಕಥೆಯಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹೇಳುತ್ತಾರೆ. ಆಗಿನ ಸನ್ನಿವೇಶವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ|ಶಿವರಾಮ ಕಾರಂತ ಮೊದಲಾದವರು ಚಿತ್ರಿಸಿದ್ದಾರೆ.
1915ರಲ್ಲಿ ಒಂದು ಬಾರಿ ರಂಗಣ್ಣನ ಮನೆಗೆ ಹೋಗಿ ರಶೀದಿ ಸ್ಟಾಂಪ್ ತೆಗೆದುಕೊಂಡು ಬರಲು ಗೊರೂರರಿಗೆ ತಂದೆ ತಿಳಿಸಿದರು. ಆ ಮಟ ಮಟ ಮಧ್ಯಾಹ್ನದಲ್ಲಿ “ನಾನೊಬ್ಬನೇ ಜೀವಂತ ಪ್ರಾಣಿ’ ಎಂಬ ಭಾವ, ಭಯ ಉಂಟಾಯಿತಂತೆ. ರಂಗಣ್ಣ ಮನೆ ಹಿಂದಿನಿಂದ ಬರಲು ಹೇಳಿದ. ಎದುರಲ್ಲೇ ಕೊಡಿ ಎಂದಾಗ “ಸರಕಾರಿ ಅಧಿಕಾರಿಗೆ ಗೊತ್ತಾದರೆ ಕ್ವಾರಂಟೈನ್‌ಗೆ ಹಿಡಿದುಕೊಂಡು ಹೋಗುತ್ತಾರೆ. ನಾನು ಹೋದರೆ ಕಳ್ಳರು ಲೂಟಿ ಮಾಡುತ್ತಾರೆ’ ಎಂದ. “ಊರೇ ನಿರ್ಜನವಾಗಿದೆ. ಬರುವಾಗ ಭಯವಾಯಿತು’ ಎಂದಾಗ “ಭಯವೇ? ಪಾಪ, ನಿನಗೇನು ಗೊತ್ತು ನೂರು ಸಲ ಪ್ಲೇಗ್ ಬಂದರೂ ಜಗ್ಗದ ಕಳ್ಳರು ಇದ್ದಾರೆ’ ಎಂದ ರಂಗಣ್ಣ.
ಆರಂಭದಲ್ಲಿ ಇನ್ಯಾಕ್ಯುಲೇಶನ್ (ವ್ಯಾಕ್ಸಿನ್) ಇದ್ದಿರಲಿಲ್ಲ. ನೂರು ಪ್ಲೇಗ್‌ಗೂ ಜಗ್ಗುವುದಿಲ್ಲ ಎಂದಿದ್ದ ರಂಗಣ್ಣ, ಕೇಶವ, ಸಣ್ಣಪ್ಪ ಇನ್ಯಾಕ್ಯುಲೇಶನ್ ಮಾಡಿಸಿಕೊಳ್ಳಲು ಮುಂದಾಗಿದ್ದರು. “ಒಂದು ತೋಳನ್ನು ಪ್ಲೇಗ್‌ಗೇ ಬಿಟ್ಟಿದ್ದೇನೆ’ ಎಂದು ರಂಗಣ್ಣ ಹೇಳುತ್ತಿದ್ದ.
ಸಾವಿನ ಸರಮಾಲೆ ಇದ್ದರೂ ಎಲ್ಲ ಜಾತಿಯವರ ಹೆಣಗಳನ್ನು ಎಲ್ಲರೂ ಹೊರುತ್ತಿದ್ದರು. “ಇದಾರು ಒಂದು ಪುಣ್ಯದ ಕೆಲಸ’ ಎಂದು ನರಸೇಗೌಡ ಶ್ಮಶಾನಕ್ಕೆ ಸೌದೆ ಹೇರಿದ್ದಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಕೆಂಪ ಹಗಲು ರಾತ್ರಿ ಸೌದೆ ಸೀಳಿ ಚಿತೆ ಸಿದ್ಧ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ವಿಚಾರಿಸುತ್ತಿದ್ದರು. ಶಾನುಭೋಗರು ದೊಣ್ಣೆ ಊರಿಕೊಂಡು ಪ್ರತೀ ಮನೆಯನ್ನು ವಿಚಾರಿ ಸುತ್ತಿದ್ದರು. ಸಾವಿನ ಭಯ ಮೀರಿ ರೋಗಿಗಳಿಗೆ ಉಪಚಾರ ಮಾಡುತ್ತಿದ್ದ ಧೈರ್ಯಶಾಲಿಗಳಿದ್ದರು.
ಪ್ರಸಿದ್ಧ ವೈದ್ಯ, ಸಂಗೀತ ಕಲಾವಿದರಾಗಿದ್ದ ಪಂಡಿತ್ ತಾರಾನಾಥರ ತಾಯಿ ರಾಜೀವಿ ಬಾಯಿಯವರು ಮಂಗಳೂರಿನಲ್ಲಿ ಪ್ಲೇಗ್ ಬಂದ ಸಂದರ್ಭ ತಮಗುಪಕಾರ ಮಾಡಿದ್ದವನಿಗೆ ಪ್ಲೇಗ್ ಬಂದಾಗ ಗೊತ್ತಿದ್ದೂ ಅಗತ್ಯ ಕರ್ತವ್ಯವೆಂಬಂತೆ ಸೇವೆ ಮಾಡಿ ಇಹಲೋಕ ತ್ಯಜಿಸಿದ್ದರು.
ಶತಮಾನದ ಬಳಿಕ ಈಗ ಕೊರೊನಾದ ಎರಡನೆಯ ವರ್ಷದಲ್ಲಿದ್ದೇವೆ. ಕೆಲವರು “ಆರೋಗ್ಯ ಇಲಾಖೆಯಿಂದ ಅಕ್ರಮ ದಂಧೆ ನಡೆಯುತ್ತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಎರಡನೆಯ ವರ್ಷ ಅವರೇ ಆ್ಯಂಬುಲೆನ್ಸ್ ಸೇವೆ, ವ್ಯಾಕ್ಸಿನ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಪ್ರಾಯಃ ಒಂದೇ ವರ್ಷದ ಅಂತರದಲ್ಲಿ ಹಾಕಿದ ಅಂತರ್ಲಾಗವನ್ನು ಯಾರೂ ಪ್ರಶ್ನಿಸಿರಲಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ವಾಟ್ಸ್ ಆ್ಯಪ್‌ಗೆ ಬಂದ ಕೊರೊನಾ ವಿರೋಧಿ ಸುದ್ದಿಗಳನ್ನೆಲ್ಲ ಫಾರ್ವರ್ಡ್ ಮಾಡುವ ತಜ್ಞರು, “ಇದೆಲ್ಲ ಬರೀ ಬೊಗಳೆ’ ಎಂದು ಟೀಕಿಸುತ್ತಿದ್ದವರು ವ್ಯಾಕ್ಸಿನ್ ತೆಗೆದು ಕೊಳ್ಳುವಾಗ ಮುಂಚೂಣಿಯಲ್ಲಿದ್ದರು.
ಕಳ್ಳರ ಬಗೆಗೆ ಹೇಳುವುದೇ ಬೇಡ. ರೂಪಾಂತರಿಗ ಳಾಗಿ ಹೈಟೆಕ್‌ತನವನ್ನು ಮೈಗೂಡಿಸಿಕೊಂಡಿದ್ದಾರೆ. ಆಗ ಹಂಡೆ ಕಳ್ಳರಿದ್ದರೆ, ಈಗ ಬೆಡ್ ಕಳ್ಳರು, ವ್ಯಾಕ್ಸಿನ್ ಕಳ್ಳರು, ಆಕ್ಸಿಜನ್ ಕಳ್ಳರಾಗಿ ಬೆಳವಣಿಗೆ ಹೊಂದಿದರು. ಈ ಆಧುನಿಕ ಕಳ್ಳರ ಬಗೆಗೆ ಒಂದೆರಡು ದಿನ ಸುದ್ದಿಯೋ ಸುದ್ದಿ. ಮತ್ತೆ ಆ ಕಳ್ಳರೆಲ್ಲ ಏನಾದರೆಂದು ಯಾರಿಗೂ ಗೊತ್ತಿಲ್ಲ. ಈ ಎರಡು ವರ್ಷಗಳಲ್ಲಿ ವೈರಸ್ ಅಂತೂ ನಾನಾ ರೂಪಾಂತರಗಳನ್ನು ತಾಳಿ ಬಲಿಷ್ಠಗೊಂಡದ್ದು ವೈಜ್ಞಾನಿಕವಾಗಿ ಸಾಬೀತಾಗಿದೆ. ವೈರಸ್ ಹುಟ್ಟಿ ಸತ್ತು ಮತ್ತೆ ಬಲಿಷ್ಠಗೊಂಡದ್ದು ವೈಜ್ಞಾನಿಕವಾಗಿ ಸಾಬೀತಾದರೆ ಹಂಡೆಕಳ್ಳರು ಬೆಡ್-ವ್ಯಾಕ್ಸಿನ್- ಆಕ್ಸಿಜನ್ ಕಳ್ಳರಾಗಿ ರೂಪಾಂತರಗೊಂಡದ್ದು ಒಮ್ಮೆ ಸತ್ತು ಪುನಃ ಹುಟ್ಟಿ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಅಸಾಧ್ಯವೋ ಏನೋ? ಆರಂಭದಲ್ಲಿ ಇಲಾಖೆಯನ್ನು ಜರೆಯುತ್ತಿದ್ದ ಮಹಾಶಯರು ರೂಪಾಂತರಗೊಂಡು ಅದೇ ಇಲಾಖೆಯ ಕಾರ್ಯಗಳಿಗೆ ಕೈಜೋಡಿಸಿದ್ದು, ರೋಗವೇ ಸುಳ್ಳೆಂದವರು ವ್ಯಾಕ್ಸಿನ್ ಪಡೆಯಲು ಮುಂದಾದದ್ದು ಒಮ್ಮೆ ಸತ್ತು, ಮತ್ತೆ ಹುಟ್ಟಿಯಲ್ಲ. ಒಂದೇ ಜನ್ಮದಲ್ಲಿ ಅದರಲ್ಲೂ ಕೇವಲ ಒಂದೆರಡು ವರ್ಷಗಳ ರೂಪಾಂತರದಲ್ಲಿ. ಆಗಲೂ ಈಗಲೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಅನೇಕರಿದ್ದಾರೆ. ಒಟ್ಟಾರೆ ವೈರಸ್‌ಗೆ ಮತ್ತೆ ಮತ್ತೆ ಜನ್ಮವಿರುವುದು (ಪುನರ್ಜನ್ಮ) ಹೌದಾದರೆ ಮನುಷ್ಯರಿಗೂ ಅನ್ವಯ ಏಕೆ ಆಗಕೂಡದು? ಆಗಿನ ಹಂಡೆಕಳ್ಳರೇ ಪುನರ್ಜನ್ಮದಲ್ಲಿ ಬೆಡ್-ವ್ಯಾಕ್ಸಿನ್- ಆಕ್ಸಿಜನ್ ಕಳ್ಳರಾದರೆ? ಆಗ ಎದೆಗುಂದದೆ ಸೇವೆ ಸಲ್ಲಿಸಿದವರೇ ಈಗ ವೈದ್ಯರು, ಆಶಾ ಕಾರ್ಯಕರ್ತರಾದರೆ?
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.